Wednesday, 22 July 2020

ಚಿಕ್ಕನ್ ಬಿರಿಯಾನಿ ಜೊತೆ ಉಪ್ಪಿನಕಾಯಿ

(M) ಚಿಕ್ಕನ್ ಬಿರಿಯಾನಿ ಜೊತೆ
ಉಪ್ಪಿನಕಾಯ್ ನೆಂಜಿಕೊಂಡು ತಿಂದ ಹಾಗಿದೆ  
(F) ವಿಚಿತ್ರ ಕಾಂಬಿನೇಷನಾದ್ರೂ  
ಕೂಡ ನಮ್ಮ ಜೋಡಿ ಸುಪರ್ರಾಗಿದೆ
(M) ಸೂಜಿಯಂಥ ಕಣ್ಣಿನಲ್ಲಿ ಕೊಲ್ಲುತಾಳೆ ಇವಳು 
(F) ಜಾಜಿ ಮಲ್ಲೆ ಕೊಟ್ಟು ನನ್ನ ಗೆಲ್ಲುತಾನೆ ಇವನು 
(M) ಸೂಜಿಯಂಥ ಕಣ್ಣಿನಲ್ಲಿ ಕೊಲ್ಲುತಾಳೆ ಇವಳು 
(F) ಜಾಜಿ ಮಲ್ಲೆ ಕೊಟ್ಟು ನನ್ನ ಗೆಲ್ಲುತಾನೆ ಇವನು 
(M, F) ಒಬ್ಬರ ಮೇಲೊಬ್ಬರು ಪ್ರಾಣ ಇಟ್ಟುಕೊಂಡೆವು 
ಜೋಡೆತ್ತು ಪ್ರೇಮ ಬಂಡಿ ಪಯಣವು ಶುರು 

(Chorus) ಔಬ.. ಔ ಔ ಔಬಾ..  ಔ ಔ ಔಬಾ.. ಔ ಔ ಟರ್ರ್ರ್ ಬಾ 

(M) ಮುತ್ತು ಕೊಟ್ಟರೆ ಮೈ ಬೆಚ್ಚಗಾಯಿತು 
ಏನು ಹೀಟಿದೆ ಆ ನಿನ್ನ ತುಟಿಯಲಿ 
(F) ಮಾತು ಮಲ್ಲ ನೀ ಏನೋ ಮೋಡಿ ಮಾಡುವೆ 
ಪ್ರೀತಿ ಮಾಡುತ ಹೀಗೆ ಕಂಡ ಕಂಡಲಿ 
(M) ಹತ್ತು ಗಾಡಿ ಭೂಮಿಯನ್ನು ರೌಂಡು ಹಾಕುವ 
(F) ಬತ್ತಿ ಹೋದ ಬಾವಿ ಗುದ್ದಿ ನೀರು ತೆಗೆಯುವ 
(M) ಹತ್ತು ಗಾಡಿ ಭೂಮಿಯನ್ನು ರೌಂಡು ಹಾಕುವ 
(F) ಬತ್ತಿ ಹೋದ ಬಾವಿ ಗುದ್ದಿ ನೀರು ತೆಗೆಯುವ 
(M, F) ಎಚ್ಚರವಾಗಿದ್ದರೂ ಮೈಯ್ಯ ಮರೆತು ಬಿಟ್ಟೆವು 
ಜೋಡೆತ್ತು ಪ್ರೇಮ ಬಂಡಿ ಪಯಣವು ಶುರು 

(Chorus) ಔಬ.. ಔ ಔ ಔಬಾ..  ಔ ಔ ಔಬಾ.. ಔ ಔ ಟರ್ರ್ರ್ ಬಾ 

(F) ಬೆಂಡೆತ್ತುತಾ ಹೀಗೆ ಬ್ರೇಕು ಹಾಕುವೆ 
ಎಲ್ಲಿ ಕಲಿತೆಯೋ ಈ ಮೋಜಿನಾಟವ 
(M) ಈಗಿಂದೀಗಲೇ ಮಾಡಿಸೋಕೆ ಹೊರಡಲೇ 
ತುಂಡಾಗದ ಭಾರಿ ಗಟ್ಟಿ ಮಂಚವ 
(F) ಬೇರೆ ಗಂಡು ಹುಡುಕುತಾವ್ರೆ ನನ್ನ ಮನೆಯಲಿ 
(M) ಬಾರಿನೊಳಗೆ ಕೂರಲೇನು ಹಿಡಿದು ಬಾಟಲಿ 
(F) ಬೇರೆ ಗಂಡು ಹುಡುಕುತಾವ್ರೆ ನನ್ನ ಮನೆಯಲಿ 
(M) ಬಾರಿನೊಳಗೆ ಕೂರಲೇನು ಹಿಡಿದು ಬಾಟಲಿ 
(M, F) ಕಿತ್ತಾಡಿ ಕೊನೆಯಲಿ ಇನ್ನು ಹಚ್ಚಿಕೊಂಡೆವು 
ಜೋಡೆತ್ತು ಪ್ರೇಮ ಬಂಡಿ ಪಯಣವು ಶುರು 

(Chorus) ಔಬ.. ಔ ಔ ಔಬಾ..  ಔ ಔ ಔಬಾ.. ಔ ಔ ಟರ್ರ್ರ್ ಬಾ 

ನಿಂತಿವೆ ಸಾಲಾಗಿ ಆಡದ ಮಾತೆಲ್ಲ

ನಿಂತಿವೆ ಸಾಲಾಗಿ 
ಆಡದ ಮಾತೆಲ್ಲ 
ಸಮ್ಮತಿ ನೀ ನೀಡು 
ಹಾಡುವೆ ಹಿಂಬಾಲಿಸಿ 

ಕಾಣುವೆ ನಿನ್ನನ್ನೇ 
ಮುಚ್ಚಿದ ಕಣ್ಣಲ್ಲೂ 
ಬೀಳದೆ ಕಾಪಾಡು 
ಸಾಗುತ ಕೈ ಜೋಡಿಸಿ 

ಬಣ್ಣದ ಮೀನಂತೆ ನಾ  
ನಿನ್ನಲಿ ಸೆರೆಯಾಗುವೆ   
ನಿನ್ನಲ್ಲೇ ಗುಟ್ಟಾಗಿ ಇರಿಸಿ ಬಿಡು 
ಬದಲಾಗಿ ಮನಸನ್ನು ಬರೆದು ಕೊಡು... 
ನಿನ್ನಲ್ಲೇ ಗುಟ್ಟಾಗಿ ಇರಿಸಿ ಬಿಡು 
ಬದಲಾಗಿ ಮನಸನ್ನು ಬರೆದು ಕೊಡು... 

ನಿಂತಿವೆ ಸಾಲಾಗಿ 
ಆಡದ ಮಾತೆಲ್ಲ 
ಸಮ್ಮತಿ ನೀ ನೀಡು 
ಹಾಡುವೆ ಹಿಂಬಾಲಿಸಿ 

ಕಾಣುವೆ ನಿನ್ನನ್ನೇ 
ಮುಚ್ಚಿದ ಕಣ್ಣಲ್ಲೂ 
ಬೀಳದೆ ಕಾಪಾಡು 
ಸಾಗುತ ಕೈ ಜೋಡಿಸಿ 

*********************

ದಡ ಸೇರುವಂತೆ ದೋಣಿ  
ನದಿಯಲ್ಲಿ ತೇಲೋವಾಗ 
ಸುಳಿಯೊಂದು ಸೆಳೆದಂತೆ ಸೆಳೆದಿರುವೆ  
ಇರೋ ಬರೋದೆಲ್ಲ ಬಿಟ್ಟು 
ಒಲವ ಇರಾದೆ ಹೊತ್ತು 
ನಡು ದಾರಿಯಲ್ಲೆಲ್ಲೋ ಕಳೆದಿರುವೆ 
ಓ.. ಕರೆಯೊಂದ ನೀಡು ಬೇಗ ಅರೆಗಣ್ಣಲಿ
ದಿನ ದೀಪದಂತೆ ಬೆಳಗು ಎದೆ ಗೂಡಲಿ 
ಸರಿಯೆಂದು ನಗೆಯ ಬೀರು ತುಟಿ ಅಂಚಲಿ... 

ನಿಂತಿವೆ ಸಾಲಾಗಿ 
ಆಡದ ಮಾತೆಲ್ಲ 
ಸಮ್ಮತಿ ನೀ ನೀಡು 
ಹಾಡುವೆ ಹಿಂಬಾಲಿಸಿ 

ಕಾಣುವೆ ನಿನ್ನನ್ನೇ 
ಮುಚ್ಚಿದ ಕಣ್ಣಲ್ಲೂ 
ಬೀಳದೆ ಕಾಪಾಡು 
ಸಾಗುತ ಕೈ ಜೋಡಿಸಿ 

****************************

ಮೊಗಸಾಲೆಯಲ್ಲಿ ನಿಂತು 
ಮಗುವಂತೆ ಕೂಗೋವಾಗ 
ಕದ ಹಾಕಿ ಅಳಿಸೋದು ಎಷ್ಟು ಸರಿ?
ಬಲೆ ಬೀಸಿದಂತೆ ನನ್ನ 
ವಶ ಮಾಡಿಕೊಂಡೆ ಹೇಗೋ
ತಯಾರಾಗುವೇ ಇನ್ನು ಮುಂದುವರಿ 
ಓ..ಜೀವಕಿಂತ ಸಮೀಪ ನೀನು ಜೀವನಾಡಿಯೇ 
ಭಾವಕಿನ್ನು ಅಭಾವವಿಲ್ಲ ಬಿರುಸಾಗಿದೆ 
ಸಹಿ ಮಾಡು ನಿನ್ನಲ್ಲೂ ಈಗ ಇದೆ ಬೇಡಿಕೆ ...  

