Sunday, 3 March 2019

ಕತೆಯೊಂದ ಹೇಳುವೆ ಎದೆಗೊರಗು

ಕತೆಯೊಂದ ಹೇಳುವೆ ಎದೆಗೊರಗು
ಮಾತಿಗೆ ಕಾಯದಿರು ಕಿವಿಗೊಡು ಉಸಿರಿಗೆ
ಬಿಡಿಸಿ ಹೇಳುವುದು ಸಮಯಕನುಸಾರ
ಭಾವಕನುಸಾರ, ಮೋಹಕನುಸಾರ


ಭಯ ಹುಟ್ಟಿಸುವುದು ಹಾಗೆ
ಹಿಂದೆಯೇ ನೇವರಿಸುವ ಕತೆಯೊಂದು
ಅಳು ತರಿಸುವುದು ಸಹಜವಾಗಿ
ಜೊತೆಗೆ ಸಾಂತ್ವನದ ಜೋಳಿಗೆ ಹಿಡಿದು



ಎಷ್ಟೋ ಕೊನೆಗಳು ಕೊನರುವವು
ನಾವಾಗೇ ಮುಟ್ಟಿದರೆ ತಾನೆ ಕೊನೆ
ಯಾವ ಕತೆಗೂ ನೀ ಕೊಡಲೊಲ್ಲೆ ಹೆಸರ
ಉಸಿರಲ್ಲೇ ಹೇಳು ನಿನ್ನದಾವುದು?



ತೂಕಡಿಕೆ ತರಿಸಿದ ಜೋಗುಳದ ಕತೆಯ
ಕದ್ದು ನಿನ್ನ ನೆನಪ ಸಂಚಿಗಿಳಿಸಿಕೊಂಡೆ
ಉನ್ಮಾದ ಲೇಪಿಸಿದ ತುಂಟ ಕತೆಯೊದಕ್ಕೆ
ಎದೆ ಪರಚಿ ಗಾಯವನೇ ಮಾಡಿಬಿಟ್ಟೆ



ಹೀಗೇ ಒಂದಾದಮೇಲೊಂದು ಉರುಳುರುಳಿ
ಹಗಲುಗಳು ಓಡಿ, ಇರುಳುಗಳು ಕೂಡಿ
ದೀಪ ಬೆಳಗಿಕೊಂಡು ಸಾಲು ಸಂಚಿಕೆಗಳು
ಮುಗಿಯಿತೆನ್ನುವ ಹೊತ್ತಿಗೆ ಏನೂ ನೆನಪಿಲ್ಲ



ನೆನಪಿರುವುದಿಷ್ಟೇ
ನಾ ನಿನಗೆ ಒಲಿದಿದ್ದು
ನೀ ನನಗೆ ಒರಗಿದ್ದು
ಮತ್ತು ನಾವೊಂದು ಸುಂದರ ಕತೆಯಾಗಿದ್ದು...

ದಿಕ್ಕಿಲ್ಲದ ಗಾಳಿ ಯಾರ ಪರವಾಗಿದೆ?

ದಿಕ್ಕಿಲ್ಲದ ಗಾಳಿ ಯಾರ ಪರವಾಗಿದೆ?
ಈ ಪರಿ ನನ್ನ ಮುಂದಕ್ಕೆ ನೂಕಿ
ತಾನೇ ಅಡ್ಡಿಪಡಿಸುತ್ತಿದೆ
ವಿಚಿತ್ರವಾದ ನಡುವಳಿಕೆಯಲ್ಲೇ
ಎಲ್ಲರ ಮುಟ್ಟುತ್ತ-ತಟ್ಟುತ್ತ-ಹಾಯುತ್ತ

ಎಲ್ಲರೊಳಗೊಳಗೊಂಡೂ ಬೇರಾದಂತೆ..



