Tuesday, 26 July 2022

ಹಾಡು ಕಲಿತ ಹಕ್ಕಿ

ಹಾಡು ಕಲಿತ ಹಕ್ಕಿ

ಮೂಕವಾದರೆ ಹೇಗೆ?
ಲೋಕವ ಕಂಡು ದಿಗಿಲಾಗಿ
ಲೋಕವ ಕಂಡು ದಿಗಿಲಾಗಿ ಬಡ ಹಕ್ಕಿ
ಹಾಡೋದ ಮರೆತೇ ಹೋಗಿತ್ತು

ಮೇಲೆ ಹಾರಲು ಬೇಕು
ಜೋಡಿ ರೆಕ್ಕೆಯ ಬಲ
ಮುಟ್ಟೊಕೆ ಮುಗಿಲ‌ ಮಡಿಲನ್ನು
ಮುಟ್ಟೊಕೆ ಮುಗಿಲ‌ ಮಡಿಲನ್ನು ಹಾರೋ ಹಕ್ಕಿ
ಗೂಡಿಗೆ ಮರಳಿ ಬರಬೇಕು

ಬಿದ್ದ ಮಳೆಯಲಿ ಮಿಂದು
ಬಿಸಿಲ ಬೇಗೆಗೆ ಬೆಂದು
ಚಿಗುರು ಹೂವ ಗುಟುಕು ಹಸಿವಿಗೆ
ಚಿಗುರು ಹೂವ ಗುಟುಕು ಹಸಿವನ್ನ ಮರೆಸಿತ್ತು
ಮಿಕ್ಕ ಹೂ ಅರಳಿ ಫಲವಿತ್ತು

ಬಿಟ್ಟು ಹೋದಳು ಅಮ್ಮ
ಎಂದೋ ಕಾವನು ಕೊಟ್ಟು
ಬೇಟೆಗಾರನ ಗುರಿಗೆ ಬಲಿಯಾಗಿ 
ಬೇಟೆಗಾರನ‌ ಗುರಿಗೆ ಬಲಿಯಾಗಿ ತಾಯಕ್ಕಿ
ನಾಕು ಹೊಟ್ಟೆಯ ತುಂಬಿ ತಂಪಾಗಿ 

ಯಾರ ನಂಬಲು ಬೇಡ
ಅನ್ನೋ ಪಾಠವ ಕಲಿತು
ಒಬ್ಬಂಟಿಯಾಗೇ ಉಳಿದಿತ್ತು
ಒಬ್ಬಂಟಿಯಾಗೇ ಉಳಿದಿತ್ತು ಕೊನೆಗಲ್ಲಿ
ಪ್ರೀತಿ ಮಾಡುವುದ ಮರೆತಿತ್ತು

ಏನೂ ಬೇಡದ ಹಕ್ಕಿ 
ಹಿಡಿ ಪೀತಿಯ ಬಯಸಿ 
ಮುಪ್ಪಾದ ಕಾಲಕ್ಕೆ ಒಬ್ಬಂಟಿ 
ಮುಪ್ಪಾದ ಕಾಲಕ್ಕೆ ಒಬ್ಬಂಟಿ ಮುದಿ  ಹಕ್ಕಿ 
ತಪ್ಪಾಗಿ ಬಾಳ ಎಣಿಸಿತ್ತು 

ನೀ ಮೊದಲ ಬಾರಿ ಇಳಿದು ಬಂದೆ ಮಳೆಯಾಗಿ

ನೀ ಮೊದಲ ಬಾರಿ ಇಳಿದು ಬಂದೆ ಮಳೆಯಾಗಿ

ಎದೆಯ ಮೀಟೋ ಸೋನೆಯೇ
ನೀ ತೊದಲು ಪ್ರೀತಿ ಕಲಿಸಿ ಹೋದೆ ಮೆಲುವಾಗಿ
ನನ್ನ ಜೀವವೇ
ಕಣ್ಣಿನ ಅಂಚಿನ ಕಾಡಿಗೆ ರೇಖೆಯಲ್ಲಿ
ಬಂಧಿಸು ನನ್ನನು ಸಂಗಾತಿಯೇ
ಸಾವಿರ ಸಾಲಿನ ಪ್ರೇಮದ ಕವಿತೆ ನೀನು
ಓದುತ್ತ ಸೋತು ಹೋದೆ ನಿನ್ನ ಗುಂಗಲೇ..

ಓ ಮಾಯೆ ಮಾಯೆ, ಓ ಮಾಯೆ ಮಾಯೆ 
ಹೇ ನನ್ನ ಮನವ ಸೆಳೆದ ಮಾಯಗಾತಿಯೇ 
ಓ ಮಾಯೆ ಮಾಯೆ, ಓ ಮಾಯೆ ಮಾಯೆ 
ನೀ ನನ್ನ ಉಸಿರ ಬೆರೆತ ಜೀವ ಸಾತಿಯೇ..

ಹೂದೋಟವ ಸುತ್ತೋಣವೇ ಇನ್ನಷ್ಟು ಆಸೆ ಹೊತ್ತು
ನಿನ್ನಲ್ಲಿರೋ ಆ ಮೌನ ನನಗೂ ಕೇಳಲಿ
ಜೂಟಾಟವ ಆಡುತ್ತಿವೆ ಕಣ್ಣಲ್ಲಿ ಕನಸು ನೂರು
ಸೋಲುವ ಹಿತವ ನಿನಗೆ ಹೇಗೆ ಹೇಳಲಿ
ಒಂದೊಂದೇ ಹನಿಯನ್ನು ಕೂಡಿಟ್ಟ ಎಲೆಯಂತೆ
ನೀ ತಂದ ನೆನಪು ನನ್ನ ಹೃದಯ ತುಂಬಿದೆ
ಮುದ್ದಾದ ನಗುವಲ್ಲಿ ಕದ್ದೋಡುವ ನಿನ್ನ
ನೆರಳಲ್ಲೇ ನನ್ನ ಬಾಳಿದೆ...

ನೀ ವಿವರವಾಗಿ ಹೇಳಿ ಹೋದೆ ಒಲವನ್ನು

ನೀ ವಿವರವಾಗಿ ಹೇಳಿ ಹೋದೆ ಒಲವನ್ನು 

ಬೆರಗು ಮೂಡೋ ಹಾಗೆಯೇ 
ಬಾ ಎದೆಯ ಮೇಲೆ ಒರಗಿ ಕೇಳು ಸಂಗಾತಿ  
ಬೆರಗು ಮೂಡೋ ಸಂಗತಿ 

ನೀ ಬಿಡಿಸಿ ಹೇಳು ಸರಳವಾಗಿ ಒಲವನ್ನು 

ನೀ ಬರುವ ದಾರಿ ಜೊತೆಗೆ ಸೇರಿ ನಡೆವಾಗ    
ಮನದಲೇನೋ ಸಂಭ್ರಮ
ನೀ ಮುಗಿಯದಂಥ ಕನಸಿನಂತೆ ಇರುವಾಗ 
ಖುಷಿಯ ಸಂಗಮ
ಚಂದಿರ ಬಾರದ ಊರಿಗೆ ತಂದೆ ಹೇಗೆ 
ಹುಣ್ಣಿಮೆ ದೀಪವ ಸಂಗಾತಿಯೇ  
ಸುಂದರ ಸಂಜೆಯ ತಣ್ಣನೆ ಗಾಳಿ ಹಾಗೆ 
ಯಾರಿಗೂ ಕಾಣದಂತೆ ನನ್ನ ಸೇರಿದೆ
(ಕಣ್ಣಲೇ ಎಲ್ಲ ಹೇಳೋ ಮಾಯಗಾತಿಯೇ .. )

ಓ ಮಾಯೆ ಮಾಯೆ, ಓ ಮಾಯೆ ಮಾಯೆ 
ಹೇ ನನ್ನ ಗಮನ ಸೆಳೆದ ಮಾಯಗಾತಿಯೇ 
ಓ ಮಾಯೆ ಮಾಯೆ, ಓ ಮಾಯೆ ಮಾಯೆ 
ನೀ ನನ್ನ ಉಸಿರ ಬೆರೆತ ಪ್ರೇಮ ಸಾತಿಯೇ..

ನೀ ಗೀಚು ಬಾ ಈ ಬಾಳಿನ
ಒಂದೊಂದು ಪುಟದ ಮೇಲೆ
ನಮ್ಮಿಬ್ಬರ ಅನುರಾಗದ ಒಪ್ಪಂದವ


ಈ ಗಮನವನ್ನು ಸಳೆದು ಹೋದ‌ ಮಾಯಾವಿ

ಈ ಗಮನವನ್ನು ಸಳೆದು ಹೋದ‌ ಮಾಯಾವಿ

ಹೃದಯವಿನ್ನೂ ನಿನ್ನದೇ
ನೀ ಗಗನದಿಂದ ಇಳಿದು ಬಂದ ಮಳೆಯಾಗಿ
ನನ್ನ ಸೇರಿದೆ
ತಣ್ಣನೆ ಗಾಳಿಗೆ ಕಿವಿಗೊಟ್ಟು ನೋಡು ಒಮ್ಮೆ
ಅಲ್ಲಿಯೂ ನಮ್ಮದೇ ಪಿಸು ಮಾತಿದೆ
ಕಣ್ಣಿನ ಸನ್ನೆಯ ಸುಳಿಯಲ್ಲಿ ಸಿಲುಕಿರುವಾಗ 
ನಿನ್ನಲ್ಲೇ ನನ್ನ ಲೋಕ ಅನಿಸೋ ಹಾಗಿದೆ 

ಓ ಒಲವೇ ಒಲವೇ, ಓ ಒಲವೇ ಒಲವೇ 
ನೀ ನಗುವ ಸಲುವೇ ನಾ ಕಾದು ಕೂರುವೆ   
ಓ ಒಲವೇ ಒಲವೇ, ಓ ಒಲವೇ ಒಲವೇ 
ಆ ನಗೆಯ ಸೆಲೆಗೆ ನಾ ಕಳೆದೇ ಹೋಗುವೆ  

ಸಂಗಾತಿಯೇ ಸಂಬಾಳಿಸು ಈ ನನ್ನ ಪ್ರೀತಿಯನ್ನು
‍ನೀನಿಲ್ಲದೆ ಏಕಾಂತ ನನ್ನ ಕಾಡಿದೆ
ಸಂಗೀತದ ಸಾರಾಂಶವೇ ಆ ನಿನ್ನ ದನಿಯಾಗಿರಲು
ಹಿತವಾಗಿ ನನ್ನ ಮನವ ಆವರಿಸುತ್ತಿದೆ (or ಆವರಿಸಿದೆ)
ನೂರಾರು ನಕ್ಷತ್ರ ಹಿಂಬಾಲಿಸೋ ಹಾಗೆ
ನೀ ಇದ್ದ ಕಡೆಯೆಲ್ಲ ದಿನವೂ ದೀಪಾವಳಿ
ಈ ನಿನ್ನ ಕುರಿತಾಗಿ ಹಗಲೆಲ್ಲ ಗುಣಗಾನ
ಕನಸಲ್ಲೂ ನಿಂದೇ ಹಾವಳಿ

