Monday, 29 March 2021

ಕಿಟಕಿ‌ ಗಾಜಿನ ಆಚೆ, ಜಗವ ಕಾಣುವ ಬೆಕ್ಕೇ

ಕಿಟಕಿ‌ ಗಾಜಿನ ಆಚೆ 

ಜಗವ ಕಾಣುವ ಬೆಕ್ಕೇ
ನಿನ್ನ ಕಣ್ಣಿನ ಹಸಿವು
ನೀಗಲಿಷ್ಟೇ ಸಾಕೇ?

ಕಣ್ಣನು ಬಿಟ್ಟೇ ನೀನು
ಬಟ್ಟಲ ಹಾಲ ಕುಡಿದೆ
ಮತ್ತೆ ಏತಕೆ ಹಾಗೆ
ಲೋಕ ರೂಢಿಯ ಗಾದೆ?

ನಿಲ್ಲದೇ ಆಗಿನಿಂದ
ಕೊನೆಯಿರದ ಆಕಳಿಕೆ
ಶಕುನ ನೋಡಿ ಸತ್ತರೂ
ದೂರು ನಿನ್ನ ಬೆನ್ನಿಗೇ?

ಪ್ರೀತಿ ಹೆಚ್ಚಿದಾಗಲೇ
ಪರಚು ಗಾಯ ಮಾಡುವೆ
ನಿನ್ನ ನೆರಳೇ ಆದರೂ
ಕಂಡು ಬೆಚ್ಚಿ‌ ಬೀಳುವೆ

ತಲೆಯ ಸವರಿದವರಿಗೆ
ಸ್ವಂತವಾಗಿಹೋಗುವೆ
ಹೆಣ್ಣೇ‌ ಆದರೂ ನೀನು
ಮೀಸೆ ಹೊತ್ತೆ ಮೆರೆಯುವೆ

ಅಟ್ಟದಲ್ಲಿ ಅಟ್ಟಿದರೂ 
ಗುಡಾಣ ಬುಡಕೆ ಕಟ್ಟಿದರೂ
ಕರುಣೆಯನ್ನು ಕಟ್ಟಿಡು
ಸಿಗಲು ಗಣಪ ವಾಹನ

ಬೀದಿಯಲ್ಲಿ ರಾರಾಜಿಸಿ
ಬೈಗಳು ತಿನ್ನುವೆಯೋ
ಅಥವ ರಾಜನರಮನೆಯ
ಆಳಾಗಿ ಬದುಕುವೆಯೋ?

ಬೆಕ್ಕೇ ನೀ ಎಲ್ಲದಕ್ಕೂ
ಮಿಯಾವ್ ಮಿಯಾವ್ ಎನ್ನುವೆ
ಕೊರಳ ಗಂಟೆಯಿಂದ ನೀ
ಎಂದು ಬಚಾವಾಗುವೆ?

No comments:

Post a Comment

ಬರುವೆ ನಿನಗಾಗಿ

ಬರುವೆ ನಿನಗಾಗಿ  ಇರುವೆ ಜೊತೆಯಾಗಿ  ಪ್ರತಿ ಗಳಿಗೆ ಬೇಕಿದೆ ನಿನ್ನಾಸರೇ  ನೀನದೇ ಈ ಹಾಡು  ಹಿಡಿದು ಹೊಸ ಜಾಡು  ನಾ ಹಾಡುವೆನು ಕೂಡಿ ಬಾ ನೀ ಆದರೆ  ಬೆರೆತ ಮನದಲ್ಲಿ  ಪುಟಿ...