Monday, 26 July 2021

ನಾ ಕರಗಿ ಬರುವೆ

ನಾ ಕರಗಿ ಬರುವೆ 

ಸೇರಲು ಆ ಬೊಗಸೆಯಲಿ 
ನೀ ಹಿಡಿ ನನ್ನ ಉಳಿಸುತಲಿ 
ಆ ನಿನ್ನ ನೆನಪಿನಲಿ 
ನಾ ಬರುವೆ  ಜೊತೆಗೆ 
ಹೇಗಿರಲಿ ಒಂದಾಗದೆ  
ನೀ ಹಿಡಿ ನನ್ನ ಉಳಿಸುತಲಿ 
ಆ ನಿನ್ನ ಕಾಡೋ ಚಂದ ನೆನಪಿನಲಿ 

ಆವರಿಸು ಒಲವೇ
ಕಾದಿರುವೆ ನಿನಗಾಗಿಯೇ ನಾ
ಹಿಡಿ ನನ್ನ ಕೈಯ್ಯನು ನೀ
ನೆನಪನ್ನು ಆವರಿಸಿ
ಕಾತರಿಸಿ ಇರುವೆ
ನೇವರಿಸು ತಂಗಾಳಿಯ ಹಾಗೆ
ನನ್ನ ಮನಸನು ನೀ 
ಎದೆಯ ಕರೆಯನ್ನು ಕೂಡಲೇ ಸ್ವೀಕರಿಸಿ


ಆವರಿಸು ಒಲವೇ
ಆದರಿಸಿ ಮನದಾಸೆಯನು 
ನೀ ನನ್ನ ಸ್ವಾಗತಿಸು
ನವಿರಾದ ನೆನಪಿನಲಿ 
ಸ್ವೀಕರಿಸು ಕರೆಯ 
ಸಾಗರದಾಚೆಗೂ ನಾ ಬರುವೆ ಜೊತೆ 
ಬೇಡ ಅನ್ನದಿರು 
ನೆನಪಾಗಿ ನಿಲ್ಲುವೆ ನಿನ್ನ ನೆನಪಿನಲಿ 
ಬರಲೇನು ಚೂರು ದೂರ 
ನೆರಳಾಗುತ್ತಾ ನಾನು  
ಬೆರಗಾದಂತೆ ಒಂದಾಗಿ 
ಕನಸನ್ನು ಕಾಣುವ 
ಕೊಡಲೇನು ಓಲೆಯೊಂದ 
ಕಿರು ಸಾಲನ್ನು ಗೀಚಿ 
ಪಿಸು ಮಾತಲ್ಲಿ ನೀನಾಗ 
ಕೊಡುಬೇಕು ಸಮ್ಮತಿ.. ಹೇ.. 
ಗಡಿ ಬಿಡಿ ಇನ್ನೇಕೆ 
ಮರದಡಿ ಕೂಡುವ  ಬಾ.. ಏ ಹೇ 
ಕುಡಿಯೊಡೆದ ಪ್ರೀತಿ 
ವಿನಿಮಯವಾಗಲಿದೆ.. ಏ 

ಬಾ ಸನಿಹ ಒಲವೇ
ಆದರಿಸಿ ಮನದಾಸೆಯನು 
ನೀ ನನ್ನ ಆವರಿಸು  
ನವಿರಾದ ನೆನಪಿನಲಿ 
ಸ್ವೀಕರಿಸು ಕರೆಯ 
ಸಾಗರದಾಚೆಗೂ ನಾನಿರುವೆ  ಜೊತೆ 
ಬೇಡ ಅನ್ನದಿರು 
ನೆನಪಾಗಿ ನಿಲ್ಲುವೆ ನಿನ್ನ ನೆನಪಿನಲಿ 

ತಮಾಷೆ ಮಾಡಿದಂತೆ ಅಲ್ಲ ಜೀವನ

ತಮಾಷೆ ಮಾಡಿದಂತೆ ಅಲ್ಲ ಜೀವನ 

ವಿಶೇಷವಾಗಿಸೋಕೆ ಬೇಕು ಕಾರಣ 
ಹತಾಶೆ ಬೇಡ ಸೋತೆಯಾದರೀ ದಿನ 
ನಾಳೆ ಅನ್ನೋದೇ ಕೌತುಕ 

ಹೆಗಲ ಮೇಲೆ ಭಾರ ಹೊತ್ತೆ ಏತಕೆ?
ಹಗುರವಾಗು ಸೇರಿ ನಗುವ ಕೂಟಕೆ 
ಗಲಾಟೆ ಮಾಡಿಕೊಳ್ಳಲೇಕೆ ಆಗಲೇ?
ಕರಾಟೆ ಆಡಿ ಸೋಲಬೇಡ ನಿನ್ನಲೇ 
ಬರೋದು ಬಂದೇ ಬರುವುದೆಂದು ಅರಿತರೆ 
ಒಂದೊಂದೂ ಕ್ಷಣವೂ ರೋಚಕ 

ಬಿದ್ದ ಜಾಗದಲ್ಲೇ ಬೆಳೆದು ನಿಲ್ಲುವ
ಬೀಜವಾಗಬೇಕು ನೀನು ಮಾನವ
ಸವಾರಿಯಲ್ಲಿ ಏರು ತಗ್ಗು‌ ದಾಟುತ
ಪರಾರಿಯಾಗೋ ಗಾಳಿಯಂತೆ ಸಾಗುವ
ಪಿತೂರಿ ಮಾಡಿ ಕೂತರಲ್ಲೇ ಕೊಳೆಯುವೆ
ಮಾತಾಡಬೇಕು ಕಾಯಕ

ಎಷ್ಟೇ ಇರಲಿ ನಮ್ಮ ನಡುವೆ ಅಂತರ
ಪ್ರೀತಿ ಕೊಂಡಿಯಾದರೆಷ್ಟು ಸುಂದರ!
ಕೊಡೋದ ಕೊಟ್ಟು ಉಳಿಯ ಬೇಕು ತೆಪ್ಪಗೆ
ದುರಾಸೆ ಬಿಟ್ಟು ಮಣಿಯ ಬೇಕು ತಪ್ಪಿಗೆ
ಇದಿಷ್ಟೇ ‌ನನ್ನ ಅರಿವಿಗಿರುವ ಉತ್ತರ
ಮಾಡೋಣ ಬಾಳು ಸಾರ್ಥಕ...

ಪದ ಕಟ್ಟೋದಲ್ಲ ಮನ್ಸಿನ್ ಕದ ತಟ್ಟಿ ನೋಡು

ಪದ ಕಟ್ಟೋದಲ್ಲ ಮನ್ಸಿನ್ ಕದ ತಟ್ಟಿ ನೋಡು 

ಮದ ಗಿದ ಹಂಚೊದಲ್ಲ ಮುದ ನೀಡಿ ನೋಡು 
ಬೇಕು ಬೇಕು ಅಂತ ಆಂಗ್ಲ ಪದ ಬೆರ್ಸೋದ್ಯಾಕೆ?
ಆಗೋದಿಲ್ವಾ ಕನ್ನಡ್ದಲ್ಲೇ ರ್ಯಾಪ್ ಮಾಡೋದಕ್ಕೆ
  
ರಾಗಿ ಮುದ್ದೆ ಜೊತೆ ಮುರಿ ಖಡಕ್ ರೊಟ್ಟಿ ಕೂಡ  
ನೀರ್ ದೋಸೆ ಮೀನ್ ಸಾರು ಘಮ್ಮತ್ತು ನೋಡಾ
ಕರಾವಾಳಿ, ಬಯ್ಲು ಸೀಮೆ, ಮಲೆನಾಡು ಅಂದ
ಬಗೆ ಬಗೆ ಸೊಗಡಿನ‌ ನಮ್ಮ ಕನ್ನಡ ಚಂದ

ಬಿಸಿಬೇಳೆ ಬಾತ್, ಉಡುಪಿ ಹೋಟೆಲ್ ಇಡ್ಲಿ ವಡೆ 
ಬಿಸಿ ಕಾಫಿ ರುಚಿ ಚಿಕ್ಕಮಗಳೂರಿನ್ ಕಡೆ 
ಸಿಹಿ ಕುಂದಾ, ಧಾರ್ವಾಡ್ ಪೇಡ, ದಾವಣಗೆರೆ ದೋಸೆ 
ಸಕ್ರೆ ಮಂಡ್ಯ, ಮೈಸೂರ್ ಪಾಕ್, ನಮ್ ಕನ್ನಡ ಭಾಷೆ 

ತೆಂಗು, ರೇಷಿಮೆ, ಶ್ರೀಗಂಧ, ಬಂಗಾರ ಬೆಲೆ  
ಜೋಳ, ರಾಗಿ, ಬತ್ತ, ವಿವಿಧ ತರ್ಕಾರಿ ಬೆಳೆ
ಕೃಷ್ಣೆ, ತುಂಗೆ, ಕಾವೇರಿ ನಮ್ಮ ಮಣ್ಣಿನ ಸಿರಿ 
ಇದ ಸಾರಿ ಹೇಳಿ ಎಲ್ಲ ಕನ್ನಡಿಗರಾಗಿರಿ 

ಚನ್ನಪಟ್ಟಣದ ಗೊಂಬೆ, ಮಾತನಾಡೋ ಜೀರ್ಜಿಂಬೆ
ದಟ್ಟಾರಣ್ಯದ ಹೊದಿಕೆ, ಮೃಗಗಳ ಸಂಕುಲಕ್ಕೆ
ಶಿಲ್ಪ ಕಲೆಗಳ ಬೀಡು, ಜೀವಂತಿಕೆಯನು ನೋಡು
ಭೂಮಿ ಮೇಲೆ ಸ್ವರ್ಗದಂತೆ, ನಮ್ಮ ಚೆಲುವ ಕರುನಾಡು

