ಆಡದ ಮಾತು

ತುಟಿ ದಾಟದೆ ಹೊಸ್ತಿಲಲ್ಲೇ, ಕುಳಿತಿತ್ತು ಒಂದು ನುಡಿ
ಏನು ಅಂಜಿಕೆಯೋ ಪಾಪ, ಅರಿತು ದಾರಿ ಮಾಡಿ ಕೊಡಿ
ಒಮ್ಮೊಮ್ಮೆ ಇದ್ದ ದಾರಿ, ಇಲ್ಲದಂತೆ ತೋಚುವುದು
ಬಂದದ್ದು ಬರಲಿ ಅದರ ಇಷ್ಟಕ್ಕೆ ಬಿಟ್ಟು ಬಿಡಿ

ಹೊರ ಬರುವ ಕಾಲಕ್ಕೆ ಮಿಂಚಿ ಹೋದ ಸಮಯವಾಗಿ
ಒಳ ಆಸೆಗಳೆಲ್ಲ ಅಲ್ಲೇ ಕೊಳೆತಂತಿದೆ ಮಾಗಿ,ಮಾಗಿ
ಇದ್ದ ನೋವು ಹೆಚ್ಚುವುದು ಕೊಡದಿದ್ದರೆ ಕಾರಣ
ಆದ ನೋವು ಸಹಿಸಲಾಗದು ಇರದಿದ್ದರೆ ಕಾರಣ

ಕಿವಿಗಳಿಲ್ಲದಾಗಲೇ ಹೆಚ್ಚು ನುಡಿವ ಹಂಬಲ
ಎಷ್ಟೇ ಪಳಗಿ ಇದ್ದರು ಆ ಕ್ಷಣವೇ ಚೊಚ್ಚಲ
ಅದಕೆ ತಕ್ಕಂತೆ ಮನ ದೃಢವಲ್ಲದೆ ಕೊರಗಿತ್ತು
ಅದಕೇ ಆ ಗಳಿಗೆಗೆ ನಿರ್ಧಾರಕಿರದು ಬೆಂಬಲ

ಕೂಗಿ ಕರಗಿ ಹೋಗುತಿದೆ, ಸದ್ದಿಲ್ಲದೇ ಕೂಗೊಂದು
ಕರೆಗೆ "ಹೂ"ಗೋಡುವವರು ತೋಚದೆ ಯಾರೆಂದು
ಮನಸಿನಲ್ಲಿದೆ ಆ ಅಪರಿಚಿತ ಭಾವಚಿತ್ರ
ಕೊರಳಿಗೆ ತಿಳಿವುದ್ಹೆಗೆ, ನಿಲ್ಲಿಸಿದರು ಸಾಕೆಂದು

ಪೂಜೆಗೈದು ಶುಭವಾಗದಿರಲು ದೇವರಲ್ಲ ಕೆಟ್ಟವ
ಇದ್ದ ಹೂವ ಬಾಡ ಬಿಟ್ಟು ಹುಡುಕ ಬೇಡಿ ಗಂಧವ
ಕಿರಣಗಳಿಗೆ ಜಾರಿ ಬಂದು ಬೆಳಕ ಬೀರೋ ಗುಣವಿದೆ
ಕಣ್ಣು ಮುಚ್ಚಿ ಕತ್ತಲಿಗೆ ಸೊಲುತಾನೆ ಮಾನವ

ಅಳುವಾಗಿನ ಹನಿಗಳಿಗೆ, ಹೇಳ ಬೇಕು ಕಾರಣ
ಇಲ್ಲವಾದರೆ ಹರಿಯಲೂ ಹಿಂಜರಿಯ ಬಹುದವು
ಆಡದ ಮಾತುಗಳಿಗೆ ಶಿಕ್ಷೆಯಾಗಬೇಕೆಂದರೆ
ಕಣ್ಣೀರಿನ ರೂಪ ತಾಳೆ, ಬಿಟ್ಟು ಹೋಗಬೇಕವು.............


ಮಾಡಿದ ತಪ್ಪುಗಳಿಗೆ ಪ್ರಾಯಷ್ಚಿತವಾಗಿ ಮನಸಾರೆ ಅತ್ತು ಬಿಡಿ, ಮನಸ್ಸು ಹಗುರಾದರೂ ಆಗಬಹುದು.......


                                                                                    -ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