Friday, 29 November 2019

ಮೌನಕ್ಕೆ ಶರಣಾಗುವಾಗ

ಮೌನಕ್ಕೆ ಶರಣಾಗುವಾಗ
ಕೇಳಿತ್ತು ಆ ನಿನ್ನ ಗುನುಗು
ಕನಸಲ್ಲಿ ನೀ ಕಾಣುವಾಗ
ಕಣ್ಣಲ್ಲಿ ಯಾಕಿಷ್ಟು ಮೆರುಗು?
ಹೇಳಿ ಹೋದೆ ನೀನೊಂದು ಶಾಯರಿ
ಸೋಕಿದಂತೆ ಹೃದಕ್ಕೆ ಹೂಗರಿ
ಸಣ್ಣ ತಪ್ಪು ಮಾಡೋ ಆಸೆ
ಸಣ್ಣದೊಂದು ಸಂಕೋಚಕೆ.. 

ಒಂದೊಂದೇ ಎಳೆಯನ್ನು ಬಿಚ್ಚಿ 
ಹೇಳಿ ಕೊಡುವಾಗ ನೀ ಪ್ರೇಮ ಪಾಠ 
ಮಗುವಂಥ ಮನಸನ್ನು ಬಾಚಿ 
ತೂಗಿ ತೊನೆದಾಡಿದೆ ಪಾರಿಜಾತ 
ಕಾರಣವಿರದೆ ಮೂಡುವ ಮುಗುಳು 
ಹೆಜ್ಜೆಯ ಮೇಲೆ ಹೆಜ್ಜೆಯನಿಡಲು 
ಬಣ್ಣ ಹಚ್ಚಿ ಹೋದೆ ನೀನು 
ನೀನೇ ಬರೆದ ಚಿತ್ತಾರಕೆ.. 

ಆರಂಭಿಸು ಒಂದು ವಾದ 
ಸೋತು ತಲೆ ಬಾಗುವೆ ನಿನ್ನ ಮುಂದೆ 
ಆಲಂಗಿಸು ಮತ್ತೆ ಬೇಗ 
ಸಂಜೆ ಮೀರಿದ್ದು ಅರಿವಾಗದಂತೆ 
ಅನುಮತಿ ಇರದೆ ಹಣೆಗಿಡು ಮುತ್ತು 
ಹರೆಯದ ಬೇಲಿ ನಾಚುವ ಹೊತ್ತು 
ಕದ್ದು ದೀಪ ಆರೋ ಮುನ್ನ 
ಜಾರಿ ಹೋಗು ಆಂತರ್ಯಕೆ..


https://soundcloud.com/bharath-m-venkataswamy/dvsfcg0cwp1e

No comments:

Post a Comment

ಬರುವೆ ನಿನಗಾಗಿ

ಬರುವೆ ನಿನಗಾಗಿ  ಇರುವೆ ಜೊತೆಯಾಗಿ  ಪ್ರತಿ ಗಳಿಗೆ ಬೇಕಿದೆ ನಿನ್ನಾಸರೇ  ನೀನದೇ ಈ ಹಾಡು  ಹಿಡಿದು ಹೊಸ ಜಾಡು  ನಾ ಹಾಡುವೆನು ಕೂಡಿ ಬಾ ನೀ ಆದರೆ  ಬೆರೆತ ಮನದಲ್ಲಿ  ಪುಟಿ...