Monday, 1 November 2021

ಹಗಲಿರುಳೆನದೆ, ಅನುದಿನ ಬಿಡದೆ

ಹಗಲಿರುಳೆನದೆ, ಅನುದಿನ ಬಿಡದೆ 

ಬೆರಗುಗಳ ಮಳೆ ಸುರಿಸಿದೆ ಪ್ರಣಯ 
ಅನುಭವವಿರದೆ, ಚಲಿಸುವ ನಡಿಗೆ 
ಎಡವಿದ ಗಳಿಗೆ ಹಿಡಿವುದು ಪ್ರಣಯ 

ಮರೆತರೂ ನೆನಪು ತರಿಸುವ ವಿಷಯ 
ವಿಷಯಾಂತರ ಮಾಡದು ಭರವಸೆಯ 
ಸವಿ ಸಮಯವನು ಸವೆಸುವ ಹೃದಯ 
ಹಾಡೊಂದಿಗೆ ಕಾದಿದೆ ಆಲಿಸೆಯಾ?

ಹೊಸ ತುಡಿತಗಳು ಜೊತೆಗೊಡುತಿರಲು
ಬರೆಯುವ ಸರದಿ, ಸುಂದರ ಕವನ
ನುಡಿದರೆ ಹರಳು ಕಳೆಯುವ ಭಯಕೆ 
ಕೊನೆಯಿರಿಸುತಿದೆ ಮೌನದ ಮಿಲನ

ಅರೆ ಮುಚ್ಚಿದರೆ, ಅರೆ ತೆರೆದಂತೆ 
ಹೆಚ್ಚೇನನೂ ಹೇಳಲು ಆಗದಿರೆ 
ಸ್ವಪ್ನಗಳೆಲ್ಲ ಕಂಬನಿ ಹಿಡಿದು 
ಹೊರಹೊಮ್ಮಿವೆ ಕಣ್ಣು ನಾಚುತಿರೆ  

ನಿಜ ಹೇಳಲು ಬರದೆ ಅನುರಾಗಿ 
ಒಗಟಿನ ಧಾಟಿಯ ಮೊರೆ ಹೋದಂತೆ  
ಇರುವಲ್ಲಿಯೇ ಮರೆತ ತನ್ನನ್ನು 
ಬೊಗಸೆಯ ಹಿಡಿ ನೀರಲಿ ಪಡೆದಂತೆ 

ಎರಡು ತೊರೆಯು ಜೊತೆಗೂಡಿರಲು 
ಮೊರೆವ ಅಲೆಗೆ ನೆರವಾಗಿರಲು 
ಕರೆ ನೀಡದೆಯೇ ಬರುವುದು ಪ್ರಣಯ 
ಕಡಲ ಒಡಲಲಿ ಮಗುವಾಗಿರಲು... 

ಅಪ್ಪು ಅಪ್ಪು

 ಅಪ್ಪು ಅಪ್ಪು 

ಮನದಾಳದಲ್ಲಿ ಅಚ್ಚಳಿಯದಂಥ ನೆನಪು 
ಅಪ್ಪು ಅಪ್ಪು 
ಮಗುವಂಥ ನಗುವಲ್ಲಿ ಕಾಡುವಂಥ ನೆನಪು 

ನಮ್ಮೆಲ್ಲರ ಮನಸಲಿ ನಿನಗೆ ಉಂಟು ಪಾಲು 
ಅಗಲಿದ ಈ ವೇಳೆಗೆ ನಿಲ್ಲದಾಯ್ತು ಅಳಲು 
ಸೂರ್ಯ ಚಂದ್ರ ಇರುವ ವರೆಗೂ ಕೊಂಡಾಡುತೀವಿ ಹೆಸರ  
ಮತ್ತೆ ಹುಟ್ಟಿ ಬಾ ಕನ್ನಡಿಗರ ಮನೆ ಮಗನೇ ನೀನು ಅಮರ 

ಅಪ್ಪು ಅಪ್ಪು 
ಕರುನಾಡಿನಲ್ಲಿ ಅಚ್ಚಳಿಯದಂಥ ನೆನಪು 
ಅಪ್ಪು ಅಪ್ಪು 
ಮಗುವಂಥ ನಗುವಲ್ಲಿ ಕಾಡುವಂಥ ನೆನಪು 

ದೃಷ್ಟಿ ತಾಕದಿರಲಿ ದೇವರೇ

ದೃಷ್ಟಿ ತಾಕದಿರಲಿ ದೇವರೇ 

ನಮ್ಮ ಮನೆಯ, ಈ ಮಗುವ 
ಈ ನಗುವ, ಮೊಗದ ಸಿರಿಗೆ ಮನಸೋತು 
ದೃಷ್ಟಿ ತಾಕದಿರಲಿ ದೇವರೇ !