ನಿಂತಿವೆ ಸಾಲಾಗಿ 
ಆಡದ ಮಾತೆಲ್ಲ 
ಸಮ್ಮತಿ ನೀ ನೀಡು 
ಹಾಡುವೆ ಹಿಂಬಾಲಿಸಿ 

ಕಾಣುವೆ ನಿನ್ನನ್ನೇ 
ಮುಚ್ಚಿದ ಕಣ್ಣಲ್ಲೂ 
ಬೀಳದೆ ಕಾಪಾಡು 
ಸಾಗುತ ಕೈ ಜೋಡಿಸಿ 

ಬಣ್ಣದ ಮೀನಂತೆ ನಾ  
ನಿನ್ನಲಿ ಸೆರೆಯಾಗುವೆ   
ನಿನ್ನಲ್ಲೇ ಗುಟ್ಟಾಗಿ ಇರಿಸಿ ಬಿಡು 
ಬದಲಾಗಿ ಮನಸನ್ನು ಬರೆದು ಕೊಡು 
ನಿನ್ನಲ್ಲೇ ಗುಟ್ಟಾಗಿ ಇರಿಸಿ ಬಿಡು 
ಬದಲಾಗಿ ಮನಸನ್ನು ಬರೆದು ಕೊಡು 

ಸುಂದರ ಸಂಜೆಯ ಸೋನೆಯೇ

ಸುಂದರ ಸಂಜೆಯ ಸೋನೆಯೇ 
ದೂರದಿ ಮಿನುಗುವ ತಾರೆಯೇ 
ದುಂಬಿಯ ಸೆಳೆಯುವ ತಾವರೆ 
ಅಂದದ ಸಾರವೇ... ಓ.. 

ಮುಟ್ಟಲು ನಲುಗುವ ಗೊಂಬೆಯೇ 
ಮುತ್ತಿಗೆ ಕರಗುವ ಶೀತಲೆ 
ಮೌನವ ನಾಚಿಸೋ ಕೋಗಿಲೆ   
ಚಂದದ ರಾಗವೇ

ಓ ಶಾಂತಿ ಶಾಂತಿ ಓ ಶಾಂತಿ 
ಹೂವನ್ನು ಹೋಲುವ ಕಾಂತಿ 
ಉಳಿದೆ ನನ್ನಲ್ಲಿ ಸ್ವರದಂತೆ  
ಮಿಡಿದಂತೆ ಒಲವಿನ ತಂತಿ .. ಓ... 

***************

ನಿನ್ನಲ್ಲಿಯೇ ನೇರವಾಗಿ 
ಬಂದಾಗಿದೆ ರೂಢಿಯಾಗಿ 
ಹೇಳಿ ಕೊಡು ಪ್ರೀತಿಯನ್ನು 
ಆಲಿಸುವೆ ಪ್ರೇಮಿಯಾಗಿ 
ಹಾಗೊಮ್ಮೆ ಹೀಗೊಮ್ಮೆ ಮುದ್ದಾಡು ನನ್ನನು 
ಇನ್ನಷ್ಟು ಒಲವಿಂದ ತುಂಬುತ್ತ ಕಣ್ಣನ್ನು 
ಏನೇನನೋ ಹೇಳುವಾಸೆ 
ಹೇಳದೆಲೆ ಸೋಲುವಾಸೆ

ತಾನಾಗಿ ಮೂಡಲು ಮೋಹ 
ಶರಣಾಗೋದೊಂದೇ ಸರಿ ದಾರಿ 
ಕಳುವಾದ ಹೃದಯ ಹುಡುಕೋದಾ 
ಅಡಗಿರುವ ಹಾಗೆ ನಿನ್ನಲ್ಲಿ?

****************

ಏನಾದರೂ ಮಾಡಿ ಹೋಗು 
ಒದ್ದಾಡುವೆ ಒಂದೇ ಸಮನೆ 
ಬೇಕಂತಲೇ ಕಾಡು ನನ್ನ 
ಪ್ರೀತಿಸುತ ತೋರು ಕರುಣೆ 
ಶುರುವಾಗಿ ಈ ವರೆಗೆ ಪ್ರತಿಯೊಂದೂ ಹೊಸತೇನೇ 
ಅತಿಯಾಗಿ ನರಳುತ್ತ ಗೆಲ್ಲೋನು ಪ್ರೇಮಿನೇ 
ಸಂಧಿಸುವ ಸ್ವಪ್ನದಲ್ಲೂ 
ಸ್ಪಂದಿಸುವೆ ಏನೇ ಹೇಳು 

ನಿನಗಾಗಿ ಮೂಡುವ ಕವಿತೆ 
ಮರುಳಾಗಿ ಗೀಚುತ ಕುಳಿತೆ 
ಏನನ್ನೇ ಬರೆಯಲೀ ನಡುವೆ 
ಕೊನೆಗೊಳ್ಳೋದಂತೂ ನಿನ್ನ ಕುರಿತೇ.. 

ಜಾರಿ ಭೂಮಿ ಸೋಕಿದಾಗ ಸೋನೆ

ಜಾರಿ ಭೂಮಿ ಸೋಕಿದಾಗ ಸೋನೆ 
ಈ ಮಣ್ಣ ಸೊಗಡು 
ಈ ಮಣ್ಣ ಸೊಗಡು 
ಈ ಮಣ್ಣು ಸೊಗಡು ಸೂಸಿದೆ 

ಭೂಮಿ ಸೋಕಿದಾಗ ಸೋನೆ... 

ಒಮ್ಮೆ ಬಂದು ಕಾಣು ಈ ಚಂದವ
ಕಣ್ಣ ಸೆಳೆಯುವ ಅಂದವ 
ಹಿಂದಿರುಗೆಯಾ ಊರಿಗೆ, ಮರಳಿ ಮನೆಗೆ  
ಮರಳಿ ಮನೆಗೆ, ಕೈ ಬೀಸಿ ಕರೆದ ಗೂಡಿಗೆ...
 
ಜಾರಿ ಭೂಮಿ ಸೋಕಿದಾಗ ಸೋನೆ 
ಈ ಮಣ್ಣ ಸೊಗಡು 
ಈ ಮಣ್ಣ ಸೊಗಡು 
ಈ ಮಣ್ಣ ಸೊಗಡು ಸೂಸಿದೆ 

ಯಾರೂ ಇಲ್ಲದೂರಲಿ 
ಬಾಳು ಸೋತ ಹಾಗಿದೆ 
ನಿನಗೇ ನೀನು ಇಲ್ಲಿ ತೀರಾ ಹೊಸಬ
ಚಾಚಿಕೊಂಡ ಕೈಯ್ಯಿಗೆ 
ಯಾರೂ ನೀಡದಾಸರೆ 
ಮರೆತ ನಗುವೇ ಮರಳಿ ಒಮ್ಮೆ ಸಿಗು ಬಾ 

ಬಿಡದೆ ಏಕಾಂತವೊಂದೇ ಕಾಡಲು
ದನಿಯೊಂದು ಕೂಗಿ ಹೇಳಿದೆ 
ಹಿಂದಿರುಗೆಯಾ ಊರಿಗೆ, ಮರಳಿ ಮನೆಗೆ  
ಮರಳಿ ಮನೆಗೆ, ಕೈ ಬೀಸಿ ಕರೆದ ಗೂಡಿಗೆ...  

ಜಾರಿ ಭೂಮಿ ಸೋಕಿದಾಗ ಸೋನೆ 
ಈ ಮಣ್ಣ ಸೊಗಡು 
ಈ ಮಣ್ಣ ಸೊಗಡು 
ಈ ಮಣ್ಣ ಸೊಗಡು ಸೂಸಿದೆ 

**************
ಎಲ್ಲೋ ದೂರ ಕಟ್ಟಿದ 
ಮೂಕ ಹಕ್ಕಿ ಹಾಡಿಗೆ 
ಯಾರೂ ಸೋಲಲಿಲ್ಲ ಎಂಬ ಹಸಿವು 
ಯಾವ ದೇವರಾದರೂ 
ಎಲ್ಲೇ ಎದುರಾದರೂ  
ನೋವು ನಲಿವು ಕೇಳೊಕಿಲ್ಲ ಬಿಡುವು 

ಏಕೋ ಹಾರೋ ರೆಕ್ಕೆ ಸೋತಿದೆ 
ಕಡೆಯದಾದ ಆಸೆ ಒಂದಿದೆ 
ಹಿಂದಿರುಗ ಬೇಕು ಊರಿಗೆ, ಮರಳಿ ಮನೆಗೆ  
ಮರಳಿ ಮನೆಗೆ, ಕೈ ಬೀಸಿ ಕರೆದ ಗೂಡಿಗೆ...

ಜಾರಿ ಭೂಮಿ ಸೋಕಿದಾಗ ಸೋನೆ 
ಈ ಮಣ್ಣ ಸೊಗಡು 
ಈ ಮಣ್ಣ ಸೊಗಡು 
ಈ ಮಣ್ಣ ಸೊಗಡು ಸೂಸಿದೆ 
ಜಾರಿ ಭೂಮಿ ಸೋಕಿದಾಗ ಸೋನೆ 
ಜಾರಿ ಭೂಮಿ ಸೋಕಿದಾಗ ಸೋನೆ... 

ತಡ ಮಾಡದೆ ಕರೆ

***Lag jaa gale***
ತಡ ಮಾಡದೆ ಕರೆ
ಒಲವಿನೂರಿನ ದೊರೆ
ಬರಲಾರೆನೆನ್ನಲಾರೆ
ಎದೆಗೂಡಿಗಾದರೆ

ತಡ ಮಾಡದೆ ಕರೆ ಕರೆ...

ಒಂದಾಗಿ ದಾಟಬೇಕಿದೆ 
ಅಪೂರ್ಣ ದಾರಿಯ (2)
ದೂರಾಗುವಾಗ ಏತಕೋ
ಈ ತೀರದ ಭಯ

ಇರುವಂತಿರು ತೆರೆ
ಮರೆಯ ಚಂದ್ರನಂತೆಯೇ
ಬೇಕೆಂದೇ ಕದ್ದೋಡು ಮೆಲ್ಲಗೆ
ಆದರೂ ನಿಲ್ಲು ಅಲ್ಲಿಯೇ

ತಡ ಮಾಡದೆ ಕರೆ ಕರೆ...

