Friday 22 January 2021

ಮಕ್ಕಳ ಪದ್ಯ

ಮಕ್ಕಳ ಪದ್ಯ

 *ನವಿಲೇ*

ನೂರು ಕಣ್ಣ ಗರಿಯ ನವಿಲೇ
ಎಷ್ಟು ಅಂದವಾಗಿಹೆ
ನಿನ್ನ‌ ಕಾಣಲೆಂದು ನಾನು
ದೂರದಿಂದ ಬಂದಿಹೆ

ಎಲ್ಲಿ‌ ಹಾರು ಒಮ್ಮೆ
ಮತ್ತೆ ಒಮ್ಮೆ ಗರಿಯ ಬಿಚ್ಚು
ನಿನ್ನ ಕುಣಿತ ಕಣ್ಣಿಗುಚಿತ
ಮಳೆಗೂ ಅಚ್ಚು ಮೆಚ್ಚು

ಎಷ್ಟು ಬಣ್ಣ ಮೈಯ್ಯಲಿ
ಎಣಿಸಿ‌ ಬಿಡುವೆ ತಾಳು
ಏನು ಬೇಕು ಬದಲಿಗೆ
ಇಗೋ‌ ತೊಗರಿ‌ ಕಾಳು

ನಿನ್ನ ದನಿಯೂ‌ ಇಷ್ಟ ನನಗೆ
ನಿನ್ನ ಹಾಗೆ ಕೂಗುವೆ
ಉದುರಿ ಬಿದ್ದ ಗರಿಗಳನ್ನು
ಹೆಕ್ಕಿ ತಂದು‌ ನೀಡುವೆ...


*ಆಮೆ *
ನಾನೊಂದು ಆಮೆ 
ನನ್ನ ಹೆಸರು ಚಿಂಟು 
ನನ್ನ ಬೆನ್ನ ಮೇಲೆ 
ಗಟ್ಟಿ ಚಿಪ್ಪು ಉಂಟು 

ಈಜಬಲ್ಲೆ ನೀರಲಿ 
ನಡೆಯಬಲ್ಲೆ ನೆಲದಲಿ 
ಸೋಲಿಸಿದ್ದೆ ಒಮ್ಮೆ ನಾ 
ಮೊಲವ ಓಟದಲ್ಲಿ 

ಪುಟ್ಟದಾಗಿ ಇರುವೆ 
ದೊಡ್ಡದಾಗಿ ಬೆಳೆವೆ 
ಮೀನು, ಹುಳ, ಗೆಣಸು, ಎಲೆ 
ಏನೇ ಇರಲಿ ತಿನ್ನುವೆ 

ಮಳೆ, ಬಿಸಿಲು, ಗಾಳಿ 
ಎಲ್ಲವನ್ನೂ ಮೀರಿ 
ಹಾಯಾಗಿ ಬದುಕುವೆ 
ಚಂದ ನಗುವ ಬೀರಿ  

*ಆಟ, ಪಾಠ, ಊಟ*

ಮುಂಜಾನೆ ಕಣ್ಬಿಟ್ಟು ಮನೆಯಾಚೆ ನೋಡಿದೆ 
ಎದುರಿತ್ತು ದಟ್ಟವಾದ ಬಿಳಿ ಮಂಜು ಪರದೆ 

ಕಂಬಳಿ ಹೊದ್ದುಕೊಂಡೇ ಅಮ್ಮನನ್ನು ಕೂಗಿದೆ 
ಎದ್ದೆನಾದರೂ ನನಗೆ ಇನ್ನೂ ಬಿಡದ ನಿದ್ದೆ 

ಹಲ್ಲು ತಿಕ್ಕಿ, ಸ್ನಾನ ಮಾಡಿ ಬದಲಾಯಿಸಿ ಬಟ್ಟೆ 
ಬಿಸಿ ಲೋಟ ಹಾಲು ಗುಟುಕಿನಲ್ಲೇ ಮುಗಿಸಿಬಿಟ್ಟೆ 

ಶಾಲೆಗಾಗಿ ಸಿದ್ದವಾದೆ ತಿಂಡಿ ಮುಗಿಸಿಕೊಂಡು 
ಆಟ, ಪಾಠ ಖುಷಿ ಗೆಳೆಯರೆಲ್ಲ ಕೂಡಿಕೊಂಡು 

ಎರಡೊಂದ್ಲಾ ಮಗ್ಗಿ ಕಲಿತು ಅಪ್ಪನಿಗೆ ಹೇಳುವೆ 
ಭೇಷ್ ಎನಿಸಿಕೊಂಡು ಹೊಸ ಸೈಕಲ್ಲು ಕೇಳುವೆ

ರಾತ್ರಿ ಊಟ ಮುಗಿಸಿ ನಾಳೆ ತಡವಾಗಿ ಏಳುವೆ 
ಭಾನುವಾರ ರಜೆ ದಿನಮೋಜು ಮಾಡಿ ಕಳೆಯುವೆ...