ಮಿಲ್ಟ್ರಿ ಹೋಟಲ್ ಕಾಲ್ಸೂಪು, ಬೋಟಿ ಗೊಜ್ಜು ಸವಿ 
ಬಿರಿಯಾನಿ ಜೊತೆ, ನಾಟಿ ಕೋಳಿ ಜಮ್ಮಾಸ್ಬಿಡಿ 
ಸಾಕು ಸಾಕು ಅಂತ ಇನ್ನು ನಾಲ್ಕು ತುತ್ತು ಜಡಿ 
ಊಟದಲ್ಲೇ ಇದ್ದಾನಂತೆ ದೇವ್ರು ಮರೀಬೇಡಿ 

ಚೂಡಾ, ಮಿರ್ಚಿ ಬಜ್ಜಿ ತಿಂದು ಚಾ ಕುಡಿಯೋಣ ಬಾ 
ತಮಟೆ ಏಟು ಬಿತ್ತು ಅಂದ್ರೆ ಅಲ್ಲೇ ಕುಣಿಯೋಣ ಬಾ 
ಜಾತಿ-ಧರ್ಮ ಸೀಮೆ ದಾಟಿ ಒಂದಾಗೋಣ ಬಾ 
ಪ್ರೀತಿಗಿಂತ ಬೇರೆ ಧರ್ಮ ಇಲ್ಲ ಅನ್ನೋಣ ಬಾ 

ಕನ್ನಡನ ಬಿಟ್ಟು ಬಾಳೋವಂತ ಬಾಳೇತಕೆ 
ಕಲ್ಲು ಕಲ್ಲು ಕೂಡಬೇಕು ಬೆಟ್ಟ ಆಗೋದಕ್ಕೆ 
ಸಾಕು ಮಾಡು ಶೋಕಿಗಂತ ಮಾತನಾಡೋ ನುಡಿ 
ರಕ್ತ ಕಣಕಣದಲ್ಲೂ ತುಂಬು ಕನ್ನಡ ನುಡಿ 

ಶ್ರೀಮಂತ ಸಾಹಿತ್ಯಕ್ಕೆ ಸಿಕ್ತು ಜ್ಞಾನಪೀಠ
ಎಲ್ಲೇ ಇರ್ಲಿ ಹಾರಿಸ್ತೀವಿ ನಾವ್ ನಮ್ ಬಾವುಟ
ತಾಯಿಯಷ್ಟೇ ತಾಯಿ ಭಾಷೆಯನ್ನೂ ಪ್ರೀತ್ಸೋ ಗುಣ
ಇದು ಕನ್ನಡಿಗರಲ್ಲಿ ಕಾಣೋ ಹುಟ್ಟು ಗುಣ

ಯಾರೇ ಕಟ್ಟಿಕೊಳ್ಳಲಿ ಇಲ್ಲಿ ತಮ್ಮ ಬದುಕನ್ನ
ಬೇಡ ಅನ್ನಳು ಕನ್ನಡ ತಾಯಿ ಸಾಕು ಮಕ್ಳನ್ನ
ತಪ್ಪಾದ್ರೂ ಪರ್ವಾಗಿಲ್ಲ ತಿದ್ದೋದ್ ನಮ್ಮ ಲಕ್ಷಣ
ಸಂಕೋಚ ಬೇಡ ಬಳ್ಸೋದಕ್ಕೆ ಕನ್ನಡ ಭಾಷೆನ

ಅಭಿಮಾನ ತುಂಬಿ ಹೊಮ್ಮಿ ಬಂದು ಹಾಡಾಯಿತು 
ಕೋಗಿಲೆನೂ ಕೂಡ ಖುಷಿ ಪಟ್ಟು ಕೊಂಡಾಡಿತು
ಲೋಕಕ್ಕೆಲ್ಲ ಕೇಳೋ ಹಾಗೆ ಪದ ಹಾಡ್ತೀನ್ನಾನು 
ಯಾಕಂದ್ರೆ ನಾನೊಬ್ಬ ಸ್ವಚ್ಛ ಕನ್ನಡದವನು..

ಮಾತಾಡುತಾ ಸಾಗು ನೀ

ಮಾತಾಡುತಾ ಸಾಗು ನೀ

ನಾ ಆಲಿಸಿ ನಿಲ್ಲುವೆ
ಕಾದಾಟಕೆ ನಿಂತರೆ
ನಾನಾಗಿಯೇ ಸೋಲುವೆ
ಆರಂಭಿಸು ಭಾವದ ಲೇಖನ
ಹಿಂಬಾಲಿಸಿ ಬರುವೆ ನಾ
ಆಧ್ಯಾತ್ಮಿಕ ಪ್ರೇಮದ ಹೂರಣ
ನಾವಿಬ್ಬರೇ ಹೋರಣ

ಜಾರಿದಂತೆ ಜೀವ ನಿನ್ನ
ನಿಳವಾದ ಕಣ್ಣಲಿ
ಗೇಲಿ ಮಾಡಬೇಡ ನೀನು
ಹೀಗೆ ನುಡಿದರೆ
ದೂರ ಮಾಡಿ ಹೋಗೋ‌ ಮುನ್ನ
ನೀಡು ಒಂದು ಕಾರಣ
ಮೌನಕೆಂದೂ ನೂರು ಬಣ್ಣ
ನೋಡ ಹೋದರೆ

ಎಲ್ಲದಕ್ಕೂ ಇರುವ ಹಾಗೆ 
ಪ್ರೀತಿಗಿರದು ಅಂತ್ಯವು 
ನನ್ನ ನಿನ್ನ ಧ್ಯಾನವಿನ್ನೂ 
ಮುಂದುವರಿಯುತಿರಲಿ 

ನನ್ನೊಡನೆ ನಾ ಮಾತಾಡಿದಂತೆ

ನನ್ನೊಡನೆ ನಾ ಮಾತಾಡಿದಂತೆ

ನಿನ್ನೊಂದಿಗೂ ಮಾತಾಡುವೆ
ನನ್ನೊಡನೆ ನಾ ಕಾದಾಡಿದಂತೆ
ನಿನ್ನೊಂದಿಗೂ ಕಾದಾಡುವೆ
ನನ್ನೊಳಗೆ ಮೂಡೋ ಸಂತೋಷವನ್ನು
ನಿನ್ನೊಂದಿಗಷ್ಟೇ ಹಂಚಿಕೊಳ್ಳುವೆ
ನನ್ನಲ್ಲಿ ಬಿಟ್ಟ ಬಿರುಕನ್ನು ನಿನ್ನತ್ತ 
ವ್ಯಾಪಿಸದಂತೆ ಕಾಯುವೆ

ಬೇಕೆಂದು ಬಚ್ಚಿಟ್ಟ ಗುಟ್ಟುಗಳು ರಟ್ಟಾಗಿ
ಆಗೊಮ್ಮೆ, ಈಗೊಮ್ಮೆ‌ ಸಿಡಿದೇಳುವೆ
ಸಾಕೆಂದು ಎತ್ತಿಟ್ಟ ಪುಸ್ತಕದ ನಡುವೆಲ್ಲೋ
ಪ್ರೇಮ ಸಂದೇಶವ ಗೀಚಿ‌ ಇಡುವೆ
ಆಗಂತುಕ ನಾನು ಬದುಕುಳಿಯುವ ತನಕ
ನಿಜವಾದ ನಾನಾರೋ ನಾನರಿಯೆನು
ಬತ್ತಿದ ಹಣತೆಯಲಿ ನನ್ನಿಟ್ಟು ಹೊತ್ತಿಸು
ಪ್ರಶ್ನಿಸದೆ ಕ್ಷಣ ಕಾಲ ನಾನುರಿವೆನು

ಮೊಂಡನೋ, ಹುಂಬನೋ, ಹಠದಿ ನಿಸ್ಸೀಮನೋ
ಹಿಡಿದು ತೋರಿಸು ಕನ್ನಡಿಯ
ನನ್ನ ನನಗೇ ಬಿಂಬಿಸಿ ತರುವಾಯ
ಕಣ್ಣಲಿ ಕಣ್ಣಿಟ್ಟು ಪ್ರೀತಿಸೆಯಾ?
ವಿಷಯಾಂತರ ಮಾಡುವೆ ಬೇಕಂತಲೇ
ಒಲ್ಲದ ವಾದಕೆ ನಿಂತರೆ ನೀ
ರೂಪಾಂತರಗೊಳ್ಳುವುದು ಆವರಣ
ಬಿಟ್ಟು ಬರಲು  ಕಣ್ಣ ಕಂಬನಿ...

ಮಳೆಯಲ್ಲಿಯೇ ಶುರುವಾಗಿದೆ ನಮ್ಮ ಜೊತೆ

ಮಳೆಯಲ್ಲಿಯೇ ಶುರುವಾಗಿದೆ ನಮ್ಮ ಜೊತೆ

ಮಳೆಯೆಂದಿಗೆ ಮುಂದುವರಿಯುತಿದೆ
ಹನಿಗೂಡುತ ಬರೆದಾಗಿದೆ ನಮ್ಮ ಕತೆ
ಬೆರಗಾಗಿಸಿ ಒಲವ ಉಣಿಸುತಿದೆ
ವಿಷಯ ಹೀಗಿರಲು
ಕೊಡೆ ಹಿಡಿಯುವ ಸಾಹಸವೇ
ಪ್ರಣಯ ಚಿಗುರಿರಲು
ಪ್ರತಿ ಕ್ಷಣವೂ ರೋಚಕವೇ ...

ಅತಿಯಾಗಿ ಕಾಡೋ ನಾಚಿಕೆ ಒಂದ
ನೀ ಮುಡಿದು ಬರುವ ವೇಳೆ
ನನ್ನಲ್ಲಿ ಮೂಡೋ ಸಂಕೋಚವನು 
ನೀ ಅರಿತುಕೊಂಡೆ ಹೇಗೆ?
ಅಭಿಮಾನಿ ನಾನು ನಿನಗೆಂದು ಹಿಡಿವೆ
ಹೂವನ್ನು ಮಂಡಿ ಊರಿ
ಅನುಬಂಧವನ್ನು ಬಿಗಿಯಾಗಿಸೋಕೆ
ಬಿಗಿದಪ್ಪು ಒಂದು ಬಾರಿ 

ಸಮಯ ಹೀಗಿರಲು
ಮಾತಾಡುವ ಸಾಹಸವೇ
ಪ್ರಣಯ ಚಿಗುರಿರಲು
ಪ್ರತಿ ಕ್ಷಣವೂ ರೋಚಕವೇ ...