ನೆರವಾಗು ಮಾತನಾಡಿಸಿ
ಈ ಮೌನ ಮೀಟುತ (2)
ವರವಾಗಿ ಬಂದೆ ಬಾಳಿಗೆ
ವಿಶೇಷವಾಗುತ

ಮೊದಲಾಗಲಿ ಹೊಸ 
ಮುಗಿಯದಾನಂದದ ಸಂಚಿಕೆ
ಏನೂ ಕಾರಣ ನೀಡದೆ
ಹೊರ ಬಂತು ನಾಚಿಕೆ

ತಡ ಮಾಡದೆ ಕರೆ ಕರೆ...

ಈಗೀಗ ನನ್ನಲ್ಲಿ

ಈಗೀಗ ನನ್ನಲ್ಲಿ
ನಿನ್ನ ಮುದ್ದಾಡೋ ಖಯಾಲಿ
ಆಗಾಗ ಬಿಡಿಸುವೆನು 
ಬರಿಗಣ್ಣಲ್ಲೇ ರಂಗೋಲಿ
ಹ್ಮ್ಮ್... 
ಈಗೀಗ ನನ್ನಲ್ಲಿ
ನಿನ್ನ ಮುದ್ದಾಡೋ ಖಯಾಲಿ
ಆಗಾಗ ಬಿಡಿಸುವೆನು 
ಬರಿಗಣ್ಣಲ್ಲೇ ರಂಗೋಲಿ

ತೂರಿ ಬಂದು ಮಾಯಾ ಜಿಂಕೆಯ ತರಹ
ತರಿಸುವೆ ಅಚ್ಚರಿಯ
ತಾಳಲಾರೆ ನೀನು ಇರದ ವಿನಹ
ಸಿಗುವುದು ಖಾತರಿಯಾ?
ಈ ಪ್ರೀತಿ ಅನ್ನೋದೇ ಈ ಥರ
ಈ ಪ್ರೀತಿ ಅನ್ನೋದೇ ಈ ಥರ
ಈ ಪ್ರೀತಿ ಅನ್ನೋದೇ ಈ ಥರ
ಈ ಪ್ರೀತಿ ಅನ್ನೋದೇ ಈ ಥರ

ಬಾರದಾಗಿದೆ, ನಿದ್ದೆ ರಾತ್ರಿ ವೇಳೆಯೂ 
ಅಣುಕಿಸುತ ಉಳಿದಿರಲು, ನಿನ್ನದೊಂದು ಬಿಂಬ ಕಣ್ಣಲಿ 
ಆಗದಾಗಿದೆ, ಹಸಿವು ದಣಿವೇ ಆದರೂ 
ಪರಿಸರವ ಬದಲಿಸಿದೆ ಏತಕೆ..?
ಹುಸಿ ಭಯ ಶುರು ಆಯಿತಾದರೂ  
ಮಜ ಇದು ಹೊಸತು 
ಖುಷಿ ಇಗೋ ಇನ್ನೂ ಹೆಚ್ಚಾಯಿತು ...  ಓ 

ಸೂರೆ ಮಾಡಿ ಹೋಗು ಎಲ್ಲ ಕನಸುಗಳ 
ನಿನಗೆ ಬರೆದಿಡುವೆ
ತಾರೆಗಳ ಬುಟ್ಟಿ ತುಂಬ ತುಂಬುತಲಿ
ನಿನಗೇ ತಲುಪಿಸುವೆ

ಈ ಪ್ರೀತಿ ಅನ್ನೋದೇ ಈ ಥರ
ಈ ಪ್ರೀತಿ ಅನ್ನೋದೇ ಈ ಥರ
ಈ ಪ್ರೀತಿ ಅನ್ನೋದೇ ಈ ಥರ
ಈ ಪ್ರೀತಿ ಅನ್ನೋದೇ ಈ ಥರ

ಎಲ್ಲೆಲ್ಲಿಯೂ ನೀನಿರುವೆ, ನೆರಳನು ಬಳಸುತ 
ಉಸಿರಲೂ ತುಂಬಿರುವೆ, ಆಸೆಗಳ ತಣಿಸುತ 
ಮುಗಿಯದ ವಿಸ್ಮಯವೇ ಆವರಿಸು ನನ್ನನು
ಪ್ರೀತಿಯಂಬ ಅದ್ಭುತವೇ ಸೇರಿಸಿದೆ ನಮ್ಮನು... 

ಮನದ ಬಾಗಿಲಲಿ ಕಾದಿರುವೆ ನಿನಗಾಗಿ

ಓ...  ಓ ಓ ಓ...  ಓ.... 
ಓ... ಒಲವೇ.... 
ಮನದ ಬಾಗಿಲಲಿ ಕಾದಿರುವೆ ನಿನಗಾಗಿ 
ಒಳ ಬಾರದೆಲೆ ಪರದಾಡುವೆನು 
ಬಿಗಿ ಮೌನವನು ತಳೆದು 
ಓ...   
ಮನದ ಬಾಗಿಲಲಿ ಕಾಯುವೆನು ನಿನಗಾಗಿ 
ಕಣ್ಣಂಚಿನಲಿ ಕುಳಿತ ಹನಿಯ  
ಮರೆಯಾಗಿಸೆಯಾ ತಡೆದು
ಓ... ಒಲವೇ.... 


ಕವಿದ ನಸುಕಲ್ಲಿ 
ಬರೆದಿರುವೆ ಇದೋ ತಗೋ 
ಹೇಳದಾದ ನೂರಾರು ವಿಚಾರ 
ಓ.. ಓ.. 
ಜೊತೆಯಾಗು ಈಗಲೇ 
ಬಾ ಉಸಿರೇ, ಬೇಗ... 

ಮನದ ಬಾಗಿಲಲಿ ಕಾದಿರುವೆ ನಿನಗಾಗಿ 
ಗಡಿಯಾರವದೂ ಗಡಿ ದಾಟುತಿದೆ 
ಉಳಿದ ಸಮಯ ಕಳೆದು 


ಬಿಡದೆ ಸುಡುವಂತೆ 
ವಿರಹದ ಈ ಚಿತೆ ಉರಿ 
ಚೀರುತಿದೆ ಅದೇಕೋ ಹೃದಯ 
ಓ... 
ಅರೆ ಬೆಂದು ಸಾಯದ
ಆಸೆಗಳೇ, ಹೀಗೇ... 

ಮನದ ಬಾಗಿಲಲಿ ಕಾದಿರುವೆ ನಿನಗಾಗಿ 
ಒಳ ಬಾರದೆಲೆ ಪರದಾಡುವೆನು 
ಬಿಗಿ ಮೌನವನು ತಳೆದು 
ಓ...   
ಮನದ ಬಾಗಿಲಲಿ ಕಾಯುವೆನು ನಿನಗಾಗಿ 
ಕಣ್ಣಂಚಿನಲಿ ಉಳಿದ ಹನಿಯ  
ಮರೆಯಾಗಿಸೆಯಾ ತಡೆದು

ಎಲ್ಲವನ್ನೂ ಪ್ರಶ್ನಿಸುವ ಕವಿತೆಯೊಂದ ಬರೆಯಬೇಕು

ಎಲ್ಲವನ್ನೂ ಪ್ರಶ್ನಿಸುವ ಕವಿತೆಯೊಂದ ಬರೆಯಬೇಕು
ಕವಿತೆಯನ್ನೂ ರಕ್ಷಿಸುವ ಕವಿತೆಯೊಂದ ಬರೆಯಬೇಕು

ದಕ್ಕುವುದು ಮೂರು ಮತ್ತೊಂದು ಪದವೇ ಆದರೂ
ಮನದ ಮಾತ ಪೋಷಿಸುವ ಕವಿತೆಯೊಂದ ಬರೆಯಬೇಕು

ಅಕ್ಷರಗಳು ಬೇಡವಾಗಿ ರದ್ದಿಯಾದ ಹೊತ್ತಿನಲ್ಲಿ
ಕುಲುಮೆಯನ್ನೂ ಹೊತ್ತಿಸುವ ಕವಿತೆಯೊಂದ ಬರೆಯಬೇಕು

ಮುನಿದು ಮಾತು ಬಿಟ್ಟ ಮಗುವ ಮಡಿಲಿಗೆರಗಿಸಿಕೊಂಡು
ನಿದ್ದೆಯುಣಿಸಿ ಮುದ್ದಿಸುವ ಕವಿತೆಯೊಂದ ಬರೆಯಬೇಕು

ಏನೂ ತೋಚದೆ ಖಾಲಿತನವೊಂದೇ ಜೊತೆಗಿರಲು
ಎಲ್ಲವನ್ನೂ ಪ್ರೀತಿಸುವ ಕವಿತೆಯೊಂದ ಬರೆಯಬೇಕು

ನೆಚ್ಚಿ ಕದ್ದ ಸಾಲು ಎರಡು, ಅಲ್ಲಿ ಇಲ್ಲಿ ತಿರುಚಿ ಚೂರು
ಮೂಲ ಕವಿಯ ನಾಚಿಸುವ ಕವಿತೆಯೊಂದ ಬರೆಯಬೇಕು

ಯಾರೇ ಓದಿದರೂ, ಯಾರೂ ಓದದೆ ಹೋದರೂ
ಭವದ ಹಸಿವ ದಾಟಿಸುವ ಕವಿತೆಯೊಂದ ಬರೆಯಬೇಕು..

ಮೋಡ ಮಳೆಯಾಗಿ ಇಳೆಯ ತಾಕಿ

ಮೋಡ ಮಳೆಯಾಗಿ ಇಳೆಯ ತಾಕಿ
ಧೋ ಇದೋ, ಹಸಿ ನೆಲ
ಆ ಗಡಿ ದಾಟಿ ಬರುವಂತೆ ಹರಿವೊಂದು 
ಹೊಸತಾಗಿ ಪ್ರತಿಯೊಂದೂ

ನಾ ನಿನ್ನನು ನೆನೆಯುತ್ತಲೆ
ಮಳೆಯಿನ್ನೂ ಅತಿಯಾಗಿ
ನಿನ್ನೊಂದಿಗೆ ತಣಿಯುತ್ತಲೇ 
ಸೊಗಸಾದ ಹಾಡನು ಹಾಡುವೆ 
ನಿನ್ನ ಮಡಿಲೊಂದು ಹಿತವಾದ ಸಂತೆ  
ನನ್ನನೇ ಮಾರುವೆ  
ನಿನ್ನ ನಗೆ ಹೂವಿಗೆ ಹೋಲಿಸಿ
ಸಾಕಿಯೇ ...... ಸಾಕಿಯೇ......

