Sunday 4 October 2020

ಸೋಜಿಗವೀ ಜಗ ಕಣಕಣವೂ ಕೂಡ

ಕಂಪನು ಸೂಸುವ ಸಂಜೆಗೆಂಪನು ಹೋಲುವ ಹೂವು 

ಕಂಪನ ಮೂಡಿಸಿ ದಿಬ್ಬಣ ಸಾಗಿದೆ ದುಂಬಿಯ ಸಾಲು
ಆಟವ ಪಾಠವ ಕಲಿಸುವ ತಾಣದಿ 
ನಲಿವಿನ ಅರಿವಿನ ಸುಜ್ಞಾನ
ನೋಡುತ ನೋಡುತ ಇನ್ನೂ ತಣಿಯದೆ 
ಕಣ್ಮನವಾಗಿದೆ ತಲ್ಲೀನ 
ಗಾಳಿಯ ಧಾಟಿಗೆ ಸಪ್ಪಳ ಹಾಕಿವೆ 
ಚಿಗುರೆಲೆಗಳು ತಾವೊಂದಾಗಿ 
ತಾವೇ ಮಿಗಿಲೆನ್ನುವ ಮುಗಿಲೆಲ್ಲವೂ 
ಧರೆಗೆ ಇಳಿದವು ಮಳೆಯಾಗಿ 

ರೆಕ್ಕೆಯ ಬಡಿಯುತ ಹತ್ತಿರವಾಗುವ ಹಕ್ಕಿಯ ಹಿಂಡು 
ಹಾರಿ ಬೆಳೆಸಿವೆ ದೂರದ ಪಯಣವ ಗುಟಿಕಿಗೆಂದು 
ಸಿಕ್ಕ ಹಣ್ಣು-ಹಿಪ್ಪೆಯ ಮೆಲ್ಲುತ 
ಅವರಸವೇನೋ ಇವುಗಳಿಗೆ 
ಮತ್ತೆ ಹಾರಿ ಹೊರಟಿವೆ ಮುಂದೆ 
ನಿಲ್ಲದೆ ಎಲ್ಲೂ ಅರೆಗಳಿಗೆ 
ತಾಯಿಯ ಮಡಿಲಿನ ಅಕ್ಕರೆ ಮುಂದೆ 
ನಾಕವೇ ನಾಚಿದೆ ಅನಿಸುತಿದೆ 
ಎಲ್ಲ ಬಂಧಕೂ ಬಣ್ಣವ ಹಚ್ಚುವ
ಸಂಬಂಧದ ಸವಿ ನಾ ಸವಿದೆ... 

ಸೋಜಿಗವೀ ಜಗ ಕಣಕಣವೂ ಕೂಡ
ಆಲಿಸುವ ಸುಖ ಇನಿದನಿಯ ಹಾಡ 
ಹೆಸರಿಲ್ಲದ ದೇವರ ಕುಸುರಿ
ಸುಂದರ ಸೊಬಗಿನೈಸಿರಿ 

ಉರುಳುವ ಮರಗಳ ಅನುಭವ ಪಡೆದು ನಿಂತಿವೆ ಸಾಲು 
ಅಂಜಿಕೆಯಿಲ್ಲದೆ ಹೆಮ್ಮರವಾಗಿಸೋ ಆಳದ ಬೇರು 
ಹೆಜ್ಜೆಯನಿಟ್ಟೆಡೆಯೆಲ್ಲವೂ ಕಾಲಡಿ 
ಸಿಕ್ಕುವ ಸಾವಿರ ಗುರುತುಗಳು 
ಯಾವುದೇ ದಿಕ್ಕನ್ನು ಹಿಡಿದರೂ 
ತಪ್ಪದೆ ಕೂಡುವ ಕಾಲು ದಾರಿಗಳು 
ಕಾರಣ ನೀಡದೆ ನಗುವ ಹೂಗಳು 
ಜೀವನ ಪಾಠವ ಕಲಿಸುತಿವೆ 
ಧ್ಯಾನಿಸಿ ಸಿದ್ಧಿಸುವ ಸುಖವೊಂದನು
ಕಾನನವು ದಿನ ಕರುಣಿಸಿದೆ 

ದೂರದಿ ಗೂಡನು ಬಿಟ್ಟು ಹಾರಿವೆ ಹಕ್ಕಿಯ ಹಿಂಡು
ಬೇಟೆ ಬಲೆಗಳ, ಶರ ಪಂಜರಗಳ/ಪುಂಖಗಳ ಗೆದ್ದು ಬಂದು 
ಹೊತ್ತು ಹೊತ್ತಿನ ಹಸಿವನು ನೀಗಲು
ಸಿಕ್ಕ ಹಣ್ಣನು ಮೆಲ್ಲುತಲಿ
ಪಿಕ್ಕೆ ಆದರೂ ಬಿತ್ತಿ ಪ್ರಾಣವ
ಮತ್ತೆ ಚಿಗುರಿಗೆ ದೂಡುತಲಿ 
ಬಾನುಲಿಯ ಆಲಿಸುತಾ ತೂಗಿವೆ
ಮೈ ಮರೆತ ತರುಲತೆಯಿಲ್ಲಿ
ಗಾಳಿಯ ಕೆನ್ನೆಗೆ ರೆಕ್ಕೆಯ ಸವರುತ
ರಂಗೇರಿದೆ ಬಾಂದಳದಲ್ಲಿ

ಝುಳು ಝುಳು ಹರಿಯುತ ಧುಮುಕುವ ನೀರು ದಣಿಯದೇ ಎಲ್ಲೂ?
ಬಾಯಾರಿದ ನೆಲ ತೆನೆ ತೊನೆದಾಡಿಸಿ ಮುಡಿದಿದೆ ನೆಲ್ಲು 
ಇರುವುದ ಹಂಚುವ ಇಲ್ಲದ ಪಡೆಯುವ 
ಸಮತೋಲನವಿದೆ ಈ ಜಗದಿ 
ಬೆರಗಾಗಿಸುವ ಹಕ್ಕಿಗಳಿಂಚರ  
ವೈವಿಧ್ಯತೆಗಳ ಸಂಗಮದಿ  
ಪಂಜರ ದಾಟಿದ ಮನಸುಗಳೆಲ್ಲವೂ 
ಹಾರಿವೆ ಸುಂದರ ನಗುವಲ್ಲಿ 
ಗಾಳಿಯ ಕೆನ್ನೆಗೆ ರೆಕ್ಕೆಯ ಸವರುತ
ರಂಗೇರಿದೆ ಬಾಂದಳದಲ್ಲಿ

ಸೋಜಿಗವೀ ಜಗ ಕಣಕಣವೂ ಕೂಡ
ಆಲಿಸುವ ಸುಖ ಇನಿದನಿಯ ಹಾಡ 
ಹೆಸರಿಲ್ಲದ ದೇವರ ಕುಸುರಿ
ಸುಂದರ ಸೊಬಗಿನೈಸಿರಿ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...