ರಾತ್ರಿ, ಹಗಲು ನಿದ್ದೆಗೆಟ್ಟು

ರಾತ್ರಿ, ಹಗಲು ನಿದ್ದೆಗೆಟ್ಟು

ಬಂದು ಹೋದವರನು ಬಿಟ್ಟು
ಬೀದಿ ದೀಪದಡಿಗೆ ನಗುವ ರಸ್ತೆಯೇ
ಸುಟ್ಟ ಬಿಸಿಲಿಗಾದೆ ಕಪ್ಪು
ಬಿದ್ದ‌ ಮಳೆಗೆ‌ ಚೂರು ತಂಪು
ಕೊರೆವ ಮಂಜಿನೊಡವೆಯುಟ್ಟ ರಸ್ತೆಯೇ

ಹಕ್ಕಿ ಪಿಕ್ಕೆಯಿಟ್ಟರೂನು 
ಬೀಡಿ ತೊಟ್ಟು ಬಿದ್ದರೂನು
ಏನೂ ಆಗದಂತೆ ಉಳಿದ ರಸ್ತೆಯೇ...
ಅಕ್ಕ ಪಕ್ಕ ಅಡ್ಡ ರಸ್ತೆ
ಮಿಗಿಲು ನೀನೇ‌ ಮುಖ್ಯ ರಸ್ತೆ
ನೀನು ಬಂದ್ ಆದರೆ ಅವಸ್ಥೆಯೇ!

ಹೊಂಡವಾಗಿ ಹಬ್ಬಿದೆ 
ನಿನ್ನ‌‌ ಆಚೆ ಈಚೆಗೆ
ಗದ್ದೆ ಕೆಸರ ರಾಚುವಂತ ರಸ್ತೆಯೇ
ಸದ್ದು ಮಾಡಿಕೊಂಡರೂ
ನಿದ್ದೆಯಲ್ಲಿ ಬಂದರೂ
ಚೂರೂ ಜಗ್ಗಲಿಲ್ಲವಲ್ಲ ರಸ್ತೆಯೇ

ನಿನ್ನ ನಂಬಿ‌ ಬದುಕುವ
ತೇಪೆ ಹಾಕೋ ಕೈಗಳ
ನೀನೇ‌ ಹಿಡಿಯಬೇಕು ಕೇಳು ರಸ್ತೆಯೇ
ಇದ್ದ ನಿನ್ನ ಚರ್ಮವ
ಸುಲಿದು ಮತ್ತೆ ಹಾಸಿದ
ಗುತ್ತಿಗೆದಾರನೆಲ್ಲಿ ರಸ್ತೆಯೇ?

ನೀನು ಇರಲು ಸಾಲದೆ
ಪಾದಚಾರಿ ಮಾರ್ಗಕೂ
ಚಕ್ರ‌ ತಾನೇ ಉರುಳುತಾವೆ ರಸ್ತೆಯೇ
ಸೂರು ಇಲ್ಲದವರನು
ಭಾರ ಭೂಮಿಗೆನ್ನುತ
ಮಣ್ಣ ಮುಕ್ಕಿಸುವರು ನೋಡು ರಸ್ತೆಯೇ

ಸ್ವಲ್ಪ ಕಾಲ ಹೋದರೆ
ನೀನೇ ಅಲ್ಪವೆನ್ನುತ
ನೆರಳು ಕೊಟ್ಟ ಮರವೇ ಮಾಯ ರಸ್ತೆಯೇ
ಬಳಿಕ ಬಳಕೆದಾರರು
ಸುಂಕ ಕಟ್ಟಿ ಸತ್ತರು
ವರ್ಷ ಪೂರ್ತಿ ಇನ್ನು ನೀ ದುರಸ್ತಿಯೇ...

ಇನ್ನೊಮ್ಮೆ ಶುರುವಾಗಿದೆ ನೆಗಡಿ

ಇನ್ನೊಮ್ಮೆ ಶುರುವಾಗಿದೆ ನೆಗಡಿ 

ಇನ್ನೊಮ್ಮೆ ಶುರುವಾಗಿದೆ 
ಯಾಕೋ ನನ್ನ ಮೇಲೆ 
ವೈರಾಣುಗೆ ಲವ್ವಾಗಿದೆ 
ಇನ್ನೊಮ್ಮೆ ಶುರುವಾಗಿದೆ ನೆಗಡಿ 
ಇನ್ನೊಮ್ಮೆ ಶುರುವಾಗಿದೆ 

ಸೋರುತಿರೋ ಸಿಂಬಳವ 
ಒರೆಸೋ ಕಡುಕಷ್ಟವೇಕೋ 
ವಾಸನೆಯ ಹಿಡಿಯದಿರೋ 
ಶಾಪ ಕೊಟ್ಟೋರು ಯಾರೋ 
ಅರೆ ಬರೆ ಕನಸಲ್ಲಿಯೂ 
ಹೊಸ ಅಲೆ ಬರುವಂತಿದೆ.. 
ಇನ್ನೊಮ್ಮೆ ಶುರುವಾಗಿದೆ ನೆಗಡಿ 
ಇನ್ನೊಮ್ಮೆ ಶುರುವಾಗಿದೆ 

ಸಾಧನೆಯ ಹಾದಿಯಲಿ 
ಇಂಥ ಪಡಿಪಾಟಲೇಕೋ 
ರೋಧನೆಯ ವೇಳೆಯಲೇ 
ಹಾಡು ಹುಟ್ಟೋದು ಯಾಕೋ 
ಹೊಸ ದಿನ ಶುರುವಾದರೂ 
ಅದೇ ಹಳೆ ನೆಗಡಿ ಗುರು.. 

ಇನ್ನೊಮ್ಮೆ ಶುರುವಾಗಿದೆ ನೆಗಡಿ 
ಇನ್ನೊಮ್ಮೆ ಶುರುವಾಗಿದೆ 
ಯಾಕೋ ನನ್ನ ಮೇಲೆ 
ವೈರಾಣುಗೆ ಲವ್ವಾಗಿದೆ 
ಇನ್ನೊಮ್ಮೆ ಶುರುವಾಗಿದೆ ನೆಗಡಿ 
ಇನ್ನೊಮ್ಮೆ ಶುರುವಾಗಿದೆ 

ಹೆಬ್ಬೆರಳು, ತೋರ್ಬೆರಳು, ನಡುಬೆರಳು

ಹೆಬ್ಬೆರಳು, ತೋರ್ಬೆರಳು, ನಡುಬೆರಳು 

ತಂತಿ ನುಡಿಸಿ ಸ್ವರ ಹೊಮ್ಮಿಸಿವೆ 
ಉಂಗುರದ ಬೆರಳದ್ದು ಯಾವ ತಂಟೆ ಇಲ್ಲ 
ಕಿರು ಬೆರಳ ಕಿಡಿಗೇಡಿತನ ನಡುನಡುವೆ  

ಜೇನ ನಾದಕೆ ತೂಗುತ, ತೂಗುತ ತಲೆಯ 
ತಾಳ ಹಾಕಲು ನೆರೆದ ಸಭಿಕರೆಲ್ಲ 
ಮುತ್ತಿಕೊಂಡಿತು ಆಚೆ ನೆಟ್ಟ ಕಿರುಬೆರಳು  
ತೊಪ್ಪೆ ಸದ್ದನು ಮಾಡಿತೊಂದು ತಂತಿ 

ಇತ್ತ ನುಡಿಸುತಲಿದ್ದ ಬಾಕಿ ಉಳಿದವುಗಳು 
ವಿಚಲಿತಗೊಂಡು ಸ್ವಸ್ಥಾನವನೇ ಮರೆತವು 
ಕಿವಿಗೆ ಕೆಂಡವ ಕಾರೋ ಕೀರ್ತನೆಗಳು 
ಮೆದುಳನ್ನು ಕದಡುವ ರಕ್ಕಸ ರಾಗ

ಪಕ್ಕವಾದ್ಯಗಳು ಪಕ್ವತೆಯ ಮರೆತವು 
ತಬ್ಬಲಿ ತಬಲಾ ತಬ್ಬಿಬ್ಬುಗೊಂಡಿರಲು 
ನಾದಸ್ವರದ ನಳಿಕೆ ನೆಲ ಕಚ್ಚಿತು 
ಗಾನ ಶಿರೋಮಣಿಯರು ಬಿರಬಿರನೆ ಕಾಲ್ಕಿತ್ತು 
ಗಾಳಿ ಸುರುಳಿ ಬಂದು ಗಿರಗಿರನೆ ತಿರುಗಿತ್ತು 
ಶಾಮಿಯಾನ ಬಿದ್ದು ಸಿಲುಕಿದರು ಹಲವರು  
ಶೃತಿ ಪೆಟ್ಟಿಗೆಯ ಪಾಡು ಕೇಳಿದವರಾರು!

ಕೆಂಪು ನೆಲಹಾಸಿನ ಕಾಲು ದಾರಿ 
ಹೂ ಚೆಲ್ಲಿದವರಿಲ್ಲ, ತಮಟೆ ಏಟುಗಳಿಲ್ಲ 
ಮರದ ಗೂಡೊಳಗೆ ಹಕ್ಕಿ ಮರಿ ನಿದ್ದೆಗೆ 
ಎಚ್ಚರಗೊಳ್ಳುವವು ಉದುರಿದೆಲೆ ಸದ್ದಿಗೆ 

ನೆಟಿಕೆ ಬಿದ್ದವು ಮುರಿದು ಲಟಪಟನೆ 
ಪಳೆಯುಳಿಕೆ ಗಾಜಿನ ಪೆಟ್ಟಿಗೆಯ ಒಳಗೆ 
ಯಾವ ಉಗುರಿಗೂ ಈಗ ಕಸಿವ ಹಂಬಲವಿಲ್ಲ 
ಉಸಿರು ಕೇವಲ ಬದುಕುಳಿಯಲೆಂದೇ 
ಎಲ್ಲರೊಳಗೂ ಒಂದೊಂದು ಮೆಲ್ಲುಲಿ  

ಕಿವಿಗಳು ಹೆಚ್ಚು ಹಸಿದಂತೆ ಆಲಿಸುವಾಗ 

ಎಲ್ಲರೂ ಹಾಡಿದರು, ಎಲ್ಲರೂ ಕೇಳಿದರು... 