ಹೇ ಸಖಿ, ಸಮೀಪಿಸು 
ಈ ಅರೆ ಬರೆ ಬಾಳಿನ್ನು ಬದಲಾಗಿ 
ಕನಸೊಂದು ಮೊದಲಾಗಿ
ನಾ ನಿನ್ನನು ನೆನೆಯುತ್ತಲೆ
ಮಳೆಯಿನ್ನೂ ಅತಿಯಾಗಿ
ನಿನ್ನೊಂದಿಗೆ ತಣಿಯುತ್ತಲೇ 
ಸೊಗಸಾದ ಹಾಡನು ಹಾಡುವೆ 
ನನ್ನ ಬೊಗಸೆಯ ನಿನಗೊಪ್ಪಿಸುತಲಿ 
ಸಾಕಿಯೇ, ಸಾಕಿಯೇ
ನಿನ್ನ ಎದೆಗಪ್ಪುತ ನಲಿಯುವೆ
ಸಾಕಿಯೇ .... ಸಾಕಿಯೇ.... 

ಏಳಾಗಿವೆ ಹೊಂಬಣ್ಣವು ಬೆಳಕೊಂದು ಹನಿಯನ್ನು ಸೀಳುತ್ತಲೇ ಓ
ತೂಗಾಡಿದೆ ಹೂದೋಟವು ಹೂವಂಥ ತಂಗಾಳಿ ತೀಡುತ್ತಲೇ 
ಗುಟ್ಟು ಗುಟ್ಟಾಗಿ ಹೀರುತ್ತ ಮಧು ಸಾರವ
ಚಿಟ್ಟೆ ಹಾರುತ್ತ ಹೊರಟೀತೆ ನಿನ್ನ ಕಡೆ 
ಮುಂದೂಡದೆ ಇಂದೇ ಸಿಗು, ನೀ ಬಾರದೆ ಏಕೋ ಒದ್ದಾಡುವೆ.... 

ಗರುಡ ಹಾಡಿನ ಪ್ರಯತ್ನ

(ಗಂ) ಏನು ಅಂದವೋ, ಈ ಜೋಡಿ ಚಂದವೋ
ಋಣಾನುಬಂಧ ಕೂಡಿದಾಗ ಆನಂದವೋ
ಏನು ಅಂದವೋ, ಈ ಜೋಡಿ ಚಂದವೋ 

(ಹೆಂ) ಇವನ ಗಮನ ಅವಳ ಕಡೆಗೆ 
(ಗಂ) ಇವಳೀಗ ಕುಣಿಯೋ ಕಣ್ಕಾಡಿಗೆ 
(ಹೆಂ) ಶುಭವ ತಂದು ಮುಡಿಯಲ್ಲಿ ಮುಡಿದಂತೆ ಒಲವು 
(ಗಂ) ಒಲವ ಸೇರಿ ಚೆಲುವಾಗಿ ಪ್ರತಿಯೊಂದು ಕ್ಷಣವೂ 
(ಹೆಂ) ಹೊಸ ಹಾಳೆ ತೆರೆದಂತೆ ಬಾಳು 
(ಗಂ) ಹಿಡಿ ಕೊಟ್ಟ ಬೆರಳೊಂದಿರಲು 
(ಹೆಂ) ಖುಷಿಯ ಕನಸು, ಪುನಾರಂಭವಾದಂತಿದೆ... 

 (ಹೆಂ) ಏನು ಅಂದವೋ, ಈ ಜೋಡಿ ಚಂದವೋ
 
(ಗಂ) ಹಾಡಿನಂತೆ ಸಂಭ್ರಮ ಆವರಿಸಿದೆ ಮನೆಯ 
(ಹೆಂ) ಹಾಲು ಜೇನು ಕಲೆಸಿದ ಸಿಹಿಯಾದ ಸಮಯ 
(ಗಂ) ಪ್ರೀತಿಯಲ್ಲಿ ದಿನವೂ ನಿತ್ಯೋತ್ಸವ 
(ಹೆಂ) ರೋಮಾಂಚನಗೊಳಿಸೋ ಆನಂದ ಪರ್ವ 
(ಗಂ) ಅತಿ ಸುಂದರ, ಸಮಾಚಾರಕೆ, ಇದೆ ದೇವರ ಸಾಕ್ಷಿಯು 

 (ಹೆಂ) ಏನು ಅಂದವೋ, ಈ ಜೋಡಿ ಚಂದವೋ   
ಋಣಾನುಬಂಧ ಕೂಡಿದಾಗ ಆನಂದವೋ 
ಏನು ಅಂದವೋ, ಈ ಜೋಡಿ ಚಂದವೋ   

(ಹೆಂ, ಗಂ)  ಏನು ಅಂದವೋ, ಈ ಜೋಡಿ ಚಂದವೋ



***********************************************************************************

ಹಾಡಿನೊಂದಿಗೆ, ಈ ರಾಗ ಸೇರಿದೆ 
ಋಣಾನುಬಂಧ ಕೂಡಿದಾಗ ಜೋಡಿಯಾಗಿದೆ 
ಹಾಡಿನೊಂದಿಗೆ, ಈ ರಾಗ ಸೇರಿದೆ 
***********************************************************************************

ಶ್ರೀ ರಾಮನ, ಮನಸು ಈ ಸೀತೆಗೆ 
ಋಣಾನುಬಂಧ ಕೂಡಿದಂತೆ ಈ ಜೋಡಿಗೆ 
ಶ್ರೀ ರಾಮನ, ಮನಸು ಈ ಸೀತೆಗೆ 

ಶ್ರೀ ರಾಮನ, ಮನಸು ಈ ಸೀತೆಗೆ 
ಋಣಾನುಬಂಧ ಕೂಡುವಲ್ಲಿ ದೈವ ಸಾಕ್ಷಿಯೇ 
ದೇವರಲ್ಲವೇ, ಅರಸೋ ಪ್ರೀತಿಯೆಂದರೆ....  

************************************************************
(ಹೆಂ) ಸೀತಮ್ಮಗೆ, ರಘುಕುಲ ರಾಮನಾಸರೆ 
ಋಣಾನುಬಂಧ ರೂಪವಾಗಿ ಪ್ರೀತಿಯ ಸೆರೆ 
ಶ್ರೀ ರಾಮನ, ಉಸಿರಲಿ ಈ ಜಾನಕಿ...

Alternate pallavi:
ಈ ಸೀತೆಗೆ, ರಘುಕುಲ ರಾಮನಾಸರೆ
ಋಣಾನುಬಂಧ ಕೂಡಿಬಂದು ಪೀತಿಯ ಸೆರೆ
ಶ್ರೀ ರಾಮನ, ಉಸಿರಲಿ ಈ ಜಾನಕಿ... 

(ಹೆಂ) ಇವನ ಮನಸು ಅವಳ ಕಡೆಗೆ 
(ಗಂ) ಇವಳಲ್ಲಿ ಅರಳಿದಂತೆ ಹೂ ನಗೆ 
(ಹೆಂ) ಒಲವ ಶರವ ಗುರಿ ಮಾಡಿ ಹೂಡುವನು ರಾಮ 
(ಗಂ) ಶುಭದ ಫಲವ ಶರಣಾಗಿ ನೀಡಿದಳು ಸೀತಾ 
(ಹೆಂ) ಹೊಸ ಹಾಳೆ ತೆರೆದಂತೆ ಬಾಳು 
(ಗಂ) ಹಿಡಿಗಾಗಿ ಬೆರಳೊಂದಿರಲು 
(ಹೆಂ) ಖುಷಿಯ ಕನಸು, ಪುನರಾರಂಭವಾದಂತಿದೆ... 

(ಹೆಂ) ಹಾಡಿನೊಂದಿಗೆ, ಹೊಸ ರಾಗ ಸೇರಿದೆ 
 
(ಹೆಂ) ರಾಮ ನಾಮ ನುಡಿಯೆ ಹೋಗಿ ನಾಚಿದಂತೆ ಸೀತೆ 
(ಗಂ) ಸೀತೆಯೆಂದೂ ರಾಮಗೆ ಅನುರಾಗ ಕವಿತೆ 
(ಹೆಂ) ಪ್ರೀತಿಯಲ್ಲಿ ದಿನವೂ ನಿತ್ಯೋತ್ಸವ 
(ಗಂ) ರೋಮಾಂಚನಗೊಳಿಸೋ ಆನಂದ ಪರ್ವ 
(ಗಂ) ಅತಿ ಸುಂದರ, ಸಮಾರಂಭಕೆ, ಇದೆ ದೇವರ ಸಾಕ್ಷಿಯು 

ಏನು ಅಂದವೋ, ಜೊತೆಯು ಏನು ಚಂದವೋ  
ಸರಾಗವಾಗಿ ಪ್ರೀತಿಯಾಗಿ ಏನು ಮೋಡಿಯೋ
ಶ್ರೀ ರಾಮನ, ಉಸಿರಲಿ ಈ ಜಾನಕಿ... 