ಒಂಬತ್ತು ಮಾಸಗಳ ಗರ್ಭದ ಗುಡಿಯನು 
ನಮಿಸಿ ಈ ಜಗವ ಕಾಣಲು ಬಂದಿಹನು 
ಕಣ್ಣಿಗೆ ಧೂಳು ಬೀಳುವ ಮುನ್ನ 
ರೆಪ್ಪೆಯ ಹಾಗೆ ಕಾಯುವೆ ಇವನ 
ಎಲ್ಲ ಸುಖವ ನೀಡುತ 
ಸುಖಿಸಿದವನು ನಾನು 
ಅಪ್ಪ ಎಂದ ಕೂಡಲೇ 
ಕುಣಿಯುವವನು ನಾನು 
ನನ್ನ ಮಗುವೇ ನನ್ನ ಸರ್ವಸ್ವವು... 

ದೃಷ್ಟಿ ತಾಕದಿರಲಿ ದೇವರೇ !

ತಾರೀಫು ಮಾಡುತಲೇ ತರಲೆ ಮಾಡುವ  
ತೂಕಡಿಕೆ ಬರಲು ಮಡಿಲಿಗೆ ಜಾರುವ 
ಮುಂಗೋಪದಲ್ಲೂ ತುಂಬಿದ ಚಂದ್ರ 
ಆಟಾಡುವಲ್ಲಿ ಸೋಲಿಸೋ ಮಿತ್ರ 
ನಾನು ಎಂಬ ಅಹಮಿಗೆ 
ಅಂತ್ಯ ಹಾಡೋ ಶೂರ 
ಏನೇ ಇರಲಿ ಹೇಳುವ 
ಸಂಕೋಚವಿರದೆ ನೇರ 
ನನ್ನ ಮಗುವೇ ನನ್ನ ಆದರ್ಶವು... 

ದೃಷ್ಟಿ ತಾಕದಿರಲಿ ದೇವರೇ !

ಹೀಗೆ ಕಣ್ಣಿಂದ ಕಣ್ಣಿಗೆ ಇಟ್ಟು ಗುರಿ

ಹೀಗೆ ಕಣ್ಣಿಂದ ಕಣ್ಣಿಗೆ ಇಟ್ಟು ಗುರಿ

ಕನಸ ಕೊಳ್ಳೆ ಹೊಡೆಯೋ ಕೆಲಸ ಎಷ್ಟು ಸರಿ
ನನ್ನ ನಿನ್ನ ನಡುವೆ ಮೌನ ಕಾದಂಬರಿ
ಬರೆದು ಸಾಕಾಯ್ತು ನೀ ಚೂರು ಮುಂದುವರಿ
ಎಲ್ಲ ಮಾತಿಗೂ ನಗುವ ಆ ವೈಖರಿ
ನೂರು ನವಿಲು ಕುಣಿದಂತೆ ತೆರೆಯುತ್ತ ಗರಿ

ಖಾತ ಮಾಡಿಸುವೆ ಹೃದಯನ ನಿನ್ನೆಸರಲೇ
ಇಟ್ಟು ಕೊಂಡಾಡುವೆ ನಿನ್ನ ನನ್ನುಸಿರಲೇ
ಎತ್ತು ಹೊಡೆವಾಗ ನಿನ್ನ ಮನೆಯ ಮುಂಬಾಗಿಲಲಿ
‍ಗೆಜ್ಜೆ ಸದ್ದನ್ನ ಸೆಳಕೊಂಡೆ ನಿನ್ನ ಹೆಜ್ಜೆಯಲಿ
ಯಾವ ಹೂವ ಮುಡಿಸೋದಂತ ಗೊತ್ತಾಗದೆ
ತೋಟ ಮಾಡಿಟ್ಟೆ ಆಗಿದ್ದು ಆಗೋಗಲಿ..

ಜೀವ ಹೋದಂತೆ ಎದುರು‌ ಬದಿರು ಸಿಕ್ಕರೆ
ಮತ್ತೆ ಮರು ಜೀವ ನೀ ನೀಡು ಸಿಹಿ ಸಕ್ಕರೆ
ಕೆಂಪು ಗಲ್ಲಕ್ಕೆ ಕಾರಣ ನಾನಾದರೆ
ನೀ ನನ್ನ ದೊರೆಸಾನಿ ನಾ ನಿನ್ನ ದೊರೆ
ಮನವ ತುಂಬಿದ ಮೇಲೆ ಮನೆ ತುಂಬಿದಂತೆ
ಬಿರುಕು ಬಿಟ್ಟೀತು ಮನಸು ನೀ ಸಿಗದಿದ್ದರೆ..

