ಇಲ್ಲಿ ಇತಿಹಾಸ ಸಾರುವ ಶಿಥಿಲ ಗೋಡೆಗಳಿಗೆ
ಆಧುನಿಕ ಕಾಂಕ್ರೀಟ್ ಗೋಡೆಗಳನ್ನ
ಜೋಡಿಸಿ ಜೋಪಾನಗೊಳಿಸಲಾಗಿದೆ
ಪ್ರತಿ ಕಲ್ಲಿನ ಸುತ್ತಲೂ ಕಥೆಯ ಹೆಣೆದು
ಕಥೆಗೆ ಒಪ್ಪುವ ಬಣ್ಣ ಬಳಿದು
ಪ್ರವಾಸಿಗರ ಮನಸಿನಾಳಕ್ಕೆ ಗಾಳ ಇಳಿಸಿ
ಹೊಟ್ಟೆ ತುಂಬಿಸಿಕೊಳ್ಳುವ ಚಾಲಾಕಿ ವರ್ತಕರು
ಪ್ರಪಂಚದ ಮೂಲೆ ಮೂಲೆಯಿಂದ ದೋಚಿದ
ಲೂಟಿಯನ್ನ ಎತ್ತರದ ಕೋಟೆಕೊತ್ತಲೊಳಗೆ ಹುದುಗಿಸಿ
ಗಾಜಿನ ಹೂಜಿಯಲ್ಲಿ ಪ್ರದರ್ಶನಕ್ಕಿಟ್ಟಾಗ
ಕಣ್ಣು ಬಾಯಿ ಬಿಟ್ಟು ನೋಡುವವರ ಸಿಟ್ಟಿಗೆ
ಸಿಗಬಾರದೆಂದೇ ಅಡಿಗಡಿಗೊಬ್ಬೊಬ್ಬ ಕೊತ್ವಾಲನು
ಬೀದಿ ಬೀದಿಗಳಲ್ಲಿ ದೈತ್ಯ ಕಟ್ಟಡದ ಕೆಳಗೆ
ನಿರಾಶ್ರಿತರ ಸಾಂಪ್ರದಾಯಿಕ ಭಿಕ್ಷಾಟನೆ
"Please spare some change"
ಒಂದೇ ಸಲಕ್ಕೆ ಅರ್ಥವಾಗದಿದ್ದರೂ
ಕರುಣಾಜನಕ ಕೊರಳಂತೂ ಚಿರಪರಿಚಿತ
ಇಲ್ಲಿ ಸ್ಥಳೀಯ, ಪರಕೀಯರೆಂಬ ಬೇಧವಿಲ್ಲ
ಸಂಕುಚಿತ ಮನಸ್ಥಿತಿಯಿಂದ ಹೊರಬರಲಾಗದವರು
ವಾಸ್ತವಾಂಶವನ್ನ ಅರಗಿಸಿಕೊಳ್ಳಲಾಗದವರು ಮಾತ್ರ
ಬಣ್ಣ, ಎತ್ತರ, ಸುತ್ತಳತೆಯ ಮಾಪನ ಹಿಡಿದು
ತಮ್ಮವರಿಂದಲೇ ಉಚ್ಛಾಟನೆಗೊಳಪಡುತ್ತಾರೆ
ಪಾದಚಾರಿ, ಸೈಕಲ್ ಹೊಡೆವವ, ಕೋಟಿಗೆ ಬಾಳುವ
ವಾಹನ ಸವಾರನಿಗೂ ಸಮಾನ ಮಾನ್ಯತೆ
ತಪ್ಪು ಯಾರಿಂದ ಆದರೂ ತಪ್ಪೇ
ಮಂತ್ರಿ, ಕುತಂತ್ರಿಗಳ ಚೇಲಾಗಳಿಗೆ ಕಿಮ್ಮತ್ತಿಲ್ಲ
ಪ್ರತಿಭಟನೆಗಳ ಪ್ರತಿರೋಧಿಸಲು ಪಿಸ್ತೂಲುಗಳಿಗೆ ತಾಕತ್ತಿಲ್ಲ
ಹೊಸ ಪೀಳಿಗೆಗೆ ಅಸಲಿ ಇತಿಹಾಸದ ಅರಿವಿನ ಕೊರತೆ
ಹಣ್ಣು ಮುದುಕರ ಊರುಗೋಲು, ಮಾತಲಿ ಮಮತೆ
ಹೆಜ್ಜೆಜ್ಜೆಗೂ "Please", "Thank you", "Sorry"ಗಳ ರಗಳೆ
ಅದೇ ಸಾಲಗೆ ಬೈಗುಳಗಳದ್ದೂ ಸರಣಿ ಸುರಿಮಳೆ
ಕಿರಿದಾದವುಗಳ ಮೂಗಿನ ಕೆಳಗೆ ಸಾಗಿಬಿಟ್ಟು
ದೈತ್ಯ ಹಡಗುಗಳಿಗೆ ತನ್ನ ರೆಕ್ಕೆ ತೆರೆದುಕೊಳ್ಳುವ ಸೇತುವೆ
ದಂಡೆಯಲ್ಲಿ ನಾಗರೀಕತೆಯ ಕುರುಹು
ಸದಾ ಹೊಸತನ ಸಾರುವ ಕೆಸರು ಮೆತ್ತಿದ ಜಲ
ಅಮಾನುಷ ಚರಿತ್ರೆಯ ಎದೆಯಲ್ಲಿ ಬಚ್ಚಿಟ್ಟು
ತಣ್ಣಗೆ ಹರಿದು ಉರುಟುಗಲ್ಲುಗಳ ತೀರಕೆ ಬಡಿದು
ನೆತ್ತರ ಬದಲಿಗೆ ನಿರುತ್ತರದ ನಿಲುವು
ಅಲ್ಲಲ್ಲಿ ಪಶ್ಚಾತಾಪದ ತಾಪ
ಮಿಕ್ಕಂತೆಲ್ಲವೂ ಮಂಜಿನಂತೆ ಅಸ್ಪಷ್ಟ
ಹಗಲು ಧ್ಯಾನಕ್ಕೆ ಕುಳಿತು, ರಾತ್ರಿ ಎಚ್ಚರಗೊಳ್ಳುವ ಶಹರ
ಮಿಂಚು ದೀಪಗಳ ನಡುವೆ ನಿದ್ದೆಗೆಡಿಸುವ ನಗರ
ಎತ್ತರದಲಿ ಹಸಿವ ನೀಗಿಸುವ ಸ್ಕೈ ಗಾರ್ಡನ್ಗಳು
ಆಳದಲಿ ಗುರಿ ಮುಟ್ಟಿಸುವ ರೈಲು ಮಾರ್ಗಗಳು
ನಡುವೆ ನೆಲದ ಮೇಲೆ ಎಲ್ಲರನ್ನೂ ಆದರಿಸುವ
ದೂರದ ಚಂದ್ರನಂತೆ ಭಾಸವಾದರೂ
ಹತ್ತಿರಕ್ಕೆ ಅದೇ ಸಹಜತೆ ಕಾಯ್ದುಕೊಳ್ಳುವ
ಲಂಡನ್, ಚಿನ್ನದ ಕುಂಡದಲ್ಲಿ ಅರಳಿದ ಸಾಮಾನ್ಯ ಹೂ...