ಓ ಒಲವೇ ಒಲವೇ, ಓ ಒಲವೇ ಒಲವೇ 
ನೀ ನಗುವ ಸಲುವೇ ನಾ ಕಾದು ಕೂರುವೆ   
ಓ ಒಲವೇ ಒಲವೇ, ಓ ಒಲವೇ ಒಲವೇ 
ಆ ನಗೆಯ ಸೆಲೆಗೆ ನಾ ಕಳೆದೇ ಹೋಗುವೆ  

ಬಾ ಇಳೆಗೆ ಜಾರಿ ಬಂದ ಸೋನೆ ಮಳೆಯಂತೆ

ಬಾ ಇಳೆಗೆ ಜಾರಿ ಬಂದ ಸೋನೆ ಮಳೆಯಂತೆ
ಮಧುರವಾದ ನಾದವೇ
ಬಾ ಮಾಯವಾಗಿ ಮತ್ತೆ ಮೂಡೋ ಕನಸಂತೆ
ನನ್ನ ಜೀವವೇ
ಆಸೆಯ ಸಾಗರ ಎಬ್ಬಿಸೋ ಅಲೆಯ ಮೇಲೆ
ತೇಲುವ ನೌಕೆಯ ಏರೋಣವೇ?
ಗುಂಡಿಗೆ ಸದ್ದನು ಆಲಿಸಿ ನಿಂತ ವೇಳೆ
ಲೋಕ ನಿಶಬ್ಧವಾಗಿ ಹೋಯಿತೀಗಲೇ

ಓ ಮುಗಿಲೇ ಮುಗಲೇ, ಓ ಮುಗಿಲೇ ಮುಗಿಲೇ 
ನೀ ತಾಕೋ ಮೊದಲೇ, ನಾ ಕರಗಿ ಹೋಗಲೇ ?
ಓ ಮುಗಿಲೇ ಮುಗಲೇ, ಓ ಮುಗಿಲೇ ಮುಗಿಲೇ 
ನೀ ತೇಲೋ ಕಡೆಗೆ, ಮೈ ಮರೆತು ಸಾಗಲೇ?

ಓ ಒಲವೇ ಒಲವೇ, ಓ ಒಲವೇ ಒಲವೇ 
ನೀ ನಗುವ ಸಲುವೇ ನಾ ಕಾದು ಕೂರುವೆ   
ಓ ಒಲವೇ ಒಲವೇ, ಓ ಒಲವೇ ಒಲವೇ 
ಆ ನಗೆಯ ಸೆಲೆಗೆ ನಾ ಕಳೆದೇ ಹೋಗುವೆ  


ರೂಪಾಂತರ ಆದಂತಿದೆ ಒಂದೊಂದು ಕವಿತೆ ಸಾಲು 
ನಿನ್ನಂದವ ಕೊಂಡಾಡುತಾ ನಾ ಗೀಚಲು  
ಬಾನೆತ್ತರ ಈ ಪ್ರೀತಿಯ ಪಡೆಯೋಕೆ ರೆಕ್ಕೆ ಸಿಗಲು    
ಬಾನಾಡಿಯಾಗು ನೀನೇ ನನಗೆ ಕಾವಲು 
ಹೂ ಬಿಟ್ಟ ಸ್ಥಳವೆಲ್ಲ ನಾವಿದ್ದ ಗುರುತಂತೆ 
ಎಲ್ಲೆಲ್ಲೂ ರಂಗೆದ್ದು ರಂಗೋಲಿ ಹಾಸಿದೆ 
ಚಾಚುತ್ತ ಕೈಯ್ಯನ್ನು ನಿನ್ನತ್ತ ಬರುವಾಗ 
ಸ್ವರ್ಗಾನೇ ಧರೆಗೆ ಇಳಿದಂತೆ 
ಓ ಮುಗಿಲೇ ಮುಗಲೇ, ಓ ಮುಗಿಲೇ ಮುಗಿಲೇ 
ನೀ ತಾಕೋ ಮೊದಲೇ, ನಾ ಕರಗಿ ಬಿಡಲೇ?
ಓ ಮುಗಿಲೇ ಮುಗಲೇ, ಓ ಮುಗಿಲೇ ಮುಗಿಲೇ 
ನೀ ತೇಲೋ ಕಡೆಗೆ, ನಾ ಸಾಗಿ ಬರಲೇ?

ಹೇ ಕದಿಯಲೇನು ನಿನ್ನ ಸಣ್ಣ ನಗುವನ್ನು

ಹೇ ಕದಿಯಲೇನು ನಿನ್ನ ಸಣ್ಣ ನಗುವನ್ನು 

ಎದೆಯಲಿಟ್ಟು ಕಾಯುತಾ 
ನೀ ಬರುವ ಮುನ್ನ ಬೀಸೋ ಗಾಳಿ ತಂಪಲ್ಲಿ 
ತೇಲಿ ಹೋದೆ ನಾ 
************
ನೀ ನುಡಿಸಿ ಹೋದೆ ಮೂಕವಾದ ಮನಸನ್ನು 
ಸೂರೆ ಮಾಡಿ ಕಣ್ಣಲೇ 
ಹೇ ಸಲುಗೆಯಲ್ಲಿ ಕೂಗಲೇನು ನಿನ್ನನ್ನು  
ಮುದ್ದು ಮಾತಲ್ಲೇ 
ನಿನ್ನಲಿ, ನನ್ನಲಿ ಮೊದಲಾದ ಮಳೆಯ ಹಾಡು 
ಆಗಲೇ ಜೀವವ ಆವರಿಸಿದೆ   
ಹೇಗೆ ನಾ ಹೇಳಲಿ ಈಗೀಗ ನನ್ನ ಪಾಡು 
ಮತ್ತೇರಿದಂತೆ ಮಾತು ತೊದಲುವಂತಿದೆ  
ಮಾಯಾವಿ ನೀನು, ಮಾಯಾವಿ ನೀನು 
ನಾನೀಗ ನಿನ್ನ ಗುಂಗ ಲಿ ಕಳೆದೇ ಹೋದೆನು  
ಮಾಯಾವಿ ನೀನು, ಮಾಯಾವಿ ನೀನು 
ಏನೇನೋ ಹೇಳೋ ಹುಚ್ಚು ಕವಿಯಂತಾದೆನು 

ಈ ಮಧುರವಾದ ತಂಪು ಗಾಳಿ ಜೊತೆಯಲ್ಲಿ

ಈ ಮಧುರವಾದ ತಂಪು ಗಾಳಿ ಜೊತೆಯಲ್ಲಿ

ಹಗುರವಾಗಿ ಸಾಗುವ
ಬಾ ಹಸಿರು ದಾರಿ ಹೇಳುವಂಥ ಕತೆಯಲ್ಲಿ
ಕಳೆದು ಹೋಗುವಾ
ನಿನ್ನಲೂ, ನನ್ನಲೂ ಸುರಿಯುವ ಮಳೆಯು ಒಂದೇ
ಓಡುವ ಕಾಲವೂ ನಿಂತಂತಿದೆ
ಹೇಳದ ಸಾವಿರ ಆಸೆಯ ಬೆನ್ನ ಹಿಂದೆ
ಗುಟ್ಟಾಗಿ ಎಲ್ಲ ಗುಟ್ಟು ಹಂಚಿಕೊಳ್ಳುವ..
ಆರಂಭ ಪ್ರೇಮ, ಆರಂಭ ಪ್ರೇಮ
ಆರಂಭ ಪ್ರೇಮ, ಆದಾಗ ಸಂಗಮ

ತಾಕಿಸು ತುಸುವಾದರೂ ಬೆರಳಂಚನು ಓ ಬಾಲೆ

ತಾಕಿಸು ತುಸುವಾದರೂ ಬೆರಳಂಚನು ಓ ಬಾಲೆ

ಅಂತರವನು ಕಾದಿರಿಸುವ ಆಮೇಲೆ
ಸುಂದರ‌ ಕನಸೊಂದರ ಎಳೆಯೊಂದನು ನೇಯುತ್ತ
ಉಳಿಯುವೆ ಬೇಕೆಂದರೆ ನಾ ನಿನ್ನಲ್ಲೇ
ಕನ್ನಡಿ ಏನೆಂದಿದೆ ನೀನೀಥರ ನಾಚಿರುವೆ
ಗೋಚರವಾದಂತಿದೆ ಆ ಕಣ್ಣಲ್ಲೇ
ಸುಮ್ಮನೆ ಏನೆಂದರೂ ಮುಂಗೋಪವ ಬೀರಿರುವೆ
ನಿನ್ನೊಳಗೇನೇನಿದೆ ನಾ ಬಲ್ಲೆ

ಆಚೆ ತೀರದಲ್ಲಿಇರುವೆ ನೀನು

ಆಚೆ ತೀರದಲ್ಲಿಇರುವೆ ನೀನು 

ನನ್ನ ಕೂಗು ನಿನಗೆ ಕೇಳದೇನು 
ಮನದ ಮಾತನ್ನೆಲ್ಲ ಹೇಳಬೇಕು ಈಗಲೇ 
ಕಾಲ ಮೀರಿ ಹೋಗಲು ಹೇಳಲಾಗದು 

ತಂರಂಗ ಮೂಡಿ ಬಂತು ನೋಡು 
ಗುನುಗುತ್ತ ನಿನ್ನ ಹಾಡು 
ಅಂಕೆಯಿಲ್ಲದೆ ಸಾಗಬೇಕಿದೆ ಸಂಚಾರವೀಗಲೇ 

ಒಂದೇ ಸಮನೆ ಸುರಿಯುತ್ತಿದೆ ಮಳೆ ಹನಿ 
ಒಂದೇ ಸಮನೆ ಸುರಿಯುತ್ತಿದೆ
ಒಂದೇ ಸಮನೆ ಸುರಿಯುತ್ತಿದೆ ಮಳೆ ಹನಿ 
ಒಂದೇ ಸಮನೆ ಸುರಿಯುತ್ತಿದೆ

ಆಳವಾದ ಸಂಗತಿಯನ್ನು 
ಹೇಳಬೇಕು ನಿನಗೆ 
ಆದರೇನು ಮಾಡಲಿ ಈಗ 
ಮಾತೆ ಬಾರದೇ 
ನೀಳವಾದ ಕಣ್ಣಲಿ ಜಾರಿ   
ತೇಲುವಾಗ ಹೃದಯ   
ಕಂಬನಿಯ ಅಲೆಗೆ ಸಿಲುಕಿ  
ಮೌನ ತಾಳಿದೆ 

ತಂರಂಗ ಮೂಡಿ ಬಂತು ನೋಡು 
ಗುನುಗುತ್ತ ನಿನ್ನ ಹಾಡು 
ಅಂಕೆಯಿಲ್ಲದೆ ಸಾಗಬೇಕಿದೆ ಸಂಚಾರವೀಗಲೇ 

ಬಿಡುಗಡೆಗಾಗಿ ಕಾದಿರುವೆ

ಬಿಡುಗಡೆಗಾಗಿ ಕಾದಿರುವೆ

ಬಿಡುಗಡೆಗಾಗಿ ಕಾದಿರುವೆ
ಏನಾಗಿದೆ, ವಿಚಾರಿಸು
ಈ ಯಾತನೆ ನಿವಾರಿಸು
*ಈ ಪಂಜರ, ನೀ ಭೇದಿಸು*
ನಾ ಬರುವೆ ನೀನಿರುವೆಡೆಗೆ
ನಾ ನಗುವೆ ನೀ ನಗಿಸುವ ವರೆಗೆ...

