ದೂರ ನಿಂತೆ ಏಕೆ ನನ್ನತನದ ನೇರಳೆ?
ನಿನ್ನ ಹುಡುಕೋ ಸಲುವೆ ನನ್ನ ಬಿಟ್ಟು ಬರಲೇ?ಎಷ್ಟು ನಟಿಸುತೀಯೆ? ಇದುವೇ ನಿನ್ನ ಸ್ಥಾನ
ಶಬ್ಧವಿಲ್ಲ ಎಲ್ಲೂ, ಪರಿಚಯಿಸಲು ಮೌನ
ಕತ್ತಲಾಚೆ ಒಂದು ಮುರಿದ ಬೆಳಕ ಬಿಲ್ಲು
ವ್ಯರ್ಥವಾಗಿ ಪಕ್ಕ ಉಳಿದ ಒಂಟಿ ಬಾಣ
ನೆರಳಿನಾಟವಾಡಿಸೋಕೂ ಬೇಕು ಬೆಳಕು
ಆಗದಿರಲಿ ಕುರುಡುತನದ ಅನಾವರಣ
ಬೆಚ್ಚಿ ಬಿದ್ದ ಮಗುವ ಹಿಡಿಯೆ ಬಿಟ್ಟು ಅಂಗೈ
ತಾಯಿ ಊಹೆಗೈಯ್ಯ ಬೇಕೇ ಅದರ ನಗುವ?
ಮಗುವಿಗಿಷ್ಟು ಸಾಲುತಿಲ್ಲ ಬೇಕು ಎದೆ
ತಬ್ಬಿ ಬೆಚ್ಚಗಿರಲು, ನೀಗಿಸೋಕೆ ಹಸಿವ
ನಟ್ಟ ನಡುವೆ ನೆಟ್ಟ ತುಳಸಿ ದಳದ ಹಸಿರು
ಕತ್ತಲಲ್ಲಿ ಕಪ್ಪು ತಾಳಿ ನಿಂತ ಜೀವ
ತೀರ್ಥ ಸುರಿದು ಕಡ್ಡಿ ಗೀರಿ ಉರಿಸಿ ದೀಪ
ಗೂಟ ಮುದುಡಿದೆ ಎದುರು ನೋಡಿ ಕಾವ
ಎಷ್ಟು ದೂರ ಚಲಿಸಲೆಂತು ಪ್ರಯೋಜಕ
ಮುಳ್ಳು ಮತ್ತೆ ಮರಳಬೇಕು ಆದಿ ಗೆರೆಗೆ ಲೆಕ್ಕಿಸಿದವರಿಲ್ಲ ಅದರ ಸುತ್ತು ಪಯಣ
ಧಿಕ್ಕಾರವಿಟ್ಟಿತದಕೆ ಕತ್ತಲಿಗೆ
ತಮ್ಮ ತಾವೆ ಹುಡುಕುವಾಟ ಆಡಿ ಎಲ್ಲ
ಗೆದ್ದೆವೆಂದುಕೊಂಡರೂ ಗೆದ್ದವರು ಇಲ್ಲ!!
ಮತ್ತೆ ಹುಟ್ಟಿ ಬರಲಿ ಬರವಸೆಯ ಸೂರ್ಯ
ಸೆರೆ ಮಾಡಲಿ ಕತ್ತಲನ್ನು ಬೆಳಕ ಜಾಲ......
-ರತ್ನಸುತ