ಹೇಳಬಾರದೇ, ನೀ ಹೇಳಬಾರದೇ

ಪಲ್ಲವಿ
******
ಹೇಳಬಾರದೇ, ನೀ ಹೇಳಬಾರದೇ
ಸರಾಗವಾಗಿ ಪ್ರೀತಿಯನ್ನು ಹೇಳಬಾರದೇ...
ಹೇಳಬಾರದೇ, ನೀ ಹೇಳಬಾರದೇ

ಚರಣ ೧
**********
ಬೆರಳ ಹಿಡಿದು ಸಾಗುತಲಿ 
ತುಸು ದೂರ ಸಂಚಾರ ಮಾಡುವಂತೆ
ಬೆರಗುಗಣ್ಣಿನಂಚಲ್ಲಿ ಮನೆ ಮಾಡಿ ನಿಂತೆ  
ಮುಗಿಯದಂಥ ಆಕಾಶ ನೀನೊಂದು ಕವಿತೆ  
ಇದೇ ನೋಡು ಸರಿಯಾದ ವೇಳೆ
ಸೆರೆ ಆಗು ಮನದ ಒಳಗೆ 
ಮುಗಿದ ಕನಸ, ಪುನಾರಂಭ ಮಾಡು ಬಾ 

ಹೇಳಬಾರದೇ, ನೀ ಹೇಳಬಾರದೇ  

ಚರಣ ೨
**********
ಹಾಡಿನಂತೆ ಕಾಡು ಚಂದ ರಾಗದೊಳಗೆ ಕುಳಿತು 
ತಾಳ ತಪ್ಪುವಾಗ ಎದೆಯ ಉಸಿರಲ್ಲಿ ಬೆರೆತು 
ದೀಪವಾಗು ಇರುಳ ಕಾದಾಡಲು 
ರೋಮಾಂಚನಗೊಳಿಸು ಒಂದೊಂದೂ ಕ್ಷಣವೂ 
ಬರೋದಾದರೆ, ಇರೋದಾದರೆ, ಇದೋ ಪ್ರೀತಿಗೆ ಸ್ವಾಗತ... 

ಹೇಳಬಾರದೇ, ನೀ ಹೇಳಬಾರದೇ
ಸರಾಗವಾಗಿ ಪ್ರೀತಿಯನ್ನು ಹೇಳಬಾರದೇ...
ಹೇಳಬಾರದೇ, ನೀ ಹೇಳಬಾರದೇ


********************************
ತೆರೆಯ ಸರಿಸಿ  ಬಾ
ಬೆರಳ ಹಿಡಿದು ದಾಟಿಸು ಬಾ 
ಮೊದಲ ಮಳೆಗೆ ಶರಣಾಗು ಬಾ
ಬೆರಗುಗಣ್ಣು ತೆರೆವಂತೆ ನೇರವಾಗಿ ಬಾ
ಮುಗಿಯದಂಥ ಹಾಡಂತೆ ಹಿತವಾಗಿ ಉಲಿ ಬಾ
ಇದೇ ನೋಡು ಸರಿಯಾದ ವೇಳೆ
ಪುನಾರಂಭ ಪ್ರಣಯ ಕವಿತೆ
ಮನದ ಕರೆಗೆ, ನಿರಾತಂಕ ದಯಪಾಲಿಸು..

********************************

ಲಾಲಿ ಜೋ, ಜೋ ಲಾಲಿ

ಅಮ್ಮ ನಿನ್ನ ಕಂದ ನಾನು
ಅಳುವ ಶಬ್ಧ ಕೇಳಿಸದೇ?
ನೀನೇ ಎಲ್ಲ ಅಂದುಕೊಂಡೆ
ಬೇರೆ ದಾರಿ ಕಾಣಿಸದೆ
ತಪ್ಪು, ಸರಿ ಕಲಿಸು ನೀನೇ
ಶ್ರದ್ಧೆಯಿಂದ ಕಲಿಯುವೆ
ಕಣ್ಣಾ ಮುಚ್ಚೆ ಆಟದಲ್ಲೂ
ಸೋತು ನಿನ್ನ ಗೆಲ್ಲಿವುವೆ

ಉಸಿರು ಕೊಟ್ಟ ದೇವತೆ ನೀನು
ನನ್ನನ್ನು ಒಂಟಿ ಮಾಡದಿರು
ಗೀಚಿದ ಹಣೆ ಬರಹವನ್ನೂ
ತಿದ್ದುವ ಹಾಗೆ ಶಕ್ತಿ ಕೊಡು
ಬಿನ್ನಹಗಳ ಪಟ್ಟಿ ಇಲ್ಲಿದೆ, ಒಮ್ಮೆ ಓದೆಯಾ
ಮುದ್ದಿಸುತ ನನ್ನ ಜೊತೆ ಮಾತನಾಡೆಯಾ?

*****************

ಮಳೆಯಂಬ ಹೆತ್ತ ತಾಯ ಉಸಿರು ನಿಲ್ಲುವ ವೇಳೆ
ಹನಿಯೀಗ ಭೂ ತಾಯಿಯ ಮಡಿಲಲ್ಲಿ
ದೇವಕಿಯ ಪ್ರೀತಿಯ ಸವಿದ ಕಂದಳಿಗೆ
ಯಶೋಧೆಯ ತೊಟ್ಟಿಲಲಿ ಜೋಗುಳದ ಲಾಲಿ

ಸಾಕು ಮಾಗಳಿಗೆ ಎರಡು ತಾಯಂದಿರು

ಮೋಡವೆಂಬ ತಾಯಿ ಹೆತ್ತು ಉಸಿರು ಬಿಟ್ಟಳು
ಹನಿಗಳೀಗ ಭೂಮಿ ತಾಯಿಯ ಮಡಿಲಲ್ಲಿ
ದೇವಕಿಯ ಪ್ರೀತಿಯ ಸವಿದ ಕಂದಮ್ಮಳಿಗೆ
ಯಶೋಧೆಯ ತೊಟ್ಟಿಲಲಿ ಜೋಗುಳದ ಲಾಲಿ

******************

ದೇವಕಿ, ಯಶೋಧ 
ಇಬ್ಬರ ಪ್ರೀತಿಯ ಹಾಡು ಬಾಳು ಪೂರ್ಣವಾಲು 
ಹುಟ್ಟಿರಲಿ, ತುತ್ತಿರಲಿ
ಹೆರುವ, ಉಣಿಸುವುದರಲ್ಲಿ ಅಮ್ಮಂದಿರ ಪಾಲು 
ಹೆತ್ತು, ಹೊತ್ತು, ಉಣಿಸುವಲ್ಲಿ ಅಮ್ಮಂದಿರ ಪಾಲು 

ಉಸಿರು ಸೋಕಿದಲ್ಲಿ ಅಳುವ ನಿಲ್ಲಿಸಿ ಮಗು 
ನಿಂತ ಉಸಿರ ಪಾಪ ಪತ್ತೆ ಹಚ್ಚದಾಯಿತು 
ಜೋಳಿಗೆಯಿಂದ ಮಡಿಲ ತುಂಬುವ ಗಳಿಗೆ
ಅಮ್ಮನ ಕೈಯ್ಯ ಬೆರಳ ನಿದ್ದೆಯಲ್ಲೂ ಹುಡುಕಿತು 
ನಾಳೆಗಳ ನೇಯುವಲಿ 
ಚಂದಗಾಣಿಸುವಲ್ಲಿ ಅಮ್ಮಂದಿರದೇ  ಪಾಲು  

*******************************************************************
ಎತ್ತಣ ಹೆರುವವಳೋ, ಎತ್ತಣ ಪೊರೆವವಳೋ 
ಇಬ್ಬರಲ್ಲೂ ತಾಯಿ ಒಬ್ಬಳಾದ ಮಾಯೆ ಕಂಡೆಯಾ 
ಎತ್ತಣದ ಅಳುವೋ, ಎತ್ತಣದ ಹಸಿವೋ 
ಎರಡೂ ಒಮ್ಮೆಲೆ ನೀಗುವ ಶಕ್ತಿ ಧಾಮ ವಿಸ್ಮಯ 
ಸದಾ ತರುಣ ಮರಣ ಢಮರು, ನಾದ ಢಮ್ಮ ಢಕ್ಕದೆದುರು 
ನಾನು ಎಂಬುದೆಷ್ಟು ಸಣ್ಣ ಅಣುವಿನಂತೆ ಅಲ್ಲವೇ 
ಕಣ್ಣು ಬಿಟ್ಟ ಮಗುವಿಗಿಲ್ಲಿ ಕಂಡದ್ದೆಲ್ಲ ಹೊಚ್ಚ ಹೊಸತು 
ಮುತ್ತು ಕೊಡಲು ಹೆತ್ತ ಕರುಳಿಗಿಲ್ಲದಾಯ್ತು ಪ್ರಾಣವೇ!

ದಿಕ್ಕು ದಿಕ್ಕಿನಲ್ಲೂ ತೆಕ್ಕೆಗಿಳಿಸಿಕೊಳ್ಳುವಂತೆ ಮುಗಿಲು 
ಭೂಮಿಗಪ್ಪಳಿಸುತಿರಲು ಮಿಂಚು ಸಿಡಿಲ ಸಪ್ಪಳ 
ನಿಂತ ಮಳೆಗೆ ಮರದ ಎಲೆಯು ಜಾರಿ ಬಿಟ್ಟ ಹನಿಗಳಿಂದ 
ಇನ್ನೂ ಹೆಚ್ಚು ನೆನೆಯುವಂತೆ ಬಿರಿದ ನೆಲದ ಹಂಬಲ 
ವಿಧಿಯ ಬರಹದಂತೆ ಎಲ್ಲ ನಮ್ಮದೇನೂ ಇಲ್ಲವಂತೆ 
ಪಾತ್ರಧಾರಿಗಳಿಗೆ ಬೇರೆ ದಾರಿಯಿಲ್ಲ ನಟಿಸದೆ 
ಮನುಜರಾಗಿ ಹುಟ್ಟಿ ಬಂದ ಎಲ್ಲರಿಗೂ ಹೆಚ್ಚು ಕಡಿಮೆ 
ನಲಿವಿನಷ್ಟೇ ನೋವೂ ಕೂಡ ಬದುಕ ಪಾಠ ಕಳಿಸಿದೆ 
*****