***********

ಬಿಡುಗಡೆಯನ್ನು ನೀಡುತಲೇ 
ನಿಧಾನಕೆ ನಿಭಾಯಿಸು 
ಪ್ರೇಮಿ ಆಗಿರುವೆ 

ಇದೋ ನೀಡುವೆ    
ಹೊಸ ಕಾರಣ 
ಕತೆ ಮುಂದಕೆ 
ಸಾಗೋ ಲಕ್ಷಣ 
ಕೇಳದೇನೆ ಕೊಡುವೆ ನಾ ಎಲ್ಲವ 
ಸುಸ್ವಾಗತ ಓ ಸಂಗಾತಿ ನಿನಗೆ ಈ‌ ಜೀವಕೆ...

ಅದೇ ದಾರಿಯ
ಸವಿ ಯಾನಕೆ
ಜೊತೆ ಬೇಕಿದೆ
ಇದೇ ಕೋರಿಕೆ
ಭಾರವಾದ ಹೃದಯ ನನ್ನಲ್ಲಿದೆ
ತುಸುವಾದರೂ ಬಂದು ಹಗುರಾಗಿಸು ನೀ ಹೇಗಾದರೂ.. 

ಮುಂಜಾವಿಗೆ ಮೆನ್ನೆಚ್ಚರ ಆದಂತಿದೆ

ಮುಂಜಾವಿಗೆ ಮೆನ್ನೆಚ್ಚರ ಆದಂತಿದೆ

ಏಕಾಂತದಿ ಕಾಜಾಣವು ಗುನುಗುತ್ತಿದೆ
ಅತ್ತಿತ್ತಲ ವಾಲಿತ್ತಲೇ ಹೂ ನಿಂತಿದೆ
ಘಂ ಎನ್ನುವ ಅತ್ತಾರದು ಮೈಗಂಟಿದೆ

ಕಣ್ಣೋಟದ ಈ ದೂರದ ಬೇಜಾರನು
ಕಳೆಯೋದಕೆ ಮುಂದಾಗುವೆ, ಕೈ ಜಾರೆನು
ಹರುಷಕ್ಕಿದೋ ನೂರಾರಿವೆ ಕಾರಣಗಳು
ನಾ ಹೇಳುವೆ ಅತಿರೇಕದ ಕತೆಯೊಂದನು

ಇನ್ನಿಲ್ಲದ ಒತ್ತಾಯಕೆ ಮನ ಸೋತಿದೆ
ನೀನಲ್ಲದೆ ಮತ್ತಾರನೂ ಬೇಡೆಂದಿದೆ
ಆರಂಭದ ಹುಮ್ಮಸ್ಸಲೇ ನನಗೀಗಲೂ 
ಬಚ್ಚಿಟ್ಟಿರೋ ಮಾತೆಲ್ಲವ ಹೇಳೋಕಿದೆ

ಹೇರುತ್ತಿರು ನಿನ್ನಾಸೆಯ ನನ್ನಲ್ಲಿಯೇ
ನಾ ತಾಳುವೆ ಈ ಒತ್ತಡ ಸಾಕೆನ್ನದೆ
ಉಗುರಂಚಲಿ ಕುಣಿದಾಡುವೆ ಬೇಕೆಂದರೆ
ಈ ಬದುಕಿಗೆ ನೀನಲ್ಲದೆ ಬೇರೇನಿದೆ

ರಂಗೇರಿದೆ‌ ನನ್ನ ಮನೆ ಪಡಸಾಲೆಯು
ಆ ಹೆಜ್ಜೆಯ ಗುರುತನ್ನು ನೀ ಇಟ್ಟಾಗಲೇ
ತಾ ಬೀಳುವ ಕನಸಲ್ಲಿಯೂ ನಾ ಬೀಳುವೆ
ನಿನ್ನ ಹಿಡಿ ಬೆರಳನ್ನು ನಾ ಬಿಟ್ಟಾಗಲೇ...

ದೂರಾದ ತರುವಾಯ

ದೂರಾದ ತರುವಾಯ

ನೆನಪಾಗಿ ಬರಬೇಡ
ಒಲವೊಂದೇ ಉಳಿತಾಯ
ಪಾಲನ್ನು ಕೊಡಬೇಡ  
ಈ ಪುಟ್ಟ ಹೃದಯಕ್ಕೆ
ಗುರಿಯಿಟ್ಟು ಸುಡಬೇಡ 
ನೀ ಕೊಟ್ಟ ಮಾತನ್ನು 
ಹಿಂಪಡೆದು ನಗಬೇಡ 
ಸುಡುವಂತೆ ಮಳೆಯೊಂದು 
 

ಕೊಡೆಯನ್ನು ಮರೀಬೇಡ 

ಬಡವಾದ ಹೃದಯಕ್ಕೆ

ಬಡವಾದ ಹೃದಯಕ್ಕೆ

ಬಿಡುವಾಗಿ  ಸಿಕ್ಕುವೆಯಾ
ತಡ ಮಾಡಿದಾಗೆಲ್ಲ
ಕಣ್ಣಲ್ಲೇ ಮುದ್ದಿಸೆಯಾ

ಚಂದಿರನ ಮೊಗದಲಿ ಯಾಕಿಷ್ಟು ಕಲೆಗಳಿವೆ

ಚಂದಿರನ ಮೊಗದಲಿ ಯಾಕಿಷ್ಟು ಕಲೆಗಳಿವೆ 

ಕಡಲಿನ ಒಡಲಲಿ ಇನ್ನೆಷ್ಟು ಅಲೆಗಳಿವೆ 
ನನ್ನೊಳಗೂ, ನಿನ್ನೊಳಗೂ 
ಪ್ರಶ್ನೆಗಳ ಸುರಿಮಳೆಯು 
ಇಂದೇಕೋ ಮಿತಿ ಮೀರುತಿದೆ 
ಕಂಬನಿ ಕೋಡಿ ಒಡೆಯುತಿದೆ 
ನೀ ಬರಲೆಂದೇ, ನಾ ಕಾದಿರುವೆ 
ಇಬ್ಬನಿಯಂತೆ... 

ಕಾರಿರುಳು ಆವರಿಸಿ
ಬದುಕಿನ ಪಾಠವ ಮಾಡುತಿದೆ
ಮುಳ್ಳುಗಳ ದಾರಿಗಳೇ
ಪಯಣದ ದಿಕ್ಕನು ತೋರುತಿದೆ
ಯಾರಿರದ ಊರಿನಲಿ
ಸೂರಿರದೆ ತಂಗಿರುವೆ
ಮೂಡುವ ನೆನಪಿನ ಹಂಗಿನಲಿ
ಕೇವಲ ನಿನ್ನದೇ ಗುಂಗಿನಲಿ
ನೀ ಬರಲೆಂದೇ, ನಾ ಕಾದಿರುವೆ 
ಉಂಗುರದಂತೆ...

ನಿಂತಿರುವ ಕಾಲವಿದು
ಮುಂದಕೆ ಚಲಿಸಲು ಸೋಲುತಿದೆ
ಯಾವುದನೂ ನಂಬದೆಲೆ
ಆಸೆಗಳೆಲ್ಲವೂ ಸಾಯುತಿವೆ
ಆಲಿಸುವ ಮನಸಿದ್ದೂ
ಕೇಳಿಸದೇ ಪಿಸು ಮಾತು
ಅಲೆಯುವೆ ಧ್ಯಾನಿಸಿ ನೆನ್ನೆಯನೇ
ತಡೆದು ನಿಲ್ಲಿಸು ಕಂಡೊಡನೆ
ನೀ ಬರಲೆಂದೇ, ನಾ ಕಾದಿರುವೆ 
ಅಂಬರದಂತೆ..

ಕಾಮನ ಬಿಲ್ಲು

ಕಾಮನ ಬಿಲ್ಲು

ಗೀಚಿದೆ ಕವನ
ಭೂಮಿಯು ಓದುತ ನಲಿಯಲು
ಮೋಡವು ಕರಗಿ
ಜಾರಿದೆ ಇಳೆಗೆ
ಹೂಗಳ ಆಸೆಯ ತಣಿಸಲು
ಯಾವುದೋ ಹಾಡನು
ಹೆಕ್ಕುತ ಮೆಲ್ಲುತ
ಹಾಡಿದೆ ಹಕ್ಕಿಯು ಭರದಲಿ  
ಎಲ್ಲಿಗೋ ಸಾಗುವ 
ದಾರಿಯ ಹಿಡಿಯುತ 
ನಂಬಿಕೆ ಮೂಡಿದೆ ಮನದಲಿ 

ಬಣ್ಣದ ಸಾಲವ
ನೀಡುವ ಚಿಟ್ಟೆಯೇ 
ತಿರುಗಿ ನಾ ನಿನಗೆ ಏನ ನೀಡಲಿ?
ಅರಿವಿನ ಪಾಠವ
ಮಾಡುವ ನದಿಗಳೇ
ಕಲಿಸುವ ಗುರುಗಳು ನೀವೆನ್ನಲೇ  
ದೋಣಿಯ ಮಾಡಲು 
ಕಾಗದ ಸಾಲದೇ 
ಬಿಡಿಸಲೇ ಎಲೆಗಳೇ ನಿಮ್ಮನ್ನು  
ಏಣಿಯ ಹಾಕಿಯೂ 
ದೂರವೇ ನಿಲ್ಲುವ
ಆದರೂ ಗೆಳೆಯನೇ ಚಂದ್ರನು 

ಚಿಟ್ಟೆಗಳು ಹಿಡಿತಕ್ಕೆ ಸಿಗಲಾರವು

ಚಿಟ್ಟೆಗಳು ಹಿಡಿತಕ್ಕೆ ಸಿಗಲಾರವು

ಸೆಳೆವ ಅತ್ತರು ಹಚ್ಚಿಕೊಂಡರೂ  
ಮಧು ಪಾತ್ರೆಯ ಹೊತ್ತು ನಿಂತರೂ 
ಹೂವಲ್ಲದ ಹೊರತು ಹತ್ತಿರ ಸುಳಿಯಲಾರವು

