Saturday, 1 January 2022

ನಾನು ಡಬ್ಬದಲ್ಲಿ ಮುಚ್ಚಿಟ್ಟ ಹಸಿ ಹಿಟ್ಟು

ನಾನು ಡಬ್ಬದಲ್ಲಿ ಮುಚ್ಚಿಟ್ಟ ಹಸಿ ಹಿಟ್ಟು

ನೀನು ಬೆಲ್ಲದಲ್ಲಿ ಬಚ್ಚಿಟ್ಟ ಸಿಹಿ ಗುಟ್ಟು
ಪ್ರೀತಿ ಸೇತುವೆ ನಮ್ಮ ನಡುವೆ ಕಟ್ಟಿ ಕೊಟ್ಟು
ಬೆರೆತು ಹೋದೆವು ಬಾಳಲ್ಲಿ ಇಷ್ಟ ಪಟ್ಟು

ಚೂರು ಬಿಸಿ ತಟ್ಟಿದಾಗ ನೀ ತುಪ್ಪವಾದೆ   
ನಾ ಜಾರಲೆಂದೇ ಕಾದ ಬೆಂದ ರೊಟ್ಟಿಯಾದೆ 
ಬಿಟ್ಟು ಕೊಟ್ಟಲ್ಲೆಲ್ಲ ನೀ ನನ್ನ ತುಂಬಿಕೊಂಡೆ 
ಕಿತ್ತೂ ಬೇರೆ ಆಗಲಾರೆವಂತೆ ಇನ್ನು ಮುಂದೆ  

ನೀನು ಗಟ್ಟಿಗಿತ್ತಿ, ನನ್ನ ಕಾಡಿ ಕೊಲ್ಲುವಾಕೆ  
ಪಾಕವಾಗಿ ನೋಡು ಒಮ್ಮೆ ನನ್ನ ತಬ್ಬಲಿಕ್ಕೆ 
ನೀ ರೂಪಿಸೋ ಹಾಗೆ ನಾ ರೂಪಗೊಂಡೆ 
ನಾ ಬಿದ್ದರೆ ನಿನ್ನದಲ್ಲ, ದೋಷ ನಂದೇ

ಖಾರವಾಗುತಿದ್ದೆ ಹಿಡಿಯದೇ ನೀ ನನ್ನ ಕೈಯ್ಯ 
ಹೊತ್ತ ಮೂಟೆಯಂತೆ ಭಾರವಾಗಿ ಪುಟ್ಟ ಹೃದಯ 
ಹೂರಣಕ್ಕೆ ನಾ ಕಾವಲಾದೆ ಕಡುಬಿನಲ್ಲಿ 
ಹಬ್ಬವಾಗಿ ನೆಲೆಸುವ ಕಣ್ಮನಸಿನಲ್ಲಿ 

ಇರುವೆ ಸಾಲಿಗೆ ನಾ ಗೆರೆಯ ಎಳೆದು ಬರುವೆ 
ನೀ ಇರುವಲ್ಲಿ ಚಿಲ್ಲಿ ರಂಗೋಲಿ ಬರೆವೆ 
ಅಚ್ಚು ಕಟ್ಟು ನೀ ನಾಚಿದಾಗ ಮುದ್ದೆ ಬೆಲ್ಲ 
ನಾ ಪಡೆವ ಹೆಸರು ನಿನ್ನದು, ನನ್ನದಲ್ಲ 

ಚಿಕ್ಕಪೇಟೆಯ ಗಲ್ಲಿಗಳಲ್ಲಿ

ಚಿಕ್ಕಪೇಟೆಯ ಗಲ್ಲಿಗಳಲ್ಲಿ

ಎತ್ತ ನೋಡಿದರೂ ಬಣ್ಣಗಳು
ದುಬಾರಿ ಬೆಲೆಯ ಥಾನುಗಳೊಂದೆಡೆ 
ಅಗ್ಗದ ಬ್ಲೌಸ್ ಪೀಸುಗಳು

ಕೊಳ್ಳುವವರಲ್ಲಿ ಎರಡು ವಿಧ
ತೊಡಲು -
ಮುಟ್ಟಿ, ಸವರಿ, ಅಳೆದು
ಮ್ಯಾಂಚಿಂಗ್ ಮಾಡುವವರದು ಒಂದು ವಿಧ
ಕೊಡಲು - 
ಯಾವುದಾದರೆ ಏನು?
ಕಡಿಮೆ ಬೆಲೆಗೆ ಗಿಟ್ಟಲು ಅದುವೇ
ಸಾಕೆನ್ನುವವರದು ಇನ್ನೊಂದು ವಿಧ