ಕಾಮನ ಬಿಲ್ಲು ಬಿಡಿಸಿದೆ ಕವನ

ಕಾಮನ ಬಿಲ್ಲು ಬಿಡಿಸಿದೆ ಕವನ

ಭೂಮಿ ಓದಲೆಂದು
ಬಣ್ಣದ ಸಾಲನು ತರುವನು ವರುಣ
ಹೂವಿಗೆ ಒಪ್ಪಿಸಲೆಂದು

ಆಗಸದ‌ ಅನಕ್ಷರತೆ ಎದ್ದು ಕಾಣುತಿದೆ
ಚೆದುರಿದ ಮೋಡ, ಕರಗಿದ ಬಣ್ಣ
ನೀಳ ನೀಲಿ ಬಾನು, ಮರುಗುತಿದೆ...

ಚುಂಬನಕೆ‌ ಹಂಬಲಿಸಿ
ನೀರಿನ ಗುಳ್ಳೆ ಚೂರಾದಂತೆ
ಬಂಧನವ ಸಂಭ್ರಮಿಸಿ
ಮಲ್ಲಿಗೆ ಮಾಲೆ‌ ಅರಳುವುದಂತೆ
ಎಚ್ಚರ ತಪ್ಪದೆ ಉಚ್ಛರಿಸಿದವು
ಸುಸ್ವರವ ಹಕ್ಕಿಗಳು
ಉತ್ತರಕಾಗಿ ಕಾಯದೆ ಉಳಿದವು 
ಸುಂದರ ಪ್ರಶ್ನೆಗಳು 

ಕೌತುಕದ ಗೂಡಿನಲಿ 
ಗುಟುಕಿಗಾಗಿ ಎದುರು ನೋಟ 
ಎಟುಕದ ಹಣ್ಣಿಗಳ 
ದೀರ್ಘಾವಧಿ ತೊನೆದಾಟ  

ಕಣ್ಣು ಕಣ್ಣಲ್ಲೇ ಹೇಳದೆ ವಿದಾಯ

ಕಣ್ಣು ಕಣ್ಣಲ್ಲೇ ಹೇಳದೆ ವಿದಾಯ

ಮಾತು ಮಾತಲ್ಲೇ ನೀಡುವೆ ಉಪಾಯ
ಸಣ್ಣ ಸಂಕೋಚ ಬೇಡುವಾಗ ಪ್ರಾಯ


ನಿನ್ನ ಮೇಲಾಣೆ ನೀನೇ ನನ್ನ ಪ್ರಾಣ 

ಚಂದ ಬಾಳೀಗ ನೀನು ಬಂದ ಮೇಲೆ (೪)
ಲೂಟಿ ಮಾಡಿ ಹೋದೆ ನೋಟದಲ್ಲೇ ನನ್ನ (೨)

ಕಣ್ಣು ಕಣ್ಣಲ್ಲೇ ಪ್ರೀತಿ ಮೂಡಿದಾಗ 
ಮಾತು ಮಾತಲ್ಲೇ ಹೊತ್ತು ಮೀರಿದಾಗ 
ದಾರಿ ತಾನಾಗಿ ಮಾಯವಾಗುವಾಗ  
ನೀಡು ನಿನ್ನಲ್ಲಿ ಸಣ್ಣದೊಂದು ಜಾಗ 
ನೀನು ನಾನು ಬೇರೆ ಆಗೋ ಮಾತೆ ಬೇಡ (೨)

ನನ್ನ ಪ್ರೇಮ, ನನ್ನ ಪ್ರೇಮ 
ನನ್ನ ಪ್ರೇಮ.. ಓ 

ದೂರ ಆದಾಗ ನೋವಿಗೊಂದು ಹಾಡು 
ಹೇಳೋದೇ ಬೇಡ ನಾನು ಪಟ್ಟ ಪಾಡು 
ಮೌನ ಅನ್ನೋದು ಪ್ರೇಮಿಗೊಂದು ಕೇಡು 
ಬೇಗ ಸೇರಿ ನೋಡು, ನನ್ನ ಪುಟ್ಟ ಗೂಡು 


***************

ಕಣ್ಣು ಕಣ್ಣಲ್ಲೇ ಹೇಳದೆ ವಿದಾಯ
ನೀಡು ನಿನ್ನಲ್ಲೇ ಜೇವಕೆ ಉಪಾಯ 
ಕಣ್ಣು ಕಣ್ಣಲ್ಲೇ ಹೇಳದೆ ವಿದಾಯ
ನೀಡು ನಿನ್ನಲ್ಲೇ ಜೇವಕೆ ಉಪಾಯ 
ನೀನು ನಾನು ಬೇರೆ ಆಗೋ ಮಾತೇ ಬೇಡ (೨)
ನನ್ನ ನಲ್ಲೆ, ನನ್ನ ನಲ್ಲೆ 
ನನ್ನ ನಲ್ಲೆ.. ಓ.. 

ಒಂದೇ ಸಾಲಲ್ಲಿ ಹೇಳಲಾಗಲಿಲ್ಲ   
ಗೀಚೋ ಹಾಳೆಗೂ 

ಲೇಖ ಹಂಸಲೇಖ

ಲೇಖ ಹಂಸಲೇಖ

ಲೇಖ ಹಂಸಲೇಖ 
ಆಡು ಭಾಷೆಗೂ ಮಿಗಿಲಾದ 
ಹಾಡೊಂದು ಬೇಕಾ 
ಒಂದೊಂದೇ ಪದವ ಬೆರೆಸಿ 
ನೀಡುವ ಸಕ್ಕರೆ ಪಾಕ  

ದೇಸಿ ಸಂತ
ನಮಗೆ ಸ್ವಂತ
ಕರುನಾಡ ಮನೆ ಮನಗಳಲಿ
ನಗುವಾಗಿ ನಿಂತ
ರಾಗ ಶ್ರೀಮಂತ
ಸಾಲೇ ವೇದಾಂತ
ಮಾತು ಮಾತಲ್ಲೇ ಗಿಲ್ಲಿ ಗೆಲ್ಲೋ
ಬುದ್ವಂತ
ನುಡಿಸು ನಿನ್ನ ತುತ್ತೂರಿ
ಪಸರು ಕನ್ನಡ ಕಸ್ತೂರಿ
ಚಿಣ್ಣರ ಪಾಲಿಗೆ ಕಿಂದಿರಿ ಜೋಗಿ
ಬೇರೆ ಹೆಸರು ಬೇಕಾ
ಲೇಖಾ ಹಂಸಲೇಖ...

ಈಗಷ್ಟೇ ಕಣ್ಬಿಟ್ಟ ಮಗುವಿಗೆ
ನಿನ್ನ ಹಾಡೇ ಇಷ್ಟ
ಹಣ್ಣಾದವರಲ್ಲೂ‌ ನಿನ್ನ 
ಹಾಡಿನ ನೆನಪು ಸ್ಪಷ್ಟ
ಪಡ್ಡೆ ಹುಡುಗ-ಹುಡುಗಿಯರು
ನಿನ್ನ ಹಾಡನು ಗುನುಗಿದರು
ಪ್ರೇಮ ಲೋಕದ ಅಂಚಿಗೆ ಹಾರಿ 
ಪ್ರೀತಿಯ ಮಾಡಿದರು
ಪೋಲಿ ಸಾಲನು ಗೇಲಿ ಮಾಡುವ
ಭಾಷಾ ಮಾಂತ್ರಿಕ ಬೇಕಾ
ಲೇಖಾ ಹಂಸಲೇಖ...

ತಂದೆ ಮಗುವಾಗಿ

ತಂದೆ ಮಗುವಾಗಿ

ಮಗುವು ತಾಯಾಗಿ
ಜಗವೇ ಜೋಗುಳದ ಹಾಡಾಗಿದೆ
ಮಮತೆ ಕಡಲಾಗಿ
ಜಿಗಿವ ಅಲೆಯಾಗಿ
ಸುರಿವ ಮಳೆ ಕೂಡ ಜೊತೆಗೂಡಿದೆ
ತುಳುಕೋ ಕಣ್ಗಳಿಗೆ
ತೊದಲೋ ನುಡಿಗಳಿಗೆ
ಕಲ್ಲು ಮನಸುಗಳೇ‌ ಕರಗುತ್ತಿವೆ
ಪ್ರೀತಿ ಸಿಕ್ಕಿರಲು
ಹಸಿವು ಬಿಕ್ಕಳಿಸಿ
ಆನಂದದ ರಂಗು ತುಂಬುತ್ತಿದೆ

ಯಾರ ಉಸಿರಿನಲಿ 
ಯಾರ ಹೆಸರಿದೆಯೋ
ನಂಟಸ್ತಿಕೆ ಎಂಬ ಕಗ್ಗಂಟಲಿ
ದೇಹ ದಣಿದಿರಲು
ಪಾದ ಸವೆದಿರಲು
ನೆನಪುಗಳ ಕಂತೆ ಎದೆ ಗೂಡಲಿ
ತಂದೆ ಮಗುವಾಗಿ
ಮಗುವು ತಾಯಾಗಿ
ಜಗವೇ ಜೋಗುಳದ ಹಾಡಾಗಿದೆ

ಎಲ್ಲ ಸುಖಗಳಿಗೂ 
ಮಿಗಿಲಾದ ಸುಖವೇ
ಬಂಧು ಬಂಧನದೊಳ ಅನುರಾಗವು
ತಿರುಗಿ ನೀಡುವುದೇ
ಪ್ರೀತಿಯ ನಿಯಮವದು 
ಸಾರ್ಥಕ ಪಡೆದ ಪ್ರತಿ ಜನ್ಮವು..

