Thursday, 27 August 2020

ನನ್ನ ಮನೆಯ ಹಿತ್ತಲಲಿ

ನನ್ನ ಮನೆಯ ಹಿತ್ತಲಲಿ 

ಚಿಟ್ಟೆ ಗೂಡ ಸೀಳುತಿದೆ 
ಅಲ್ಲೇ ಮರದ ಟೊಂಗೆಯಲಿ 
ಹಕ್ಕಿ ಗೂಡ ಕಟ್ಟುತಿದೆ 

ಟಿಸಿಲೊಡೆದ ಬಳ್ಳಿ ತಾನು 
ಮುಳ್ಳು ತಂತಿಯ ಹಬ್ಬುತಿದೆ 
ಕಾವು ಪಡೆದ ಮೊಟ್ಟೆಯಲಿ 
ಜೀವ ಮೈಯ್ಯಿ ಮುರಿಯುತಿದೆ 

ನನ್ನ ಮಣ್ಣಲಿ ಬೇರೂರಿ 
ಮಗ್ಗಲು ಮಣ್ಣಿಗೆ ಮನಸೋತು 
ಸೀಬೆ ಮರ ಬಾಗಿಹುದು 
ನಾಲಗೆ ಚಪ್ಪರಿಸಿಹುದು 

ಘಮ ಘಮ ಸುತ್ತಲ ಆವರಣ  
ಸುಗಂಧ ಸೂಸಲು ಹೂಗಳು 
ಗಡಿದಾಟಿ ಹೊರ ನಡೆಯುತಿದೆ 
ಶತ್ರುವಿಗೂ ಸಮ ಪಾಲು

ಜಾಡಿನ ಆಜು ಬಾಜಿನಲಿ 
ಗರಿಕೆಗೆ ಇನ್ನೂ ಸುಖ ನಿದ್ದೆ 
ಕಾಲಡಿ ಸಿಲುಕಿ ಹೊಸಕಿದರೂ 
ಚಿಗುರುವ ಚಾಳಿ ಇದ್ದಿದ್ದೇ 

ಮುಂಬಾಗಿಲಿಗೆ ಚಂದ ಬಣ್ಣ 
ಮತ್ತದರ ಗುಟ್ಟಾದ ಕೀಲಿ 
ಹಿತ್ತಲ ಬಾಗಿಲ ಕೊಕ್ಕೆಯ ಕಿಲುಬು 
ಕೊಳ್ಳೆ ಹೊಡೆತಕೆ ಸಿಕ್ಕ ಜವಾಬು 

ಅಟ್ಟದಲಿ ಕೂಡಿಟ್ಟ ಚಿನ್ನ ಮಣ್ಣು 
ಮಣ್ಣಿನಲಿ ಹೂತರೆ ಬೀಜ ಹೊನ್ನು 
ಹಸಿವಿಗೆ ಹೊಲ, ನಿದ್ದೆಗೆ ಗುಡಿಸಲು 
ಅರಿವಿಗೆ ಹಿತ್ತಲ ಗಿಡ ಮದ್ದು... 

Wednesday, 26 August 2020

ನಿನ್ನ ಸನಿಹಕೆ

ನಿನ್ನ ಸನಿಹಕೆ ನನ್ನ ಮನವ

ಬರೆದು ಕೊಡುವೆನು
ಎಲ್ಲ ಅನಿಸಿಕೆ ನಿನ್ನ ಎದುರು
ತೆರೆದು ಇಡುವೆನು
ಓಡಾಡೋ ಕಡೆಯಲೆಲ್ಲ
ನೆರಳಾಗು ಕೂಡಲೇ
ಮಾತಾಡೋ ಸಮಯವಲ್ಲ 
ಮನಸಾರೆ ಹಾಡಲೇ.. 

ಯಾರು ಏನೇ ಹೇಳಲಿ 
ಮೊದಲ ಪ್ರೀತಿಯೇ ಮಧುರ 
ಎಲ್ಲ ತಡೆಯ ದಾಟಿ ಬಂದು 
ಗೆಲ್ಲೊ ಪ್ರೇಮಿ ಅಮರ
ಪಾರಿಜಾತವಾಗು ಪರಿಮಳವ ಸೂಸುತ 
ಜಾಹೀರಾಗುವಾಗ ಈ ಪ್ರೀತಿ ಶಾಶ್ವತ 
ಇರಬೇಕು ನಿನ್ನ ಸಹವಾಸ ನನ್ನ ಕನಸಿಗೆ 
ಬಂದಂತೆ ಬಂದು ಮರೆಯಾಗಿ ಹೋದೆ ಏತಕೆ?... 

ತುಂಬಿ ಬಂದ ಕಣ್ಣಿಗೆ 
ನೀನಿರಬೇಕೆಂಬ ಹಂಬಲ 
ಬೇರೆ ಏನು ಹೇಳದೆ ನೀಡು 
ಒಲವ ಕರೆಗೆ ಬೆಂಬಲ 
ದೂರ ದೂರ ಇರಲು ಮನಸಿಲ್ಲ ಜೀವಕೆ 
ಕೈ ಚಾಚಿ ಬೆರಳ ನೀಡು ಹಿಡಿಗೊಂದು ಬೇಡಿಕೆ 
ನಡು ದಾರಿಯಲ್ಲಿ ಮರೆತಂತೆ ನಿಂತ ಊರಲಿ 
ಬೀರೂರಿಕೊಂಡೆ ಬಾಯಾರಿ ನಿನ್ನ ಗುಂಗಲಿ... 

ಚೂರಾದ ಹೃದಯದ ಮೇಲೆ

ಚೂರಾದ ಹೃದಯದ ಮೇಲೆ

ಚೂರಾದರೂ ಕನಿಕರಿಸು 
ಬೇರೂರಿಕೊಂಡಿದೆ ವಿರಹ 
ನಗುವೊಂದ ಬೀರಲು ಕಲಿಸು
ಹಸಿ ಗಾಯವೊಂದನು ಇರಿದು 
ಉಸಿರಾಡುತಿರುವೆನು ಹೀಗೆ 
ನಸುಕಾದ ಬಾಳಿಗೆ ಒಮ್ಮೆ 
ಬೆಳಕನ್ನು ಬೀರಲು ಕಳಿಸು

ಬಿರುಸಾದ ಈ ಉಸಿರಲ್ಲಿ
ಬಯಕೆಗಳ ಬೇಗುದಿ ಸಂತೆ 
ಮರೆಯಾದ ಮಿಂಚಿನ ಮೂಲ 
ನಿನ್ನಲ್ಲೇ ಉಳಿದಿದೆಯಂತೆ 
ಸವಿಯಾದ ಸೇತುವೆ ಮಾತು 
ಬಿರುಕಲ್ಲಿ ಕೊನೆಗಾಣುತಿದೆ 
ಕತೆ ನೂರು ತಿರುವಿನ ಕಂತೆ 
ನೋವಿನ್ನೂ ಉಲ್ಬಣಿಸುತಿದೆ 

ಸರಿದಂತೆ ದೂರಕೆ ಇನ್ನೂ 
ವಿಪರೀತವಾಗುವ ಸೆಳೆತ 
ಜರಿವಾಗ ಮೌನದ ಕರೆಯ 
ಎದೆಯಲ್ಲಿ ಸಾವಿನ ಮೊರೆತ 
ಅನುರಾಗ ಹಾದಿಯ ಹಿಡಿದು 
ಗುರಿ ತಪ್ಪಿ ಹೋಗುವ ಕೊಡುಗೆ 
ಮನ ಸೋಲಲಿಲ್ಲವೇ ಇನ್ನೂ
ಈ ಸೋತ ಮನಸಿನ ಕರೆಗೆ?

ಹೇಗೆ ಪಾರಾಗಲಿ ಮೋಹದಿಂದ?

ಹೇಗೆ ಪಾರಾಗಲಿ ಮೋಹದಿಂದ?