ಮಗುವೇ ನನ್ನ ಮಗುವೇ

ಮಗುವೇ ನನ್ನ ಮಗುವೇ 

ನಾನಿರುವೆ ನಿನ್ನ ಜೊತೆಯಲ್ಲೇ 
ನಗುವ ಉಡುಗೊರೆಯ
ನಾ ಕೊಡುವೆ ನಿನ್ನ ಹರಸುತಲೇ   
ಬಾಳಿನ ಪುಟಗಳು ಈಗ  
ಬಣ್ಣವ ತಾಳಿವೆ ನೋಡು 
ಮೌನದ ಪರಿಧಿಯ ಮುರಿದು 
ಹಾಡಾಗಿಸಿದ ಸ್ವರವೇ... 

ಮಗುವೇ ನನ್ನ ಮಗುವೇ... ಮಗುವೇ ನನ್ನ ಮಗುವೇ 

ಪುಟ್ಟ ಪುಟ್ಟ ಹೆಜ್ಜೆ 
ಇಟ್ಟು ಬಂದೆ ನೀನು 
ಎದೆಯ ದೀಪವ ಬೆಳಗಿಸಲು
ಒಂದೇ ನೋಟದಲ್ಲಿ 
ಕಾಡೋ ಕೋಪವನ್ನೂ 
ಮಂಜಿನ ಹಾಗೆ ಕರಗಿಸಲು
ಮಿಡಿವಾಗ ನಿನಗಾಗಿ
ಹಾಯಾಗಿ ಈ ಹೃದಯ 
ನಿಜದಲ್ಲಿ ಸಂತೋಷ 
ಆದಂತಿದೆ ಉದಯ 

ಮಗುವೇ ನನ್ನ ಮಗುವೇ... ಮಗುವೇ ನನ್ನ ಮಗುವೇ 

ಕಂಡುಕೊಂಡೆ ನೋಡು
ಬಾಳ ದಾರಿಯನ್ನು
ಹಿಡಿದು ನಡೆಸಲು ನೀ ಬೆರಳ
ಏನೇ ಬೇಕು ಹೇಳು 
ಕೊಡುವೆ ಎಲ್ಲವನ್ನೂ
ಆಲಿಸುತ ನಿನ್ನ ನೆರಳ
ಕನಸಲ್ಲೂ ಹುಡುಕಾಟ 
ನಿಲ್ಲಿಸದ ಕಣ್ಣುಗಳು 
ಬಾಳಲ್ಲಿ ಸೋಲಿಲ್ಲ 
ಜೊತೆಯಾಗಿ ನೀನಿರಲು 

ಮಗುವೇ ನನ್ನ ಮಗುವೇ... ಮಗುವೇ ನನ್ನ ಮಗುವೇ

ಜಾದು ಮಾಡೋ ಹಾಗೆ

ಜಾದು ಮಾಡೋ ಹಾಗೆ

ಮೋಡಿ ನಿನ್ನ ಕಣ್ಣಲಿ
ಸೋತು ಹೋಗಬಲ್ಲೆ
ಆಡೋ ಒಂದೇ ಮಾತಲಿ 
ಓ.. ಜಾದು ಮಾಡೋ ಹಾಗೆ
ಮೋಡಿ ನಿನ್ನ ಕಣ್ಣಲಿ
ಸೋತು ಹೋಗಬಲ್ಲೆ
ಆಡೋ ಒಂದೇ ಮಾತಲಿ 

ನಡುದಾರಿಯಲ್ಲಿ ಒಲವಾಗುವಾಗ 
ಆರಂಭವಿನ್ನು ಹೊಸ ಯಾನವೀಗ 

ಜೀವವಾದೆ ನೀನೇ, ಜೀವವಾದೆ ನೀನೇ
ಜೀವಮಾನ ನೀನೇ, ಜೀವ ನೀನೇ 


ಯಾರಲ್ಲಿಯೂ ನಾ ನೋಡದ 
ಆಕರ್ಷಣೆ ನಿನ್ನಲಿದೆ 
ತಂಗಾಳಿಯು ಮಾತಾಡದೆ 
ನಿನ್ನಂತೆಯೇ ಇಂಪಾಗಿದೆ  
ಕಾಜಾಣವಾಗಿ ನೀ ಕೂಗುವಾಗ 
ಆಕಾಶವೆಲ್ಲ ಹಸಿರಾದ ಹಾಗೆ 

