Saturday 18 August 2012

ಕಾರ್ಮಿಕ - ನಿಜ ಶ್ರಮಿಕ















ದುಡಿಮೆ ಬೆವರು ಹರಿಯಿತಲ್ಲಿ, ನೆತ್ತಿಯಿಂದ ಕತ್ತಿಗೆ
ಹರಿದ ಅರಿವು ಇರದೆ ಅಲ್ಲಿ, ವೋರೆಸಿಕೊಂಡು ಮೆಲ್ಲಗೆ
ಇಟ್ಟ ತೊಟ್ಟು ಮಣ್ಣಿನೊಳಗೆ ಐಕ್ಯವಾಯ್ತು ಆದರು
ಮುಂದುವರೆಯಿತಲ್ಲಿ ಹಿಂದೆ ಸಾಲು, ಸಾಲು ಉರಿಬೇವರು

ಚಿಂತಿಸಲು ಇರದ ಸಮಯ ನುಂಗಿ ಹಾಕಿ ಬದುಕನು
ಸದಾ ತಾ ಉರಿದು ಕರಗಿ ಪರರಿಗಿಟ್ಟು ಬೆಳಕನು
ಕೋಪವ ವಿಕೋಪಿಸದೆ ಮತ್ತಷ್ಟು ಹುರುಪು ತುಂಬಿ
ರೂಪವಿರದ ಬಾಳ ನಿರೂಪಿಸುವ ಯತ್ನ ಸಾಗಿದೆ

ಕೊಟ್ಟ ಕೈ ಮಾಸಿತ್ತು, ಬಿಟ್ಟ ಗುರುತು ಸೂಸಿತ್ತು-
-ಕೆಸರೊಳಗಿನ ಕಮಲ ಸೂಸಿದಂತೆ ನಗೆಯ ಕಂಪು
ಬಿಡಿಗಾಸಿಗೆ ದಿನಗಟ್ಟಲೆ ಸತತ ನಿರಾಯಾಸ ಯತ್ನ
ಒಬ್ಬೊಬ್ಬರ ಕಲೆಯಲ್ಲೂ ತಮ್ಮದೇ ಛಾಪು

ಇಳಿ ಗಗನದ ಅರಿವಿಲ್ಲ, ಉರಿ ಬಿಸಿಲಿನ ಪರಿವಿಲ್ಲ
ಹಸಿವಿಗಾಗಿ ನುಂಗಲಾಯ್ತು ನಾಲ್ಕು ತುತ್ತು ಅನ್ನ
ಅದೇ ಹಳೆ ಬಡತನ, ಮನೆಗಿಲ್ಲ ಬಳಿದ ಸುಣ್ಣ
ಹಬ್ಬ ಮನಸಿಗಾಗಿದ್ದರೆ ಮನೆಯೆಷ್ಟು ಚನ್ನ

ಬೆಳೆದು ಮುಂಬಾಗಿಲಲ್ಲಿ  ತುಳಸಿ ದಳದ ಚಿಗುರು
ದಿನಕೆರಡು ಬಾರಿ ಹೆಂಗಸರ ಸುತ್ತು ಮೂರು
ಸೊಂಪಾಗಿ ಬೆಳೆದುಕೊಂತು, ಹಾಲು ತೀರ್ಥ ಹೀರಿ
ತೋರಲಿಲ್ಲ ಲಕುಮಿ ಅಲ್ಲಿ ಚಿಲ್ಲರೆಯನು ಮೀರಿ

ಇದು ಕಾರ್ಮಿಕನ ಒಂದು ಅಸಹಾಯಕ ನೊಂದ ಮುಖ
ಆಗಾಗ ಮಂದಹಾಸ ಮೂಡುವುದು ನೆಪಮಾತ್ರಕ
ತೊಳೆದ ಕೈ ಮಸಿಯಾಯ್ತು ದಿನ ಬೆಳಗಾಗುವ ವೇಳೆ
ರಾತ್ರಿಗಳು ಕಳೆದವು ಬರಿ ಸಾಲದ ಬಡ್ತಿಯಲ್ಲೇ

ಸೆರೆಯಿರದ ಬಿಡುಗಡೆಗೆ ಪ್ರತಿನಿತ್ಯದ ಹೋರಾಟ
ಸಿಕ್ಕ ಎಳ್ಳಷ್ಟು ಫಲಕೆ ಆಕಾಶಕೆ ಹಾರಾಟ
ಆದ ನೋವಿಗೆ ಮತ್ತೊಂದು ನೋವು ನೀಡಿ ಸಾಂತ್ವಾನ
ಕಣ್ಣು ಮುಚ್ಚಿಕೊಂಡರೂ ಮುಗಿಯದಲ್ಲಿ ಜೀವನ......

                                                         --ರತ್ನಸುತ



1 comment:

  1. nalakkane chaupadi hagu idhane chaupadi sooooper sisya.....
    thanks for one more wonderful... word bliss

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...