ತಲೆಯ ಎತ್ತಿ ನಡೆದರೆ, ಕಡಿಯುವವರ ಕೊಡಲಿಯು 
ತಗ್ಗಿ ಬಗ್ಗಿ ಉಳಿದರೆ, ನೆರಳು ಸತ್ತ ವರದಿಯು 
ಎದ್ದ ದನಿಯ ಹೊಸಕಿದೆ, ಘೋರವಾದ ಶಬ್ಧವು 
ಗಾಯಕಿನ್ನೂ ತಟ್ಟಿದೆ ಕ್ರೂರವಾದ ಶಾಪವು 
ದುಷ್ಟ ಶಕ್ತಿ ಮುಷ್ಠಿಗೆ, ಎಲ್ಲ ತ್ರಾಣ ಮೀಸಲು 
ಯಾವ ದೇವರುಳಿದನೋ ಇನ್ನು ನ್ಯಾಯ ಕೇಳಲು 
ತಲೆಗಳುರುಳಿ ಬಿದ್ದರೆ ಭೂಮಿ ಭಾರ ತಣಿವುದು 
ಹತ್ತು ತಲೆಯ ರಾವಣಾಸುರರಿಗೂ ಕಾಲ ಬರುವುದು 

ಬಿಸಿಯ ರಕ್ತ ಕೇಳಿತು, ಸಾಲು ಸಾಲು ಪ್ರಶ್ನೆಯ 
ಸರಣಿ ಸೋಲು ಕಂಡರೂ, ಇನ್ನೂ ಮೂಡದೇ ಭಯ 
ಕಡಿದ ತಲೆಯ ಕಣ್ಣಲೂ ಆರದಂಥ ಕಿಚ್ಚಿದೆ 
ಯುದ್ಧ ಮಾಡಿ ಸತ್ತರೆ, ಸಾವೂ ಕೂಡ ಹೆದರಿದೆ 
ಮೌನ ಉಳಿದ ಮಾತ್ರಕೆ ಎಲ್ಲ ಮುಗಿದ ಹಾಗೆಯೇ?
ಕಹಳೆ ಮೊಳಗೋ ವೇಳೆಗೆ ಹುದುಗಿ ಕೂತ ಜ್ವಾಲೆಯೇ 
ನನ್ನ ನಿನ್ನ ಎದೆಯಲಿ ಸ್ಪೋಟಗೊಳ್ಳಬೇಕಿದೆ 
ಅಸುರ ಅಟ್ಟಹಾಸಕೆ ಅಂತ್ಯ ಹಾಡಬೇಕಿದೆ... 

***************

ಇನ್ನೂ ಬೆಳಕನು ಕಾಣದ ಚಿಗುರಿಗೆ 
ಈ ಪರಿ ಶಿಕ್ಷೆಯ ವಿಧಿಸುವ ದೇವರೇ 
ನಿನಗೆ ತಾಯಿಯ ಅಳುವಿನ ಕೂಗು 
ಕೇಳಿಸಲಿಲ್ಲವೇ ಈ ವರೆಗೆ 
ಇನ್ನೂ ಮಾತು ಕಲಿಯದ ನಾಲಿಗೆ 
ನಿನ್ನಯ ಸ್ಮರಣೆಯ ಮಾಡುವ ಹಾಗಿದೆ 
ಚುಚ್ಚುವ ಮುಳ್ಳೂ ಪಕ್ಕಕೆ ಸರಿದಿದೆ 
ಎಚ್ಚರವಾಗುವುದೇ ನಿನಗೆ 

ಒಂದೇ ಬೇರಿನ ಎರಡು ಜೇವ 
ನುಂಗುವುದೆಂತು ಈ ಪರಿ ನೋವ 
ಎಲ್ಲಕ್ಕೂ ಕೊನೆಯ ಇಟ್ಟಿರುವಂತೆ 
ಕಣ್ಣೀರನ್ನೂ ಒರೆಸಲು ಬಾ 
ಜೀವವ ಸೃಷ್ಟಿಸುವ ನಿನಗಷ್ಟೇ 
ಜೀವವ ಹೊತ್ತ 

******************

ಭೂಮಿಯ ಸಹನೆಯನ್ನು ಕಣ್ಣಿನಲ್ಲಿ ಹೊತ್ತಳು 
ಅರಳಿದ ಹೂವ ಗರ್ಭಗುಡಿಯಲ್ಲಿರಿಸಿಕೊಂಡಳು
ಆನೆಯ ಹೆಜ್ಜೆ ತೂಕ ಗಾಂಭೀರ್ಯ ನಡೆಯಲು 
ಗೆಜ್ಜೆಯ ಸದ್ದಿಗೊಂದು ಭಿನ್ನ ತಾಳ ಕೊಟ್ಟಳು
ದಾರಿ ಮುಳ್ಳು ಕೂಡ ಕೈಯ್ಯ ಮುಗಿದು ಸರಿವ ಹೊತ್ತು
ಸೆರಗ ಅಂಚಿನಲ್ಲಿ ಗಂಟಿನಂತೆ ಚೆಲುವ ಗುಟ್ಟು
ನಾಟ್ಯವೇ ನಾಚುವಂತೆ ಕುಣಿವ ಹೆಣ್ಣು ನವಿಲೀಕೆ
ಸೀಮಂತ ಮಾಡಿ ತೀರಲಿ ಬಸುರಿ ಬಯಕೆ

ನಾದಸ್ವರ ಕರೆಸಿ, ಸೋಬಾನೆ ಪದವ ಬೆರೆಸಿ
ಹಸಿರ ಬಳೆಗಳ ತೊಡಿಸಿ, ಕಾಡು ಮಲ್ಲೆ ಹೂವ ಮುಡಿಸಿ
ಚೌಡಿಕೆ ಮೀಟುತ ಹಾಡಿ, ಹುಳಿ ಮಾವು ಬುಟ್ಟಿ ಜೋಡಿ 
ಗಂಧವ ನುಣ್ಣಗೆ ತೀಡಿ, ದೇವಿಯ ಕೆನ್ನೆಗೆ ನೀಡಿ
ಊರೆಲ್ಲ ಡೊಳ್ಳು ಕುಣಿತ, ಕಂಸಾಳೆ ಕಂಚು ಸದ್ದು
ಕೋಲಾಟ ಆಡಿ ಬಂದ ಭಗವಂತ ತಾನೇ ಖುದ್ದು
ಕಪ್ಪು ಮಸಿಯ ಚಿಕ್ಕಿ ಇಡಿ ದೃಷ್ಟಿ ತಾಗದಿರಲಿ 
ದೇವರೇ ಹೆತ್ತ ಮಗಳ ಹೆರಿಗೆ ಭಾಗ್ಯ ತರಲಿ 

ಊರಿಗೆ ಹಬ್ಬದ ಕಳೆಯ ಸಡಗರ ತಂದ ಹೊತ್ತಲ್ಲಿ
ಎಲ್ಲೆಲ್ಲೂ ಓಕುಳಿ ಚೆಲ್ಲಿ ಮಣ್ಣೇ ಹೆಣೆದ ರಂಗೋಲಿ

************************

ಜನ್ಮವಿತ್ತ ತಾಯೇ ಇಷ್ಟು ಬೇಗ ಉಸಿರು ಬಿಟ್ಟೆಯಾ 
ನಿನ್ನ ಕರುಳ ಕುಡಿಯ ಎತ್ತಿ ಮುದ್ದಾಡಲು ಸೋತೆಯಾ 
ದಟ್ಟ ಕಾಡಿಯಲ್ಲಿ ನಿನ್ನ ಪುಟ್ಟ ಅಳುವ ಗೊಂಬೆಗೆ 
ಹಸಿವು ನೀಗಬೇಕು ಒಮ್ಮೆ ಎದೆಗೆ ಅಪ್ಪು ಮೆಲ್ಲಗೆ 
*************************

ಅಮ್ಮ 
ಜನ್ಮ ಕೊಟ್ಟ ತಾಯೇ ಇಷ್ಟು ಬೇಗ ಉಸಿರು ಬಿಟ್ಟೆಯಾ 
ನಿನ್ನ ಕರುಳ ಬಳ್ಳಿಯನ್ನು ದೂರ ಮಾಡಲು ಹೊರಟೆಯಾ  
*************
ಜನ್ಮ ಕೊಟ್ಟ ತಾಯೇ ನಿನ್ನ ಗುಮ್ಮಾ ಹೊತ್ತು ಹೋದನೆ?
ನಿನ್ನ ಕರುಳ ಬಳ್ಳಿಯಿಂದ ದೂರಮಾಡಿ ಬಿಟ್ಟನೇ?
ದಟ್ಟ ಕಾಡಿನಲ್ಲಿ ನಿನ್ನ ಪುಟ್ಟ ಅಳುವ ಕಂದ 
ದಿಕ್ಕು ತೋಚುತಿಲ್ಲ ಈಗ ತೆರೆದ ಕಣ್ಣಿನಿಂದ 
ಹಸಿವು ನೀಗಬೇಕು ಒಮ್ಮೆ ಹಾಲ ಉಣಿಸಿ ಹೋಗು 
ಉಸಿರು ಕೊಟ್ಟ ಹಾಗೆ ಒಂದು ಹೆಸರ ಇಟ್ಟು ಕೂಗು... 

ಗರ್ಭ ತಾಳಿ ನನ್ನ ಹೊತ್ತೆ ಜೋಪಾನವಾಗಿ 
ಪ್ರಸವ ಬೇನೆ ಕೊಟ್ಟು ಈಗ ಒಂಟಿಯಾದೆ ನಾನು
ಬೆರಳ ಚಾಚಿದಾಗ ಯಾರೂ ಹಿಡಿಯಲಿಲ್ಲವಾಗಿ 
ಬೆಚ್ಚಿ ಬೀಳುವಾಗ ನಿನಗೂ ದುಃಖವಾಯಿತೇನು  
ಮೆತ್ತಿದ ಕಂಬನಿ ಒರೆಸು ಬಾ 
ಮುತ್ತನು ನೀಡುತ ಅರಸು ಬಾ 
ಒಮ್ಮೆ ನಿನ್ನ ಮಡಿಲಲ್ಲಿ, ಇರಿಸಿ ಲಾಲಿ ಹಾಡು ಬಾ.... 
 