ಜೀವವಾದೆ ನೀನೇ, ಜೀವವಾದೆ ನೀನೇ
ಜೀವಮಾನ ನೀನೇ, ಜೀವ ನೀನೇ 


ನೂರಾಸೆಯ ತೇರಾಗಿಸಿ 
ಮುಂದಾಗಿಸು ನನ್ನ ಕಡೆ 
ಬೊಗಸೆಯಲಿ ಬೆಳ್ದಿಂಗಳ 
ಸುರಿದಂತಿದೆ ನಿನ್ನ ನಡೆ 
ಕಲ್ಲಿಗೂ ಕೂಡ ಒಲವಾಗುವಂತೆ 
ನೀ ಬಂದು ನಿಂತೆ ಎದೆ ಗೂಡಿನಲ್ಲಿ ... 

ಜೀವವಾದೆ ನೀನೇ, ಜೀವವಾದೆ ನೀನೇ
ಜೀವಮಾನ ನೀನೇ, ಜೀವ ನೀನೇ 

ಮೇಣವಾದೆ ಕರಗಿ ನಿನ್ನ

ಮೇಣವಾದೆ ಕರಗಿ ನಿನ್ನ

ಆರದಂಥ ಜ್ಯೋತಿಗೆ
ಪ್ರಾಣವಾಗಿ ಪಾತ್ರವಾದೆ
ಪ್ರೇಮಿಯೆಂಬ ಖ್ಯಾತಿಗೆ
ವಹಿಸಿ ಮೌನ, ಕಣ್ಣ ಮುಚ್ಚಿ
ರೂಪರೇಷೆ ಹಾಕುತ
ಹಿಡಿದು ಕೂತೆ ಹೃದಯವನ್ನು
ನನ್ನ ನಲ್ಮೆಯ ಸಾಕ್ಷಿಗೆ

ಯಾರ ಬಳಿಯೂ ಹೇಳಿಕೊಳದ
ಗುಟ್ಟನೊಂದ ಹೇಳುವೆ
ಜ್ಞಾನಪಕಕ್ಕೆ ನೂರು ಪುಟದ
ನೆನಪ ತಂದು ಹಾಸುವೆ
ಸಾಲು ಸಾಲು ಸೋಲನುಂಡು
ಗೆಲ್ಲ ಬಯಸುವೆ ಮನವನು
ಮುಗುಳಿನ ಇಶಾರೆ ನೀಡು
ಎಲ್ಲ 

ಕಣ್ಣು ಕಣ್ಣಲ್ಲೇ ಮಾತನಾಡುವಾಗ

ಕಣ್ಣು ಕಣ್ಣಲ್ಲೇ ಮಾತನಾಡುವಾಗ

ನಿಂತು ನಿಂತಲ್ಲೇ ಲೂಟಿಯಾಗುವಾಗ
ನೀನು ನಾನು ಸೇರೋ ದಾರಿ ಚಂದವೀಗ
ಕಣ್ಣಿನಲ್ಲೇ ..ಕಣ್ಣಿನಲ್ಲೇ .. ಕೊಲ್ಲೋ ನಲ್ಲೆ.. ಓ..

ಕಣ್ಣು ಕಣ್ಣಲ್ಲೇ ಮಾತನಾಡುವಾಗ
ಕಣ್ಣಿನಲ್ಲೇ ..ಓ.. ಕಣ್ಣಿನಲ್ಲೇ..ಓ.... ಕಣ್ಣಿನಲ್ಲೇ..ಓ ಕೊಲ್ಲೋ ನಲ್ಲೆ.. ಓ..



ನೇರ ಏನನ್ನೂ ಹೇಳಲಾಗುತಿಲ್ಲ 
ಇನ್ನು ಬೇರೇನೂ ಕೇಳಲಾಗುತಿಲ್ಲ 
ಪೂರಾ ನಿನ್ನಲ್ಲೇ ಲೀನನಾದೆನಲ್ಲ 
ನೀನೇ ಈಗ ಎಲ್ಲ, ನೀನೇ ಈಗ ಎಲ್ಲ

ದೂರ ಆದಾಗ ಕನ್ನೆಗಂಟಿ ತೇವ
ಬಾಕಿ ಬಾಳಲ್ಲಿ ಪ್ರೀತಿಗೆ ಅಭಾವ
ಮಿಂಚಿ ಹೋದಂತೆ ನೀಗು ನನ್ನ ನೋವ
ನೀನೇ ನನ್ಮ ಜೀವ, ನೀನೇ ನನ್ನ ಜೀವ..