ಒಂದು ಪಾರಾಗವ ಮತ್ತೊಂದಕೆ ಸ್ಪರ್ಶಿಸಿ
ಬಣ್ಣಗಳ ಬೆರೆಸುವಾಟದಲಿ ನಿರತ

ಏನ್ ಸರ್ ಇಷ್ಟೊಂದು ಮಿಂಚ್ತಿದ್ದೀರ

ಏನ್ ಸರ್ ಇಷ್ಟೊಂದು ಮಿಂಚ್ತಿದ್ದೀರ

ಯಾವ ಫ಼ಾರಿನ್ ಸೋಪನ್ನ ಉಜ್ಜಿದ್ದೀರ
ಕಾಲೇ ನಿಲ್ದಂಗೆ ತೂಗುತೀರ
ಬೆಳ್ಳಂಬೆಳ್ಗೆ ಏನಾರಾ ಕುಡ್ದಿದ್ದೀರಾ?
ತುಂಬಾ ಒಳ್ಳೇವ್ರಂತ ಪೋಸು ಕೊಟ್ಟಿದ್ದೀರ
ದೇವಸ್ಥಾನದ ಬಾಗ್ಲನ್ನ ತಟ್ಟಿದ್ದೀರ
ಯಾರನ್ನಾದ್ರೂ ಲವ್ವು ಗಿವ್ವು ಮಾಡಿದ್ದೀರ
ಆದ್ರೂ ಯಾಕೆ ಇನ್ನೂ ಗಡ್ಡ ಬಿಟ್ಟಿದ್ದೀರ

ಒಂದು ಕೋಟಿ ಸಂಬಳ ಕೊಡೋ ಕೆಲ್ಸ ಇದ್ರೂ 
ನಾನು ಈಗ್ಲೇ ರೆಸಿಗ್ನೇಷನ್ ಬರ್ದಾಕ್ತೀನಿ 
ಪೊಲಿಟಿಕ್ಸು ಸೇರು 



ಅಂಜಲಿ, ಅಂಜಲಿ ಪುಷ್ಪಾಂಜಲಿ

ಅಂಜಲಿ, ಅಂಜಲಿ ಪುಷ್ಪಾಂಜಲಿ

ನೀನು ನಡೆದಲ್ಲಿ ಪುಷ್ಪಾಂಜಲಿ
ಜೇನು ಜಿನುಗುತ್ತಾ ತುಟಿಯಂಚಲಿ 
ಆಡೋ ಮಾತೆಲ್ಲ ಗೀತಾಂಜಲಿ 
ಕವಿತೆ ನುಡಿದಂತೆ ಕಣ್ಣಂಚಲಿ  

ಸೇರದೆ ದೂರಾದರೂ 
ಬೆಸೆಯುವ ಕನಸಿದೆ
ಪರಿಚಯವ ಹೇಳಲು
ಸಾವಿರ ನೆನಪಿದೆ 
ನಿಂತಿರೋ ಮಾತೆಲ್ಲಕೂ 
ಬೇಡಿಕೆ ಬಂದಿದೆ
ಆದರೂ ಈ ಜೀವವು
ಮೌನವ ದಾಟದೇ 
ಕುಣಿಯುತ ಬರುವಾಸೆ ಕರೆದಾಗ ನೀ
ಖುಷಿಯಲಿ ಹರಿಸುತ್ತ ಕಣ್ಣ ಹನಿ
ಅಂಜಲಿ, ಅಂಜಲಿ 
ಈ ಮನದ ಬಾನುಲಿ

ನೀನು ನಡೆದಲ್ಲಿ ಪುಷ್ಪಾಂಜಲಿ
ಜೇನು ಜಿನುಗುತ್ತಾ ತುಟಿಯಂಚಲಿ 
ಆಡೋ ಮಾತೆಲ್ಲ ಗೀತಾಂಜಲಿ 
ಕವಿತೆ ನುಡಿದಂತೆ ಕಣ್ಣಂಚಲಿ  



ತೀಡಿದ ಕಣ್ಣಂಚಲೇ
ಕಂಬನಿ ಉಳಿದಿದೆ
ತಾಳುವ ಕಾಡಿಗೆಗೆ
ಕರಗುವ ಮನಸಿದೆ
ರಾತ್ರಿಯ ಕನಸೆಲ್ಲವೂ
ಮುಂಜಾವಿನಂತಿರೆ
ಬೆಳಕಿನ ಸಂಭಾಷಣೆ
ಅರ್ಥವೇ ಆಗದೇ
ಉಲಿದರೆ ಪಿಸುಮಾತು
ಸಮೀಪಿಸುವೆ
ಬೆವರುತ ಒಳಗೊಳಗೇ
ಪುಳಕಿಸುವೆ

ದೂರವೇ ನಾವಿದ್ದರೂ
ಬೆಸೆಯುವ ಕನಸಿದೆ
ಪರಿಚಯವ ಹೇಳಲು
ಸಾವಿರ ನೆನಪಿದೆ 
ನಿಂತಿರೋ ಮಾತೊಂದಕೆ
ಬೇಡಿಕೆ ಬಂದಿದೆ
ಆದರೂ ಈ ಜೀವವು
ಮೌನವ ದಾಟದೇ 
ಕುಣಿಯುತ ಬರುವಾಗ ಕರೆದಾಗ ನೀ
ಖುಷಿಯಲಿ ಉರುಳೋದೇ  ಕಣ್ಣ ಹನಿ
ಅಂಜಲಿ, ಅಂಜಲಿ 
ಮನಸಿನ ಬಾನುಲಿ

ಹೃದಯವೇ ಬಿಡುಗಡೆಯ

ಹೃದಯವೇ ಬಿಡುಗಡೆಯ

ಕೊಡುವೆಯಾ ಮಿಡುಕಾಟಕೆ
ಮನಸಿನ ಬಯಕೆಗಳು
ಇಡುತಿವೆ ಹೊಸ ಪೀಠಿಕೆ
ನನ್ನೆಲ್ಲ ಬಾಳಿನ ಪುಟದ ಕೊನೆಗೆ
ನಾ ಗೀಚಿಕೊಳ್ಳುವೆ ಅವಳ ಹೇಸರು

ಹೃದಯವೇ ಸ್ವೀಕರಿಸು
ಹೊಸ ಥರ ಅನುಭವವ
ಮುಗಿಯದೆ ನಡೆಸುತಿರು
ಒಲವಿನ‌ ವಿನಿಮಯವ

ಪರಿಚಯ ಶುರುವಿನಲೇ
ಹೃದಯಕೆ ಎರಗಿದೆಯಾ
ಭಯದಲಿ ಬಳಲಿದರೆ
ಮಡಿಲಿಗೆ ಒರಗುವೆಯಾ
ವರದಾನವಾಗಿದೆ ವಿರಹ ಸಹಿತ
ನಿನಗೆಂದೇ ಮೀಸಲು ಮನದ ಸ್ವಗತ 

ಖುಷಿಯೆಲ್ಲವೂ ಸಿಕ್ಕಾಗಿದೆ

ಖುಷಿಯೆಲ್ಲವೂ ಸಿಕ್ಕಾಗಿದೆ

ನಗುವೆಂದರೆ ಗೊತ್ತಾಗಿದೆ
ಕಣ್ಣ ಮುಂದೆ ನೂರಿ ದಾರಿ
ನನ್ನ ದಾರಿ ಕಾದಂತಿದೆ
ಎಲ್ಲೆಲ್ಲೂ ನಿಲ್ಲದಂತೆ ಸಾಗಿ ಬಂದ ಬಣ್ಣವೀಗ
ಈ ಕೆನ್ನೆ ಮೇಲೆ ನಿಂತು ಛಾಪು ಮೂಡಿದೆ
ಯಾರನ್ನೂ ತೇಲುವಂತೆ ಮಾಡದಂಥ ರೆಕ್ಕೆಯೀಗ
ನನ್ನ ಬೆನ್ನೇರಿ ಕೂತು ಹಾರು ಎಂದಿದೆ...
ಟು ಟು ಟು...


ಮುಟ್ಟಿ, ಎದೆ ಮೆಟ್ಟಿ, ಕದ ತಟ್ಟಿ

ಮುಟ್ಟಿ, ಎದೆ ಮೆಟ್ಟಿ, ಕದ ತಟ್ಟಿ

ಹೃದಯಕ್ಕಿಳಿಯುವೆ ಮೆಲ್ಲ ಈಗ, ಒಲವಾಗುವ ಯೋಗ 
ಸಿಟ್ಟು, ಬದಿಗಿಟ್ಟು, ಎಡವಟ್ಟು 
ಮಾಡದೆ ಒಪ್ಪಿಕೋ ನನ್ನೇ ಬೇಗ, ಒತ್ತಾಯಿಸುವಾಗ 

ಸಕ್ಕರೆಯಂತೆ ಎದುರು ನೀನಿರುವೆ 
ಮತ್ತೇರಿ ನಾನು ಹಿಂಬಾಲಿಸಿ ಬರುವೆ 

ಕೆಟ್ಟು, ತಲೆ ಕೆಟ್ಟು, ಮನೆ ಬಿಟ್ಟು, ಮನಸಿಟ್ಟು 
ನಿನ್ನ ನೆನಪಲ್ಲಿಯೇ ಪರಿತಪಿಸಿರುವೆ 

common common ಕಲಾವತಿ 
ಇನ್ನೆಷ್ಟು ಅಂತ ಕಾಡುತೀ  
common common ಕಲಾವತಿ 
ನೀನಿಲ್ಲದೆ ಅದೋಗತಿ

ಮುಟ್ಟಿ, ಎದೆ ಮೆಟ್ಟಿ, ಕದ ತಟ್ಟಿ
ಹೃದಯಕ್ಕಿಳಿಯುವೆ ಮೆಲ್ಲ ಈಗ, ಒಲವಾಗುವ ಯೋಗ 
ಸಿಟ್ಟು, ಬದಿಗಿಟ್ಟು, ಎಡವಟ್ಟು 
ಮಾಡದೆ ಒಪ್ಪಿಕೋ ನನ್ನೇ ಬೇಗ, ಒತ್ತಾಯಿಸುವಾಗ 


ತುಂಬ ಒಳ್ಳೆ ಹುಡುಗನು ನಾನಮ್ಮ
ನಿನ್ನ ನೋಡುತ್ತ ಪೋಲಿ ಆಗೋದೆ
ಹೆಚ್ಚು ಕಮ್ಮಿ ನಿನ್ನದೇ ಗುಣಗಾನ
ಈ ನಡುವೆ ಹೊಂಗನಸೆಲ್ಲವೂ ನಿಂದೇ
ನೀನಾಡೋ ಪ್ರತಿಯೊಂದು ನುಡಿಯನು ಗೀಚಿಟ್ಟೆ
ನನ್ನ ಒಳಗೊಂದು ಹೊಸ ಹಾಡನು ಬಚ್ಚಿಟ್ಟೆ
ಚಿತ್ತು, ಮರೆಸಿಟ್ಟು, ಒಳಗುಟ್ಟು, ತೆರೆದೊಟ್ಟು
ಗೋಗರೆಯುತ ನಿನ್ನತ್ತಲೇ ಬರುವೆ

common common ಕಲಾವತಿ 
ಇನ್ನೆಷ್ಟು ಅಂತ ಕಾಡುತೀ  
common common ಕಲಾವತಿ 
ನೀನಿಲ್ಲದೆ ಅದೋಗತಿ

