ನಾನೊಬ್ಬ ರಾಕ್ಷಸ

ಇರುವ ಎರಡು ಕಣ್ಣುಗಳಲಿ
ಅದೆಷ್ಟು ಬಾರಿ ಕಂಬನಿ
ಒರೆಸಿದಾಗ ಕೇಳಿತಲ್ಲಿ
ಮತ್ತೊಂದು ಕಂಬನಿಯ ದನಿ
ಸವರಿದ ಕೆನ್ನೆಗಳ ಸಾರಿಸಿ
ಸುಮ್ಮನಿರುವುದೇ ಕೆಲಸವೇ
ಜಾರಿದ ಪ್ರತಿಯೊಂದು ಹನಿಗೂ
ಕಾರಣ ಕೊಡಬೇಡವೇ?

ಹಿಡಿದ ಕನ್ನಡಿ ಜಾರಿಹೋಯಿತು
ಕನಸ ಕೈಗಳ ತಪ್ಪಿಸಿ
ಆದ ಚೂರುಗಳಲ್ಲಿ ನನ್ನನೇ
ಅತ್ತ ಹಾಗೆ ಪ್ರತಿಬಿಂಬಿಸಿ
ಜೋಡಿಸೋಣವೆಂದರೆ
ಚುಚ್ಚುವುದು ಅಂಚಿನ ಗುರಿಯಲಿ
ಹೀಗಿದ್ದರು ಹೇಗೆ ನಗಲಿ?
ತುಟಿಗೆ ಅರ್ಥವಾಗಲಿ

ಎದೆಗೆ ಅಪ್ಪುಗೆಯ ನಿರೀಕ್ಷೆ
ನುಡಿಗೆ ನಾಲಿಗೆ ಬೇಡವಾಗಿ
ಹಣೆಯ ಸಾಲುಗಳನ್ನು ಅಳಿಸಿ
ಹೆಜ್ಜೆ ಮುಳ್ಳಿನೆಡೆಗೆ ಸಾಗಿ
ಅಂಧವಲ್ಲದ ಅಂಧಕಾರ
ಕಣ್ಣುಗಳಿಗೆ ಆಹಾರವಾಗಿ
ಎದೆಯ ಬಡಿತ ನಿಂತು ಹೋಗಲಿ
ಒಮ್ಮೆಯಾದರು ಹೀಗೆ ಕೂಗಿ

"ನಾನು ಪಾಪಿ, ನಾನು ದುಷ್ಟ
ನಾನಾಗಲಿಲ್ಲ ಸ್ಪಷ್ಟ
ನನ್ನ ಇರುವಿಕೆ ನಷ್ಟ ತಾರದೆ
ಆಗಲಿಲ್ಲ ಯಾರಿಗೂ ಇಷ್ಟ
ಇಷ್ಟೇ ನನ್ನ ಋಣದ ಪಾಲು
ಹೆಚ್ಚು ಬಯಸಲು ಘೋರ ತಪ್ಪು
ಶಿಕ್ಷೆ ಆಗಲೇ ಬೇಕು ನನಗೆ
ನಾನು ತಪ್ಪಿತಸ್ತ ಒಪ್ಪು"

ಕಾಲ ಕಾಲಕೆ ರೂಪ ಬದಲಿಸೋ
ಓ ಪ್ರಕೃತಿ ದೇವನೇ
ನಾನು ನಿನ್ನಲಿ ಒಬ್ಬ ತಾನೇ?
ಕರೆಸುಕೋ ನನ್ನ ಸುಮ್ಮನೆ
ಇದ್ದು ಏನೂ ಆಗಲಿಲ್ಲ
ನನ್ನಿಂದ ಉಪಯೋಗವು
ನನ್ನ ಧಹನ ನೀನು ನಡೆಸೋ
ಅಸುರ ಸಂಹಾರ ಯಾಗವು.......

                                             - ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