*******

ಖಾಲಿ ಆದಂತೆ ತುಂಬಿದಾಗ ಭಾವ 
ಇನ್ನು ಬಾಳಲ್ಲಿ ಏನಿದೆ ಅಭಾವ 
ಮಿಂಚಿ ಹೋದಂತೆ ನೀಗು ನನ್ನ ನೋವ
ನೀನೇ ನನ್ಮ ಜೀವ, ನೀನೇ ನನ್ನ ಜೀವ..

ಕಣ್ಣು ಕಣ್ಣಲ್ಲೇ ಹೇಳದೇ ವಿದಾಯ
ಮಾತು ಮಾತಲ್ಲೇ ಮಾಡೆಯಾ ಸಹಾಯ
ನೀನು ನಾನು ಕೂಡೋ ಜಾಗ
ಕಣ್ಣಿನಲ್ಲೇ ..ಕಣ್ಣಿನಲ್ಲೇ .. ಕೊಲ್ಲೋ ನಲ್ಲೆ.. ಓ..

ಹಳೆಯ ಕಂತುಗಳು ನೀಗಿದಂತೆ

ಹಳೆಯ ಕಂತುಗಳು ನೀಗಿದಂತೆ  

ಮನದಿ ಸಣ್ಣ ನೀರವತೆ 
ರೆಪ್ಪೆ ಕದಲಿದರೆ ಕಂಬನಿ 
ಕಣ್ಣ ಚೌಕಟ್ಟಿನಾಚೆ ಪಸೆ 

ಅದರುವ ಬೆರಳುಗಳ ಹಿಡಿ ಮಾಡಿ 
ಸುತ್ತ ತಲೆಯೆತ್ತಿದ ಗೋಡೆಗೆ 
ಒಂದು ಜೋರಾದ ಗುದ್ದು 
ಆಚೆ ಯಾರೋ ಅರಚಿದ ಸದ್ದು 
ನನ್ನದೇ ದನಿಯಲ್ಲಿ 

ಹಲ್ಲು ಕಚ್ಚಿ, ಹಸಿವ ನುಂಗಿ 
ಉದರಕ್ಕೆ ಅದರದ್ದೇ ರುಚಿಯ ಕೊಟ್ಟು 
ಬದಿಗೆ ಸುಟ್ಟ ಬಯಕೆಗಳ 
ಕಾವು ನೀಡಿದಂತೆ ಉರಿ 
ತಗ್ಗುವುದನ್ನೂ ಸಂಭ್ರಮಿಸುವ 
ಔಚಿತ್ಯ ಹೃದಯಕೆ 

ಎಲ್ಲ ಭಾರಗಳ ಇಳಿಸಿ 
ನಾನೇ ಇಲ್ಲವಾದಾಗ
ಹೇರಿಕೊಳ್ಳುತ್ತಿದ್ದಂತೆ 
ಮತ್ತೆ ಭಾರವಾದೆ 
ಹೊರುವುದೂ ಜೀವನದ ಭಾಗ 
ಬಿಟ್ಟು ಹೊರಡುವುದಷ್ಟೇ ಅಲ್ಲ  

ಯಾರಿಂದಲೋ ಗುರುತಿಸಲ್ಪಡುವ
ಅಸಲಿಗೆ ನನ್ನದಲ್ಲದ ಪ್ರಭೆ
ನನ್ನನ್ನೂ ಸಹ ಮರೆಮಾಚುವ  
ಸೂಕ್ಷ್ಮ ಅರಿವಿಗೆ ಬರುವುದರೊಳಗೇ 
ಭ್ರಮೆಯಿಂದ ಹೊರ ಬರಬೇಕು 

ಯಾರಿಗಾಗಿ ಯಾರು ಎಂದು

ಯಾರಿಗಾಗಿ ಯಾರು ಎಂದು

ಎಂದೋ ನಿಶ್ಚಯಿಸಿದಂತೆ 
ಎದುರಾಗೋ ವೇಳೆ ಪ್ರೀತಿ 
ವಿನಿಮಯವಾಗುವಂತೆ 
ಜೋಡಿಗೂಡಿದಂತೆ ನಾವು 
ಸಾಗಿ ಬಂದ ದಾರಿಯಲ್ಲಿ
ಮತ್ತೆ ಪ್ರೀತಿ ಮೂಡಿಸುವ
ಹೊಚ್ಚ ಹೊಸ ರೀತಿಯಲ್ಲಿ 