ಕೂಗಿ ಹೇಳಲೇನು, ಎಲ್ಲ ಆಸೆಯನ್ನೂ

ಕೂಗಿ ಹೇಳಲೇನು, ಎಲ್ಲ ಆಸೆಯನ್ನೂ

ನಿನ್ನಲ್ಲೇ ನಾ ಕಾಣುವೆನು, ಕಳೆದೋದ ನನ್ನನ್ನು
ಮಾಯವಾದೆ ಎಲ್ಲಿ ನೀನೀಗ
ತಾಳಲಾರೆ ಮನದ ಆವೇಗ
ಮಾತನಾಡೋ ಸೋಜಿಗ ನೀನು
ಮೌನ ತಾಳುವ ಅನುರಾಗಿ ನಾನು

ಯಾರಿಗಾಗಿ ಯಾರು ಎಂದು
ಎಂದೋ ಬರೆದು ಆಗಿದೆ ಎಂದೆ
ಪ್ರೀತಿಯಾಗೋ ವೇಳೆಯಲ್ಲಿ
ಕಾಲವೇಕೋ ಸಾಗದು ಮುಂದೆ
ಸಾಕು ಮಾಡು ಕಾಯಿಸೋ ಆಟ
ಬೀರು ಬೇಗನೆ ನವಿರಾದ ನೋಟ 

ಅಮ್ಮ ಭಯವಾಗಿದೆ

ಅಮ್ಮ ಭಯವಾಗಿದೆ 

ನೀನು ಜೊತೆಯಿಲ್ಲದೆ 
ಗುಮ್ಮ ಎದುರಾಗಿದೆ 
ನಿನ್ನ ಕತೆ ಕೇಳದೆ
ಅಮ್ಮ ನಿನ್ನ ಬೆರಳು
ಹಿಡಿಯದ ಹೊರತು ಬೀಳುವೆ  
ಅಮ್ಮ ನಿನ್ನ ಮೊಗವ 
ಕಾಣದ ಹೊರತು ಸೋಲುವೆ 

ಉರುಳೋ ಕಂಬನಿಯಲ್ಲಿ
ಕೆನ್ನೆ ನೆನೆದಂತಿದೆ 
ನಿನ್ನ ಹಸ್ತದ ಸವಿಯ
ತಾನು ಬಯಸಿದೆ
ಸಣ್ಣ ತಪ್ಪಿಗೂ ಕೂಡ
ತಪ್ಪದೆ ದಂಡನೆಯ
ನೀಡಿ ಮುತ್ತನು ಕೊಟ್ಟ
ನೆನಪು ಹಸಿರಾಗಿದೆ
ಯಾವ ಋಣವೋ ಆದೆ ಸಂಗಾತಿ
ನನ್ನ ಬಾಳಲಿ
ಅದೆಷ್ಟು ಹಿತವೋ ನಿನ್ನ ದನಿಯು
ಹಾಡಲು ಜೋ ಲಾಲಿ
ನಿನ್ನ ಮಡಿಲೇ ನನ್ನ ಜೋಕಾಲಿ

ಅಮ್ಮ ಕರೆ ಆಲಿಸು
ಒಮ್ಮೆ ಮಗುವಾಗಿಸು
ನನ್ಮ ಈ ಬಾಳನು 
ನೀನೇ ಸಂಬಾಳಿಸು


ಇಳೆಯ ಸೋಕುವ ಹನಿಯು
ಮತ್ತೆ ಮುಗಿಲಾಗಿದೆ
ಬಾನ ವಿಸ್ತಾರ ಕಂಡು
ಮತ್ತೆ ಮಳೆಯಾಗಿದೆ
ಬೇರು ನೀಡಿದೆ ಗುಟುಕು
ಹೂವು ಅರಳೋಕಿದೆ
ಉದುರೋ ಎಲೆಗಳು ಎಲ್ಲ
ಬೇರಿಗೆ ಮುಡುಪಾಗಿದೆ
ಪ್ರೀತಿ ಬೀರುವ ಕನ್ನಡಿ ನೀನು
ನನ್ನ ಬಿಂಬವೇ
ಎದುರುಗೊಳುವ ಖುಷಿಯ ಸಾಲು
ಎಲ್ಲ ನಿನ್ನವೇ
ನನ್ನ ದೇವತೆ ನೀನಲ್ಲವೇ...

ಅಮ್ಮ ನಿನಗೂ ಸಹ
ಹೀಗೇ ಅನಿಸಲ್ಲವೇ?
ನಮ್ಮ ಬಾಂಧವ್ಯವು
ಇನ್ನೂ ಬಿಗಿಯಾಗಿದೆ 

ಬಾರೋ ಗೆಳೆಯ

ಬಾರೋ ಗೆಳೆಯ

ಸವಿ ನಮ್ಮ ಗೆಳೆತನ
ಜೊತೆಯಾಗಿ ಇರುವ
ಹೀಗೇ ಎಂದೂ ಕೊನೆ ತನ
ವಿರಸ ಮರೆಸುವ
ವಿಷಯ ಸಾವಿರ
ಹರುಷ ಪ್ರತಿ ದಿನ

ಅರೆ ಬಾರೋ ಗೆಳೆಯ
ಇದೇ ನೋಡು ಹೊಸತನ
ನಡುವಲ್ಲಿ ಯಾವ
ತಡೆ ಇಲ್ಲವಾಗೊಸೋಣ
ಜಗವೇ ದೂರಿದರೂ 
ಬಿಡೆನು ಜೊತೆಯನು 
ನೆರಳೂ ದೂರಾದರೂ

ಬಾಳಿನಲ್ಲಿ ಸೋಲದಂತೆ ಮುನ್ನಡೆಸು
ಎಂದಿನಂತೆ ಕೈ ಹಿಡಿದು ಸಂಚರಿಸು
(ನೆನಪಿನ ಉತ್ಖನನ ನೀ ನಡೆಸು)
ದಾರಿಗಳು ಒಂದಾದವೀಗ

ಬೇಕಾದ ಹಾಗೆ ಪ್ರೀತಿ ಮಾಡಿಕೋ ನನ್ನ

ಬೇಕಾದ ಹಾಗೆ ಪ್ರೀತಿ ಮಾಡಿಕೋ ನನ್ನ 

ನಾನೀಗ ಪೂರಾ ನಿನ್ನ ವಶವಾದೆ 
ಮಾತಲ್ಲಿ ನನ್ನ ಸೋಲಿಸೋಕೂ ಮುನ್ನ 
ಆ ಮೌನದಲ್ಲೇ ಸೋತು ಶರಣಾದೆ 
ನೀ ಇಲ್ಲದೆ ಅಪೂರ್ಣ ಜೀವನ 
ನೀ ಇಲ್ಲದೆ ಅಪೂರ್ಣ ಜೀವನ 
ನಿಧಾನವಾಗಿ ಕಂಡುಕೊಂಡೆ ನೋಡು ನನ್ನೇ ನಾ 

ನೂರಾರು ಪ್ರಶ್ನೆಯಾಗಿ 
ನೀ ಬಂದೆ ಬಾಳಿನಲ್ಲಿ 

ಹಾಗೇ ಮೈಯ್ಯ ಮರೆತು ಚೂರು ದೂರ ಸಾಗುವ

ಹಾಗೇ ಮೈಯ್ಯ ಮರೆತು ಚೂರು ದೂರ ಸಾಗುವ 

ಬಾಕಿ ಉಳಿದ ಎಲ್ಲ ಮಾತ ಹಂಚಿಕೊಳ್ಳುವ 
ಸಾಗೋ ದಾರಿಯಲ್ಲಿ ಯಾಕೋ ಬೇಜಾರಾದರೆ  
ಬಿಟ್ಟು ಬಂದ ಹೆಜ್ಜೆ ಸಾಲ ಪತ್ತೆ ಹಚ್ಚುವ 
ನೆನಪ ನೇಯುತ, ನಕ್ಕು ನಲಿಯುವ 
ಜಾರೋ ಕಣ್ಣಿನತ್ತ ಗಮನವಿಟ್ಟು ನಿಲ್ಲುವ .. 

ಬಂದು ಹೋದರಲ್ಲ ಎಷ್ಟೋ ಮಂದಿ ಹಾದಿಲಿ 
ಸಮಯ ಸಾಗಿದಂತೆ ಬದಲಾವಣೆ ಜಗದಲಿ 
ನೆನ್ನೆ ಇದ್ದ ಹಾಗೆ ಇಂದು, ನಾಳೆ ಸಾಗದು  
ಬೇಕು ಎಂಬುದೆಲ್ಲ ಸಿಕ್ಕೇ ಸಿಗದು ಬಾಳಲಿ
ಹರುಷ ಕಾಣುವ ಸೂತ್ರ ದೊರೆಯಲು
ನಾಲ್ಕೂ ದಿಕ್ಕಿನಲ್ಲೂ ಸಾರಿ ಮತ್ತೆ ಸೇರುವ..

ಸೋಕಿ ಹೋಗೋ ವೇಳೆ

ಸೋಕಿ ಹೋಗೋ ವೇಳೆ

ಸೋತು ಹೋದೆ ನಲ್ಲೆ
ನೀನೆಲ್ಲೋ ಇದೋ ಅಲ್ಲೇ
ಇರಬಲ್ಲೆ ಜೊತೆಲೇ
ದೂರವಾಗೋ ಮಾತು ಇನ್ನೇಕೆ
ಕೂಗೋ ಆಸೆ ನೀನೇ ನನ್ನಾಕೆ
ಎಲ್ಲ ಸಮಯ ಸುಂದರ ಹೀಗೇ
ಆದೆ ನೋಡು

ಹಗಲಿರುಳೆನದೆ, ಅನುಕ್ಷಣ ಬಿಡದೆ

ಹಗಲಿರುಳೆನದೆ, ಅನುಕ್ಷಣ ಬಿಡದೆ 

ಹಿಂಬಾಲಿಸಲಿ ನಿನ್ನದೇ ನೆರಳು 
ಬಿಡುಗಡೆ ಇರದ ಸರಪಳಿಯೊಳಗೆ 
ಸಂಬಾಳಿಸು ನೀ ಹಿಡಿಯುತ ಬೆರಳು 
ಹೊಸಿಲಲಿ ನಿಂತು 
ಕೂಗಿದೆ ಪ್ರೇಮ 
ಆಲಿಸು ಒಡನೆ 
ಬಾಗಿಲ ತೆರೆದು 
ಬರಮಾಡಿಕೊ ನೀ ನಿನ್ನೆದೆಯೊಳಗೆ.... 