ಸಿಲುಕಿದಲ್ಲೇ ಸುಖವ ಕಾಣುವಾಗ 
ತಾಕಿ ಹೆಚ್ಚಿತು ಪುಳಕ ಆದ್ದರಿಂದ 
ಅಂಟಿ ಕೂರುವೆ ನಿನ್ನ ನೆನಪಿಗೀಗ

ಎಲ್ಲಿ ಕದ್ದೋಡಲಿ ಕಾಣದಂತೆ?
ನಿನ್ನ ನೆರಳು ನನ್ನ ಹಿಂಬಾಲಿಸೆ 
ಮೌನ ದಂಡೆಯ ಧ್ಯಾನ ವ್ಯರ್ಥವಿಲ್ಲಿ 
ನಿನ್ನನುಪಸ್ಥಿತಿ ಕೂಡ ಮಾತಾಡಿಸೆ

ಏಕೆ ಮೂಡದು ಇರುಳು ಕಣ್ಣುಗಳಿಗೆ?
ಮುಚ್ಚಿದರೂ ಆವರಿಸಿದಾಗ ನೀನು 
ನನ್ನಲ್ಲಿ ಉಳಿದು ಮುನ್ನಡೆಸಿದಂತೆ 
ನಿನ್ನಲ್ಲೂ ಆ ಸ್ಥಾನ ಪಡೆಯಲೇನು?

ಎಲ್ಲಿಗೆಲ್ಲಿಯ ನಂಟು ಉಂಟಾಯಿತು 
ಪ್ರೀತಿ ಹುಚ್ಚರಿಗಷ್ಟೇ ಒಲಿವುದಂತೆ?
"ಹುಚ್ಚು ಪ್ರೀತಿ" ಎಂದು ಕರೆಯೋ ಬದಲು 
ತಿರುಚುವುದು ಪ್ರೇಮಿಗೆ ಸುಲಭವಂತೆ

ಉತ್ತರಗಳಿಲ್ಲದ ಪ್ರಶೆಗಳಿಗೆ 
ಪ್ರತ್ಯುತ್ತರವ ನೀಡಿ ಬಿಡುವು ಕೊಡುವ 
ನಂತರಕೆ ಗೊಡವೆಗಳು ಇದ್ದೇ ಇರಲಿ 
ಬಂದದ್ದ ಬಂದಂತೆ ನೋಡಿಕೊಳುವ 

ಹೆಣೆದ ಜಾಲದಿ ಕಾಲು ಜಾರಿಕೊಂಡೂ 
ಎಚ್ಚರ ಉಳಿವುದು ಪಕ್ವ ಪ್ರೇಮ 
ಮಿಕ್ಕ ವಿಷಯಗಳಾವೂ ಮುಖ್ಯವಲ್ಲ 
ಪ್ರಣಯವಿಲ್ಲದ ಪಯಣ ಸತ್ವಹೀನ 

Friday, 21 August 2020

ಸಂಧ್ಯಾರಾಗದಲಿ ನಿನ್ನ ಕೂಗುವೆನು

ಸಂಧ್ಯಾರಾಗದಲಿ ನಿನ್ನ ಕೂಗುವೆನು

ಬಂದು ಹೋಗು ಒಮ್ಮೆ ಆತಿಥ್ಯಕೆ
ಮಿಂದ ಕಣ್ಣುಗಳಿನಿಂದ ಕಾಯುವೆನು
ತುಂಬು ಆಸೆಯಲಿ ಸಾಂಗತ್ಯಕೆ

ಮಲ್ಲೆ ಮಾಲೆಯ ಮುಡಿದು 
ನೀಳ ಜಡೆಯುಟ್ಟು ರೇಶಿಮೆ ಬರುವಿಕೆಗೆ
ಸಂಜೆ ಮಾಗುತಿದೆ ಕೆಂಪು ಗಲ್ಲದಲಿ  
ಮಾತು ಮೌನದ ತೆರೆಮರೆಗೆ

ಧೂಪ ಹಚ್ಚಿದ ಮನೆಯ ಅಂಗಳ
ಒಂಟಿ ಸ್ವಪ್ನವ ಕಾಣುತಿರೆ
ನಿನ್ನ ದಾರಿಯ ಎದುರು ನೋಟಕೆ
ಮನದ ಕಣ್ಣಿಗೂ ಮಂಜು ಪೊರೆ

ಬೆವರ ಸಾಲಿಗೆ ಸೆರಗ ಒಡ್ಡುತ
ಕೊರಳಿನಾಚೆಗೆ ಏದುಸಿರು
ನಿನ್ನ ನೆರಳಿನ ಸುಳುವು ಸಿಕ್ಕರೆ 
ಹೋದ ಪ್ರಾಣಕೂ ನಿಟ್ಟುಸಿರು

ಕೋಪದಂತೆಯೇ ದೀಪ ತಣ್ಣಗೆ 
ಕತ್ತಲಲ್ಲಿ ಕಣ್ಣೀರ ಹೊಳೆ 
ಬೇಡ ಹೋಗು ನೀ ಮೋಸಗಾರ 
ಎಂದೀಗಲಾದರೂ ಅನ್ನುವಳೇ?

ಬೆಳಗು ಮೂಡಿತು, ಎಚ್ಚರಾಯಿತು 
ಹಣೆಯ ಮೇಲೆ ಮುತ್ತಿನ ಸ್ಪರ್ಶ 
ಮಡಿಲಲಿರಿಸಿದ ನಲ್ಲ ಕನಸಲೇ 
ಉಳಿದು ಹೋದ ನೀಗಿ ಸರಸ 

ರಾಗ ಮಾಲಿಕೆ ಕಟ್ಟಿ ಕೂತಳು 
ಸಂಜೆ ಪಾಲಿಗೆ ಮುಡುಪಿಡಲು 
ನಲ್ಲ ಕಂಡ ನೆನಪಲ್ಲಿ ಮಿಂದು
ಸೊಗಸಾದ ಹಾಡಿನ ಗುರುತಿಡಳು!

ಎಷ್ಟು ಕಾತರವೇ ಮಳೆಯೇ

ಎಷ್ಟು ಕಾತರವೇ ಮಳೆಯೇ ನಿನಗೆ

ಇಳೆಯ ಮೈಯ್ಯ ಹಸಿಯಾಗಿಸಲು 
ಇಷ್ಟು ಸುರಿದು ಸಾಕಾಗದೆ ಉಳಿದೆ
ದಳಗಳ ಪುಟ್ಟ ಬೊಗಸೆಯಲೂ 

ಕಲ್ಲು ಕಲ್ಲಿನ ಮೂಗಿನಂಚಲಿ  
ಅಂಟಿ ಕೂತೆ ಜಪ ಮಾಡುತಲಿ 
ತುಂಟ ಬೆರಳಿನ ಮೀಟುವಾಟಕೆ 
ಸೋತು ಹಾಗೆ ತಲೆ ಬಾಗುತಲಿ 

ಒಂದುಗೂಡುತ ಹನಿಗಳೆಲ್ಲವೂ 
ಹರಿವ ಸಂಭ್ರಮ ಏಕತೆಗೆ 
ಹಸಿರ ಶಾಲನು ಹೊದ್ದುಕೊಂಡು
ಹ್ಞೂ ಎಂದಿದೆ ಧರೆ ಈ ಕತೆಗೆ 

ಆಚೆ ಗಾಜಿನ ಧೂಳು ಹೇಳ-
-ಹೆಸರಿಲ್ಲದಂತೆ ಮರೆಯಾಗುತಿದೆ 
ಮುನ್ನೋಟಕೂ ಮುನ್ನ ಮಂಜಿನ 
ಪರದೆ ಸರಿಸಿಬಿಡು ಎನ್ನುತಿದೆ 

ಪುಟ್ಟ ಪುಟ್ಟ ಗುಳ್ಳೆಗಳ ಮಾಡಿ 
ಥಟ್ಟೆಂದು ಒಡೆದು ನಶ್ವರ ಗುರುತು 
ಪ್ರಣಯ ಪಕ್ಷಿಗಳ ಮಧುರ ಕ್ಷಣಗಳು 
ದಾಖಲಿಸುತಿವೆ ಈ ಕುರಿತು 

ಮುಂಜಾನೆಯ ಸಂಜೆಗೊರಗಿಸಿ  
ಮುಸ್ಸಂಜೆಯ ಮುಂಜಾವಿಗೆ 
ಬೆರೆಸಿಕೊಟ್ಟ ಮಳೆಗೊಂದು ಪತ್ರ 
ನೀರಲ್ಲಿ ದೋಣಿಯ ದೀವಟಿಗೆ 