********************************************************************

ಲಾಲಿ ಜೋ, ಜೋ ಲಾಲಿ 
ಲಾಲಿ ಜೋ, ಜೋ ಲಾಲಿ 
ಹುಟ್ಟಿದ ಕೂಸು ಕಣ್ಣೇ ಬಿಟ್ಟಿಲ್ಲ 
ಅತ್ತು ಕರೆದದ್ದು ನಿನ್ನ ಮುಟ್ಟಿಲ್ಲ 
ಬತ್ತಿದ ಎದೆಯ ಹಾಲು ದಕ್ಕಿಲ್ಲ 
ಹಸಿವನ್ನೋದನ್ನ ಕಲಿಸೇ ಬಿಟ್ಟಲ್ಲ 
ಬೆತ್ತಲ ಮುಚ್ಚೋಕೆ ಯಾರೂ ದಿಕ್ಕಿಲ್ಲ 
ಕತ್ತಲೇ ನಿನ್ನ ಸುತ್ತಿಕೊಂತಲ್ಲ .... 

ಲಾಲಿ ಜೋ, ಜೋ ಲಾಲಿ 
ಲಾಲಿ ಜೋ, ಜೋ ಲಾಲಿ
ಜೋಳಿಗೆ ಕಟ್ಟಿ ತೂಗೋರು ಇಲ್ಲ
ಏಳಿಗೆಗಾಗಿ ಹರಸೋರೂ ಇಲ್ಲ 
ಕೆನ್ನೆಯ ಸವರಿ ಮುತ್ತಿಟ್ಟೋರಿಲ್ಲ 
ತಾಯಿನೇ ಬಿಟ್ಟು ಹೊಂಟೇ ಬಿಟ್ಳಲ್ಲ 
ನಿನ್ನೋರು ಅಂತ ನಿಂಗ್ಯಾರೂ ಇಲ್ಲಿಲ್ಲ 
ದೇವರು ಕೂಡ ಕುರುಡಾದನಲ್ಲ.... 

ಲಾಲಿ ಜೋ, ಜೋ ಲಾಲಿ 
ಲಾಲಿ ಜೋ, ಜೋ ಲಾಲಿ

ಇಲ್ಲಿ ಸಾಕು ತಾಯಿ ಹೆತ್ತ ತಾಯಿಗೂ ಮಿಗಿಲಾದಳು 
ಸತ್ತು ಸ್ವರ್ಗ ಸೇರಿ ಅಮ್ಮ ಮೇಲೆಲ್ಲೋ ನಗುತಿರುವಳು 
ಒಳ್ಳೆ ಗೊಂಬೆಯಂತೆ ಮುದ್ದು ಮುದ್ದಾಗಿ ಈ ಕಂದನು 
ಚಂದ ತುಂಟಾಟವಾಡುತ್ತ ಮನೆಯನ್ನೇ ಬೆಳಗಿಹಳು 
ಪ್ರೀತಿ ಮಮತೆಯ ಧಾರೆಯ ಎರೆದಾಕೆ ತಾಯಲ್ಲವೇ 
ತಾಯಿ ಮಗುವಿನ ನಡುವಿನ ಮಾತೆಲ್ಲ ಜೋಗುಳವೇ....... 

ಲಾಲಿ ಜೋ, ಜೋ ಲಾಲಿ 
ಲಾಲಿ ಜೋ, ಜೋ ಲಾಲಿ 

Thursday, 16 July 2020

ಮೋಸಗಾರರ ಸುತ್ತ

ಹೋಮ ಕುಂಡಕೆ ಗಂಧ ಗಡ್ಡಿ ಕರ್ಪೂರವನು
ಸುರಿದು ಕೈ ಮುಗಿದಾಗ ಪಾಪ ಕಳೆಯುವುದೇ?
ಸುಳ್ಳಾಡಿ ನಾಲಿಗೆಯ ಎಳೆದು ದೇವ ಸ್ತುತಿ-
-ಗೈದರೆ ಸುಳ್ಳೆಲ್ಲ ನಿಜವಾಗಿಬಿಡುವುದೇ?

ಅನ್ಯಾಯವ ಪ್ರಶ್ನೆ ಮಾಡುವವರು
ನ್ಯಾಯ ತಮಗಷ್ಟೇ ಅನ್ವಯಿಸುವುದು ಎನ್ನುತಿಹರು
ಮಾಡಿದ್ದ ಉಣ್ಣುವರು, ತೋಡಿಟ್ಟು ಬೀಳುವರು
ಎಂಬ ನಿಜವ ಏಕೋ ಮರೆತುಬಿಟ್ಟಿಹರು

ತೆರೆಮರೆಯ ಆಟದಲಿ ಪ್ರಾವಿಣ್ಯ ಹೊಂದುತಲಿ
ಎದುರಲ್ಲಿ ಬಣ್ಣ ಬಣ್ಣದ ವೇಷ ತೊಟ್ಟರು
ಬೀಸೋ ದೊಣ್ಣೆಯ ಹೇಗೋ ತಪ್ಪಿಸಿಕೊಂಡವರು
ಮಾತು ತಪ್ಪಲು ಸಮಜಾಯಿಷಿ ಕೊಟ್ಟರು

ಆಚೆ ಹುಲ್ಲಿಗೆ ಬೆಂಕಿ ಬಿದ್ದಾಗ ಹೊಯ್ಯದೆ
ಉಚ್ಚೆಯನೂ ತಮ್ಮಲ್ಲೇ ಉಳಿಸಿಕೊಳ್ಳುವರು
ತಮ್ಮ ಬುಡಕೆ ಬಂತೋ, ಎದ್ದು ಬಿದ್ದು ಪಾಪ
ಉರಿಯ ತಾಳದೆ ಹೇಗೆ ಅರಚಾಡುತಿಹರು!

ನಂಬಿಕೆಯ ಮಾರಿಕೊಂಡವರಲ್ಲದೆ ಮತ್ತೆ
ನಂಬಿದವರೇ ಮೂರ್ಖರೆಂದು ಹೆಸರಿಟ್ಟರು
ಕೇಳದವರಾರಿಲ್ಲವಾಗಿ ಮೋಸದ ಕುರಿತು
ಯಾರಿಗೂ ತಿಳಿದಿಲ್ಲವೆಂದು ಭ್ರಮಿಸಿಹರು

ದಾಳಿಕೋರರು ತಾವು ದಾಳಿಗೊಳಗಾಗದಿರೆ
ಕದ್ದ ಕೋಟೆಯ ಸುತ್ತ ಬೇಲಿ ನೆಟ್ಟಿಹರು
ಬರಿಗಳ್ಳತನದಲ್ಲಿ ಗಳಿಸಿದ ಸ್ವತ್ತನ್ನು
ಕಾಪಾಡಿಕೊಳ್ಳಲು ಹೆಣಗಾಡುತಿಹರು

ಕೊನೆಗೊಮ್ಮೆ ಸೋತರೂ, ಸೋಲ ಕಹಿ ಕಿರಿದು
ಕೊಬ್ಬಿ ಗಳಿಸಿದ ಗಬ್ಬು ಸಿಹಿಯ ಎದುರು
ಕಹಿಯಾದರೂ ಪಾಠ ಕಲಿಸಲಿಲ್ಲ ಅದಕೇ
ಸಿಹಿಯ ಸುತ್ತ ಇರುವೆ ಹುತ್ತ ನೂರಾರು!

Sunday, 5 July 2020

ಕನ್ನಡಿ ಹಿಡಿಯುವೆ ಮನಕೆ

ಕನ್ನಡಿ ಹಿಡಿಯುವೆ ಮನಕೆ 
ನೀ ಇಲ್ಲದ ತಿಳಿಸುವೆ ಅದಕೆ 
ನಿಲ್ಲಲೇ ಬೇಕಿದೆ ತಳಮಳವೆಲ್ಲ 
ಸಲ್ಲದು ಪ್ರೀತಿಯ ಬಯಕೆ 
ನಿನ್ನ ಪ್ರತಿ ನೆನಪು, ಪ್ರತಿ ಬಾರಿ, ಎದೆ ಸೇರಿ 
ಉಸಿರ ಕಟ್ಟಿ ಹೋಗುತಿದೆ  
ಬೇಡ, ಬೇಡ ನಿನ್ನ ನೆನಪೇ ಬೇಡ...

ಕನ್ನಡಿ ಹಿಡಿಯುವೆ ಮನಕೆ 
ನೀ ಇಲ್ಲದ ತಿಳಿಸುವೆ ಅದಕೆ 
ನಿಲ್ಲಲೇ ಬೇಕಿದೆ ತಳಮಳವೆಲ್ಲ 
ಸಲ್ಲದು ಪ್ರೀತಿಯ ಬಯಕೆ  
ನಿನ್ನ ಪ್ರತಿ ನೆನಪು, ಪ್ರತಿ ಬಾರಿ, ಎದೆ ಸೇರಿ 
ಉಸಿರ ಕಟ್ಟಿ ಹೋಗುತಿದೆ  
ಬೇಡ, ಬೇಡ ನಿನ್ನ ನೆನಪೇ ಬೇಡ...

-------------------
ಮೇಣದ ಉರಿ ಬೆಳಕಿನ ಕತೆ 
ಹೇಳುತಾ ಇದೆ ಕರಗುವ ಭಯವಿಲ್ಲದಂತೆ 
ಇರುಳನು ಸರಿಸಿ.. ಆ ಆ ಆ 
ದೂರಕೆ ಆಗೋ ಪ್ರತಿದ್ವನಿಸಿತು 
ನೋವಿನ ಕರೆ ವಿರಹದ ಸ್ವರದಂಚಿನಲ್ಲಿ 
ನಿನ್ನನು ಅರಸಿ
ಆ ಮೇಣದಂತೆ ನಾ ಕರಗುವೆನು 
ನೀ ಉಳಿಸಿ ಹೋದ ಕಿಡಿ ಸೋಕುತಲೇ 
ನೀ ನನ್ನ ಕರೆಯನು ಆಲಿಸಿಯೂ 
ತಿರುಗಿ ನೋಡದಾದೆ... 

