ಗೆಳೆಯ ಅಗೋ ಕರೆ ನೀಡಿದ ಬಹಳ ದಿನದ ನಂತರ
ಮಾತನಾಡಿದಷ್ಟ್ಹೊತ್ತು ಎಲ್ಲಿ ಮಾಯ ಬೇಸರ
ಚೇಷ್ಟೆ ಮಾಡಿಕೊಂಡು ಕಳೆದ ಒಂದೊಂದು ನಿಮಿಷಕೂ
ಜಾರಲು ಮನಸಾಗದೆ ದಾರಿ ಮಾಡಿತೆಲ್ಲಕೂ
ಅತಿರೇಖವ ನಿಭಾಯಿಸಿ ದಡ್ಡತನವ ತೋರಿಸಿ
ಪೆದ್ದ ಪೆದ್ದ ಆಲೋಚನೆಗಳಿಗೆ ತಲೆಯ ಬಾಗಿಸಿ
ಅವನೊಮ್ಮೆ ನಕ್ಕರೆ ಇಲ್ಲೊಮ್ಮೆ ಚಿವುಟು
ಜೊತೆಗೆ ನಕ್ಕಾಗ ಉಳಿಯಿತೆಲ್ಲಿ ನಡುವೆ ಒಗಟು
ಜೊತೆಗೆ ಸಾಗಿ ಬಂದೆವಲ್ಲಿ ಬಾನೆತ್ತರ ವಿಹರಿಸಿ
ಕಾಣೆಯಾದ ನೆನಪುಗಳ ಕಣ್ಣ ಮುಂದೆ ಪಸರಿಸಿ
ಬೀಗಿದೆವು ಒಬ್ಬೊಬ್ಬರು ಮತ್ತೊಬ್ಬರ ಕಂಡು
ಸಾಗಿದೆವು ಮುಂದೆ ಹಾಗೆ ಮಾತನಾಡಿಕೊಂಡು
ಇಟ್ಟುಕೊಳ್ಳದೆ ಯೋಜನೆ ಮಾಡಿಕೊಳ್ಳದೆ ತಯಾರಿ
ಮಾತಿನ ಬಾಣಗಳ ಸೀದ ಹೇಗೆ ಗುರಿಗೆ ಗುರಿಯಿಟ್ಟು?
ತಿಳಿವ ಮೊದಲೇ ಗುಟ್ಟುಗಳನು ಬಹಿರಂಗ ಪಡಿಸಿದೆವು
ಅನುಮಾನಗಳಿಗೆ ಪೂರ್ಣ ವಿರಾಮವನು ಕೊಟ್ಟು
ಎಲ್ಲವನ್ನು ಹಂಚಿಕೊಂಡು ಒಂದಿಷ್ಟು ಉಳಿಸಿಕೊಂಡು
ಮುಂದೆಂದಾದರೂ ಹೇಳಬೇಕೆನಿಸಬಾರದೆ?
ಮುಗಿಯಿತೆಂದು ಅಂದುಕೊಳ್ಳುವಷ್ಟರಲ್ಲಿ ಮತ್ತೊಂದು ಚರ್ಚೆ
ಗೆಳೆಯರ ಮಾತಿಗೂ ಒಂದು ಅಂಕುಶ ಇರಬಾರದೆ?
ಮುಗಿಯುವಷ್ಟರಲ್ಲಿ ಮನಸು ಹಗುರವಾಗಿ ಹಾರುತ್ತಿತ್ತು
ಮುಗಿದ ಮೇಲೆ ಮತ್ತದೇ ನಿರೀಕ್ಷೆಯ ಭಾರ
ಕಡಲ ಅಲೆಗಳಾಗಿ ನಮ್ಮ ಸಂದೇಶ ರವಾನಿಸಲು
ನಾನೊಂದು ತೀರವಾದೆ, ಮತ್ತವನೊಂದು ತೀರ.......
-ರತ್ನಸುತ