Wednesday, 19 August 2020

ಅಳುವೊಂದು ಮೊದಲಾದ ಕೆಲವೇ ಕ್ಷಣಗಳಲಿ

ಅಳುವೊಂದು ಮೊದಲಾದ ಕೆಲವೇ ಕ್ಷಣಗಳಲಿ 

ನಲಿವೆಂಬ ಅಧ್ಯಾಯ ತೆರೆದುಕೊಳ್ಳುವ ಸಮಯ 
ನಾಲ್ಕು ಹೆಜ್ಜೆ ಮುಂದೆ ಇಟ್ಟು ಸಾಗಿ ಹೊರಟು  
ಹಿಂದೇಟು ಹಾಕುತಿದೆ ಮೂಕ ಕಣ್ಣೀರು 
ಭರದಲ್ಲಿ ಬಳಸದಿರು ಇರಿಸು ಅಂತರವನ್ನು 
ಸರಸಕ್ಕೆ ತಾಲೀಮು ನಡೆಸಬೇಕಿದೆ ಇನ್ನೂ 
ಕಾದು ಕೂತರೆ ಜನುಮ ಸಾಕಾಗದು ಬದುಕೇ 
ಗಟ್ಟಿಗೊಳ್ಳಲಿ ಆಳ ತಲುಪುವ ಬೇರು 

ಬರಹಗಳು ಕೈ ಮೀರಿ ಬಿಡಿಸಿಕೊಳ್ಳುತಲಿರಲು  
ಸಂಕೋಲೆಯ ಬಳಸಿ ಕಟ್ಟಿಬಿಡಲಾಗದು  
ತಳೆದ ಸಂತೆಗಳಲ್ಲಿ ಉಳಿದ ಸರಕುಗಳನ್ನು 
ಮಾರುವ ತನಕ ಮರಳುವಂತಿಲ್ಲ 
ದುರುಳ ಸ್ವಪ್ನದ ಹಾದಿ ಎಷ್ಟು ಸರಾಗ 
ಮೊದಲಾದ ಪಯಣಕಿದೋ ಎಲ್ಲವೂ ಸೊಗಸೇ 
ಹಿಂದಿರುಗಿದಾಗ ಪೋಷಾಕು ಬಯಲಾಗುವುದು  
ಮೆಚ್ಚುವಷ್ಟೇ ಸುಲಭ ಹೆದರುವಂತಿಲ್ಲ 

ಮೋಡಗಳ ಆಕಾರ ನಂಬುಗೆಗೆ ಅರ್ಹವೇ?
ಕೂಡಿ, ಚೆದುರಿ ಮತ್ತೆ ಹೊಸ ರೂಪ ಪಡೆದವು 
ನೀಲಿ ಗಗನದ ಬೆತ್ತಲಿಗೆ ಕಪ್ಪು ಮಸಿ ಹಚ್ಚಿ 
ಗುಡುಗುಡುಗಿ ಹೆದರಿಸಿತು ಬಳ್ಳಿ ಹೂವ 
ನೆನ್ನೆಯ ಕಾಲು ದಾರಿ ಇಂದು ಮುಳುಗಿದೆ 
ನದಿ ತನ್ನ ಹೊಸ ದಿಕ್ಕು ಕಂಡುಕೊಂಡಂತಿದೆ 
ಕಟ್ಟಿದ ಸೇತುವೆಯು ಪಕ್ಕಕ್ಕೆ ಸರಿದಿರಲು 
ದಾಟಿ ಪಾರಾಗುವುದು ಹೇಗೆ ಜೀವ?

ಬಚ್ಚಿಟ್ಟ ಗುಟ್ಟುಗಳು ಕಾವು ಪಡೆಯುತ್ತಲಿವೆ 
ಎಂದಾದರೊಂದು ದಿನ ಸಿಪ್ಪೆ ಸೀಳಲೇಬೇಕು 
ಹರಿತವಾದ ಸತ್ಯ ಅವರವರ ಅರಿವಿಗೆ 
ಮೆಚ್ಚಿಸುವ ಸುಳ್ಳು ಶುದ್ಧ ಕೊಚ್ಚೆ  
ಸಾಗರದ ದಂಡೆಯಲಿ ಕೂತು ಲೇಖನಿ ಹೊತ್ತು 
ಗೀರುವ ಸಂಜೆಯಲಿ ಮೂಡುವ ಪ್ರಶ್ನೆಗಳ
ಅಲೆಗಳಿಗೆ ಹೊರೆಸುತ ಮರಳಿ ಸಾಗರದೆಡೆಗೆ 
ತೇಲಿಸುವೆ ಸಪ್ತ ಸಾಗರಗಳಾಚೆ  

ಹೇಳಿಕೊಡಬೇಕಿಲ್ಲ ಹಸುಳೆಗೆ ಅಳುವನ್ನು 
ನಗಿಸುವ ಕಲೆಯು ಮೈಗೂಡಬೇಕು 
ಆದರೆ ತಪ್ಪು ಹೆಜ್ಜೆಗಳ ಜೊತೆ ಹಾಕುತ್ತ 
ಮತ್ತೊಮ್ಮೆ ನಡಿಗೆಯ ಕಲಿಯ ಬೇಕು 
ತಮದ ತಲ್ಲಣಗಳಿಗೆ ಬೆಳಕು ಪರಿಹಾರ 
ಸುಮದ ಘಮ ಎಲ್ಲರಿಗೂ ಸಮ ಪಾಲು ಸೂಸೆ 
ನೆರಳಲ್ಲಿ ನೆಲೆಕಾಣಬಯಸುವ ನೆರಳಿಗೂ 
ನರಳಾಟದ ಖುಷಿಯ ಅನುಭವವಿರಬೇಕು 

ಮಣ್ಣು, ಹೆಣ್ಣು ಒಂದೇ ಅನ್ನೋ ಮಾತು

ಮಣ್ಣು, ಹೆಣ್ಣು ಒಂದೇ ಅನ್ನೋ ಮಾತು ಎಂಥ ಚಂದವು 

ಪ್ರೀತಿ ಹಂಚೋ ರೀತಿಯಲ್ಲಿ ತಾಳೆ ಆಗೋ ಅರ್ಥವು 
ಭೂಮಿ ತಾಳೋ ಸಹನೆ ಇವಳ ಕಣ್ಣಲಿ 
ಸವಿ ನೀಡೋ ಕರುಣೆ ಇವಳ ಮಾತಲಿ 

ಚಂದಿರನ ಮೊಗದೊಳಗೆ ತಂಗಿದ ತಣ್ಣನೆಯ 
ತಿಂಗಳನು ಚೆಲ್ಲಿಕೊಂಡಳು ತುಂಬಿದ ಮೊಗದಲಿ 
ಹಿತ್ತಲಿನ ಹೂವ ಬಳ್ಳಿಗೆ ತನ್ನೆಲ್ಲ ಅಂದ ಕೊಟ್ಟು 
ಬಿಟ್ಟ ಹೂವು ಗಂಧ ಚೆಲ್ಲಿದೆ ಚಿಟ್ಟೆಯ ಗುಂಗಿನಲ್ಲಿ 
ಕನ್ನಡದ ಸೊಗಡು ಉಸಿರ ಒಳಗೂ 
ಸಂಗಡವ ಕೊಡುತ ಸುರಿವ ಮಳೆಗೂ 
ಆಸೆಗಳ ಸಾಲಿನಲ್ಲಿ ಮೀಸಲಿಟ್ಟ ಜಾಗವನ್ನು 
ಪ್ರೀತಿಯಿಂದ ತುಂಬುವಳು ಕಾತರಿಸಿ ನನ್ನ ಹುಡುಗಿ 

ಚಿಪ್ಪಿನಲ್ಲಿ ಮುಚ್ಚಿಯಿಟ್ಟರೂ ಮುತ್ತೊಂದು ದಕ್ಕಿದಂತೆ 
ಅಚ್ಚು ಮೆಚ್ಚು ತಾರೆಯೆಲ್ಲವ ಕುತ್ತಿಗೆಗೊಪ್ಪುವಂತೆ 
ಬುತ್ತಿಯಲ್ಲಿ ಹರಳುಗಳ ಮಿಂಚನ್ನು ಹೊತ್ತು ತಂದೆ 
ಸುತ್ತಿ ಬಂದು ಎಲ್ಲ ಸ್ವರ್ಗವ ನಿನ್ನಲ್ಲೇ ಕಂಡುಕೊಂಡೆ 
ಹೆಜ್ಜೆ ಮೇಲೆ ಹೆಜ್ಜೆಯ ಇರಿಸಿ ನಡೆದು 
ನನ್ನೆದೆಯ ಕದವ ಬಿಡದೆ ಬಡಿದು 
ಅಂತರಂಗ ತುಂಬಿಕೊಂಡ ಭಾವದಲ್ಲಿ ತೇಲುವಂತೆ 
ಪ್ರೇಮವನ್ನು ಸಾರುವಂತೆ ಮೂಡಿ ಬಂದ ಸಾಲುಗಳಿವು 

ಎಚ್ಚರವ ತಪ್ಪಿಸುತಲೇ ಎಚ್ಚರವಾಗಿಸುತ 
ಉತ್ತರವೇ ಇಲ್ಲವಾಗಿಯೂ ಎಲ್ಲ ಉತ್ತರಿಸುತ 
ಗಿಟ್ಟುವಂತೆ ತಪ್ಪಿ ಹೋಗುಯೂ ಮತ್ತೊಮ್ಮೆ ಸಿಕ್ಕುವಂತೆ 
ನಕ್ಕು ಇದ್ದ ಗುಂಡಿಗೆಯನು ಮೆಲ್ಲಗೆ ದೋಚುವಂತೆ 
ಕವಿತೆಯ ಒಳಗೂ ಕುಳಿತ ಅವಳು 
ಪದಗಳ ಸೃಜಿಸಿ ಕವಿಯಾಗಿಸಲು 
ಪ್ರಾಸಗಳ ದಾಸನಾಗಿ ಗೀಚಿಕೊಂಡ ಪದ್ಯಗಳ
ಸಂಚಿಕೆಗೆ ಮುನ್ನುಡಿಯ ಕೊಟ್ಟು ಹೋದ ನಲ್ಲೆ ಇವಳೇ.... 