ಕನ್ನಡಿ ಹಿಡಿಯುವೆ ಮನಕೆ 
ನೀ ಇಲ್ಲದ ತಿಳಿಸುವೆ ಅದಕೆ 
ನಿಲ್ಲಲೇ ಬೇಕಿದೆ ತಳಮಳವೆಲ್ಲ 
ಸಲ್ಲದು ಪ್ರೀತಿಯ ಬಯಕೆ  
ನಿನ್ನ ಪ್ರತಿ ನೆನಪು, ಪ್ರತಿ ಬಾರಿ, ಎದೆ ಸೇರಿ 
ಉಸಿರ ಕಟ್ಟಿ ಹೋಗುತಿದೆ  
ಬೇಡ, ಬೇಡ ನಿನ್ನ ನೆನಪೇ ಬೇಡ...

----------------------
ಬಣ್ಣದ ಮಸಿ ಬಳಿಯದೆ ಬರಿ 
ಸುಣ್ಣದ ಹುಸಿ ಕನಸಿನ ಮನೆಯಲ್ಲಿ ನಿನ್ನ 
ಬಿರುಕಿನ ಗುರುತು... ಆ ಆ ಆ 
ಹೂವಿನ ಗರಿ ಉದುರುವ ಥರ 
ಬೇರ ಸಾಯಿಸಿ ಉರುಳುವ ಮರ 
ಹೇಳುತಾವೆ ನಮ್ಮಯ ಕುರಿತು
ಆ ಸೋರುವ ಮನೆ ನನ್ನೊಳಗೆ 
ಮುರಿದು ಬಿದ್ದಿದೆ ನೀನಿರದೆ 
ಈ ಹರಿದ ಮರದ ಗೂಡನು ಮರೆತು 
ಏಕೆ ದೂರವಾದೆ...?

ಲ ಲ್ಲಾಯಿ ಲಾಯಿ ಲಾಯಿ ಲಾಯಿ ಲಾಯಿ ಲಾ ಲೇ... 
ಲ ಲ್ಲಾಯಿ ಲಾಯಿ ಲಾಯಿ ಲಾಯಿ ಲಾಯಿ ಲಾ 
ಲ ಲ್ಲಾಯಿ ಲಾಯಿ ಲಾಯಿ ಲಾಯಿ ಲಾಯಿ ಲಾ ಲೇ... 
ಲ ಲ್ಲಾಯಿ ಲಾಯಿ ಲಾಯಿ ಲಾಯಿ ಲಾಯಿ ಲಾ 
ನಿನ್ನ ಪ್ರತಿ ನೆನಪು, ಪ್ರತಿ ಬಾರಿ, ಎದೆ ಸೇರಿ 
ಉಸಿರ ಕಟ್ಟಿ ಹೋಗುತಿದೆ  
ಬೇಡ, ಬೇಡ ನಿನ್ನ ನೆನಪೇ ಬೇಡ...

ನೇರ ನೇರ ನಿಲ್ಲುತ, ಮಾತೇ ಆಡದೆ, ಪ್ರೀತಿ ಮಾಡುವ

ನೇರ ನೇರ ನಿಲ್ಲುತ, ಮಾತೇ ಆಡದೆ, ಪ್ರೀತಿ ಮಾಡುವ
ತೀರಾ ಆಸೆ ಆದರೆ, ಚೂರು ಹತ್ತಿರ, ಬಂದು ಸೇರುವ 
ತಾನಾಗಿ ಬರುವಂತೆ ಮಳೆಯನ್ನು ಮನಸಾರೆ ಕೂಗುವ 
ಕಣ್ಣಲ್ಲಿ ಕಣ್ಣಿಟ್ಟು ನವಿರಾದ ಕನಸೊಂದ ಕಾಣುವ 

ನೇರ ನೇರ ನಿಲ್ಲುತ, ಮಾತೇ ಆಡದೆ, ಪ್ರೀತಿ ಮಾಡುವ
ತೀರಾ ಆಸೆ ಆದರೆ, ಚೂರು ಹತ್ತಿರ, ಬಂದು ಸೇರುವ 

ಕೋಮಲ ನಿನ್ನ ಕೈಯ್ಯನು ಹಿಡಿದೇ ತೀರುವ ಹಂಬಲ 
ವೇಳೆಗೆ ಕಾಯಲಾರೆನು ತೆರೆದು ನೋಡು ಎದೆ ಬಾಗಿಲ 
ನೀನಾಗಿ ಕೊಡಬೇಡ ಏನೊಂದೂ ಸುಳಿವನ್ನೂ 
ನೀರಾಗಿ ಹರಿಯುತ್ತ ತಲುಪುವೆನು ನಿನ್ನನ್ನು 
ನಿನ್ನ ನೋಡಿ ಕದ್ದು ಓಡಿ ಹೋದ ಚಂದ್ರ ನೋಡು  
ಹುಣ್ಣಿಮೆಯ ನನ್ನ ಪಾಲಿಗಂತ ಬಿಟ್ಟು ಹೋದ 
ಅದೇನೋ ಮೋಡಿ ಮಾಡಿ, ನಗೋದು ಏಕೆ ಹೀಗೆ?
ಸರಾಗವಾಗಿ ನನ್ನ ಪ್ರಾಣದಲ್ಲಿ ಸೇರಿ ಹೋದೆ

ನೇರ ನೇರ ನಿಲ್ಲುತ, ಮಾತೇ ಆಡದೆ, ಪ್ರೀತಿ ಮಾಡುವ
ತೀರಾ ಆಸೆ ಆದರೆ, ಚೂರು ಹತ್ತಿರ, ಬಂದು ಕೂರುವ 

ಭೇದಿಸು ನನ್ನ ಆಸೆಯ, ನಿನ್ನನ್ನೇ ಸುತ್ತುವರಿದಂತಿವೆ 
ಏರು ಬಾ ಬಾಳ ನೌಕೆಯ, ಆ ದೂರ ಕಡಲನೂ ದಾಟುವೆ  
ಏನೇನೋ ಅನಿಸೋಕೆ ಶುರುವಾಗಿ ಈಗೀಗ 
ನಿನ್ನನ್ನು ಬೆರೆಯೋದೇ ಅತಿಶಯದ ಸಹಯೋಗ 
ಈಗ ಹೆಚ್ಚು ಏನೂ ಹೇಳಲಾರೆ ನಿನ್ನ ಮುಂದೆ 
ಇನ್ನು ಮೇಲೆ ನಿನ್ನ ನನ್ನ ದಾರಿ ಎಲ್ಲ ಒಂದೇ 
ಈ ಪ್ರೀತಿ ಆಗೋವಾಗ, ವಿಶೇಷ ಎಲ್ಲ ಕೂಡ 
ಅದೇನು ಹೇಗೆ ಎತ್ತ ಅಂತ ನನ್ನ ಕೇಳಬೇಡ 

ನೇರ ನೇರ ನಿಲ್ಲುತ, ಮಾತೇ ಆಡದೆ, ಪ್ರೀತಿ ಮಾಡುವ
ತೀರಾ ಆಸೆ ಆದರೆ, ಚೂರು ಹತ್ತಿರ, ಬಂದು ಸೇರುವ 
ತಾನಾಗಿ ಬರುವಂತೆ ಮಳೆಯನ್ನು ಮನಸಾರೆ ಕೂಗುವ 
ಕಣ್ಣಲ್ಲಿ ಕಣ್ಣಿಟ್ಟು ನವಿರಾದ ಕನಸೊಂದ ಕಾಣುವ 

Thursday, 2 July 2020

ಪ್ರೇಮ-ಕಾಮ

ಕಣ್ಣು ಮುಚ್ಚಿ ಒಪ್ಪಿಸು 
ಕೊನೆಯ ಕ್ಷಣಕೆ ತಪ್ಪಿಸು 
ಸಮಯ ಇನ್ನೂ ಮುಂದಿದೆ 
ಸರಿದು ಬಿಡಲಿ ಕಾಯಿಸು 
ಏಕೆ ಇಷ್ಟು ಆತುರ?
ತೊದಲುವಂತೆ ಅಧರವು 
ಅರ್ಧ ಹಸಿವು ನೀಗಿದ 
ದುಂಬಿ ಮಾತಿಗಿಳಿದವು 

ಕಡಿದ ಬೆಣ್ಣೆ ಗಡಿಗೆಯ 
ಬಿಟ್ಟು ಬರದ ಕೋಲಿದೆ
ಕುಚ್ಚು ಕಳಚಿಕೊಳ್ಳುತ
ನುಲಿಯುವಂಥ ನೂಲಿದೆ 
ಬೆಳ್ಳಿ ಕಪ್ಪಗಾಯಿತು 
ಬೆಣ್ಣೆ ತುಪ್ಪವಾಯಿತು 
ಸಂಜೆ ಹೊತ್ತು ಕಾಯದೆ 
ಮುಂಜಾವನು ಅಪ್ಪಿತು 

ಧೂಪ ದಾಟುವಂತೆಯೇ 
ಕಟ್ಟಿಕೊಂಡೆ ತುರುಬನು 
ನೆಟ್ಟು ನೋಡು ನೋಟವ 
ನಾನೂ ಕರಗ ಬಲ್ಲೆನು 
ಮೀಸೆ ಹೊತ್ತ ಮಾತ್ರಕೆ 
ನಾಚಬಾರದೇತಕೆ
ಈಗ ನೀನೇ ಗಂಡಸು 
ನಾನು ಹೆಣ್ಣ ಪಾತ್ರಕೆ 

ಬಾಗಿಲಿನ್ನೂ ಮುಚ್ಚಿದೆ 
ಪಾತ್ರದಲ್ಲಿ ತೊಡಗುವ 
ಸಂಭಾಷಣೆಯಿಲ್ಲದೆ 
ಮಂತ್ರಮುಗ್ಧರಾಗುವ 
ಎಷ್ಟು ಬಿಡಿಸಿಕೊಂಡರೂ 
ಇನ್ನೂ ಸಿಕ್ಕು ಪ್ರೇಮವು
ಉಸಿರಿನಷ್ಟೇ ಸುಲಭಕೆ 
ದಕ್ಕಿದಂತೆ ಕಾಮವು 

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...