ಪ್ಲಾಸ್ಟಿಕ್ ಚೀಲದ ಒಳಗೆ
ಉಸಿರುಗಟ್ಟಿದ ಬಣ್ಣದ ತುಂಡು
ನಾನಾ ಕೈ ಬದಲಾದರೂ ಈ ತನ
ಈಚೆ ತೆಗೆದವರಿಲ್ಲ ಯಾರೂ

ನೀರಲಿ ಅದ್ದಲು ಬಣ್ಣ ಬಿಡುವುದೇ?
ಒಗೆಯುವ ಹಂತಕೆ ಹೋದವರಾರು?
ಸತ್ಯವ ಅರಿತ ಅಂಗಡಿಯವ
ಇಳಿಸಿದ ಗುಣಮಟ್ಟವ ಇನ್ನೂ ಚೂರು..

ಅಟ್ಟದ ಮೇಲೆಲ್ಲೋ ಎತ್ತಿಟ್ಟು
ಅಪ್ಪಟ ಹಬ್ಬಕೆ ಬಿಚ್ಚಿದ ಕಟ್ಟು
ಅಗ್ಗದ ತುಂಡನು‌ ದಾನದಲಿಟ್ಟು
ಕೊಡುವರು ಉದಾರ ಮನಸನು ಹೊತ್ತು

ಕೊಂಡವರೇನೂ ಸಾಚಾಗಳಲ್ಲ
ಸತ್ಯವ ಅರಿಯದ ಮೂರ್ಖರು ಅಲ್ಲ
ಕೊಡುವವರಿಗೆ ಕೊಡಬೇಕೆಂಬುದಿಲ್ಲ
ಪಡೆದವಗೆ ಪಡೆಯದೆ ನಷ್ಟವಿಲ್ಲ

ಹೀಗಿದ್ದು ಮನೆ ಮನೆಗಳ ದಾಟಿ
ಅಲೆಯುವ ಪಾಪದ ಚೀಲಗಳು
ಯಾರೇ ಕೊಟ್ಟರೂ ಬೇಡ ಅನ್ನದೆ
ಚುಕ್ತಾ ಆಗುವ ಲೆಕ್ಕಗಳು

ಇಷ್ಟಿದ್ದರೂ ಕೊಡದವರೆಡೆ ಏಕೋ 
ನಿಷ್ಠುರ ಮಾಡುವ ಹೆಂಗಸರು
ಹಣದುಬ್ಬರದ ನಡುವೆ 
ನಾಟಕದಲ್ಲಿ ಭಾಗಿ ಗಂಡಸರು...

ಕತ್ತಲಲ್ಲಿ ಕಾಳಗ

ಕತ್ತಲಲ್ಲಿ ಕಾಳಗ 

ಜೊತೆಗೆ ದಟ್ಟ ಮೋಡ ಕೂಡಿ ಜೋರು ಮಳೆ 
ಇತ್ತ ಇವನಲ್ಲಿ ಆಕ್ರೋಶದ ಮೊರೆತ 
ಅತ್ತ ಅವಳಲ್ಲಿ  ಭಾವಾಂಕುರ 
ಮತ್ತು ಮಳೆಗೆ ಭುವಿಯತ್ತ ಪ್ರತಿಕಾರದ ಗುರಿ 

ಉರಿ ಚಿತೆಗೆ ಆರುವ ಭಯ 
ಶವಕ್ಕೆ ಕತೆ ಹೇಳುವ ತವಕ 
ಎಲ್ಲಕ್ಕೂ ಮಳೆಯೇ ಸಾಕ್ಷಿ 
ಆತ್ಮಸಾಕ್ಷಿಗೆ ಬೆಳಕಿಲ್ಲ 

ಶುರುವಾತು, ಮಧ್ಯಂತರ ಹುಡುಕುವಲ್ಲಿಗೆ 
ಎಲ್ಲವೂ ನೇಪಥ್ಯಕ್ಕೆ ಸರಿದು ಮುಕ್ತಾಯ
ಸುಪ್ತವಾದವು ಮತ್ತೆ ಪುಟಿದೆದ್ದು 
ರಕ್ತ ಹರಿಸಬಹುದು 
ಮುಕ್ತಿ ಸಿಗುವನಕ ಮುಂದುವರಿಯಬಹುದು  
ಭೀಭತ್ಸ ಸಮರ.... 