Monday, 17 August 2020

ಎಲ್ಲಿಗಂತ ಸಾಗಿ ಹೊರಟಿದೆ ಈ ಒಂಟಿ ದಾರಿ

ಎಲ್ಲಿಗಂತ ಸಾಗಿ ಹೊರಟಿದೆ ಈ ಒಂಟಿ ದಾರಿ

ಬಳಸಿ, ಸಿಗುವುದೇ ನನ್ನ ದಾರಿ?
ಹೆಜ್ಜೆ ಗುರುತುಗಳಿವು ಎಲ್ಲೆ ಮೀರಿ
ಕೊಡುವ, ಬರವಸೆಯ ತಿರುವಿನಲ್ಲಿ
ಮುದ್ದಾದ ಹೂವೊಂದು ಬಿರಿಯಿತು ಮನಸಲ್ಲಿ

ಎಲ್ಲಿಗಂತ  ಸಾಗಿ ಹೊರಟಿದೆ ಈ ಒಂಟಿ ದಾರಿ
ಬಳಸಿ, ಸಿಗುವುದೇ ನನ್ನ ದಾರಿ?
ಹೆಜ್ಜೆ ಗುರುತುಗಳಿವು ಎಲ್ಲೆ ಮೀರಿ
ಕೊಡುವ, ಬರವಸೆಯ ತಿರುವಿನಲ್ಲಿ
ಮುದ್ದಾದ ಹೂವೊಂದು ಬಿರಿಯಿತು ಮನಸಲ್ಲಿ


ಬರಗಾಲ, ನೆರೆಗಾಲ, ಕೊರೆವಂಥ ಚಳಿಯಲ್ಲೂ
ಅಲುಗಾಡದೆ ನಿಂತ ಬದುಕಿನ ಸ್ಥಿರತೆ
ಕನಸಲ್ಲಿ ಹರಿದಂತ ನವಿರಾದ ಆಕರ್ಷ 
ಸೊಗಸಾಗಿ ಎದುರಾಗೋ ಒಲವಿನ ಸರಿತೆ 
ಹಾಡೊಂದು ಒಲಿದರೆ ಉಲ್ಲಾಸ
ಪುಳಕಿತ ನೋಡು ಯಾನ ಕೊನೆವರೆಗೆ
ಸಾಗೋದೇ ಸಾಕಾರ ನೆನಪಿನ ಜೊತೆಯಲ್ಲಿ

ಎಲ್ಲಿಗಂತ  ಸಾಗಿ ಹೊರಟಿದೆ ಈ ಒಂಟಿ ದಾರಿ
ಬಳಸಿ, ಸಿಗುವುದೇ ನನ್ನ ದಾರಿ 
ಹೆಜ್ಜೆ ಗುರುತುಗಳಿವು ಎಲ್ಲೆ ಮೀರಿ


ಇರುವಲ್ಲಿ ಇರುವಂತೆ, ಕರೆದಲ್ಲಿ ಬರುವಂತೆ
ನಮಗಾರು ಸಿಗರಂತೆ ನೆರಳಿನ ಹೊರತು
ಕರೆ ಬಂದು ನಡೆವಾಗ, ಕರೆದಾತ ಮರೆಯಾಗಿ
ಹುಡುಕೋದ ಕಲಿಬೇಕು ನಮ್ಮದೇ ಗುರುತು
ಬಾಳೋದೇ ಬದುಕಿನ ಹೋರಾಟ
ಸವಿಯುತ ತಪ್ಪು-ಒಪ್ಪು ಎಲ್ಲವನೂ
ಸಾಗೋದೇ ಸಾಕಾರ ನೆನಪಿನ ಜೊತೆಯಲ್ಲಿ

ಎಲ್ಲಿಗಂತ  ಸಾಗಿ ಹೊರಟಿದೆ ಈ ಒಂಟಿ ದಾರಿ
ಬಳಸಿ, ಸಿಗುವುದೇ ನನ್ನ ದಾರಿ 
ಹೆಜ್ಜೆ ಗುರುತುಗಳಿವು ಎಲ್ಲೆ ಮೀರಿ
ಕೊಡುವ, ಬರವಸೆಯ ತಿರುವಿನಲ್ಲಿ
ಮುದ್ದಾದ ಹೂವೊಂದು ಬಿರಿಯಿತು ಮನಸಲ್ಲಿ... 

ಓ ಮೇಘವೇ, ಮೇಘವೇ ಹೋಗಿ ಬಾ

ಓ ಮೇಘವೇ, ಮೇಘವೇ ಹೋಗಿ ಬಾ

ಸಂದೇಶವ ಅವರಿಗೆ ನೀಡಿ ಬಾ
ಶಾರೀರವು ಮಂಕಾದರೆ
ಸಂಗೀತಕೆ ಸಾರವು ಎಲ್ಲಿದೆ..

ಓ ಮೇಘವೇ, ಮೇಘವೇ ಹೋಗಿ ಬಾ
ಸಂದೇಶವ ಅವರಿಗೆ ನೀಡಿ ಬಾ!

ಮಧುರ ನೆನಪುಗಳ ಜೊತೆ ನಿಮದೇ ಪಲುಕು
ಗುನುಗೋ ಪ್ರತಿ ಬಾರಿ ಹೆಚ್ಚುವುದು ಅಭಿಮಾನ
ಬದುಕ ಪ್ರತಿಯೊಂದು ಪುಟ-ಪುಟದ ಗುರುತು
ಹೊರಳಿ ಎದೆ ತುಂಬಿ ಹಾಡುವುದೇ ಸನ್ಮಾನ
ಕಣ್ಣಾಲಿಯ ತುಂಬುವ ಕಂಠವು ನಿಮ್ಮದು
ಅಣುವಣುವೂ ಕೋರಿದೆ ನಿಮ್ಮ ಕ್ಷೇಮವ
ಗೆದ್ದು ಬನ್ನಿ ಮತ್ತೂ ಹಾಡಲು
ನಿಮ್ಮ ನಗುವ ನಮಗೂ ಹಂಚಲು
ರಂಗಿಲ್ಲದ ಹೂದೋಟವು
ನೀವಿಲ್ಲದೆ ಮೌನವೇ ರಾಗವು..

ಓ ಮೇಘವೇ, ಮೇಘವೇ ಹೋಗಿ ಬಾ
ಸಂದೇಶವ ಅವರಿಗೆ ನೀಡಿ ಬಾ... 