ತಂದೆ ಮಗುವಾಗಿ
ಮಗುವು ತಾಯಾಗಿ
ಜಗವೇ ಜೋಗುಳದ ಹಾಡಾಗಿದೆ
ಮಮತೆ ಕಡಲಾಗಿ
ಜಿಗಿವ ಅಲೆಯಾಗಿ
ಸುರಿವ ಮಳೆ ಕೂಡ ಜೊತೆಗೂಡಿದೆ

ಹೃದಯ, ಕಣ್ಣು ಅಂಗಾಂಗ ದಾನ

ಹೃದಯ, ಕಣ್ಣು

ಅಂಗಾಂಗ ದಾನ
ಕೊಟ್ಟು ಹೊರಡು
ಮುಗಿದಾಗ ಪಯಣ 
ಹೆಸರ ಉಳಿಸೋ ಕಾಯ
ಗಳಿಸಿಕೊಡುವ ಪುಣ್ಯ
ಭೂಮಿ ಇರುವ ವರೆಗೆ ಅಜರಾಮರ
ಮಣ್ಣ ಸೇರೋ ದೇಹ ಅಸ್ಥಿಪಂಜರ..

ನಾನು ಅವನಲ್ಲ, ನಾನು ಇವನಲ್ಲ
ಈ ನಾನು ಅನ್ನೋದೇ ಸುಳ್ಳು
ಹೆಚ್ಚು ಹೊರೆಯನ್ನು, ಹೊತ್ತ ಓ ಮನಜ
ಲೆಕ್ಕ‌ ಸರಿಹೋಗುತ್ತೆ ತಾಳು
ಆಕಾಶದಲ್ಲಿ ಎಷ್ಟೊಂದು ಚುಕ್ಕಿ
ಖಾಲಿ ಉಳಿದ ಜಾಗ ಕೂಡ 
ಒಳ್ಳೇದು, ಕೆಟ್ಟದ್ದು ಎಲ್ಲೆಲ್ಲೂಇರುವಾಗ    
ಯಾರನ್ನೂ ದೂರೋದು ಬೇಡ

ಹೃದಯ, ಕಣ್ಣು
ಅಂಗಾಂಗ ದಾನ
ಕೊಟ್ಟು ಹೊರಡು
ಮುಗಿದಾಗ ಪಯಣ 

ಗಾಡಿ ಕಟ್ಟೋದು , ದಾರಿ ಮಾಡೋದು
ಬೇಗ ಮುಟ್ಟೋಕಂತ ಕೊನೆಯ 
ಆಚೆ ಹುಡುಕಾಟ, ಸಿಗದೇ ಪರದಾಟ 
ನಮ್ಮಲ್ಲೇ ಇರುತೈತೆ ವಿಷಯ 
ಈ ಲೋಕದಲ್ಲಿ ಎಷ್ಟೊಂದು ಜೀವ 
ಹುಟ್ಟೋದು, ಸಾಯೋದು ನಿತ್ಯ 
ತಾಳೋದ, ಬಾಳೋದ ಕಲಿಬೇಕು ಸಾಗುತ್ತಾ  
ಪ್ರೀತಿಯ ಕೊಟ್ಟ ಬಾಳೇ ಧನ್ಯ... 

ಮತ್ತೆ ಮತ್ತೆ ಯೋಚನೆ

ಮತ್ತೆ ಮತ್ತೆ ಯೋಚನೆ

ಪ್ರೀತಿ ಮಾಡೋ ಯೋಜನೆ
ನನ್ನ ನಿನ್ನ ನಡುವೆ
ಸೇತು ಕಟ್ಟಿ ಬಿಡುವೆ
ಭೇಟಿ ಆಗೋಣ 
ಆಗಾಗ ನಡುನಡುವೆ...

ಆಚೆಯಿಂದ ನೀನು ಬಾ
ಈಚೆಯಿಂದ ನಾ ಬರುವೆ
ಆಸೆ ನೂರು ನುಡಿಯದಿರು 
ಅರಿತಂತೆ ಈಡೇರಿಸುವೆ 
ನಾಚಿಕೊಂಡೇ ನೀನು ಬಾ 
ಬಿಡಿಸಲೆಂದು ನಾ ಬರುವೆ 
ಹಾಡು ಅಥವಾ ಹಾಡದಿರು 
ಪ್ರಾಸದಲ್ಲೇ ಮುಳುಗಿಸುವೆ 

ನನ್ನ ನಿನ್ನ ನಡುವೆ
ಹೂದೋಟ ಮಾಡಿ ಬಿಡುವೆ 
ಭೇಟಿ ಆಗೋಣ 
ಆಗಾಗ ನಡುನಡುವೆ...

ಬಾ ಬೇಗನೆ

ಬಾ ಬೇಗನೆ

ಮನಸಿನ ಬಾಗಿಲು ತೆರೆದಾಗಿದೆ
ತಾ ಬೇನೆಯ 
ಹಾಡಿನ ಪಲ್ಲವಿ ನಿಂತಂತಿದೆ

ಜಾದೂ ಅಲ್ಲದೆ ಮತ್ತೇನಿದು
ನಿನ್ನ ನೆನೆಯುತಾ ಮತ್ತೇರಿದೆ
ಕಾದು ಕೂರುತ ನನಗೆ ಸಾಕಾಗಿದೆ 
ಒಂದು ರೋಚಕ ಅನುಭಾವದ ಕೊರತೆಯ
ನೀಗಿಸು ಕೂಡಲೇ 

ಬಾ ಬೇಗನೆ
ಮನಸಿನ ಬಾಗಿಲು ತೆರೆದಾಗಿದೆ
ತಾ ಬೇನೆಯ 
ಹಾಡಿನ ಪಲ್ಲವಿ ನಿಂತಂತಿದೆ


ಕೈ ಜೋಡಿಸು ನನ್ನೊಂದಿಗೆ 
ಕಾದಾಡಬೇಕಿದೆ ಈಗ ನಿನ್ನೊಂದಿಗೆ ..  

ದಾರಿ ಸಾಗಿದೆ ಇನ್ನೂ ಮುಂದಕೆ

ದಾರಿ ಸಾಗಿದೆ ಇನ್ನೂ ಮುಂದಕೆ

ಕೊನೆಯೇ ಇಲ್ಲವೇನೋ!
ಊರ ದಾಟಿದ ಮೇಲೆ ಸಿಕ್ಕಿದ  
ಜಾಡು ನನ್ನದೇನೋ!
ತಿರುವು ಪಡೆದು,ಹೊರಟ ಪಯಣ  
ಗಮ್ಯ ಇನ್ನೂ ದೂರ.. 
ದಾರಿ ಸಾಗಿದೆ ಇನ್ನೂ ಮುಂದಕೆ
ಕೊನೆಯೇ ಇಲ್ಲವೇನೋ 
ಊರು ದಾಟಿದ ಮೇಲೆ ಸಿಕ್ಕಿದ  
ಜಾಡು ನನ್ನದೇನೋ 

ಸವೆದು ಹೋದ ಪಾದುಕೆಯ
ಸಿಗದ ಹಾಗೆ ಹೂತಿಡುವೆ 
ಹೆಜ್ಜೆ ಗುರುತ ಬಯಸಿರಲು
ಮರಳ ಮೇಲೆ ನಾ ನಡೆವೆ 
ಮುಂದೆ ಏನು ಸೋಜಿಗವೋ 
ಹೇಳಿ ಬಾನ ಹಕ್ಕಿಗಳೇ 
ನಿಮ್ಮ ಭಾಷೆಯ ಕಲಿಸಿ 
ನಾನೂ ಹಾಗೆಯೇ ನುಡಿವೆ 
ಎಲ್ಲೋ, ಅದು ಎಲ್ಲೋ 
ಆ ನನ್ನ ನೆಲೆ
ನಿಲ್ಲು, ಅರೆ ನಿಲ್ಲು 
ಓ ಓಡೋ ಅಲೆ 
ನಾನು, ನೀನು ಒಂದೇ ಈಗ 
ಸಾಗಲು ಅನವರತ 

ದಾರಿ ಸಾಗಿದೆ ಇನ್ನೂ ಮುಂದಕೆ
ಕೊನೆಯೇ ಇಲ್ಲವೇನೋ 

ಹಾರಿ ಹೋಗೋ ಉಪ್ಪರಿಗೆ 
ಬಾಗಿಲೇ ಇಲ್ಲದ ಮನೆಗೆ 
ಹಸಿದು ಕಾದ ದೀವಟಿಗೆ 
ನೆಲವೇ ಹಾಸಿಗೆ ನನಗೆ 
ಕನ್ನಡಿ ಕಾಣದ ಮೊಗಕೆ 
ಮುನ್ನುಡಿ ನೀಡಿದೆ ಬೊಗಸೆ  
ನಿಜವೇ ಅದರೂ ಬದುಕು 
ಚಂದ ಮೂಡೋ ಹೊಂಗನಸೇ 
ಎಲ್ಲೋ, ಅದು ಎಲ್ಲೋ 
ಆ ನನ್ನ ನೆಲೆ
ನಿಲ್ಲು, ತುಸು ನಿಲ್ಲು 
ಓ ಓಡೋ ಅಲೆ 
ನಾನು, ನೀನು ಒಂದೇ ಈಗ 
ಆಲಿಸು ಕಿವಿಗೊಡುತ

ದಾರಿ ಸಾಗಿದೆ ಇನ್ನೂ ಮುಂದಕೆ
ಕೊನೆಯೇ ಇಲ್ಲವೇನೋ

ಆನಿವರ್ಸರಿ ತಿಂಗಳ ಶುರುವಲ್ಲಿ ಬಿದ್ದರೆ

ಆನಿವರ್ಸರಿ ತಿಂಗಳ ಶುರುವಲ್ಲಿ ಬಿದ್ದರೆ 

ಸ್ಯಾಲರಿ ಬರುವುದು ಚಿಲ್ ಮಾಡು ಮಗ 
ಆನಿವರ್ಸರಿ ತಿಂಗಳ ಮಧ್ಯೆ ಎಲ್ಲೋ ಬಿದ್ದರೆ 
ಸೇವಿಂಗ್ಸ್ ಮಾಡಿದರೆ ಆಯ್ತಲ್ಲ ಮಗ 
ಆನಿವರ್ಸರಿ ತಿಂಗಳ ಕೊನೆಯಲ್ಲಿ ಬಿದ್ದರೆ 
ಸಾಲ ಮಾಡಿ ನಂತರ ತೀರಿಸು ಮಗ 

