ಭಾವವೇಣಿ


ಆ ಕಣ್ಣಿಗೆ ಸೋತ ಬಗೆಯ ಹೇಗೆಂದು ಬಣ್ಣಿಸಲಿ
ವಿಸ್ಮಯತೆಯ ಉತ್ತುಂಗವ ಮುಟ್ಟಿ ಬಂದೆ ಅಂದು
ಎಲ್ಲವ ಮರೆತಂತಾಗಿದೆ ಹಾಗೆ ಕಣ್ಣು ಮುಚ್ಚಲಿ
ನೂರು ಭಾವಗಳನು ಮೀರಿ ಮಿನುಗಿತೊಂದು ಬಿಂದು

ನುಡಿಗಳ ಗಮನಿಸುತ್ತ ಗಮಕಗಳ ಕಲಿತುಕೊಂಡೆ
ರೆಪ್ಪೆ ಬಡಿತಕ್ಕೆ ಮೂಡಿತೆನಗೆ ತಾಳದರಿವು
ಹುಡುಕಾಡಿದ ನೋಟ ಹಿಡಿದು ಸ್ವರಗಳ ಪರಿಚಯವಾಗಿ 
ಹೊಮ್ಮಿ ಬಂದ ಹೊಸ ಹಾಡಿಗೆ ಸಿಕ್ಕಾಯಿತು ತಿರುವು 

ಆ ಸ್ಪೋಟಕ ನೋಟ ಬಾಣ ಒಂದರ-ಹಿಂದೊಂದರಂತೆ
ಮನಸೊಳಗೆ ನಾಟಿ ಶರಪಂಜರ ಗಿಳಿ ನಾನಾದೆ
ಸಿಕ್ಕಿ ಬಿದ್ದ ನನ್ನ ಕಡೆಗೆ ಮತ್ತೆ ಆಕೆ ತಿರುಗದಿರಲು
ನೀರಿನಿಂದ ಹೊರ ತೆಗೆದ ಒದ್ದಾಡಿದ ಮೀನಾದೆ 

ಆಕಾಶದ ನೀಲಿ ಅವಳ ಕಣ್ಣುಗಳ ಹೋಲುತಿತ್ತು 
ನಡುವೆ ಅಡ್ಡಿ ಪಡಿಸಿದ ಮುಂಗುರುಳೆ ಕರಿ ಮೋಡ
ಚಾಚಿದಷ್ಟೂ ಬಾಚಬಹುದಾದ ಆ ಮುದ್ದು ಮುಖ
ಜಾಗವಿರದೆ ಉಕ್ಕಿ ಬರುತಿತ್ತು ನಗೆ ಕೂಡ

ಹಂಸ ನಡೆಯ ಕಾಣದವಗೆ ಹಿಂಸೆಯಾಯಿತವಳ ನಡೆ
ಭಾವುಕ ಕವಿಗಳಿಗೆ ಆಕೆ ಪದಗಳ ಮಳೆಗಾಲ 
ಜೀವಂತಿಕೆ ಪಡೆದುಕೊಂಡ ಶಿಲೆಗಳೂ ನಾಚುತಾವೆ
ಶಿಲೆಗಲಾಗೆ ಉಳಿಯೆ ಇಚ್ಚಿಸುತ್ತ ಛಿರಕಾಲ

ಪಶ್ಚಿಮ ಪರ್ವತದ ಹಿಂದೆ ಅವೆತು ಮಾಯವಾದ ರವಿ
ಬೆಳದಿಂಗಳ ಹೆಣ್ಣ ರೂಪ ಧರಿಸೆ ಆಜ್ಞೆ ಮಾಡಿದ
ವ್ಯಾಕರ್ಣಕೆ ಇದ್ದ ಸೋತ್ತೆಲ್ಲ ಖಾಲಿಯಾದರು
ಬಣ್ಣಿಸುವ ಕಾವ್ಯ ಸಿರಿಯ ನನಗೆ ಮಾತ್ರ ನೀಡಿದ......

                                                  --ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