Friday, 14 August 2020

ದೇವರ ಹೆಸರಲ್ಲಿ ದೀಪ ಹಚ್ಚಿ

ದೇವರ ಹೆಸರಲ್ಲಿ ದೀಪ ಹಚ್ಚಿ

ಅದೇ ಉರಿಯಿಂದ ಪಂಜು ಹೊತ್ತಿಸಿ 
ಪಲ್ಲಕ್ಕಿ ಕಟ್ಟಿ ಊರೂರು ಸಾಗಿ ಬಂದು 
ಸಾವರಿಸಿಕೊಳ್ಳುತಿದೆ ದಾರಿ  

ಮೆಟ್ಟಿಲ ಬುಡದಲ್ಲಿ ಮೆಟ್ಟುಗಳ ಬಿಟ್ಟ
ಪಲ್ಲಕ್ಕಿ ಹೊತ್ತವರ ಗಮನವೆಲ್ಲ 
ನೆರೆದವರು ಮೆಟ್ಟಿದ ಹೋಲುವ ಮೆಟ್ಟು 
ತನ್ನದೇನೋ ಎಂಬ ಚಿಂತೆಯಲ್ಲಿ 

ಮೈ ಮುರಿವುದಕ್ಕೆ ಬಿಡುವೆಲ್ಲಿ 
ದೇವರ ಕೋಣೆಯಲೂ ವಿವಿಕ್ತತೆಯಿಲ್ಲ 
ಧೂಪಕ್ಕೆ ಸೀನಿದರೆ ಮುಡಿ ಹೂ ಜಾರಿ 
ಎಡಕ್ಕೆ ಕೆಡುಕು, ಬಲಕ್ಕೆ ಒಳಿತು 

ಅಭಿಷೇಕದ ಬಂಕೆ ಮೇಲೆ ವಸ್ತ್ರಾಭರಣ 
ವಜ್ರ ವೈಡೂರ್ಯಭರಿತ ಕಿರೀಟ  
ಸೋತ ಕೈಯ್ಯಲಿ ಮಾಯಾ ಅಸ್ತ್ರ 
ಜಗದ ಹರಕೆಗೆ ಬಿರಿದ ಹಸ್ತ 

ಹಸಿದು ಎದುರಿಟ್ಟ ಫಲ ಸೇವಿರದೆ 
ಎದುರಾದವರ ಕಂಬನಿ ಕಥೆ ಕೇಳುವ 
ಉತ್ಸವದ ಮೂರ್ತಿ ಈಗಷ್ಟೇ ಬಂದಿಳಿದನು 
ಗೋಡೆಯ ಆಚೆಗಿನ ವರದಿ ಒಪ್ಪಿಸುವ 

ತೂಗು ದೀಪದ ಮೇಲೆ ತೂಗುವ ಜೇನ್ನೊಣ 
ಹಾಡುವುದು ಮೆಚ್ಚಿಸಲು ದೇವರನ್ನು 
ನಿದ್ದೆಯಿಂದೆಚ್ಚರಿಸೆ ಕಟ್ಟಿದರೋ ಏನೋ 
ಎಲ್ಲರಿಗೂ ಎಟಕುವ ಘಂಟೆಯನ್ನು 

ಆಭರಣ ಪೆಟ್ಟಿಗೆ, ದ್ವಾರಕಿಟ್ಟರು ಬೀಗ
ಗರ್ಭಗುಡಿಯಲ್ಲೀಗ ನಿರ್ಲಿಪ್ತ ಮೌನ
ಹುಂಡಿ ಕಾಣಿಕೆ ಲೆಕ್ಕ ಕೇಳುವವನವನಲ್ಲ 
ಶಾಂತ ಚಿತ್ತಕೆ ಸಿಗದ ದೇವರಿಲ್ಲ... 

ಮಾತು ಕಲಿತ ಚಂದಿರ

ಮಾತು ಕಲಿತ ಚಂದಿರ

ನೋಡಿ ಇವಳ ಅಂದನು 
"ಇಂಥ ಅಂದ ಚಂದವ 
ಹಿಂದೆ ಎಲ್ಲೂ ಕಾಣೆನು 
ಏನು ಅಂತ ಹೇಳಲಿ 
ಮಾತು ಹೊರಡದಾಗಿದೆ 
ಹೇಳಿ ಮುಗಿಸುವಲ್ಲಿಗೆ 
ಎಲ್ಲ ಬಾಕಿ ಉಳಿದಿದೆ"

ಜಂಬ ನೋಡು ಅವಳಿಗೆ 
ಪ್ರೇಮ ಕವನ ಆಲಿಸಿ 
ಕೆಂಪು ಗಲ್ಲ ಅವಳದು 
ಹವಳವನ್ನೂ ಸೋಲಿಸಿ 
ನೂರು ಕಣ್ಣ ನವಿಲಿಗೆ 
ಇವಳ ಹಬ್ಬುವಾತುರ 
ನಶೆಯು ಖೈದಿಯಾಗಿದೆ 
ಇವಳ ಕಣ್ಣೇ ಪಂಜರ 

"ಗಾಳದಲ್ಲಿ ಸಿಲುಕಿದ 
ಮತ್ಸ್ಯ ಹೃದಯ ನನ್ನದು 
ನರಳುವಂತೆ ಮಾಡಿದೆ 
ಎಲ್ಲ ಹೊಣೆಯೂ ನಿನ್ನದು 
ಇರುಳ ಮೀರಿ ಇರಿಸಿದೆ 
ಲೋಕಕೆಲ್ಲ ಅಚ್ಚರಿ"
ಹೀಗಿ ನುಡಿದು ಹಗಲಿಗೂ 
ಹೆಗಲು ಕೊಟ್ಟ ಚಂದಿರ 

ಒಮ್ಮೆ ಮನೆಯ ಅಂಗಳ 
ಚೆಲ್ಲಿಕೊಂಡ ತಿಂಗಳ 
ಜಾರಿ ಬಿದ್ದು ತೊಟ್ಟಿಗೂ 
ತೊಡಿಸಿಬಿಟ್ಟ ಉಂಗುರ 
ನಡುವಲಿರಿಸಿ ಕೊಡವನು 
ಸಾಗುವಾಗ ಮೆಲ್ಲಗೆ 
ಕದ್ದು ಅಡಗಿ ಕೂತನು 
ಮೆಲ್ಲ ಇಣುಕಿ ಈಚೆಗೆ 

ಹೀಗೆ ಕಲಿತ ಮಾತಲಿ 
ರಾಗವನ್ನು ಬೆಸೆಯುತ 
ಇಂಪು ಬೆರೆಸಿ ತಂಪಿಗೆ 
ಹಾಡುತಿಹನು ಇರುಳಲಿ 
ಇವಳ ಎದೆಯ ಬಡಿತವು
ಪಕ್ಕ ವಾದ್ಯ ತಾಳಕೆ 
ಹೂವಿನಂತೆ ಅರಳುತ 
ಸೋಲುತಿಹಳು ಮೋಹಕೆ..

ಹಾಗೆ ಕಣ್ಣ ಮುಂದೆ ಒಮ್ಮೆ ಹಾದು ಹೋಗಲೇ?

ಹಾಗೆ ಕಣ್ಣ ಮುಂದೆ ಒಮ್ಮೆ ಹಾದು ಹೋಗಲೇ?

ನೋಡಿ ನೋಡದಂತೆ ನಾಚಿ ನೋಡು ಈಗಲೇ (೨)


ಗೆರೆಯೊಂದ ಗೀಚಿ, ನಾ ನಿಂತ ಮೇಲೂ 
ನೀ ಸೇರಿ ಹೋದೆ, ಮನದಾಳದಲ್ಲಿ 

ಕೇಳು ನನ್ನ ಒಲವೇ, ಕೇಳು ನನ್ನ ಒಲವೇ
ನನ್ನೇ ಬರೆದು ಕೊಡುವೆ, ನಿನ್ನ ಸಲುವೇ (೨)

ಸದ್ದಿಲ್ಲದೆ ಈ ಬಾಳಿಗೆ
ಒಲವಾಗಿಸಿ ನೆರವಾದೆ ನೀ 
ನಿನಗಾಗಿಯೇ ಕಾಪಾಡುವೆ 
ಆನಂದದ ಈ ಕಂಬನಿ 
ಎದುರಾಗುವಾಗ ಅರಳೋದು ಯಾಕೆ 
ನಾ ಬಂಧಿಯಾದೆ ಆ ನಗುವಿನಲ್ಲಿ 

ಕೇಳು ನನ್ನ ಒಲವೇ, ಕೇಳು ನನ್ನ ಒಲವೇ
ನನ್ನೇ ಬರೆದು ಕೊಡುವೆ, ನಿನ್ನ ಸಲುವೇ

ಆಮಂತ್ರಿಸು ಆಕಾಶಕೆ 
ಗರಿಯಾಗುತ ಈ ಆಸೆಗೆ 
ಆರಂಭಿಸು ಸಂಚಾರವ 
ಗುರಿ ಮಾಡುತ ಹೊಂಗನಸಿಗೆ 
ಮೊದಲಾದ ಪ್ರೀತಿ, ಮಳೆಗಾಲದಂತೆ 
ಬಾ ನೆನೆಯುವ ಈ ಪನ್ನೀರಿನಲ್ಲಿ

