ಇದ್ದ ಬಣ್ಣವ
ತನ್ನ ಅಸಲಿಯತ್ತಿಗಿಂತ
ಬೇರೆ ಸ್ವರೂಪದಲ್ಲಿ
ಕಾಣುವುದೂ ಕುರುಡು;
ನನಗೀಗ ಅದು ಕವಿದಿದೆ
ಕೆಸರಲ್ಲಿಯ ನೀರು
ನೀಲಿ ಸಮುದ್ರವ ಹೋಲದೆ!
ಮೋಡ,
ಹಾಲಿಕಲ್ಲು, ಮಳೆ
ಇವೆಲ್ಲದರ ಬಣ್ಣ
ಏಕಿಷ್ಟು ಭಿನ್ನ?
ನೆತ್ತರು ಕೆಂಪು ಎಂದು
ಹರಿಸಿದವರು ಹೇಳಿದರೂ
ಒಪ್ಪಲು ತಯಾರಾಗಿರಲಿಲ್ಲ;
ಪ್ರತ್ಯಕ್ಷವಾಗಿ ಕಂಡೂ
ಸಂದೇಹ ಪಡುವಂತಾಗಿದೆ
ಅದು ಹೆಪ್ಪುಗಟ್ಟಿ ಕಪ್ಪಾಗಿತ್ತೆ?
ಗಿಡಮರದೆಲೆಗಳದ್ದೋ
ದಿನಕ್ಕೊಂದು ನಿಲುವು
ಹಸಿರು, ಕಂದು, ಹಳದಿ ಇತ್ಯಾದಿ,
ಹೂಗಳದ್ದೂ ಅದೇ ಕತೆ;
ಆಕೆಯನ್ನೊಮ್ಮೆ ಗುಲಾಬಿಗೆ ಹೋಲಿಸಿ
ಪ್ರತಿಕ್ರಿಯೆಗೆ ಕಾದಿದ್ದೆ,
ಮೊಗದಲ್ಲಿ ನನ್ನಷ್ಟೇ ಗೊಂದಲ
ನಗುವಲ್ಲಿ ಸಾವಿರ ಒಗಟು
ಅಸ್ಥಿರ, ನಮ್ಮ ಮನಸಿನಂತೆ
ಸಿದ್ಧ ಆಕಾರದಲ್ಲುಳಿಯದೆ
ಬದಲಾಗುತ್ತಲೇ
ಬದಲಾವಣೆಗಳ ಪ್ರಶ್ನಿಸುವುದು,
ವಿರೋಧಿಸುತ್ತಲೇ ವಿನೋದಿಸುವುದು
ಬಣ್ಣಗಳು
ನಮ್ಮ ಜೊತೆ ಆಟವಾಡಿದಷ್ಟು
ನಾವು
ಬಣ್ಣಗಳ ಜೊತೆ ಆಟವಾಡಿಲ್ಲವೇನೋ!