ಅವ್ಳು ಗಿಫ್ಟ್ ಕೊಟ್ಟು ನೋಡುತಾಳೆ ಜೇಬಲಿ 
ಯಾವ ಸೈಝುಗಲ್ಲು ಉಗುರವ ಮಾಡಿಸಲಿ 
ಬಂಗಾರ ಅಂದ್ರೆ ಅವಳಿಗೆ ಬರಿ ಇಷ್ಟ 
ಹಿತ್ತಲಲ್ಲಿ ಮಣ್ಣ ಯಾವ ಕಡೆ ಬಗೆಯಲಿ 
ಹೋದ್ವರ್ಷ ಹೇಗೋ ರೋಸು ಕೊಟ್ಟು ಜಾರಿಕೊಂಡೆ 
ಆ ಸಿಟ್ಟು ಈಗ ಬೆನ್ನ ಹತ್ತಿ ಬಂದಿಹುದೇ 
ನಾನು ಹೇಳಿ ಕೇಳಿ ಪ್ಲಾನಿಂಗಲ್ಲಿ ತುಂಬಾ ವೀಕು 
ಏನ್ ಮಾಡುವುದು ಹೇಳಿ ಇಂಥ ಟೈಮಿನಲಿ  

ಕಣ್ಣೀರಿನಲ್ಲೇ ಕೊಲ್ಲೋ ಸ್ಕೆಚ್ಚು ಹಾಕಿಕೊಂಡು 
ಹಂಗಾಗಿ ಕಾಡಿಗೆಯ ಹೆಚ್ಚು ತೀಡಿಕೊಂಡು 
ಹೇಗೇಗೋ ಆಡುತಾಳೆ ಇನ್ನು ಲೇಟಾದರೆ 
ಯಾಮಾರಿಸಲು ಟಿಪ್ಸು ಕೊಡಿ ಯಾರಾದರೂ 
ಬೀದಿ ಬದಿ ಪಾನಿ ಪೂರಿ ಅಂದ್ರೆ ಇಷ್ಟನಂತೆ 
ಆದ್ರೆ ಅಷ್ಟಕ್ಕೆಲ್ಲ ಸುಮ್ನಾಗಲ್ಲ ಅದೇ ಚಿಂತೆ 
ದೊಡ್ಡ ರೆಸ್ಟೋರೆಂಟು ಅಂತ ಹೋದ್ರೆ ಮೂರು ನಾಮ 
ಹಾಕಿ ಕಳಿಸ್ತಾರೆ ಅರ್ಧಂಬರ್ಧ ಹೊಟ್ಟೆ ತುಂಬ್ಸಿ 

ನನ್ನ ಪಾಲಿನ ದೈವ ಇನ್ನು ಇಲ್ಲವಾದೆಯಾ

ನನ್ನ ಪಾಲಿನ ದೈವ ಇನ್ನು ಇಲ್ಲವಾದೆಯಾ 

ಕಣ್ಣ ತುಂಬ ಕಂಬನಿಯನು ಬಿಟ್ಟು ಹೋದೆಯಾ 
ಭಾರವಾದ ಮನಸ ಕೊಟ್ಟು
ತಿರುಗಿ ಬಾರದ ಲೋಕಕೆ
ಹೊರಟು ಹೋದೆ ಎಂಬ ನಿಜವು
ನೋವು ಕೊಡುವುದು ಜೀವಕೆ 
ಒಮ್ಮೆ ನಿನ್ನ ಮಾತನಾಡಿಸಬೇಕು ಅನಿಸುತಿದೆ
ಪಾದ ಮುಟ್ಟಿ, ಕೆನ್ನೆ ಸವರಿ ಮುದ್ದು ಮಾಡಬೇಕು ಅನಿಸುತಿದೆ...

ಒರಟು ಪಾದದ ಬಿರುಕಲಿ 
ಬಾಳ ಅನುಭವ ಸಾರವು 
ಅಭಯ ಹಸ್ತವ ನೀಡಿದೆ 
ಅರಿತ ಹಾಗೆ ಎಲ್ಲವೂ 
ಇರುಳ ದಾಟಿಸೋ ದೀಪವು 
ನಡುವೆ ಏತಕೋ ಆರಿದೆ 
ನೀನು ತೋರಲು ದಾರಿಯು 
ಹೊರತು ಸೋಲುವ ಭಯವಿದೆ 
ಹಬ್ಬವಲ್ಲದ ದಿನಗಳು ನೀನಿರಲು ಹಬ್ಬದ ಹಾಗೆಯೇ 
ನೀನೇ ಇರದೇ ಹೋದರೆ ಈ ತಿರುಗೋ ಭೂಮಿಯೂ ಸ್ತಬ್ಧವೇ... 

ನೆರಳ ನೀಡುವ ವೃಕ್ಷವೇ 
ಉರುಳಿ ಹೋದೆ ಏತಕೆ 
ಕಟ್ಟಿದ ಉಯ್ಯಾಲೆಯು 
ಕೂಡುತಿಲ್ಲ ಆಟಕೆ 
ಅರಳಬಲ್ಲವೇ ಹೂಗಳು 
ನಿನ್ನ ಸ್ಪರ್ಶವು ಇಲ್ಲದೆ 
ನಾನೇ ಬಿಡಿಸಿ ಬರುವೆನು
ಸುರಿಯೇ ನಿನ್ನ ಪಾದಕೆ
ಮನವಿಯೊಂದಿದೆ ದೇವರೇ ಆಗು ಇವರಿಗೆ ಆಸರೆ
ಏಕೆ ಎನ್ನುವುದಾದರೇ ಇವರೂ ಕೂಡ ದೇವರೇ...

ಕತೆ‌ ಹೇಳುವೆ ಕೇಳು ಕಂದ

ಕತೆ‌ ಹೇಳುವೆ ಕೇಳು ಕಂದ

ಒಂದೂರಲ್ಲಿ ಒಬ್ಬ ರಾಜ
ಹೃದಯ ಶ್ರೀಮಂತಿಕೆಯಿಂದ ರಾರಾಜಿಸಿ
ಸಾತ್ವಿಕ ಪಯಣ ಮುಗುಸಿದ
ಮನ ಮಿಡಿಯುವ ಕತೆ

ಯಾರ ಕುರಿತು? ಮುಂದೆ ಕೇಳು.. 

ಯಾವ ದೇವರು ತಾನೆ ಹರಕೆ ಹೊರದೆ
ಅರಸಿ ವರವ ಕೊಡುವ ಹೇಳು?
ಈ ದೈವ ಆ ಸಾಲಿಗೆ ಸೇರದೆ
ಕೇಳದೆಯೇ ಬೇಕುಗಳ ಅರಿತ
ಪ್ರೇಮ ಪರ್ವಕೆ ಕಾರಣನಾದ

ಕೊಡುಗೈ‌ ಕುರುಡು ಮರುಕ್ಷಣ;
ಕಿಸೆಯಲಿ ಅದೆಷ್ಟು ಪ್ರೀತಿ, ಮಮತೆ ಹೊತ್ತು
ಉದಾರವಾಗಿ ಕಟ್ಟಿಕೊಡುತಿದ್ದ 
ಬದುಕಿನ ದಾರಿಯುದ್ದಕ್ಕೂ, ಸಾಹುಕಾರ!
ಮಲಗಿದಾಗ ಪುಟ್ಟ ಪೋರ..

ಎರಗಿದ ಯುದ್ಧಗಳನ್ನು ಜಯಿಸಿ
ಮರಳಿ ಮುಳ್ಳಿನ ಹಾಸಿಗೆಯ ಕನವರಿಕೆಗಳಲ್ಲೂ
ತನ್ನವರು ಕಾಣದ ನೆರಳಿಗೆ 
ನರಳಿದಾತನೇ ಹೊರತು.. ತನಗಾಗಿ?

ಅನ್ನ‌ ಕೊಟ್ಟ ಮಣ್ಣಿನಂತೆ
ಬದಲಿ ಏನೂ ಕೇಳದ ಗುಣ
"ಮತ್ತೂ ಬೇಕಾದಲ್ಲಿ ಕೇಳು"ಎನ್ನುವ
ಕರ್ಣನಿಗೂ ಮಿಗಿಲಾದ ಸ್ಥಾನ

ಎಲ್ಲ ಪುಣ್ಯಗಳೂ ನಗಣ್ಯ
ಚರಣ ಸೋಕುವುದೇ ಪರಮ ಪುಣ್ಯ;
ಹಿತ ನುಡಿ‌ಯ ನೆನೆಪಿನ ಪುಟಗಳ
ಗೀಚು ಹೊತ್ತಿಗೆ ಹಿಡಿದ ನಾನೇ ಧನ್ಯ

ಪ್ರೀತಿ ಕೊಟ್ಟು ಪಡೆವುದಲ್ಲ
ಕೊಡುವುದಷ್ಟೇ ನೇಮವೆಂದು
ನಗೆ ಬೀರುವ ಸಂತ;
ಕಲ್ಲು ಬೀಸಲು ಹಣ್ಣು ಕೊಡುವ
ಯಾವ ಅಲ್ಪವೂ ಗೋಚರಿಸದ
ನಿಜದಿ ಕಲ್ಪವೃಕ್ಷ ಮಾನವ ರೂಪಿ ದೇವನೇ ಈತ..

ತಿಳಿದವರಿಗೆಲ್ಲ ಒಂದೇ ಸತ್ಯ
ದ್ವಂದ್ವವಿಲ್ಲ, ಬಣ್ಣದ ಮಾತಿಲ್ಲ
ತನ್ನಲ್ಲಿಹುದೆಂದು ಹಿಗ್ಗಲಿಲ್ಲ
ಕನ್ನ ಹಾಕುವ ಮಾತೇ ಇಲ್ಲ;
ಐದು ತಲೆಮಾರುಗಳ ಕಂಡ ಕಣ್ಣೊಳಗೆ
ಅದೇ ಮೃದುತ್ವ, ಅದೇ ಮಾತೃತ್ವ!