ಅದೆಷ್ಟೋ ತುಟಿಯ ವಿಳಾಸರಹಿತ ಚುಂಬನಗಳ
ತನ್ನೊಳಗೆ ಬೆಚ್ಚಗೆ ಬಚ್ಚಿಟ್ಟುಕೊಂಡು
ಯರದ್ದನ್ನೋ ಮತ್ತಾರಿಗೋ ಸಿಕ್ಕಿಸಿ
ಇನ್ನೊಮ್ಮೆ ಸರಿಯಾದವರಿಗೇ ಸೇರಿಸಿ
ತನ್ನಿಷ್ಟಕ್ಕೆ ದಿಕ್ಕು, ವೇಗ, ಆಕಾರ ಪಡೆದು
ಈಗಷ್ಟೇ ನನ್ನನ್ನೂ ದಿಕ್ಕರಿಸಿಯಾಗಿತ್ತು



ಮಾತನಾಡಿದರೆ ಗಾಳಿಮಾತು
ಸುಮ್ಮನಿದ್ದರೆ ಹಾಳು ಸಂಜೆ
ಬಿಗಿದಿಟ್ಟರೆ ಎದೆಗಪ್ಪಿ
ಕದ ತೆರೆದರೆ ಬರಲೊಪ್ಪಿ
ಕೆಡವಿಬಿಟ್ಟು ನುಸುಳುವುದು ಮತ್ತೆ
ಎಡವಿದಂತೆ ಸಣ್ಣಗೆ..



ಪಿಸು ನುಡಿಗಳ ಪಸರಿಸದೆ
ಹೊಳ್ಳೆಯಿಂದ ಹೊಳ್ಳೆಗೆ ಹರಿದು
ತಿರು-ತಿರುವಿನಲ್ಲೂ ಒಂದೊಂದು ನಾದ
ತಿರುಳಿಲ್ಲದಿದ್ದರೂ ಮರುಳಾಗಿ ಬೀಸಿ
ಮಳೆಗೆ ಸಿಕ್ಕಂತೆ ನೀರ್ಗುಳ್ಳೆಗೂ ಸಿಕ್ಕಿ
ಎಲ್ಲಿ ಕೊನೆಗೊಳ್ಳುವುದೋ, ಏತಕಾಗಿ?



ಊರಿಂದ ಊರಿಗೆ, ಜಾಗದ ಹಂಗಿರದೆ
ಗಡಿ ದಾಟಿ ಬಂದರೂ ಬಂಧನವೆಲ್ಲಿ?
ಸ್ಪೋಟಕ ಸಿಡಿದಲ್ಲಿ ಸಾರಿದೆ ನಭಕೆಲ್ಲ
ಗಾಳಿಯ ಪಟಕೂ ಆಸರೆಯಾಗಿ
ಕಂಡವರು ಯಾರಿಲ್ಲ ಇದು ದೇವರಾ?
ಆಗಿರಲೂಬಹುದು
ಅದಕಾಗೇ ಇಷ್ಟೆಲ್ಲ ರೂಪಾಂತರ...

ಬಗೆಹರೆಯದ ಸುಳಿವೊಂದಕೆ ಕಡಲಾದೆಯಾ?


ಬಗೆಹರೆಯದ ಸುಳಿವೊಂದಕೆ ಕಡಲಾದೆಯಾ?
ಅತಿ ಸುಲಭಕೆ ಹಠವೊಂದನು ಬಿಡಬಲ್ಲೆಯಾ?
ಅನುಕರಿಸುವೆ ಒಬ್ಬೊಬ್ಬನೇ ನಾ ನಿನ್ನನು
ಅನುಭಾವಕೆ ನೀನಿಲ್ಲದೆ ಮಿತವಾದೆನು


ತಡ ಮಾಡಿದೆ ಆ ಮುಗಿಲದೋ ತಾ ಕರಗಲು
ಕಣ್ಣೀರಿಗೆ ಈ ಮುಜುಗರ ಮಳೆ ನಿಲ್ಲಲು
ಸರಿಹೊಂದದ ಕನಸೆಲ್ಲವ ನಾ ಮುರಿದೆನು
ನೀ ಬಾರದೆ ನಾ ಬೆಚ್ಚುತ ಎಚ್ಚೆತ್ತೆನು