ಪರಿಚಯವೇ ಇರದೇ ಮುಂದೆಲ್ಲೋ 
ಬೆಸೆಯುವ ಕನಸ ಕಾಣೋಣ 
ಅಪರಿಮಿತವೀ ಭಾವನೆ ಕಣ್ಣೊಳಗೆ 
ಕಂಬನಿ ತಡೆಯಲು ಸಾಧ್ಯಾನಾ 
ಬಯಸಿ, ಬಯಸಿ ಸಿಲುಕಿದೆ ಇರುಳು 
ಹಣತೆ ಉರಿಸಿ ಬೆಳಕಿನ ಘಮಲು 
ಗಾಳಿ ಗಾಳಿ, ಓ ತಂಪು ಗಾಳಿ 
ಈ ಥರ ಅನುಭವ ಇನ್ನೆಲ್ಲಿ....  

ಅನಿಸಿದಾಗೆಲ್ಲ ಹೊಗಳುವೆ ನಿನ್ನ

ಅನಿಸಿದಾಗೆಲ್ಲ ಹೊಗಳುವೆ ನಿನ್ನ

ಸಹಿಸಿಕೋ ನನ್ನ
ಮೊದಲ ಪ್ರೇಮದ ತೊದಲು ಹೆಜ್ಜೆಯಿದು
ಹೂಡಲೇ ಬಾಣ
ಕಲಿಸುತ ಕಲಿಯೋ ಕಲೆಯಿದು ನೋಡು
ತಿದ್ದು ಬಾ ನನ್ನ
ಎದೆಯ ಮೇಲೊಂದು ಸಹಿಯ ಹಾಕುತ್ತ
ಕಸಿಯಲು ಪ್ರಾಣ...

ಹೇಳದೇ ಹೇಗೆ ತಿಳಿಯುವೆ ಹೇಳು
ಹೇಳಬೇಕಿರೋ ಆಸೆಯ
ಮುಗುಳು ನಗುವಲ್ಲಿ ಸೆಳೆಯುವ ಮೋಡಿ
ಪ್ರೀತಿಯ ಪರಿಭಾಷೆಯಾ?
ಕಡಲಿನಾಳಕ್ಕೆ ಇಳಿದು ಬಂದಂತೆ
ಮತ್ತೆ ಚಂದಿರನಂಗಳ
ಎಲ್ಲ ಸುಖವನ್ನು ಮೀರಿಸೋ ಸುಖವ
ಬಿಂಬಿಸಲಿ ಆ ಕಂಗಳು...

ತರಾತುರಿಯಲಿ ಪ್ರೀತಿ ಆದಾಗಲೇ

ತರಾತುರಿಯಲಿ ಪ್ರೀತಿ ಆದಾಗಲೇ

ಸರಾಗವಾಗಿಯೇ ಸೋಲುವೆ ನಿನ್ನಲೇ 
ವಿವರಿಸಿ ಹೇಳುವೆ ಬಂದರೆ ಕೂಡಲೇ 
ಕದ ತೆರೆಯುವೆ ಮನಸೊಳಗೆ ಕುಳಿತು ಬೆರೆತು ಹೋಗೆಯಾ...
ಮರೆತರೆ ನೆನಪಿಸು ನೆನ್ನೆಯ ರಾಗವ 
ನಿನ್ನದೇ ದನಿಯನು ತಾಳಿದೆ ನೀರವ 
ಪರಿಚಯ ಮಾಡಿಸು ಒಲಿಯುವ ಒಲವಿಗೆ 
ಅರೆ ಗಳಿಗೆಯು ನಿನ್ನ ತೊರೆದು ಬಾಳಲಾರೆ ಬಲ್ಲೆಯಾ..

ಎಲ್ಲ ಭಯವನು ನೀಗಿಸೋ ಗೆಳೆಯ 
ಮೆಲ್ಲ ಮೆಲ್ಲನೆ ತೆಕ್ಕೆಗೆ ಜಾರುವೆ 
ನೇರವಾಗಿಯೇ ಹೇಳುವೆ ವಿಷಯ 
ಸುತ್ತಿ ಬಳಸಲು ಗೋಜಲು ಅಲ್ಲವೆ  
ಬರದ ಬಾಳಿಗೆ 
ಬರೆದೆ ಸೋನೆಯ 
ಮುಗಿದ ಶಾಯಿಗೆ 
ತುಂಬಿದೆ ಪ್ರೀತಿಯ 
ಸರಿ, ಸರಿ, ನಡಿ ಇನ್ನೂ ಸಾಗೋದಿದೆ 
ಈ ದಾರಿ ನಮ್ಮನೇ ಎದುರು ನೋಡುತ್ತಿದೆ 
ಪದಗಳ ಪೋಣಿಸಿ ಕೊಡುವೆನು ನಿನಗೆ ನಾ 
ಗರಿಗೆದರಿಸುತಲೇ ತೊದಲು ಕವನ ಹಾಡಿ ಮುಗಿಸೆಯಾ..

ಮರೆತರೆ ನೆನಪಿಸು ನೆನ್ನೆಯ ರಾಗವ 
ನಿನ್ನದೇ ದನಿಯನು ತಾಳಿದೆ ನೀರವ 
ಪರಿಚಯ ನೀಡುವೆ ಒಲಿಯುವ ಒಲವಲಿ 
ಅರೆ ಗಳಿಗೆಯು ನಿನ್ನ ತೊರೆದು ಬಾಳಲಾರೆ ಬಲ್ಲೆಯಾ..

ಹೆಜ್ಜೆಯ ಸವೆಸೋದೇ

ಹೆಜ್ಜೆಯ ಸವೆಸೋದೇ 

ಹೆಜ್ಜೇನ ಸವಿದಂತೆ 
ಅಲ್ಲಲ್ಲಿ ಎಡವೋದೂ ಸಾಮನ್ಯವೇ 
ಯಾರಿಗೂ ಸ್ವಂತ ಅಲ್ಲ ಸಾಗೋ ದಾರಿಯು  

ಸಂಚಾರಿಯೇ ಮಾತನಾಡು 
ಸಂಚಾರಿಯೇ ಮಾತನಾಡು 
ಕಾದಂತೆ ಈ ದಾರಿ ನಮಗಾಗಿ 
ಬಾ ನಿನ್ನ ಜೊತೆಯನ್ನು ನೀಡು.. 

ಗುರಿಯನ್ನು ಬೆನ್ನತ್ತಿ 
ಸಾಗೋದೇ ಗೆಲುವಂತೆ 
ತಲುಪೋದು ಗೆಲುವಲ್ಲ 

ನಗುತಲೇ ಕೊಲ್ಲು ನೀ ನನ್ನನು

ನಗುತಲೇ ಕೊಲ್ಲು ನೀ ನನ್ನನು

ಅಳಿಸುತ ಬದುಕುಳಿಸಬೇಡ
ಒಲವಲಿ ತೇಲಿಸು ನನ್ನನು
ನೋವಲಿ ಮುಳುಗಿಸಲೇ ಬೇಡ
ಪ್ರಶ್ನೆಗೆ ಉತ್ತರ ನೀಡದೆ ಹೋದರೂ
ಆಲಿಸು ಮಾತನು ದೂರಾಗಬೇಡ...

ಬೆಳಕಿಲ್ಲದ ಮನೆಯ ಗೋಡೆಯ ಮೇಲೆ

ಬೆಳಕಿಲ್ಲದ ಮನೆಯ ಗೋಡೆಯ ಮೇಲೆ

ಒಂದು ಕಿಟಕಿಯ ಚಿತ್ರ ಬಿಡಿಸಿದೆ
ಕಿರಣಗಳು ನನ್ನ ಸೀಳುವಂತೆ ಹರಿದವು

ಚಾವಣಿಯ ಮೇಲೆ ಮೋಡಗಳ ಇಟ್ಟೆ
ಒಂದಕ್ಕೊಂದು ಘರ್ಷಿಸಿ ಸಿಡಿಲಬ್ಬರದಿ
ಭೋರ್ಗರೆದು ಬಂದು ನನ್ನ ತೋಯಿಸಿತು

ಒಂಟಿತನ ದೂರಾಗಿಸಲು ಹುಡುಗಿಯ ಬರೆದೆ
ಕೊಡಲೆಂದು ಉತ್ಪಲ ಬಳಿದೆ
ಇನ್ನಷ್ಟು ಅಂದವಾಗಿ ತಿದ್ದಬಹುದಿತ್ತೆಂದು
ತಗಾದೆಯಲ್ಲೇ ತೆಕ್ಕೆಗೆ ಜಾರಿದಳು

ಬಾಗಿಲ ಬರೆದು ಅದಕ್ಕೆ ಚಿಲಕವನ್ನೂ ಇಟ್ಟೆ
ಹೊರಗಿಂದ ಒಂದೇ ಸಮನೆ ತಟ್ಟಿದ ಸದ್ದು
ಮೌನ ಹೆದರಿ ಎದೆಯೊಳಗೆ ಅಡಗಿಕೊಂಡಿತು

ನನ್ನಷ್ಟಕ್ಕೆ ನಾನು ಇರಬಯಸಿದಾಗ
ಬೆಳಕು ನೆರಳಾಗಿ ಹಿಂಬಾಲಿಸಿತ್ತು
ಮೋಡ ಸಲುಗೆಯಿಂದ ನೆತ್ತಿ ಏರಿ ಕುಣಿಯಿತು

ಇನ್ನು ನನ್ನ ಹುಡುಗಿ
ಪ್ರಮಾದಗಳ ಬಗ್ಗೆ ಎಚ್ಚರಿಸುತ್ತ
ಬಾಗಿಲ ಬಡಿದವರ ಜೊತೆ ಸೇರಿಸಿಕೊಳ್ಳುವಂತೆಯೂ
ಸೈನ್ಯ ಕಟ್ಟಿ ಯುದ್ಧ ಸಾರುವಂತೆಯೂ ಪೀಡಿಸಿದಳು

ಬಣ್ಣದ ಚಿತ್ರಗಳ ಸುಣ್ಣದ ನೀರಲ್ಲಿ ಶುಭ್ರವಾಗಿಸಿ
ಆವರಿಸಿದ ಕತ್ತಲಲ್ಲಿ ಮತ್ತೆ ಪುನರ್ಜೀವ ಪಡೆದೆ
ಧ್ಯಾನಕ್ಕೆ ಕುಳಿತು ಮತ್ತೂ ಆಳಕ್ಕೆ ತಲುಪಿದೆ...