ಹತ್ತಿರಕ್ಕೆ ಯಾರೋ ಬಂದು
ಚಂದ ಉತ್ತರಿಸುವಂತೆ 
ಪ್ರಶ್ನೆ ಇಡೋ ಹೃದಯವೇ 
ಮೂಕವಾಗಿ ಹೋಗುವಂತೆ
ನಾನು ಯಾರೋ, ನೀನು ಯಾರೋ
ಯಾವ ಜನ್ಮ ನಂಟು ಇದು
ಸೇರಿಸಿದೆ ನಮ್ಮ ಹೀಗೆ
ಮತ್ತೆ ಪ್ರೀತಿ ಮೂಡೋ ಹಾಗೆ

ಮರೆಯದೆ ಬರುವೆ ಖಂಡಿತ
ಉಡುಗೊರೆಯೊಡನೆ ಕಾದಿರು 
ಜಗದಲಿ ಒಲವೇ ಶಾಶ್ವತ 
ಜಗವೇ ಅಳಿದು ಹೋದರೂ 
ಖುಷಿಯ ಚಿಲುಮೆ 
ಒಲಿದ ಒಲುಮೆ 
ರಾಗದಂತೆ ಕೂಡೋವಾಗ  
ಹುಟ್ಟುವುದು ಅನುರಾಗ  

ಯಾರಿಗಾಗಿ ಯಾರು ಎಂದು
ಎಂದೋ ನಿಶ್ಚಯಿಸಿದಂತೆ 
ಎದುರಾಗೋ ವೇಳೆ ಪ್ರೀತಿ 
ವಿನಿಮಯವಾಗುವಂತೆ 

ಹಲವು ಬಾರಿ ಮೂಕನಾಗಿ ಹೋಗೋ ಸಂಭವ 
ದೂರವಾಗಿ ಸನಿಹವಿರುವ ಹುಚ್ಚು ಅನುಭವ 
ರಾರಾಜಿಸೋ ಬಯಕೆಯ, ಈಡೇರಿಸು ಮನಸಲಿ 
ಆರಂಭವೇ ಸುಂದರ, ಅಂತೆಯೇ ಮಧ್ಯಂತರ 
ನೇರಾ ನೇರಾ ಮಾತಿರಲಿ
ಮುಖತಃ ನಗುವಲಿ 
ಸುಖದ ಅಲೆಯ ತರೋ 
ಕಡಲ ಆ ತೀರದಲಿ 
ಸರಿವ ಸಮಯಕಿದೋ
ನೆನೆವ ನೆಪವ ಕೊಡು
ಬಿಡಿಸಿಡುವೆನು ಇಗೋ 
ಪುಟಗಳ ಮಡಿಲಲಿ 

ಮರೆಯದೆ ಬರುವೆ ಖಂಡಿತ
ಉಡುಗೊರೆಯೊಡನೆ ಕಾದಿರು 
ಜಗದಲಿ ಒಲವೇ ಶಾಶ್ವತ 
ಜಗವೇ ಅಳಿದು ಹೋದರೂ 
ಖುಷಿಯ ಚಿಲುಮೆ 
ಒಲಿದ ಒಲುಮೆ 
ರಾಗದಂತೆ ಕೂಡೋವಾಗ  
ಹುಟ್ಟುವುದು ಅನುರಾಗ  

ಯಾರಿಗಾಗಿ ಯಾರು ಎಂದು
ಎಂದೋ ನಿಶ್ಚಯಿಸಿದಂತೆ 
ಎದುರಾಗೋ ವೇಳೆ ಪ್ರೀತಿ 
ವಿನಿಮಯವಾಗುವಂತೆ 

ಈ ಮೋಹವಾಗುವ ವೇಳೆ

ಈ ಮೋಹವಾಗುವ ವೇಳೆ

ಸಂದೇಹ ಮೂಡದು ಏಕೆ?
ಕಣ್ಣಲ್ಲೇ ಸಾಗುವ ಮಾತು 
ಮಿಂಚಾಗಿ ಹೊಮ್ಮಿತು ಏಕೆ?
ನಿನ್ನನ್ನು ದಾಟಿ  ಬಿಗಿ ಮೌನ
ನನ್ನಲ್ಲಿ ತಾಳಿದೆ ಏಕೆ?