ನಡುಗುತ್ತಿದೆ ನಡು ರಸ್ತೆಯು ಏಕಾಂತದಿ
ಸುಡು ಹೆಜ್ಜೆಗೆ ನೆರಳಿಲ್ಲದೆ ಈ ಬೇಗುದಿ
ಸಮವಾಗಿಸು ಈ ಹುಚ್ಚಿಗೆ ನಿನ್ನಿಚ್ಛೆಯ
ಮನದಾಸೆಗೆ ನೀನೆಂದರೆ ಸೂರ್ಯೋದಯ



ಒಲವ ಸುಖ ಬಲು ಸೋಜಿಗ ನಾ ಬಲ್ಲೆನು
ಕಳೆದ ಕ್ಷಣ ಒಂದೊಂದನೂ ಕೂಡಿಟ್ಟೆನು
ನೀ ಉತ್ತರ ನಾ ಮುಗಿಯದ ಪ್ರಶ್ನಾವಳಿ
ಹೂದೋಟವೇ ನನ್ನಿರಿಸಿಕೋ ಕಣ್ಣಂಚಲಿ



ತೆರೆದಿರುವೆ ನಾ ಯೋಚಿಸದೆಲೆ ಈ ಕಿಟಕಿಯ
ತಿಳಿ ಗಾಳಿಯೇ ನೀನಾಗುತಾ ಬಳಿ ಬರುವೆಯಾ?
ಅರೆದೂರಕೆ ಕರೆತಂದಿದೆ ಈ ಲೇಖನಿ
ಇನ್ನುಳಿದಿರೋ ಸಾಲಾಗು ನೀ, ನಾ ಚಿರಋಣಿ...

ಹೇಳು ಲೋಕಕೆ ಇರುವೆನೆಂದು


ಹೇಳು ಲೋಕಕೆ ಇರುವೆನೆಂದು
ನಿನ್ನ ನಲ್ಮೆಯ ಸೇರಲಿ
ನನ್ನ ತೂಗಿ ಅಳೆದು ಸೆಳೆದು
ಇರಿಸಿ ಕಣ್ಣ ತೇರಲಿ
ನೆರಳಿನಂತೆ ಇರದಿರೇನು...

ಗಲ್ಲ ಪೂರ ನನ್ನ ನೆನಪೇ
ಹೇಳು ಸಿಗ್ಗಿಗೆ ನಾನೇ ಕಾರಣ
ಒಲವೂ ಗೇಲಿ ಮಾಡಲಿ... ❤️

ಕಣ್ಣ ಕಾಡಿಗೆ ಕರಗದ ಹಾಗೆ ಅಳುವುದಾದರೂ ಏತಕ್ಕೆ?

ಕಣ್ಣ ಕಾಡಿಗೆ ಕರಗದ ಹಾಗೆ ಅಳುವುದಾದರೂ ಏತಕ್ಕೆ?
ನೋವು ತಂದ ದಾರಿ ತಿರುವಲಿ ಸಿಗುವೆ ಆದರೆ ಏತಕ್ಕೆ?
ಎಲ್ಲ ಬಚ್ಚಿಟ್ಟು ಗಳಿಸಿಕೊಂಡದ್ದು ಎಷ್ಟು ಎಂಬುದೇ ತಿಳಿದಿಲ್ಲ
ಲೆಕ್ಕ ಹಾಕಿದರೆ ಬೆರಳು ಮುಗಿವುದು, ಮಗ್ಗಿ ಕಲಿಸಿದೆ ಏತಕ್ಕೆ?


ತಪ್ಪಿ ಆಡಿದ ಮಾತು ಮುಗಿಯಿತು, ಇನ್ನೂ ಗುನುಗಿತೇ ಕಿವಿಯಲ್ಲಿ?
ಪ್ರೀತಿ ಕಾವನು ಎದುರು ನೋಡಿದೆ ಮನದಿ ಕಟ್ಟಿದ ಗೂಡಲ್ಲಿ
ತಾನು ಮೂಡದ ಕನಸು ಎಲ್ಲಿಯೋ ಸತ್ತು ಮಲಗಿದೆ ಹೆಣವಾಗಿ
ರೀಪೆ ಮೇಲೆಯೇ ಬರೆಯನೆಳೆಯುತ ತೊರೆದು ಹೋಗುವೆ ಏತಕ್ಕೆ?