ಕೇಳು ನನ್ನ ಒಲವೇ, ಕೇಳು ನನ್ನ ಒಲವೇ
ನನ್ನೇ ಬರೆದು ಕೊಡುವೆ, ನಿನ್ನ ಸಲುವೇ

ಹಾಗೆ ಕಣ್ಣ ಮುಂದೆ ಒಮ್ಮೆ ಹಾದು ಹೋಗಲೇ?
ನೋಡಿ ನೋಡದಂತೆ ನಾಚಿ ನೋಡು ಈಗಲೇ

ಗೆರೆಯೊಂದ ಗೀಚಿ, ನಾ ನಿಂತ ಮೇಲೂ 
ನೀ ಸೇರಿ ಹೋದೆ, ಮನದಾಳದಲ್ಲಿ 

ಕೇಳು ನನ್ನ ಒಲವೇ, ಕೇಳು ನನ್ನ ಒಲವೇ
ನನ್ನೇ ಬರೆದು ಕೊಡುವೆ, ನಿನ್ನ ಸಲುವೇ (೨)

Saturday, 8 August 2020

ಈ ಸಂಜೆ, ತಂಗಾಳಿ

ಈ ಸಂಜೆ, ತಂಗಾಳಿ
ಈ ಮೌನ, ನಿನಾದ 
ಈ ಏಕಾಂತಕೆ 

ಅತಿ ಪ್ರೀತಿಯಲ್ಲಿ 
ಮಿತಿ ಮೀರುವಂತೆ 
ಹೊಸ ಕೋರಿಕೆ 

ಈ ಸಂಜೆ, ತಂಗಾಳಿ
ಈ ಮೌನ, ನಿನಾದ 
ಈ ಏಕಾಂತಕೆ 


ಆಗೋ ಮಾತು ಮಾತಲ್ಲಿ ಬಂದಾನು ಚಂದ್ರ (೨)
ಹೊಸ ರಾಗದಿ ರಂಜಿಸೋ ಆಸೆಯಿಂದ 
ಕತೆ ಸಾಗಿದಂತೆ, ಜೊತೆ ಹಾಡಿದಂತೆ
ಅದೇ ಅಲ್ಲವೇ ಬಾಳ ಸಂಗೀತವು 

ಈ ಸಂಜೆ, ತಂಗಾಳಿ
ಈ ಮೌನ, ನಿನಾದ 
ಈ ಏಕಾಂತಕೆ 

ಅದೋ ಬಾನಲಿ ತಾರೆಯ ಸಾಲು ದೀಪ (೨)
ಸೊಗಸಾದ ಚಿತ್ತಾರ ಬಿಡಿಸೋದ ನೋಡು 
ಪಿಸು ಮಾತಿನಲ್ಲಿ, ಮನದಾಸೆ ಹೇಳು 
ನಸು ನಕ್ಕರೆ ಏನೂ ಗೊತ್ತಾಗದು 

ಈ ಸಂಜೆ, ತಂಗಾಳಿ
ಈ ಮೌನ, ನಿನಾದ 
ಈ ಏಕಾಂತಕೆ 

ಸದಾ ಕಾಲಕೂ ಸಲ್ಲುವ ಪ್ರೀತಿಯಲ್ಲಿ (೨)
ಹಿಡಿ ಗುಂಡಿಗೆ ಸೋತ ಪರಿಣಾಮವೇನು?
ಇದೇ ಕಾಡೋ ಒಗಟು, ನಾ ಬಿಡಿಸೋಕೆ ಹೋದೆ 
ಅದೇ ವೇಳೆಗೆ ನಮ್ಮ ಒಲವಾಯಿತು 

ಈ ಸಂಜೆ, ತಂಗಾಳಿ
ಈ ಮೌನ, ನಿನಾದ 
ಈ ಏಕಾಂತಕೆ 

ಅತಿ ಪ್ರೀತಿಯಲ್ಲಿ 
ಮಿತಿ ಮೀರುವಂತೆ 
ಹೊಸ ಕೋರಿಕೆ 

ಈ ಸಂಜೆ, ತಂಗಾಳಿ
ಈ ಮೌನ, ನಿನಾದ 
ಈ ಏಕಾಂತಕೆ 

Wednesday, 5 August 2020

ಪ್ರೀತಿ ಹಲವು ಪರದೆಗಳ ಹಿಂದೆ

ಪ್ರೀತಿ ಹಲವು ಪರದೆಗಳ ಹಿಂದೆ ಅವಿತಾಗ 
ನಾನು ಒಂದೇ ಪರದೆಯೆಂಬಂತೆ ಕೂತಿದ್ದೆ 
ಒಂದೊಂದೇ ಮೆಲ್ಲ ಸರಿವಾಗ ಎದೆಯಲ್ಲಿ 
ಚಿಮ್ಮಲು ಸಜ್ಜಾಗಿತ್ತು ಖುಷಿಯ ಚಿಲುಮೆ 

ಮೂಡಿ ಬಂತು ತುಟಿ ಅಂಚಿನಲಿ ನಗೆ 
ಮತ್ತೆ ಮುಳುಗುತ ತನ್ನೊಳಗೇ 
ಪರದೆಗಳು ಸರಿಯುತ್ತಲೇ ಇರಲು ಅಲ್ಲಿ 
ನಗು ಮೂಡಲು ಏಕೋ ಸಂಕೋಚದ ಸಜೆ 

ಒಂದಂತೂ ಖಚಿತ, ಒಲವಿದೆ ಎಂದು 
ಅದರ ನೆರಳು ಅಷ್ಟು ಪಕ್ವವಾಗಿತ್ತು 
ಅಷ್ಟೂ ಪರದೆಗಳ ಮೇಲೆ ಅಚ್ಚೋತ್ತಿ 
ನನ್ನ ಕಣ್ಣಗೂ ಅದು ಗೋಚರಿಸುತಿತ್ತು 

ಖಾಲಿ ರಂಗಮಂದಿರದಲ್ಲಿ ನಾನೊಬ್ಬನೇ,
ಮೂಕ ಪ್ರೇಕ್ಷಕನಲ್ಲಿ ನೂರು ಭಾವ 
ಅವ್ಯಕ್ತ ರಸಗಳ ನನ್ನೊಳಗೇ ಹಿಡಿದಿಟ್ಟು 
ಮುಂಬರುವ ಅಚ್ಚರಿಗೆ ಕಾಯುತಿದ್ದೆ 

ಪರದೆ ತೆಳುವಾಗುತ್ತಾ ಹೋದಂತೆ 
ಪ್ರೀತಿಯ ಆಕಾರ ತಿಳಿಯಾದಂತಿತ್ತು
ಇನ್ನೆಷ್ಟು ಕಾಯಬೇಕೆಂಬ ಕಿಚ್ಚಿನ ಕಾವು 
ನನ್ನನ್ನೇ ಆವರಿಸಿ ಬಿಟ್ಟಿತ್ತು

ಸಿಕ್ಕೇ ಬಿಟ್ಟಿತೆಂಬ ಆತ್ಮ ಹಿಗ್ಗು 
ದಕ್ಕಿಸಿಕೊಂಡೆನೆಂಬ ಅಹಂಕಾರ 
ಎರಡೂ ಸತ್ತು ಮೌನ ಆಚರಿಸುವಾಗ 
ಅರಳಿತು ನವಿರಾದ ಪ್ರೇಮ ಪುಷ್ಪ 

ರಂಗದಲಿ ನನಗೂ ಪ್ರೇಮಿಯ ಪಟ್ಟ 
ಪ್ರೀತಿ ತಾನೊಂದೇ ಸರ್ವ ಹೃದಯದಲೂ 
ಕಾಯಿಸಿ ಆಕಾರ ಕೊಡುವುದು ಪ್ರೀತಿ 
ಕಾದು ತಾನೂ ಪಡೆದು ಆಕಾರವ!

Tuesday, 4 August 2020

ಪೆದ್ಪೆದ್ದಂಗೆ ಪ್ರಶ್ನೆ ಕೇಳು ಉತ್ರ ಕೊಡ್ತೀನಿ

ಪೆದ್ಪೆದ್ದಂಗೆ ಪ್ರಶ್ನೆ ಕೇಳು ಉತ್ರ ಕೊಡ್ತೀನಿ
ಇದ್ಕಿದ್ದಂಗೆ ಕೋಪ ಮಾಡ್ಕೋ ತಪ್ಪಾಯ್ತಂತೀನಿ
ಪತ್ರ-ಗಿತ್ರ ಬರ್ಯೋದಿಲ್ಲ ಮನಗೇ ಬರ್ತೀನಿ
ಏನೇ ಇದ್ರೂ ಮೂಗಿನ್ ನೇರ ಮಾತಾಡ್ಬಿಡ್ತೀನಿ
ಸ್ವಲ್ಪ ಸ್ವೀಟು, ಸ್ವಲ್ಪ ಘಾಟು, ತಡ್ಕೋ ಬೇಕು ನನ್ನನ್ನ
ಅಟ್ಟಿಟ್ಯೂಡಿನಲ್ಲಿ ತೂಕ ಜಾಸ್ತಿ ಚೂರು ಜೋಪಾನ 
ಪ್ರೀತಿ ಮಾಡೋ ವಯ್ಸಿನಲ್ಲಿ ಪ್ರೀತಿ ಮಾತ್ರ ಮಾಡೋಣ...