ಊರುಗೋಲು ಮಾತನಾಡುತ್ತಿದೆ

ಊರುಗೋಲು ಮಾತನಾಡುತ್ತಿದೆ

ತನ್ನ ಸಹಚರನ ಸ್ಪರ್ಶ ಬಯಸಿ
ಯಾರಿಗೂ ಕೇಳದ ದನಿಯಲ್ಲಿ
ಯಾರಾದರೂ ಸಂತೈಸಿಯಾರು 
ಎಂಬ ಹಪಹಪಿಯಲ್ಲಿ
ಸುತ್ತಿದ ಚೀಲದೊಳಗೆ ಬಿಮ್ಮನೆ

ಭಾರ ಹೆರೆಸಿದವ ಈಗ
ಭಾರವೇ ಇಲ್ಲದ ಆತ್ಮವಾಗಿದ್ದಾನೆ
ದೇವರೇ ಆಗಿಬಿಟ್ಟಿದ್ದಾನೆ
ಇನ್ನು ಅವನ ಪಳೆಯುಳಿಕೆಗಳು
ಬಯಸಿದವರಲ್ಲಿ ಹಂಚಿಕೆಯಾಗಿ
ಅವರವರ ಕಪಾಟಿನಲ್ಲಿ ಭದ್ರವಾಗಿವೆ
ಈ ಊರುಗೋಲೊಂದನ್ನು ಬಿಟ್ಟು

ಯಾರ ಭುಜಗಳೂ ಸದ್ಯಕ್ಕೆ
ಕುಸಿದು ಬಾಗಿದಂತೆ ಕಂಡಿಲ್ಲ
ಆತ ಯಾರ ಮೇಲೂ ಹೊರೆಯಾಗಿಸಿಲ್ಲ;
ಬಾಯಿ ಬಿಟ್ಟ ಹಿಮ್ಮಡಿ
ಚಪ್ಪಲಿಯನ್ನು ತಿಂದಷ್ಟು 
ನೆಲವೂ ಸವೆಸಿರಲಿಲ್ಲ
ಇಟ್ಟ ಹೆಜ್ಜೆ ತೂಕವಾಗಿರುತ್ತಿತ್ತಲ್ಲದೆ
ಎಲ್ಲೂ ಹುಗುರಾದವನಲ್ಲ

ಸದಾ ಎಲ್ಲರನ್ನೂ ಬೆನ್ನಿಗೆ ಕಟ್ಟಿಕೊಂಡು
ದಾರಿಯಾಗುತ್ತಿದ್ದವನ ದಾರಿಗೆ
ಬುಡ್ಡಿ ದೀಪದ ಬೆಳಕಾಗಿ
ಜಾಗರೂಕತೆಯಿಂದ ನಡೆಸಿ
ಮುದಾಳತ್ವ ವಹಿಸಿಕೊಂಡ ಕೋಲು
ಕರ್ತವ್ಯ ನಿರ್ವಹಿಸುವಾಗ
ಹೊಟ್ಟೆ ಕಿಚ್ಚು ಪಟ್ಟಿದ್ದೆ.. 

ಹಿಡಿಯ ಭಾಗಕ್ಕೆ 
ಕುಸುರಿ ಮಾಡಿಸಿ ಇಡೋಣ,
ನಾಜೂಕು ನೆಲದ ಮೇಲೆ 
ಕೋಲಿನ ಅಂಗಾಲು ಜಾರದಂತೆ 
ರಬ್ಬರ್ ತುಂಡು ಜಡಿಯೋಣ,
ಮಕ್ಕಳೆಲ್ಲರ ಹೆಸರು ಕೆತ್ತಿಸಿ 
ತಾತನಿಗೆ ಉಡುಗೊರೆಯಾಗಿ ಕೊಡೋಣ;
ಇದು ನೆನ್ನೆ ಬಿದ್ದ ಕನಸು, ಎಂದಿನಂತೆ.. 

ಊರುಗೋಲು ಸೋಲೊಪ್ಪುವುದಿಲ್ಲ 
ತನ್ನ ಯಾತ್ರೆ ಎಷ್ಟೇ ಸಾಗಿದರೂ 
ತೃಪ್ತಿಯಂತೂ ಸಿಗುವುದೇ ಇಲ್ಲ 
ಇಂದು ಬೇಡವಾದದ್ದು ನಾಳೆ 
ನಮ್ಮಲ್ಲೇ ಯಾರಿಗಾದರೂ ಬೇಕಾಗಬಹುದು 
ಸವೆದ ಮಂಡಿಯ ಚಿಪ್ಪಿಗೆ 
ಜೊತೆಗಾರನೊಬ್ಬ ಬೇಕಿರುತ್ತಾನೆ 
ಬಂದೇ ಬರುವುದು ಕಾಲ
ಹುಡುಕಿಕೊಂಡು ಕೋಲ...

ಹೋಗಲೇ ಬೇಕೇ ನೀನು

ಹೋಗಲೇ ಬೇಕೇ ನೀನು 

ಇಷ್ಟು ಬೇಗ ದೂರ 
ಹೇಳಲೇ ಬೇಕು ನಾನು 
ಮನದ ಆಸೆ ಪೂರಾ 
ಇರಬಾರದೇ ಚೂರು ಸಮಯ 
ಇರೋದಿನ್ನುಚೂರೇ ವಿಷಯ 
ಒಲವ ಸುಳಿಯ ದಾಟಿ ಬಿಡುವೆ 
ನಿನ್ನ ನೆರವು ಇರಲು.. 

ಏಕ ನಾದ ತಂತಿಗೆ ಅನೇಕ ತವಕ

ಏಕ ನಾದ ತಂತಿಗೆ ಅನೇಕ ತವಕ 

ಮುಟ್ಟುವ ಬೆರಳು ಒತ್ತುವಲ್ಲಿ ಒತ್ತಿ 
ಮೀಟುವಾಗ ಮೋಹಕ ಗಾಳಿಯಲ್ಲಿ 
ಮೈ ಮುರಿವ ಸದ್ದು, ಮೌನ ಮುರಿದು 

ಬೆರಳು ಕೊಂಚ ಆಚೆ ಈಚೆ ಆದರೂ 
ಸ್ವರ ಮುನಿಸಿಕೊಂಡಂತೆ 
ಅದೇ ಸುಸ್ವರದ ಬಿಡುಗಡೆಗೆ 
ಆವರಣವೇ ಮೈ ನೆರೆದಂತೆ 

ತನ್ನ ಎರಡೂ ಬದಿಯಿಂದ ಬಂಧಿಸಿ  
ಜೋತಾಡದಂತೆ ಬಿಗಿದ ತಂತಿಗೆ 
ತರಂಗಗಳೇ ಆಡು ನುಡಿ 

ನೆನ್ನೆಗೆ ಯಾವುದೇ ಬಯಕೆಗಳ ಜೊತೆಕೊಡಲಿಲ್ಲ

ನೆನ್ನೆಗೆ ಯಾವುದೇ ಬಯಕೆಗಳ ಜೊತೆಕೊಡಲಿಲ್ಲ  

ಇಂದೇಕೋ ನನ್ನನ್ನು ತಾ ಆವರಿಸುತಿವೆ 
ನಾಳೆಗೆ ಯಾವುದೇ ಕನಸುಗಳ ಬರೆದಿಡಲಿಲ್ಲ 
ಇಂದೇಕೋ ನನ್ನ ಈ ಪರಿ ಕಾಡುತಿವೆ  
ಜೊತೆ ನಡೆಯುವ ಕೌತುಕದಲ್ಲಿ 
ಕತೆಯಾಗಿಸಿ ಪ್ರತಿ ಹೆಜ್ಜೆಯನು 
ಸಾಗುವುದೇ ಸುಂದರ ಜೇವನ

ಯಾರೊಂದಿಗೂ ನಾ ಹೇಳದ

 ಯಾರೊಂದಿಗೂ ನಾ ಹೇಳದ (೨)

ನವಿರಾದ ಕತೆಯನ್ನು ನಿನಗೇ ಹೇಳುವೆ
ಒಂದೊಂದು ತಿರುವಲ್ಲೂ ಜೊತೆಗೇ ನಿಲ್ಲುವೆ 
ಅಂದಾಜಿಗೂ ನೀ ಮೀರಿದ 
ಅನುರಾಗ ಕೊಡುವಾಗ ಬೊಗಸೆ ಬೇಡುವೆ 
ನೆರವಾಗು ನನಗೀಗ ಕರಗಿ ನೋಡುವೆ  
ನೀನೇ ಹೊಣೆಯಾಗಬೇಕು ಬದಲಾದರೆ ಜೀವನ 
ನಿನ್ನ ನಗುವೊಂದೇ ಸಾಕು ಖುಷಿಯೆಲ್ಲಕೂ ಕಾರಣ 
ನವಿರಾದ ಕತೆಯನ್ನು ಜೊತೆಗೇ ಗೀಚುವ 
ಒಂದೊಂದು ತಿರುವಲ್ಲೂ ಜೊತೆಗೇ ನಿಲ್ಲುವ

ನೆರಳಾಗು ಬಿಡದಂತೆ ಒಲವೇ 
ಕಡಲಾಗು ಮಳೆಯಾಗಿ ಬರುವೆ 
ಹೂವಾಗು ಮನದಲ್ಲಿ ಅರಳುತ್ತಾ ಚಿರವಾಗಿ ನಗುವಾಗಿ 
ಯಾರಲ್ಲೂ ಕೇಳದೆ 

ಯುದ್ಧ ಮುಗಿದರೆ ನಿರಾಳ ಭಾವವೇ?

ಯುದ್ಧ ಮುಗಿದರೆ ನಿರಾಳ ಭಾವವೇ?

ಗೆದ್ದು ಬೀಗಿದವರ ರಕ್ಕಸತನಕ್ಕೆ
ಸೋತವರ ಹಾದಿಯಲ್ಲಿ ಹೆಪ್ಪುಗಟ್ಟಿದ ನೆತ್ತರು
ಯಾವ ಶವದ್ದು ಯಾವ ಬಣ್ಣ? 
ಗುರುತಿಸಲು ಕೊಂದವನೇ ಬರಬೇಕು,
ಅವನೂ ಮುಂದೆಲ್ಲೋ ಸತ್ತು ಬಿದ್ದಿರಬೇಕು..

ಇದೇ ಸೋಲು ಅಥವ ಗೆಲುವು ಎಂದು
ಗೆರೆ ಹಾಕಿ ವಿಂಗಡಿಸಲಾಗದು
ಕೆಲವೆಡೆ ಗೆದ್ದವರೇ ಸೋತಿರಬಹುದು
ಸೋತವರೂ ಗೆದ್ದಿರಬಹುದು
ಬದುಕಿ ಉಳಿದವರ ಬಂದೂಕು
ಒಂದೂ ಗುಂಡನ್ನು ಹಾರಿಸಿರದಿರಬಹುದು
ಸತ್ತವರಲ್ಲಿ ಎಲ್ಲ ಗುಂಡುಗಳು 
ಖಾಲಿಯಾಗಿರಬಹುದು

ಕಿಚ್ಚು ಹಚ್ಚಿದವರೇ
ಕೈ ಚಾಚಲು ಕಾಯಬೇಕೇ?
ಹಾಗೂ ಚಾಚಿದರೆ ನಂಬಬೇಕೆ?
ನಂಬಿದರೆ ಎಷ್ಟು ದೂರ?
ದೂರ ಸಾಗಿದರೆ ಲಾಭ ಯಾರಿಗೆ?
ಲಾಭದಲ್ಲಿ ಯಾರಿಗೆಷ್ಟು ಪಾಲು?
ಫ಼ಾರ್ಮುಲಾ ಹಾಕಿ
ನಕ್ಷೆ ಗೀಚುವುದು ಸುಲಭವಲ್ಲ

ಸೋತವರ ಮನೆಗಳ ನೋಡಿ
ಒಂದು ಹೊತ್ತಿನ ತುತ್ತಿನ ಕಷ್ಟವನ್ನು;
ಇನ್ನು ಗೆದ್ದೆವೆಂದುಕೊಂಡವರ ‌ಕತೆ ಭಿನ್ನವಲ್ಲ
ಆ ದಿನದ ಮಟ್ಟಿಗೆ ಹಾರ-ತುರಾಯಿ
ಬೂಂದಿ ಮಿಠಾಯಿ, ಜೈ ಕಾರ
ತಮಟೆ ಏಟು, ಬ್ಯಾಂಡ್ ಸೆಟ್ಟು
ಮರು ದಿನ ಅದೇ ಬಂಜರು ನೆಲ
ಹಣೆಯ ಗೆರೆ, ನೇಗಿಲ ಪಾಡು..