ಇತ್ತ ಮಂಜಿನ ಗಾಜು ಮುಸುಕಲಿ ನಿನ್ನ ಹೆಸರನೇ ಬಯಸಿರಲು
ದೀಪ ಹಚ್ಚಲು ಹೋದ ಬೆರಳಿಗೆ ಸುಟ್ಟ ಗಾಯದ ನೆನಪುಗಳು
ಬೆಳಕು ಹರಿದಿದೆ,ಮಂಜೂ ಕರಗಿದೆ, ನಂಜು ನಂಜಾಗಿ ಮುಂಜಾವು
ಗಂಟಲೊಣಗಲು ಮುತ್ತ ಬಯಸಿದೆ, ನೀರನೆರೆಯುವೆ ಏತಕ್ಕೆ?



ನಿಂತ ಜಾಗವೇ ಕುಸಿದು ಬೀಳಲು, ಕೈಯ್ಯ ಚಾಚುವೆ ಮರುಳಾಗಿ
ಅಪ್ಪಿ-ತಪ್ಪಿಯೂ ಹಿಡಿಯೇ ಬರದಿರು, ರೂಢಿಯಾಗಲಿ ಏಕಾಂತ
ಹಾಗೆ ಸುಮ್ಮನೆ ಹೀಗೆ ನುಡಿವೆನು, ನಿಲುವು ಕಳೆದರೂ ಉಲಿಯುತ್ತ
ಯಾವ ಪರಿಚಯ ಇರದ ಹಾಗೆ ನೀ ನಟಿಸಿ ಬಿಡುವುದು ಏತಕ್ಕೆ?



ಜೀವ ಸವೆದಿದೆ ನೋವ ಸವಿಯುತ, ಯಾವ ಪ್ರಶ್ನೆಯೂ ಮುಗಿದಿಲ್ಲ
ಎಲ್ಲ ಪ್ರಶ್ನೆಗೂ ಖಾಲಿ ಉತ್ತರ, ಒಂದು ಅಂಕಿಯೂ ಕೊಡಬೇಡ
ಹುಂಬ ನಾನು ನೀ ಜಾಣೆ ಎಂಬುದ ತಿಳಿಸಿ ಕೊಟ್ಟಿದ್ದೆ ನೀಗಾಗೇ
ಸಣ್ಣ ಮುನಿಸಿಗೆ ಬಣ್ಣ ಬಳಿಯುತ ನವೀಕರಿಸುವೆ ಏತಕ್ಕೆ?

ಸಣ್ಣ ನಿದ್ದೆಗೆ ಜಾರಿ ಎದ್ದೆ


ಸಣ್ಣ ನಿದ್ದೆಗೆ ಜಾರಿ ಎದ್ದೆ
ನೀನಾಗಲೇ ಮಲಗಿಬಿಟ್ಟಿದ್ದೆ
ಎಬ್ಬಿಸುವ ಮನಸಾಗದೆ
ನಿನ್ನ ತುಟಿಗಳನ್ನೇ ದಿಟ್ಟಿಸಿ ಕಾದೆ


ಅರಳಿದಷ್ಟೂ ಹೃದಯ ಹಿಗ್ಗು
ಮತ್ತೆ ಏನೋ ಕಂಟಕ
ರೆಪ್ಪೆ ಸುಕ್ಕಿನ ತುಂಬ ಬೆವರು
ಮುಟ್ಟಿದರೆ ಬೆದರುವೆ ಎಂಬ ಭಯ



ಕಪಾಲದ ಮೇಲೆ ಬೆರಳಚ್ಚು
ಮೋಹಿಸಿದಲ್ಲೇ ಮತ್ಸರ
ಅಷ್ಟು ಸಲೀಸಾಗಿ ಕ್ಷಮಿಸುವ ನಿನ್ನ ದೊಡ್ಡಸ್ತಿಕೆ
ಚೂರು ಹೆಚ್ಚೇ ಕೆರಳಿಸಿತ್ತು ನನ್ನ



ಹಸಿವಿಗೆ ತುತ್ತಿನ ಭಯ
ಒಲವಿಗೆ ಮುತ್ತಿನ ಭಯ
ಕೊಟ್ಟರೆ ನೀಗುವ ಕೆಲವು
ಮತ್ತೇನನ್ನೋ ಬಯಸಿದರೆ?