ಕಾಳ ರಾತ್ರಿಯೇ
ಕರಾಳ ರಾತ್ರಿಯೇ
ಕ್ರೂರ ರಾತ್ರಿಯೇ
ಕವಿದ ರಾತ್ರಿಯೇ

(ಬಂಜರು)
ಮಾತಾಡಿಸು ತೇಲಾಡೋ ಮುಗಿಲೇ 
ನನಗೂ ಅಪಾರ ದಣಿವಿದೆ
ವಿರಹದಿ ಪರಿತಪಿಸಿರುವೆ
ಪರಿಹರಿಸಲು ನಿನ್ನ ಕೂಗಿದೆ

ಇಲ್ಲೊಂದು ಸುಡುಗಾಡಿನ ಚಿತೆ 
ಅರೆ ಬೆಂದ ಶವ ಹೇಳಿದ ಕತೆ 
ಮಳೆ ಇನ್ನೂ ಜೋರಾಗಬೇಕಿದೆ.. 

ಬಾರೋ ಮಳೆರಾಯ
ನೋಡು ಬೆಂಕಿಯ ಕಣ್ಣಲಿ ಭಯ
ಬಾರೋ ಮಹರಾಯ, ಮಳೆರಾಯ

ನಿನ್ನ ನುಡಿಯೆನ್ನುವ ಸಣ್ಣ ಕಿಡಿ ಸೋಕಿಸಿ

ನಿನ್ನ ನುಡಿಯೆನ್ನುವ ಸಣ್ಣ ಕಿಡಿ ಸೋಕಿಸಿ 

ಹೊತ್ತಿಸು ನನ್ನನು ಸುಟ್ಟು ಕವಿಯಾಗುವೆ 

ಕಣ್ಣ ಕಾರಂಜಿಯು ಚಿಮ್ಮಿಸಿದೆ ಪ್ರೀತಿಯ 
ನೋಡುತ ಕಣ್ಣನೇ ಕೂತು ಕವಿಯಾಗುವೆ 

ನೋಡು ಮುನಿಸಲ್ಲೂ ಮುದ್ದಾದ ಮೊಗ ನಿನ್ನದು  
ಕನ್ನಡಿಯಂತೆ ಚೂರಾಗಿ ಕವಿಯಾಗುವೆ 

ನಕ್ಕರೆ ಕಬ್ಬಿನ ಹಾಲು ಹೊನಲಾಯಿತು 
ಜಾರಿದ ಗುಂಡಿಗೆ ಹೊತ್ತು ಕವಿಯಾಗುವೆ 

ದಾಳಿಗೊಳಗಾದ ಗುಡಿಯಲ್ಲಿ ಶಿಲೆಯಾಗುವೆ 
ನೀಡು ನೀ ದರುಶನ ಕರಗಿ ಕವಿಯಾಗುವೆ 

ಸಂಜೆ ಏಕಾಂತಕೆ ಸಿಕ್ಕ ಪರಿಹಾರವೇ 
ಸೇದುತಾ ನೆನಪನು ಗೀಚಿ ಕವಿಯಾಗುವೆ 

ನನ್ನ ಮನದನ್ನೆಯೇ ಏಕೆ ಈ ಅಂತರ  
ಮುತ್ತಿಗೆ ಸಿಕ್ಕರೆ ಇಟ್ಟು ಕವಿಯಾಗುವೆ 

ತೊಟ್ಟು ಮಧುವಲ್ಲಿಯೇ ನೀಗಿಸು ತೃಷೆಯನು
ನಶೆ ಏರಿಳಿತ ಬೇಕಾಗಿ ಕವಿಯಾಗುವೆ.. 

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...