ಕದನ ಮನುಷ್ಯತ್ವದ ಎದೆ ಇರಿದು
ಧ್ವಜ ಹಾರಿಸಿದಂತೆ
ವಿರಾಮ ಘೋಷಣೆಯಾಗಿ ಧ್ವಜ ಇಳಿಸಿದರೂ
ಆದ ಗಾಯಕ್ಕೆ ಮುಲಾಮಿಲ್ಲ;
ಯಾರೋ ಕೈ ಕುಲುಕುತ್ತಾರೆ 
ಮತ್ತಿನ್ನಾರೋ ಮಣ್ಣು ಮುಕ್ಕುತ್ತಾರೆ 

ಬಂದೂಕಿಗೆ ಯಾವ ದೇಶ ಭಕ್ತಿ?
ಎಲ್ಲೋ ರೂಪ ಪಡೆದು ಇನ್ನೆಲ್ಲೋ ಬಿಕರಿಯಾದವು 
ನೊಂದವರ ಕಣ್ಣೀರ ಬೆಲೆಗೆ;
ಯಾವ ಗುಂಡಿನ ಮೇಲೆ ಯಾರ ಹೆಸರು? 
ಸೂಟು ಹಾಕಿದವರು ನಿರ್ಧರಿಸುತ್ತಾರೆ 
ಅಣು ಬಾಂಬಿನ ಟ್ರಿಗ್ಗರ್ ಮೇಲೆ ಬೊಟ್ಟಿಟ್ಟು   

ಇತ್ತ ಸ್ಪೋಟಕ್ಕೆ ಸಿಕ್ಕಿ ಛಿದ್ರವಾದವರಲ್ಲಿ ಚಿಂತೆ 
"ಕಾಗದ ತಲುಪಿತೋ ಇಲ್ವೋ"
"ಪಿಂಚಣಿ ಸಿಗುತ್ತೋ ಇಲ್ವೋ"... 

ಹೇಳದೆ‌ ಹೋಗಬೇಡ ಇನ್ನೂ ದೂರ

ಹೇಳದೆ‌ ಹೋಗಬೇಡ ಇನ್ನೂ ದೂರ

ನಾ ಒಂಟಿಯಾಗಿ ಏನ ಸಾಧಿಸಲಿ?
ನೀಡದೆ ಯಾವುದೇ ಕಾರಣವನ್ನು
ಕಣ್ಣೀರ ನಾನು ಹೇಗೆ ತಡೆದಿಡಲಿ?
ನೀ ಇಲ್ಲದೆ ಅಪೂರ್ಣ ಜೀವನ (೨)
ನಿಧಾನವಾಗಿ ಹಾರಿಹೊರಟ ಪ್ರಾಣವಾದೆ ನಾ

ನಾಜೂಕು ನನ್ನ ಹೃದಯ
ನಿನ್ನನ್ನೇ ಬೇಡುತಿರಲು
ನೀನಿಲ್ಲವೆಂಬ ನಿಜವ ತಾಳಬಹುದೇ
ಮೋಸಕ್ಕೆ ಯಾವ ಕೊನೆಯ
ನೀ ಇಡಲು ಕಾಯುತಿರುವೆ
ಈ ಜೀವ ಅಲ್ಲಿ ತನಕ ಉಳಿಯಬಹುದೇ
ನಿರಾಸೆಯು ಇದೇಕೋ ದಾರುಣ (೨)
ನಿಧಾನವಾಗಿ ಹಾರಿಹೊರಟ ಪ್ರಾಣವಾದೆ ನಾ

ಬೆನ್ನಲ್ಲಿ ಚೂರಿಯಾದೆ
ಮಿಂಚಂತೆ ಮಾಯವಾದೆ 
ನೋವೆಂಬ ಪಾಠವಾದೆ ಏಕೆ ಹೇಳು?
ಹೆಚ್ಚೇನೂ ಕೇಳಲಾರೆ 
ಕನಸಾಗಿ ಬಂದು ನೋಡು
ನಂಜನ್ನು ನೀಡಿ ಹೋಗು ಅಳಿಸೋ ಬದಲು 
ಜವಾಬಿಗೆ ಕೂಗುವೆ ನಿನ್ನೇ ನಾ 
ನಿಧಾನವಾಗಿ ಹಾರಿಹೊರಟ ಪ್ರಾಣವಾದೆ ನಾ

ಸುಪ್ತವಾದಾಗ ನೀ ನನ್ನ ಮನದನ್ನೆಯೇ

ಸುಪ್ತವಾದಾಗ ನೀ ನನ್ನ ಮನದನ್ನೆಯೇ 

ಎಲ್ಲೇ ಹುಡುಕಾಡಲಿ ಕಾಣುವೆ ನಿನ್ನನೇ 
ಎಲ್ಲ ಸುಳ್ಳೆಂಬ ಅನುಮಾನವು ಸಹಜವೇ 
ಸೀಳುತ ಎದೆಯನು ತೋರುವೆ ನಿನ್ನನೇ

ನಂಟು ಬೆಸೆವಾಗ ನೀ ನಾಚಿ ಕೆಂಪಾಗುವೆ 
ನೋಡು ಗೋಧೂಳಿಯ ಬಣ್ಣಕೆ ಹೋಲಿಕೆ 
ಯಾವ ಹೂವಾದರೂ ನಿನಗೆ ಶರಣಾಗಿದೆ 
ಉದುರೋ ಎಲೆಯಾದರೂ ಬೇಡಿದೆ ನಿನ್ನನೇ

ತಂತಿ ಹಿಗ್ಗುತ್ತಾ ಬಿಗಿಯಾಗಿದೆ ನೋಡಿದೋ 
ಮೀಟತಾ ಹೊರಟರೆ ಈಗ ನಿನ್ನಿಷ್ಟಕೆ 
ಯಾವ ಸ್ವರವಾದರೂ ಕೂರದೇ ಶ್ರುತಿಯಲಿ  
ಹಾಡು ಹೊಸೆವಾಟಕೆ ಕೂಗಿವೆ ನಿನ್ನನೇ

ನಲ್ಲೆ ನಡುದಾರಿಯ ಬಿಟ್ಟು ಸರಿದಾಗ ನೀ
ದಾರಿಯು ಅಲ್ಲಿಗೇ ಕೊನೆ ಆದಂತಿದೆ
ಮುಂದೆ ನೆಟ್ಟಂಥ ಮೈಲಿಗಲ್ಲುಗಳೆಲ್ಲವೂ
ಗುರುತಿಗೆ ಎದುರು ನೋಡುತ್ತಿವೆ ನಿನ್ನನೇ

ಹಬ್ಬವು ಹಬ್ಬವೇ ನೀನು ಇರದಿದ್ದರೆ
ಬೆಲ್ಲದ ಹೂರಣ ಕೂಡ ಕಹಿಯಾಗಿದೆ
ಬಾಡಿದ ತೋರಣ ಹೊತ್ತ ಮನ ಬಾಗಿಲು
ಇಟ್ಟ ರಂಗೋಲಿಯೂ ಬಿಡಿಸಿದೆ ನಿನ್ನನೇ

ಬಂಧಿಖಾನೆಯಲಿ ಹೆಚ್ಚು ಖುಷಿ ಪಟ್ಟವ 
ಬಿಡುಗಡೆ ಹೊಂದಲು ಏಕೋ ಭಯವಾಗಿದೆ  
ಮಾಡದ ತಪ್ಪಿಗೆ ಶಿಕ್ಷೆಯ ನೀಡು ನೀ 
ನಾನೇ ಶರಣಾಗುವೆ ಬಾಚುತ ನಿನ್ನನೇ  

ಬಿಡುಗಡೆಗೆ ಕಾದಿರುವೆ ಬಂಧನವು ಸಾಕಾಗಿ

ಬಿಡುಗಡೆಗೆ ಕಾದಿರುವೆ ಬಂಧನವು ಸಾಕಾಗಿ

ನೀಡಲಾದರೆ ಅದುವೇ ಮುಯ್ಯಿ ನನಗೆ
ಬೇಡಿಕೆ ಏನಿಲ್ಲ ನಿನ್ನೆಲ್ಲ ನೆನಪನ್ನು
ಅಳಿಸಿಬಿಡು ಸಿಕ್ಕಂತೆ ಜೋರು ಮಳೆಗೆ

ನಿನ್ನ ಎರಡಂತಸ್ತು ಎಟುಕಲಾರದು ನೋಡು
ನಾನು ತಳಪಾಯದಲಿ ಹೂತ ಬೇರು
ಆ ಮೊದಲ ಪರಿಚಯವ ಮರೆತು ಹೇಳು
ನಿನ್ನ ಮುಗಿದ ಅಧ್ಯಾಯದಲಿ ನಾನು ಯಾರು?

ನೀ ಸುಟ್ಟ ಹಾಳೆಗಳ ಘಾಟು ತಟ್ಟದೆ ಇರಲಿ
ಎಚ್ಚರಗೊಳ್ಳುವುದು ಸತ್ತ ಸತ್ವ
ಗಾಯಗೊಂಡ ಬೆರಳು ಏನ ಬರೆದರೂ ಸಹಿತ
ಮೂಡಿ ಬರುವುದು ಅಲ್ಲಿ ಒಂದು ತತ್ವ

ಇಟ್ಟ ಹೆಜ್ಜೆಯ ಹಾಗೆ ಹಿಂದಿಡದಿರು 
ಮತ್ತೆ ತಪ್ಪುವುದು ಈ ದೂರದ ಮಾಪನ
ಹತ್ತಿರವಾಗುವ ಪ್ರಯತ್ನಗಳ ಕೊಲ್ಲೋಣ
ಒಪ್ಪಂದ ಮುರಿದರೆ ವ್ಯಥೆ ಉಲ್ಬಣ

ಈ ಮೂರು ದಿನಗಳ ಹೀಗೆ ಕಳೆದುಬಿಡುವ 
ಗುರುತುಗಳ ಮರೆಸೋಕೆ ನೆನ್ನೆಯನು ವ್ಯಯಿಸಿ 
ನೆನ್ನೆಯ ನಷ್ಟಕ್ಕೆ ಪರಿಹಾರವಿಂದು 
ಇಂದಿನ ಅತೃಪ್ತಿಗೆ ಹೆಚ್ಚುವರಿ ನಾಳೆ

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...