ಬಿಡು, ಬುದ್ಧಿ ಗೋಜಲಿಗೆ ಕಾರಣ ಬೇಡ
ಅಥವ ಏನೂ ಆಗದಂತೆ ಸುಮ್ಮನಿರೋಣ
ಸಮಯದ ಮುಳ್ಳು ಯಾರ ಇರಿವುದೋ
ಅವರೇ ಕೊನೆಗೆ ಸೋತವರು.. ತೀರ್ಪು..



ಆ ಮುದ್ದು ಹೆಸರಿಂದ ಕರೆಯದಿರು
ಚೂರು ಸಿಟ್ಟಿದ್ದರೆ ಅದೇ ಲಗಾಮು
ಹುಚ್ಚು ಕುದುರೆ ಮನಸಿಗೆ
ಹಳ್ಳ-ದಿನ್ನೆಗಳಲ್ಲದೆ, ಸುಗಮ ದಾರಿ ಸಲ್ಲ ...

ಕೈಗೆಟುಕೋ ದೂರದಲ್ಲಿ ಕಂದೀಲೊಂದಿದೆಯಪ್ಪ
ಬತ್ತಿ ಏರಿಸೇ ಬೆಳಕು, ಇಲ್ಲವೆ ಸುತ್ತ ಕತ್ತಲು
ಒಂಟಿ ಕೋಣೆಯಲ್ಲಿ ಕನಸುಗಳ ಪರಿಶೆ ನಡೆಯಿತಪ್ಪ
ಕಣ್ಣಿಗೊಪ್ಪುವ ಹಾಗೆ ಗೋಡೆಯ ಮೇಲೆ ನೆರಳು


ಬೆಚ್ಚುವಾಗ ನಿನ್ನ ತೋಳು ಬೇಕು ನನ್ನ ಧೈರ್ಯಕೆ
ಗುಮ್ಮನನ್ನು ಓಡಿಸುವ ಕೋಲು ನಿನ್ನ ಇರುವಿಕೆ
ಸಾಧ್ಯವಾದಷ್ಟೂ ಇರು ನನ್ನ ಬಾಳ ಹತ್ತಿರ
ನಿನ್ನ ಹೆಗಲ ಮೇಲೆ ಕೂತು ಕಂಡ ಲೋಕ ಸುಂದರ



ಮುಂಜಾವಿನ ಮಂಜು ಹನಿಯೇ ಬರೆದು ಕೊಡು ಚುಟುಕನು
ಆಪ್ಪ ಇನ್ನೂ ಮಲಗಿಹನು ನಕಲು ಮಾಡಿಬಿಡುವೆನು
ಬೆಳಗೇ ಬೇಗ ಹರಿದು ಎಲ್ಲ ಅಳಿಸಿಬಿಡು ಕೂಡಲೇ
ಒಂದೇ ಉಸಿರಿನಲ್ಲಿ ಇವನ ಓದಿಗೊಪ್ಪಿಸುವೆನು



ಬಿಕ್ಕುತ ಬೀಗುವ ಸಂಭ್ರಮ ಅವನ ಕಣ್ಣಿನಂಚಲಿ
ಕೂಡಲೇ ಜಾರುವ ಕಂಬನಿ ನನ್ನ ಕೈ ಸೇರಲಿ
ಹೂ ಕೊಳ್ಳಲು ಬಂದ ಹಾಗೆ ಹೂದೋಟದ ಮಾಲಿಕ
ತಾ ಕಾಣದ ಬಣ್ಣಗಳ ಹೂವ ಸಂತೆ ಸಾರಲಿ



ಸಪ್ಪೆ ಸಾರಿನಲ್ಲೂ ಅಪ್ಪ ನಿನ್ನ ಕೈ ರುಚಿಯಿದೆ
ತಪ್ಪು ಮಾಡಿದಾಗ ತಿದ್ದೋ ಕೆಂಗಣ್ಣಿನ ಸುಳುವಿದೆ
ಅಂತರಂಗದಲ್ಲಿ ನಿನಗೆ ಎಲ್ಲಕೂ ಮೀರಿದ ಸ್ಥಾಯಿ
ಆದರೂ ಸೋಲುವೆ ಎಲ್ಲೂ ನಿನ್ನ ಹಾಡಿ ಹೊಗಳದೆ