ಏನೋ ಚೂರು ಸಲುಗೆ, ಕೊಟ್ಟೆ ನೀನು ನನಗೆ
ಅಪ್ಪಿ ತಪ್ಪಿ ಪೋಲಿ ಆದ್ರೆ ಹಾಕು ಕಡಿವಾಣ
ಬಿಟ್ಟುಕೊಂಡು ಇರುವೆ, ಕೆರೆದುಕೊಳ್ಳದಿರುವೆ
ಹತ್ರ ಕೂತು ಮಾತಾಡೋಕೆ ನಿಂಗೂ ಕಷ್ಟಾನಾ?
ಹಗಲೊತ್ತಲ್ಲಿ ಕನಸು ಬೀಳೋ ಚಾನ್ಸು ತುಂಬಾ ಕಮ್ಮಿನೇ 
ಹಂಗೂ ಬಿದ್ರೆ ಕಾಣೋ ಆಸೆ ಅಲ್ಲೂ ಕೂಡ ನಿನ್ನನ್ನೇ 
ನನ್ನ ನಿನ್ನ ಕೇರ್ ಆಫ್ ಅಡ್ರೆಸ್ ಒಂದೇ ಅನ್ನೋಣ 
ಪ್ರೀತಿ ಮಾಡೋ ವಯ್ಸಿನಲ್ಲಿ ಪ್ರೀತಿ ಮಾತ್ರ ಮಾಡೋಣ...

ಹಿಂದೆ ಬಿದ್ದು ಅಲೆದು, ಕಲ್ಲು ಮುಳ್ಳು ತುಳಿದು 
ಬಿಟ್ಟು ಬಾಳೋಕಾಗೋದಿಲ್ಲ ಅಂತ ಹೇಳೋದು 
ಊಟ ನಿದ್ದೆ ಮರೆತು, ಮೆದುಳು ಪೂರ್ತಿ ಕೊಳೆತು 
ಹುಚ್ಚ ಆದ ಮೇಲೆ ಯಾಕೆ ನೀವು ಒಪ್ಪೋದು 
ಏನೂ ಇಲ್ಲ ನಾವು ಫ್ರೆಂಡ್ಸು ಅಂತ ಸುಳ್ಳು ಹೇಳೋದಾ 
ಇಲ್ಲ ಇಲ್ಲ ಅಂತ ಎಲ್ಲ ಲವ್ವು ಸ್ಟಾರ್ಟು ಆಗೋದಾ 
ಎಲ್ಲ ಗೊತ್ತಿದ್ದೂ ಏನೂ ಗೊತ್ತಿಲ್ದಂಗಿರೋಣ 
ಪ್ರೀತಿ ಮಾಡೋ ವಯ್ಸಿನಲ್ಲಿ ಪ್ರೀತಿ ಮಾತ್ರ ಮಾಡೋಣ...

ಮೋಡದ ನೆರಳು ಬೆಟ್ಟದ ತುಂಬ




















ಮೋಡದ ನೆರಳು ಬೆಟ್ಟದ ತುಂಬ
ಮೂರೇ ಹೆಜ್ಜೆಗೆ ಆ ತುದಿಗೆ
ಆ ಬೆಟ್ಟದಿ ಈ ಬೆಟ್ಟದ ಬಿಂಬ
ರಸ್ತೆಯ ತಿರುವಿನ ಮುಗುಳು ನಗೆ

ದೂರದ ನೋಟಕೆ ಬಾಗಿದ ಬಾನು
ಹತ್ತತ್ತಿರ ಮತ್ತದೇ ದೂರ
ಹಬ್ಬಿದ ಕಾಡು ಹಕ್ಕಿಯ ಗೂಡು
ಬಣ್ಣ ಎರಚಿದ ಚಿತ್ತಾರ

ಬಾಗಿಲುಗಳ ಬಡಿದೆಚ್ಚರಿಸುವ ಮಳೆ
ಬಂತೆಂಬಂತೆಯೇ ಸಾಗುತಿದೆ
ಹುಲ್ಲಿನ ತೊನೆದಾಟವ ಗಮನಿಸುತ
ಕಲ್ಲೂ ಕವಿತೆಯ ಬಯಸುತಿದೆ 

ಎಚ್ಚರ ತಪ್ಪಿದ ಮನಸುಗಳೆಷ್ಟೋ
ಇಲ್ಲೇ ಮನೆಯ ಮಾಡಿಹವು
ನೆಪಗಳ ಸೀಳಿ ತಪಗೈಯ್ಯುತಲಿವೆ 
ಬಂಡೆಯ ಮೇಲೂ ಅರಳಿದ ಹೂ

ನೆಟ್ಟ ಗಡಿಗಳು ಉರುಳಿ ಬಿದ್ದಿವೆ
ಚಾಚಿದ ಬೇಲಿ ಇರುವೆಯ ಸಾಲು
ಹಸಿದ ಕಣ್ಣಿಗೆ ಪ್ರಕೃತಿ ತಾಯಿ
ಎರೆದಂತಿಹಳು ಎದೆಯ ಹಾಲು

ಏರುವಾಗ ಎರವಲು ದಣಿವು 
ಇಳಿಜಾರಲಿ ಉರುಳುವ ಸೊಗಸು 
ಬೆಟ್ಟದ ತುದಿಯಿಂದೆಲ್ಲವೂ ತೃಣವೇ 
"ನಾನು" ಎಂಬುದು ಒಣಮೆಣಸು 

ಮುಗಿಯಿತೆಂದೆನಿಸಿದವುಗಳ ಹಿಂದೆ 
ಎಷ್ಟೋ ಅರಳಿದ ಕವಲುಗಳು 
ಒಂದೇ ದಾರಿಗೆ ಸೀಮಿತಗೊಂಡರೆ 
ಮೂಡವು ಹೆಜ್ಜೆ ಗುರುತುಗಳೂ... 

ಅವಳು ರೆಕ್ಕೆ, ನಾನು ಬೇರು

ಅವಳು ರೆಕ್ಕೆ, ನಾನು ಬೇರು 
ಹಾರಾಡಿದಷ್ಟೂ ಅವಳು 
ಆಳ ಹೊಕ್ಕಷ್ಟೂ ನಾನು 

ನನ್ನ ಅವಳ ಪರಿಚಯವಾದಾಗ 
ನಾನಿನ್ನೂ ನಾಳೆಯ ಚಿಗುರು 
ಆಕೆ ಬಲಿಯದ ರೆಕ್ಕೆ 

ಮೊದಮೊದಲು ಚಿಗುರಿದಾಗ 
ಹಸಿವೆಂದು ಸೇವಿಸಿದಳು 
ತಾನು ಮಾತು ಕಲಿತು 
ನನ್ನ ಜೊತೆ ಮುಳುಗಿದಳು 

ರೆಕ್ಕೆ ಬಡಿದು ಸೋತ ಲೆಕ್ಕ
ಬೇರು ಬೆತ್ತಲಾದುದರ ಲೆಕ್ಕ
ಎಂದೂ ಇಟ್ಟುಕೊಂಡವರಲ್ಲ 
ಇಟ್ಟರೂ ಹಂಚಿಕೊಂಡವರಲ್ಲ 

ನಾ ಗಟ್ಟಿಗೊಳ್ಳುತ್ತಾ ಹೋದೆ 
ಅವಳು ಎತ್ತರ ತಲುಪುತ್ತಾ 
ಒಬ್ಬರಿಂದೊಬ್ಬರಿಗೆ ಬಿಡುಗಡೆ ಸಿಕ್ಕು 
ರೂಪಾಂತರದ ಅಂತರ 

ಈಗಲೂ ನನ್ನ ಹೆಗಲ ಅರಸಿ
ಹಾರಿ ಬಂದು ಆಗೊಮ್ಮೆ, ಈಗೊಮ್ಮೆ 
ಕೊಕ್ಕಿನಿಂದ ಕುಟ್ಟುತ್ತಾಳೆ 
ಆದರೆ ನನಗೆ ನನ್ನದೇ ನೆವ 

ಅವಳ ಸಂಧಿಸಬೇಕೆಂದು 
ಬುಡಮೇಲಾಗಲು ತಯಾರಾಗಿದ್ದೆ 
ಆಗಲೇ ಅರಿವಾಗಿದ್ದು 
ಗೂಡು ಕಟ್ಟಿಕೊಂಡಿದ್ದಾಳೆಂದು 

ನಾನು ಸಿಕ್ಕ ಸಿಕ್ಕಲ್ಲಿ 
ನಾನಾ ಟಿಸಿಲೊಡೆದು ಸ್ವತಂತ್ರನಾಗಿದ್ದೆ 
ಆದರೆ ಆಕೆ ದಿಗಂತವ ತೊರೆದು 
ನನ್ನಲ್ಲೇ ಉಳಿದುಬಿಟ್ಟಳು 

ಅವಳ ಚಿಲಿಪಿಲಿಯಲ್ಲಿ 
ನನ್ನ ಚೈತನ್ಯದ ಗುರುತು 
ನನ್ನ ಮೌನವೆಲ್ಲ 
ಕೇವಲ ಅವಳ ಕುರಿತು.... 