ಮುಗಿಲುಗಳು ನಮ್ಮನ್ನೇ ಹೋಲೋ ಹಾಗಿವೆ
ಒಂದಾಗಲು ತವಕಿಸಿ 
ತಳಮಳದಲೇ ನಿಂತಿವೆ 
ಮುಗಿಲುಗಳು ನಮ್ಮನ್ನೇ ಹೋಲೋ ಹಾಗಿವೆ
ಹೇ ಬಿರುಸಾಗಿ ಬೀಸುತ್ತಿದೆ ತಂಗಾಳಿ 
ಆಗೋಣ ಮಳೆಗೆ ಕಾರಣ... 

ಅಂಗಳದಲಿ ಹೂವೆಲ್ಲ ಅರಳಿ ನಿಂತಿವೆ 
ಬೇಕಾದುದ ಆರಿಸು 
ನಿವಾರಿಸು ಬಯಕೆಯ 
ಅಂಗಳದಲಿ ಹೂವೆಲ್ಲ ಅರಳಿ ನಿಂತಿವೆ 
ಈ ಕ್ಷಣವನ್ನು ನೆನಪಿಟ್ಟರೆ ಒಲವಲ್ಲಿ 
ವಿರಹಕ್ಕೆ ಇರದು ಕಾರಣ.. 

ಕಾಡುವಂತೆ ನೀ ನೆನಪಾಗುವೆ

ಕಾಡುವಂತೆ ನೀ ನೆನಪಾಗುವೆ

ಊಹೆಯ ತುಂಬ ಆವರಿಸುವೆ   
ಕಾಡುವಂತೆ ನೀ ನೆನಪಾಗುವೆ

ದಾಹದ ವೇಳೆಯೂ, ನೀನೇ ನೀರಾಗುವೆ 
ಜೀವ ಕಾಪಾಡೋ ಉಸಿರಾಗುವೆ  
ಕಾಡುವಂತೆ ನೀ ನೆನಪಾಗುವೆ

ನೀಡದೇ ಕಾರಣ ಮಾಯವಾದಾಗ ನೀ 
ಸಾವಿನ ಅಂಚಿಗೆ ದೂಡಿದಂತಾಗಿದೆ 
ನೋಡು ಏಕಾಂತವೇ ದಾರುಣ 
ನೋವಿಗೂ ನಿನ್ನನೇ ಕೂಗುವೆ
ಕಾಡುವಂತೆ ನೀ ನೆನಪಾಗವೆ...

ಉತ್ತರ ಇಲ್ಲದ ಪ್ರಶ್ನೆಯ ಕೇಳುತ
ರೇಗಿಸಿ ಮೌನದಿ ಸೋಲಿಸು ಹಾಗೆಯೇ
ಇಂಗಿದ ಕಣ್ಣನು ತಾಕುತ
ಬಾಷ್ಪಕೂ ಭಾಷೆಯ ಕಲಿಸುವೆ 
ಕಾಡುವಂತೆ ನೀ ನೆನಪಾಗವೆ...

ನೂಪುರ ನಾಚಿದೆ ನಾಟ್ಯವ ಆಡಲು 
ತಾಳವು ನಿನ್ನಲಿ ಲೀನವಾದಂತಿದೆ 
ಜೀವ ನೀನಾದರೆ ಹಾಡಿಗೆ 
ನಿನ್ನನು ಕೂಡಿ ನಾ ಹಾಡುವೆ  
ಕಾಡುವಂತೆ ನೀ ನೆನಪಾಗವೆ...

ಮತ್ತೆ ಮತ್ತೆ ಸದ್ದು ಮಾಡಿದಂತೆ

ಮತ್ತೆ ಮತ್ತೆ ಸದ್ದು ಮಾಡಿದಂತೆ 

ಹದ್ದು ಮೀರಿ ಪುಟ್ಟ ಗುಂಡಿಗೆ 
ನಿನ್ನ ಜೊತೆ ಸಾಗಿ ಬಂದ ಮೇಲೆ  
ಮತ್ತು ಇನ್ನೂ ಹೆಚ್ಚಿದಂತಿದೆ... ಯೇ 
ನಾಳೆಗಳ ಪರಿಚಯಿಸೋ ಪ್ರೀತಿ 
ರೋಮಾಂಚನಗೊಳಿಸೋ ಪ್ರೀತಿ 
ಬಾಳಿಗೆ ನೆರವಾಗುವ ರೀತಿಯ ಹೇಗೆ ಹಾಡಿ ಹೊಗಳುವುದು... 
ಮತ್ತೆ ಮತ್ತೆ ಸದ್ದು ಮಾಡಿದಂತೆ 
ಹದ್ದು ಮೀರಿ ಪುಟ್ಟ ಗುಂಡಿಗೆ 
ನಿನ್ನ ಜೊತೆ ಸಾಗಿ ಬಂದ ಮೇಲೆ   
ಮತ್ತು ಇನ್ನೂ ಹೆಚ್ಚಿದಂತಿದೆ.. 

