Wednesday 4 November 2020

ಸಾಗಿ ಹೊರಟ ದಾರಿಯಲಿ

ಸಾಗಿ ಹೊರಟ ದಾರಿಯಲಿ 

ಅಳಿಯದ ಹೆಜ್ಜೆಯ ಗುರುತು 
ಕೊಟ್ಟು ಮರೆತ ಮಾತಿನಲಿ 
ತೀರದ ನೋವಿನ ಗುರುತು 
ಕಲ್ಲ ಕೆತ್ತಿದ ಉಳಿಯಲ್ಲಿ 
ಕ್ಷಮೆಯಾಚನೆಯ ಗುರುತು 
ಮಣ್ಣ ಬೆರೆತ ಹನಿಯಲ್ಲಿ 
ಮೋಡವ ಕಟ್ಟುವ ಗುರುತು 

ಎಲ್ಲಿದೆ ನಿನ್ನ ಗುರುತು?
ಈಗೆಲ್ಲಿದೆ ನಿನ್ನ ಗುರುತು? 
ನಿನ್ನನೇ ನೀನು ಮರೆತು ಕೂತರೆ 
ಉಳಿವುದೇ ನಿನ್ನ ಗುರುತು?

ಗಂಧವ ತೇಯುತ ಹೋದಂತೆ 
ಹೊಮ್ಮುವ ದಿವ್ಯ ಘಮಲು 
ಸವೆದ ಕೋಲಿನ ಅಂಚಿನಲಿ 
ಜೀವಂತಿಕೆಯ ಗುರುತು 
ಬಳ್ಳಿಯಿಂದ ಬೇರ್ಪಟ್ಟು 
ಮೊಗ್ಗಿನ ಅವಸ್ಥೆ ದಾಟಿ 
ಅರಳಿದ ಹೂವಿನ ನಗುವಲ್ಲಿ 
ಕಿರು ಉತ್ಸಾಹದ ಗುರುತು 

ಎಲೆಮರೆ ಕಾಯಿಗಳೆಲ್ಲ 
ಕೊನೆಗೆ ಗೆದ್ದೆವು ಎಂದು 
ಕಲ್ಲಿನ ಹೊಡೆತವು ತಪ್ಪಿ 
ಕಾದು ಹಣ್ಣಾದೆವೆಂದು 
ಮರದ ಕುರಿತು ಹೇಳಲು 
ಹಸಿದ ಹಕ್ಕಿಗೆ ನೀಡಲು 
ಉಳಿದ ತನ್ನಲಿ ಕಾಣುವುದು 
ಸಂತೃಪ್ತಿಯ ಗುರುತು 

ದೂರದ ಬೆಟ್ಟದ ತುದಿಯಲ್ಲಿ 
ಕಟ್ಟಿದ ಗೋಪುರದಡಿಯಲ್ಲಿ 
ನೆಲೆಸಿದ ಮೂರ್ತಿಗೆ ನಿತ್ಯವೂ 
ಮೌನಾಚರಣೆಯ ಗುರುತು 
ಅಟ್ಟದ ಮೇಲೆ ಕಟ್ಟಿಟ್ಟು 
ಯಾರಿಗೂ ಕಾಣದೆ ಬಚ್ಚಿಟ್ಟು 
ಉಳಿಸಿದ ದವಸದ ಮೊಳಕೆಯಲಿ 
ತೆನೆ ತೂಗಾಡುವ ಗುರುತು 

ಬತ್ತಿದ ಕಾಲುವೆಗಳಿವು 
ದಟ್ಟ ಮೋಡವ ಕಂಡು 
ಎಲ್ಲೋ ಮುಂದೆ ಕರಗಬಲ್ಲವು 
ಎನ್ನುತ ಹಿಗ್ಗಿ ಬಿರಿದು 
ತುಂಬಿ ಹರಿದು ಜಲಸಿರಿ 
ಹೊತ್ತು ತಂದಿದೆ ಓಲೆಯ 
ಶುಭ ಸಂಕೇತದ ಕರೆಯೋಲೆ
ಹಸಿರು ಪಸರುವ ಗುರುತು... 

1 comment:

  1. ಈ ಭೂಮಿ ಮೇಲೆ ಹುಟ್ಟಿದ ಮೇಲೆ, ಅಳಿಯುವ ಮುನ್ನ ನಾನೂ ನನ್ನ ಗುರುತನ್ನು ಉಳಿಸಿ ಹೋಗೋಣ ಎಂದು ಹಪಹಪಿಸುತ್ತಿದ್ದೇನೆ.

    ಸಾರ್ಥಕ ಜೀವನವನ್ನು ರೂಪಿಸುವತ್ತ ಮುನ್ನಡೆಸು ಪ್ರಾರ್ಥಾನಾ ಗೀತೆಯಂತೆ ನನಗೆ ನಿಮ್ಮ ಕವನವು ಹುರಿದುಂಬಿಸಿತು.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...