ನೆಲಕೆ ತಲೆ ಬಾಗಿ, ಹೊನ್ನ ಗಳಿಸಿ
ಕಟ್ಟಿದ ಸಾಮ್ರಾಜ್ಯದೊಳಗೆ ನಿತ್ಯ ದಾಸೋಹ;
ಫಸಲಿರುವೆಡೆ ಬೆಳೆದ ಕಳೆಯನ್ನು
ನಾಜೂಕಾಗಿ ಬೆರ್ಪಡಿಸಿ
ಸುಗುಣ ಬೇರಿಗೆ ತನ್ನ ಬೆವರ ಕೊಟ್ಟ

ಸಣ್ಣ ಮೀಸೆ, ಮಂದಹಾಸ
ತುಂಬು ಕುರುಳು, ತೀಕ್ಷ್ಣ ಮೂಗು
ತೇಜಸ್ವಿ ಮುಖ, ಬಿಳಿ ವಸ್ತ್ರ
ಊರುಗೋಲು, ತೂಕ ಹೆಜ್ಜೆ
ಮುದ್ದು ಮುನಿಸು, ಮನಸು ಕೂಸು
ಸಮಯ ಪ್ರಜ್ಞೆ, ಅಚ್ಚು ಕಟ್ಟು
ಹೊತ್ತು ಮೀರಲು ಪುಟಿವ ಸಿಟ್ಟು

ಈ ರಾಜನ ಕೆನ್ನೆಗೆ ಮುತ್ತಿಟ್ಟು
ಕುರುಚಲು ಗಡ್ಡ ಚುಚ್ಚಿ ಅತ್ತಿದ್ದೆ
ಮಡಿಲಲಿ ಮಗುವಾಗಿ ಮಲಗಿದ್ದೆ
ಹೆಗಲೇರಿ ಕುಣಿದಿದ್ದೆ, ದಣಿದಿದ್ದೆ
ಏಟನು ತಿಂದಿದ್ದೆ, ಮುತ್ತನ್ನೂ ಪಡೆದಿದ್ದೆ
ಕೈ ತುತ್ತಿಗೆ ಹಸಿದಿದ್ದೆ 
ಈಜಿದ್ದೆ ಜೊತೆಗೆ
ಮೋಟಾರ್‌ ಬೈಕು ಕಲಿತಿದ್ದೆ

ತಪ್ಪುಗಳ ತಿದ್ದಿದ ಗುರು
ನನ್ನ ಅಸ್ತಿತ್ವದ ಗುರುತು
ದೂರ ಪ್ರಯಾಣಗಳ ಒಡನಾಡಿ
ಮೌನ ಸಂವಾದದ ಸಾರತಿ

ಅಪ್ಪ, ಅಮ್ಮ, ಗೆಳೆಯ, ಬಂಧು
ಎಲ್ಲರನೂ ಒಳಗೊಂಡ ಈತ
ತಾರೆಗಳ ಜೊತೆಗೂಡಿ ಮಿನುಗಲು
ಖಾಲಿತನವೇನೆಂದು ತಿಳಿಸಲು
ತಾನಿರದೆ ಬದುಕುವುದ ಕಲಿಸಲು
ಒಂದಿಷ್ಟು ದುಃಖವನು ಭರಿಸಲು
ಮತ್ತೆ ಸಿಗುವೆ ಎಂದು ನೇಪಥ್ಯಕ್ಕೆ ಸರಿದ;
ಅವನದೇ ಕತೆಯಿದು ಕೇಳು ಕಂದ
ಹೇಳುವೆ ತುಂಬು ಉತ್ಸಾಹದಿಂದ....

ತಾಮಸ ನೆಲದಲ್ಲಿ

ತಾಮಸ ನೆಲದಲ್ಲಿ 

ದೀಪವ ಹಚ್ಚಿದವ 
ನೀರಸ ಬದುಕಲ್ಲಿ 
ಬೆಳಕನು ಚೆಲ್ಲಿದವ 
ಮೂಡುವ ನಗುವನ್ನು 
ಬಾಡದೇ ಕಾಯುವವ 
ಕಣ್ಣನು ತೆರೆಸುತಲೇ 
ಮನಸನು ಮುಟ್ಟಿದವ 

ಕರುಣೆಯ ಅಕ್ಷರದಿ  
ಹಣೆಯನು ಒತ್ತುತಲಿ 
ಹಸ್ತವ ಚಾಚುತಲಿ 
ಭಾಷೆಯ ನೀಡಿದವ 
ಆಧರಿಸುತಲೇ 
ಕಾಯೋ ಸೈನ್ಯ ನೀನು 
ನಿನ್ನನ್ನು ಹೋಲೋ ಬೇರೆ ಜೀವ ಇರದಯ್ಯಾ
ಜೈ ಜೈಕಾರ, ಜೈ ಜೈಕಾರ
ಕಾಯೋ ನಮ್ಮ ಓ ಸರದಾರ 
ಜೈ ಜೈಕಾರ, ಜೈ ಜೈಕಾರ
ಕಾಯೋ ನಮ್ಮ ಓ ಸರದಾರ 

ತಲೆ ಮಾರಿನ ಆಚರಣೆಗಳ ಲೋಪ ದೋಷವ ತಿದ್ದುತಲಿ 
ಈ ವೇಳೆಯ ನಾಳೆಗೆ ಮಾದರಿ ಮಾಡಲು ಹೊರಟಿರುವ 
ಸರಿ ದಾರಿ ತೋರುತ ತಾನೂ ಹೆಜ್ಜೆಗೆ ಹೆಜ್ಜೆಯ ಹಾಕುತಲಿ 
ಈಗಾಗಲೇ ಮುಟ್ಟಿದ ಗುರಿಯನು ನಮಗೂ ಮುಟ್ಟಿಸುವ 
ಉರಿ ಬೇನೆಯ ನೀಗುವ ಸೋನೆ 
ನೀನಿದ್ದೆಡೆ ಹಬ್ಬವೇ ತಾನೆ?
ಆ ಸೂರ್ಯ ನೀನೇ, ಚಂದ್ರ ನೀನೇ, ಲೋಕ ನೀನೇ 
ಒಂಟಿ ಸಲಗ ನೀನೈಯ್ಯಾ 
ಜೈ ಜೈಕಾರ, ಜೈ ಜೈಕಾರ
ಕಾಯೋ ನಮ್ಮ ಓ ಸರದಾರ 
ಜೈ ಜೈಕಾರ, ಜೈ ಜೈಕಾರ
ಕಾಯೋ ನಮ್ಮ ಓ ಸರದಾರ 

ಮೋಡದ ಪ್ರಭಾವಳಿ

ಮೋಡದ ಪ್ರಭಾವಳಿ

ತಂಪು ಬೀಸೋ ಗಾಳಿಲಿ
ಸವೆದ ದಾರಿ ಇನ್ನೂ ದೂರ
ದಾಟೋ ಆಸೆ ಕಣ್ಣಲಿ

ಹೆಜ್ಜೆಗೆಜ್ಜೆ ಜೊತೆಯಲಿ
ಪಚ್ಚ ಹಸಿರು ಬನದಲಿ
ಕಟ್ಟಿಕೊಂಡು ಬಿಟ್ಟು ಹೊರಟ
ಅರಮನೆಗಳ ಸಾಲಲಿ

ದಿಕ್ಕು‌ ತಪ್ಪಿದಾಗಲೇ
ಹೊಸ ತಾಣ ಸಿಗುವುದು
ಕಣ್ಣು ಮುಚ್ಚಿ ನಿನ್ನ ಲಯಕೆ
ನನ್ನ ಭಯವ ಮರೆತೆನು

ಸಿಕ್ಕ ತಾಣ ನಮ್ಮದು
ಇರುವೆ ಗೂಡ ಮಣ್ಣದು
ನಮ್ಮ ಆಗಮನಕಾಗಿ
ಕಾದ ಹಾಗೆ‌, ಸೋಜಿಗ!

ತಮ್ಮ ತಮ್ಮ ಪಾಡಿನ
ಆಟದಲ್ಲಿ ತೊಡಗಿದ
ಲೋಕವನ್ನು ಒಮ್ಮೆ ಹಾಗೆ
ಆಸೆಯಿಂದ ದಿಟ್ಟಿಸಿ

ಕಟ್ಟಿಕೊಂಡ ಬುತ್ತಿಯು
ಮೆಲ್ಲ ಕಳಚಿಕೊಂಡಿತು
ಮುತ್ತು ತುತ್ತಿನಾಟ ಮುಗಿದು
ಕತ್ತಲು ಆಕಳಿಸಿತು

ನೋಡು‌ ಎಷ್ಟೇ ಬೆರೆತರೂ
ಇನ್ನೂ ಉಳಿದ ಅಂತರ
ಬಿಡಿಸಿಕೊಂಡ ಆಲಿಂಗನ
ಮತ್ತೆ‌ ಸಿಗಲಿ ನಂತರ~~~ 😘

ಶಿರವಿಲ್ಲದ ಶಿಲೆಯೊಂದನು ಮನೆಯಲಿ ತಂದಿಟ್ಟೆ

ಶಿರವಿಲ್ಲದ ಶಿಲೆಯೊಂದನು ಮನೆಯಲಿ ತಂದಿಟ್ಟೆ 

ಮೈ ಬಿರುಕಿಗೆ ಹಿತ್ತಲ ಮಣ್ಣಿನ ಮುದ್ದೆಯ ಕೊಟ್ಟೆ 
ತುಂಡರಿಸಿದ ಕೈ ಏನನ್ನೂ ಬೇಡದೆ ಹೋದರೂ
ಕ್ಷಮೆ ಕೋರಿ ಮಲ್ಲಿಗೆ ಬಳ್ಳಿಯ ಗಂಧವನಿಟ್ಟೆ  