ಬರೆಯ ಮೌನದಲ್ಲೂ ನಿನ್ನ ಕರೆಯ ಕೇಳಿ ತಿರುಗುವೆ
ನಿನ್ನ ಬೆಚ್ಚನೆ ಮಡಿಲ ಹಬ್ಬಿ ಬಳಸಿ ಕರಗುವೆ
ಆಪ್ಪ ನಿನ್ನ ತಪ್ಪು ನಡೆಯೂ ಕಲಿಸಿತೊಂದು ಪಾಠವ
ಬದುಕಿಯೇ ತೋರಿಸಿ ಕೊಡುವೆ ಬದುಕಿನಲ್ಲಿ ಎಲ್ಲವ...

ಗೋಡೆ ಮಾತಿಗಿಳಿಯಿತು

ಹಿಂದೆ ಅವಿತು ಕೂತೆ
ಗೋಡೆ ಮಾತಿಗಿಳಿಯಿತು
ಯಾರು, ಏನು, ಎತ್ತ ಎಂದು
ನನ್ನ ಮೌನ ಮುರಿಯಿತು


ನನ್ನ ಕುರಿತು ಮೂರು ಮಾತು
ಬಾಕಿ ಎಲ್ಲ ಗೋಡೆಯೇ
ಬಿತ್ತಿ ಚಿತ್ರಗಳೂ ಚೂರು
ಬಿಕ್ಕಳಿಸಿದವೊಮ್ಮೆಗೆ



ಬೇಡವಾದ ಗೋಡೆಯಿದು
ಯಾರೋ ಕಟ್ಟಿಬಿಟ್ಟರು
//ಅಥವ ನಾನೇ ಕಟ್ಟಿಕೊಂಡೆನು//
ಕೆಡವಲೆಂದು ಬಂದವರೂ
ರಕ್ತ ಕಾರಿ ಸತ್ತರು



ಬಿಡಿಸಿ ಹೋದ ಚಿತ್ರಕಾರ
ಅಲ್ಲಿ ಅಸಲಿ ಕಥೆಗಳ
ಕುರುಡು ಕಣ್ಣು ಇದ್ದರೆಷ್ಟು
ನೋಡದಾದವವುಗಳ



ಮೊನ್ನೆ ಜೋರು ಮಳೆಯ ನಡುವೆ
ಗುಡ್ಡ ಕರಗಿ ಕುಸಿಯಿತು
ಆದರೀ ಗೋಡೆ ಮಾತ್ರ
ಅಲುಗಾಡದೆ ನಿಂತಿತು



ಅಡಿಪಾಯ ಇಲ್ಲದೆಯೂ
ಎಷ್ಟು ಬಲ ಪೀಡೆಗೆ
ಕಟ್ಟಿಕೊಂಡವರೇ ಇದ
ತಡವಬೇಕು ತಣ್ಣಗೆ



ನಾನು ಅವಿತೆರೋ ಸತ್ಯ
ಬೆತ್ತಲಾಯ್ತು ಲೋಕಕೆ
ನೀರಿನಷ್ಟೇ ತಿಳಿ ಪರದೆ
ದೂರ ಉಳಿಸುವಾಟಕೆ



ಕೆಡವಲೆಂದು ಹೊರಟೆ
ಒಂದು, ಎರಡು, ಮೂರು ಮತ್ತೆ
ಮತ್ತಷ್ಟು ಗೋಡೆಗಳ
ಯಾರೋ ಕಟ್ಟಿದಂತಿದೆ



ಇಗೋ ಬಂದೆನೆಂದು ಹೊರಟು
ದೂರ ಉಳಿದೇ ಬಿಟ್ಟೆನು
ನಿಮ್ಮ ಆತ್ಮಗಳ ಸವರೋ
ಆಟದಲ್ಲಿ ಸೋತೆನು...

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...