ಬಣಗುಡುವ ಮರದಲಿ ಚಿಗುರಿನ 
ಹೊಸ ಬಯಕೆಗಳ ಚಿಲುಮೆ 
ಭ್ರಮರಗಳು ವಲಸೆ ಬಂದಿವೆ
ಸುಮಗಳ ಸಳೆತದ ಮಹಿಮೆ 
ಅನುಭವಿಸಿ ಹೊಸೆಯುವ ಪದಗಳು 
ಕಿರು ಕವಿತೆಗಳಾಗುತಿವೆ 
ತುದಿಯಲ್ಲೇ ಉಳಿದರೂ ಮಾತು 
ನಾಲಿಗೆಯು ತೊದಲುತಿದೆ 
ಈ ನಡಿಗೆ.. ಈ ನಡಿಗೆ
ನಿನ್ನೆಡೆಗೆ
ಪ್ರತಿ ಗಳಿಗೆ... ಪ್ರತಿ ಗಳಿಗೆ

ಮೌನ..ಪರಾಗದಂತೆ ಹೂವಿನಲ್ಲಿ

 ಮೌನ..ಪರಾಗದಂತೆ ಹೂವಿನಲ್ಲಿ 

ಮೌನ.. ಸರಾಗವಾಗಿ ಸೇರುವೆ ನಿನ್ನ  
ಮೌನ.. ತಯಾರಿ ಮಾಡಿಕೊಳ್ಳದಂತೆ  
ಮೌನ.. ಸುಮಾರು ಬಾರಿ ಕೂಗಿವೆ ನಿನ್ನ  
ಇದೋ ಹೊಸ ಕತೆ 
ಜೊತೆ ಕೊಡು ನೀನಾಗಿಯೇ 
ನಿಂತಲ್ಲಿ ದೂಡು ನನ್ನ 
ಪಡೆವಂತೆ ಪ್ರಾಣವನ್ನ 
ಕಾಡೋ ಮೌನ.. ಸವಾಲಿನಂತೆ ನಿಂತೆ ನೀನು 
ಮೌನ.. ಸಿಗು ಜವಾಬು ನೀಡುವ ಮುನ್ನ  
ಮೌನ.. ಸಮೀಪವಾಗಿ ದೂರವಾಗೋ
ಮೌನ.. ಸುನಾದವಾಗಿ ನೀಗು ನೋವನ್ನ     

ಭಾರವಾದಂತಿದೆ, ಮಾತಿನ ಕಂತೆಯು 
ಸಣ್ಣದಾದ ವಿರಾಮ ಅಂತೂ ಬೇಕಾಗಿದೆ  
ಮುಳ್ಳಿನ ಹಾಸಿಗೆ, ನೀಡುವ ನೋವನು 
ತಾಳಿದಂತೆ ಕಾಣೋ ಕನಸು ಈಗ ಸಾಕಾಗಿದೆ    
ಮೌನ.. ನಿಧಾನ ಮಾಡಲೇಕೆ ಇನ್ನು 
ಮೌನ.. ಕರಾರು ಮಾಡಿಕೋ ನೀ ನನ್ನನ್ನ 
ಮೌನ.. ವಿರಾಜಮಾನವಾಗಿ ನಿಲ್ಲು
ಮೌನ.. ಮುಲಾಜು ನೋಡಲೇಕೆ ನೀ ಇನ್ನ 
ಇದೋ ಹೊಸ ಕತೆ 
ಜೊತೆ ಕೊಡು ನೀನಾಗಿಯೇ 
ನಿಂತಲ್ಲಿ ದೂಡು ನನ್ನ 
ಪಡೆವಂತೆ ಪ್ರಾಣವನ್ನ 
ಕಾಡೋ ಮೌನ.. ಸವಾಲಿನಂತೆ ನಿಂತೆ ನೀನು 
ಮೌನ.. ಸಿಗು ಜವಾಬು ನೀಡುವ ಮುನ್ನ  
ಮೌನ.. ಸಮೀಪವಾಗಿ ದೂರವಾಗೋ
ಮೌನ.. ಸುನಾದವಾಗಿ ನೀಗು ನೋವನ್ನ      

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...