ಕತ್ತಿನ ಮೇಲೆ ಇಟ್ಟ ತಲೆಗಳ ಲೆಕ್ಕವೇ ಇಲ್ಲ 
ಕತ್ತರಿಸಿದ ಖಡ್ಗಗಳ ಪಳೆಯುಳಿಕೆಯ ಪಾಡು 
ಸೂರ್ಯ, ಚಂದ್ರರ ಪ್ರಭಾವಳಿಯ ಹೊತ್ತರೂ 
ಮತ್ತದೇ ನೀರವತೆ, ಅದೇ ನಿಶಬ್ಧ, ತಟಸ್ಥ ನಿಲುವು 

ಹಸಿದವರ ಹಸಿವ ಕದ್ದು ಹೊಟ್ಟೆ ಬೆನ್ನಿಗಂಟಿ 
ಜಗದ ಬೆತ್ತಲೆಯ ಮುಚ್ಚಿ ತಾ ದಿಗಂಬರನಾಗಿ 
ಉರುಳಿದ ತಲೆ ಎಲ್ಲೋ ಇನ್ನೂ ನಗುತಿರಬೇಕು 
"ಕಲ್ಲನ್ನೂ ಬಿಡದೆ ಹೋದೆಯಾ ಮರುಳ?!" ಎಂದು  

ಉಂಗುಟದಿ ಅರಳಿಕೊಂಡ ಅಣಬೆಯ ಬೆರಗು  
ಹೊಕ್ಕಳಲ್ಲಿ ಸಣ್ಣದೊಂದು ಇರುವೆಯ ಗೂಡು 
ಎದೆ ಸೀಳಿನ ನಡುವಲ್ಲಿ ಬೇರು ಬಿಟ್ಟ ಚಿಗುರು 
ಮೈ ತಡವಿ ಪಸೆಯಾಗಿ ಉಳಿದ ಮಳೆ ನೀರು 

ನನ್ನ ಗ್ರಹಿಕೆಯ ಪ್ರಕಾರ, ಶಿಲೆ ಎಂದೋ ಸತ್ತಿದೆ 
ಬದುಕಿದ್ದರೆ ತಾನಷ್ಟೇ ಬದುಕು ಕಟ್ಟಿಕೊಳ್ಳುತಿತ್ತು 
ಕಟ್ಟಿಕೊಳ್ಳ ಬಂದವರ ಅಪ್ಪಿಕೊಳ್ಳುತಿರಲಿಲ್ಲ 
ಶಿಲೆ ಎಂದೋ ಸತ್ತ ಕಾರಣ, ಇನ್ನೂ ಜೀವಂತವಾಗಿದೆ 

ಇಟ್ಟ ಹೆಸರಲಿ ಕರೆಸಿಕೊಂಡೂ ನಿರ್ಲಿಪ್ತ
ಉಳಿಯ ಪೆಟ್ಟು ಕಾಣದಂತೆ ಅರಗಿಸಿಕೊಂಡು 
ಇತಿಹಾಸ ಮೆರೆಸಬಲ್ಲ ಶಾಸನವೂ ಅಸ್ಪಷ್ಟ 
ಒಂದೇ ಭಂಗಿಯಲಿ ಅಸಂಖ್ಯ ಭಾವ ಸೂಸಿದ  

ಬೇಡದೆ ಬಿಟ್ಟವರನ್ನು ದೂರದ ಸಂತ   
ತಮ್ಮದಾಗಿಸಿಕೊಂಡವರ ನೆನಯದ ಧೀಮಂತ  
ನಂಬಿದವರ ಪಾಲಿಗೆ ಪೊರೆವ ಭಗವಂತ 
ಯಾವ ಸಿರಿ ತನ್ನದಲ್ಲದಿದ್ದರೂ ಸಿರಿವಂತ..

ಬಗೆ ಬಗೆ ಕನಸಾಗುತ ನೀ ಬರುವೆ

ಬಗೆ ಬಗೆ ಕನಸಾಗುತ ನೀ ಬರುವೆ 

ಖುಷಿಯನ್ನು ಹಂಚುತ
ನುಡಿಯದೆ ನುಡಿದೆಲ್ಲವ ನೋಟದಲೇ 
ಒಲವನನ್ನು ಸಾರುತ 
ಕಿಸೆಯ ತುಂಬ ಬಿಟ್ಟು  ಹೋದೆ ಮೆಲ್ಲಗೆ 
ನವಿರಾದ ಸಂತೋಷ 
ಸಂಗಾತಿ ನೀಡು ಜೀವಕೆ 
ನಿನ್ನಲ್ಲೇ ವಿಳಾಸ 

ಅರೆ ಬರೆ ನಗೆಯ ತುಟಿಯಂಚಲಿ ಮೂಡಿಸಿ 
ಮಾಯವಾದೆಯಾ 
ತೆರೆಯನು ಸರಿಸಿ ಬಾ ಎನ್ನುತಲಿ 
ಮರೆಯಲ್ಲೇ ಕಾದೆಯಾ  
ಇಶಾರೆಯನ್ನು ನೀಡು ನನ್ನ ಶಾಯಿರಿ 
ನಿನಗಿಷ್ಟ ಆದರೆ 
ಬದಲಾಗಿ ಏನು ನೀಡಲಿ 
ನನ್ನೊಲವೇ ಉಡುಗೊರೆ 

ಕೆಳಲೇ ಬೇಡ ಪ್ರೀತಿ ಆಗಲು ಯಾವ ಕಾರಣ 
ನಿನ್ನಲೂ ಕೂಡ ಕಂಡೆ ಪ್ರೀತಿ ಮೂಡೋ ಲಕ್ಷಣ  
ನಾಟಕವಾಡುವುದೇನಿದೆ ಒಬ್ಬರಿಗೊಬ್ಬರು ಸೋಲೋಣ 
ಹೇ ಗೆಳತಿ ಸಾಗರದಾಚೆಗೂ ಸಾರುತ ಬರುವ ಒಪ್ಪೋದಾದರೆ 
ನೀನೇ ಆಗೆಯಾ  ಬಾಳಿಗೆ ಹಿತವಾದ  ಆಸರೆ 

ಬಗೆ ಬಗೆ ಕನಸಾಗುತ ನೀ ಬರುವೆ 
ಖುಷಿಯನ್ನು ಹಂಚುತ
ನುಡಿಯದೆ ನುಡಿದೆಲ್ಲವ ನೋಟದಲೇ 
ಒಲವನ್ನು ಸಾರುತ 
ಹೇ ಗೆಳತಿ ಬಂದೆ ಬಂದೆ ಬಂದೆ ಬಂದೆ ನೋಡು ಇನ್ನೂ ಹತ್ತಿರ 
ಮರೆಸುವೆ ತಾಳು ತಾಳು ತಾಳು ತಾಳು ನಿನ್ನ ಬೇಸರ 

ನಿನ್ನನು ಹೋಲೊ ಹೂವದು ಇನ್ನೂ ಹುಟ್ಟೇ ಇಲ್ಲವೇ 
ಸೊಲುತಾ ಹಾಗೇ ಹಿಂದೆ ಚಿಟ್ಟೆ ಹಾರಿ ಬಂದಿವೆ   
ತೀರಾ ಅತಿಶಯವಾದರೂ ನಿನ್ನೆದುರಲ್ಲಿ ಗೌಣವೇ 
ಹೇ ಗೆಳತಿ ಪ್ರಾಣಕೂ ಮಿಗಿಲು ನೀನೇ ಎನ್ನುವೆ  ಪ್ರಾಣ ಹೋದರು 
ಏನೇ ಆದರೂ ಗೆಲ್ಲುವೆ ನೀ ನನ್ನ ಜೊತೆಗಿರು 

ಬಗೆ ಬಗೆ ಕನಸಾಗುತ ನೀ ಬರುವೆ 
ಖುಷಿಯನ್ನು ಹಂಚುತ
ನುಡಿಯದೆ ನುಡಿದೆಲ್ಲವ ನೋಟದಲೇ 
ಒಲವನ್ನು ಸಾರುತ 
ಹೇ ಗೆಳತಿ ಬಂದೆ ಬಂದೆ ಬಂದೆ ಬಂದೆ ನೋಡು ಇನ್ನೂ ಹತ್ತಿರ 
ಮರೆಸುವೆ ತಾಳು ತಾಳು ತಾಳು ತಾಳು ನಿನ್ನ ಬೇಸರ 

ಹೂ ತಂದು ಮುಡಿಸಿ

ಹೂ ತಂದು ಮುಡಿಸಿ ಬಾಡುವುದೇತಕೆ, ತಾನಿರುವಲ್ಲಿಗೇ ಹೋಗೋಣ ಬಾ

ಕಂಡ ಕಂಡವರು ಏನೆಂದಾರು ಅನ್ನದಿರು, ಕೈ ಹಿಡಿದು ಜೊತೆಯಾಗೇ ಹೋಗೋಣ ಬಾ 

ಎಲ್ಲೆಲ್ಲೂ ನಗೆ ಹಸಿದ, ಬೊಗಸೆ ಹಿಡಿದ ಮನಸುಗಳೇ 
ನಮ್ಮಿಂದ ಹೊಮ್ಮುವ ಖುಷಿಗಳ ಪಸರಿ, ನೀಗಿಸಿ ಬರಲು ಹೋಗೋಣ ಬಾ 

ಗಾಳಿ ಮಾತುಗಳಿಗೇನು ಪಡೆಯುತ್ತವೆ ಬೇಕಾದ ರೂಪ 
ನಾವು ಹತ್ತಿಸಿದ ಹಣತೆ ಮುಖ್ಯ ನಮಗೆ, ಕಾಪಿಡಲು ಹೋಗೋಣ ಬಾ 

ಸಾವು ನೋವುಗಳಾಚೆ ಬದುಕು ನಿರಂತರ ಸಾಗುವುದು 
ಪೂರ್ತಿ ಬದುಕ ಬದುಕಿ ತೋರಿಸಲು   ಹೋಗೋಣ ಬಾ 

ಕೇಳುವುದಾವುದನ್ನೂ ಇಲ್ಲವೆನ್ನುವ ಬಡವನಲ್ಲ, ಆಜನ್ಮ 
ಈ ಜಾಗ ನಮಗೆ ಸೂಕ್ತವಲ್ಲ, ಅನಂತಾನಂತ  ಹೋಗೋಣ ಬಾ 

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...