ಯಶ್ 

ಮರೆತುಬಿಡುವ ಎಲ್ಲವನ್ನೂ ಅರಸಿ ಹೊಸ ಶುರುವಾತಿಗೆ

ಮರೆತುಬಿಡುವ ಎಲ್ಲವನ್ನೂ ಅರಸಿ ಹೊಸ ಶುರುವಾತಿಗೆ 
ಹೆಚ್ಚು ಸಿಹಿಯ ಬೆರೆಸಿಕೊಳ್ಳುವ ಒಲವಿನ ಶರಬತ್ತಿಗೆ 
ಕೆಟ್ಟ ಕನಸು ಮುಗಿದ ಕೂಡಲೇ ಆದ ಎಚ್ಚರದಂತೆಯೇ 
ಕೊಟ್ಟ ಮನವ ಮರಳಿ ಪಡೆದು ನಡೆಸುವ ಮರುಗುತ್ತಿಗೆ 

ಸಣ್ಣ ಕತೆಯಲಿ ರೋಚಕತೆಯನು ಬೆರೆಸಿಕೊಳ್ಳುತ ಹೇಳುವೆ 
ಉತ್ಸುಕತೆಯನು ತಾಳುವಂತೆ ಮಾಡಿಕೋ ತಾಲೀಮನು 
ಹಿಂದಿನಂತೆ ಸಂಜೆಗಳು ಬೇಸರಿಕೆ ತರಿಸದೆ ಕಾಯುವೆ 
ಇಂಚು ಇಂಚಿನ ಅಂತರಕ್ಕೂ ಇಟ್ಟು ಸುಂಕದ ಮುತ್ತನು 

ಕಣ್ಣ ಹನಿಗಳ ಲೆಕ್ಕವಿರಿಸಿ ದಣಿದ ಬೆರಳುಗಳಾವುವೂ 
ಇನ್ನು ಮುಂದೆ ಕೆನ್ನೆ ಸೋಕಲು ಹಿಂಜರಿಯದೆ ಉಳಿಯಲಿ 
ಬೆಟ್ಟದಷ್ಟು ನಗೆಯ ಉಕ್ಕಿಸೋ ವಿಷಯವ ಹೊತ್ತಿರುವೆನು 
ಸಿಲುಕದಿರಲಿ ಕಮಲ ನಯನ ತುಮುಲಭರಿತ ಸುಳಿಯಲಿ

ಹೆಚ್ಚೆಂದರೆ ಹಚ್ಚಿ ಕೂರುವ ದೀಪದೆದುರು ಬದಿರಲಿ
ತಂಪು ಇರುಳಲಿ ಬೆಚ್ಚಗುಳಿಯಲು ಇಚ್ಛೆಯೊಂದಿಗೆ ಅಪ್ಪುತ 
ತಪ್ಪುಗಳು ತಪ್ಪೆನುಸುವನಕ ತಪ್ಪಲ್ಲದ ತತ್ವದಡಿಯಲಿ 
ತುಟಿಗೆ ತುಟಿಯ ಗುರುತನಿಟ್ಟು ಮಗ್ನರಾಗುವ ಹಿಗ್ಗುತ 

ಹೇಳು ಸಹಮತವಿದೆಯೇ ಎಂದು ಉಸಿರ ಕಾಟ ಹೆಚ್ಚಿದೆ 
ಹಳೆ ನೆನಪುಗಳನ್ನು ಹೊತ್ತು ಭಾರವಾಗಿದೆ ಕೆಚ್ಚೆದೆ 
ಒಮ್ಮೆಗೆಲ್ಲವ ಮುಗಿಸಲಾಗದು ಹಂತ ಹಂತದಿ ಮುಳುಗುವ 
ಮುರಿದ ಏರು ಮೆಟ್ಟಿಲುಗಳು ಇಲ್ಲ ವಿಧಿ ಇಳಿಜಾರದೆ 

ನಿನ್ನ ಮಾತು ಆಲಿಸುತ್ತ

ನಿನ್ನ ಮಾತು ಆಲಿಸುತ್ತ ಹೊರಟ ಮಾತ ಮರೆತು ಬಿಡುವೆ 
ನಿನ್ನ ಸುತ್ತ ಹೂವ ತೋಟ ನಾನೇ ಹೆಚ್ಚು ರಂಗು ಪಡೆವೆ 
ನಿನ್ನಲೊಂದು ಚಂದ ಪದ್ಯ ಅಡಗಿದಂತೆ ಓದುವಾಗ 
ನಿನ್ನ ಬೆರೆತು ನನ್ನ ಮರೆತು ಈ ಕುರಿತು ಬರೆಯಲಿರುವೆ 

ನನ್ನ ನಿನ್ನ ಹೆಸರ ಪ್ರಾಸಬದ್ಧ ಅರ್ಥ ಕೂಡಿಸಿ
ಬತ್ತಿ ಹೋದ ಶಬ್ದಕೋಶವನ್ನು ಒಮ್ಮೆ ಜಾಲಿಸಿ 
ಗೀಚಿ, ಒಡೆದು, ಬರೆದು, ಹರಿದು ಉಂಡೆ ಮಾಡಿ ಎಸೆಯುವೆ 
ಬಾಗಿಲಿಂದ ಇಣುಕುವಂತೆ ನಿನ್ನ ಗಮನ ಸೆಳೆಯುವೆ 

ನಿನ್ನ ಮನೆಯ ಅಂಗಳದ ತೊಟ್ಟಿಯಲ್ಲಿ ಒಮ್ಮೆ ನಾ 
ಚಂದ್ರ ಬಿಂಬವಾಗಿ ನಿನ್ನ ಮೊಗವ ಕಾಣ ಬಂದೆನು 
ಹೇಗೋ ಬಂದೇನಲ್ಲ ಕೋಣೆ ತುಂಬ ಚೆಲ್ಲಿಕೊಂಡೆನು 
ಅಲ್ಲೂ ನಿನ್ನ ಕಾಣದಾಗಿ ಪೆಚ್ಚು ಮೋರೆ ಹೊತ್ತೆನು 

ಬಿಂಬವ ಬದಿಗೊತ್ತಿ ಬಾನೆಡೆಗೆ ನೋಟ ಹಚ್ಚುತ  
ಉಪ್ಪರಿಗೆ ಮೇಲೆ ಕೂತು ನೋಡುತಿದ್ದೆ ನನ್ನನೇ
ಎಂಥ ಪೆದ್ದ ನಾನು ಅಕ್ಕ ಪಕ್ಕ ಉಳಿದ ಚುಕ್ಕಿಗೆ 
ನಿನ್ನ ಕಣ್ಣ ಮಿಂಚ ತೋರಿ ಮಾಡುತಿದ್ದೆ ವರ್ಣನೆ 

ಪೂರ್ತಿಯಲ್ಲ ಜೀವನ ನೀ ಪೂರ್ತಿ ಮಾಡದೆ
ಖಾಲಿಯಾಗೇ ಉಳಿಯುವೆ ನಿನ್ನ ಭರ್ತಿ ಇಲ್ಲದೆ 
ನೂರಾರು ಕಣ್ಣಿನ ನವಿಲ ಮೈಯ್ಯಿ ನನ್ನದು 
ಚೂರಾಗಿ ಹೋದವು ಕನಸು ನೀನು ಬಾರದೆ 

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...