*ಮನೆ ಹಿತ್ತಲು*

ನನ್ನ ಮನೆಯ ಹಿತ್ತಲಲ್ಲಿ ಒಂದು ಸಸಿಯ ನೆಟ್ಟೆ
ಗಾಳಿ, ನೀರು, ಬಿಸಿಲು, ನೆರಳು ಎಲ್ಲವನ್ನೂ ಕೊಟ್ಟೆ

ನನ್ನ ಹಾಗೇ ತಾನು ಕೂಡ ಚಂದ ಬೆಳೆಯುತಿತ್ತು
ಅಂದು ತನ್ನಲ್ಲಿ ಮೊದಲ ಹೂವ ಅರಳಿಸಿತ್ತು

ಬಿಳಿ ಬಣ್ಣದ ಹೂವು ಎಷ್ಟು ಸೊಗಸು ಕಾಣಲು
ಮತ್ತು ದೂರ ದೂರ ಪಸರಿಸಿತ್ತು ಅದರ ಘಮಲು

ಅಮ್ಮನಿಗೆ ತೋರಲೆಂದು ಬಿಡಿಸಿ ತಂದು ಕೊಟ್ಟೆ
"ಮಲ್ಲಿಗೆ" ಎಂದಳಮ್ಮ ಮುಡಿಗೆ ಮುಡಿದು ಬಿಟ್ಟೆ

ಹಿತ್ತಲ ಮರದಿ ಗೂಡು, ಹಕ್ಕಿಗಳ ಸದ್ದು
ಏನೇ‌ ಖಾಯಿಲೆ‌ ಇರಲಿ ಹಿತ್ತಲ ಗಿಡ ಮದ್ದು...


*ಚೀಚಿ*

ಚೀಚಿ‌ ತಿನ್ನುವೆ ನಾನು ಚೀಚಿ ತಿನ್ನುವೆ
ಕೋಳಿ, ಕುರಿ, ಮೀನು ಇಷ್ಟ ಪಟ್ಟು ತಿನ್ನುವೆ

ಖಾರ ಎಷ್ಟೆ ಇರಲಿ, ಸೊರ್ss ಎಂದು ಸೊರೆಯುವೆ
ನಲ್ಲಿ ಮೂಳೆ ಬಹಳ ರುಚಿ ಕುಟ್ಟಿ ಹೀರುವೆ

ಚೀಚಿ‌ ತಿನ್ನುವೆ ನಾನು ಚೀಚಿ ತಿನ್ನುವೆ
ಎಲ್ಲ ನನಗೇ ಬೇಕು ಎಂದು ಬಾಚಿ ತಿನ್ನುವೆ

ಸಾರಿನಲ್ಲಿ ಮುದ್ದೆ ಅದ್ದಿ ಗುಳುಂ‌ ಮಾಡುವೆ
ನಾರು ಚೀಚಿಯನ್ನು ಮೆಲ್ಲ ಕಚ್ಚಿ ನುಂಗುವೆ

ಸೌದೆ ಒಲೆ ಮೇಲೆ ಬೆಂದು ಸ್ವಾದ ಹೆಚ್ಚಿದೆ
ನಾಲ್ಕು ತುತ್ತು ಅನ್ನ ಇನ್ನೂ ಹೆಚ್ಚು ತಿನ್ನುವೆ

ಭಾನುವಾರ ಬಾಡಿಗಾಗಿ ಎದುರು ನೋಡುವೆ
ಮಾಡದೆ ಇರಲು ಪೆಚ್ಚು ಮೋರೆ ತಾಳುವೆ

ಚೀಚಿ‌ ತಿನ್ನುವೆ ಜೊತೆಗೆ ಮೊಟ್ಟೆ ತಿನ್ನುವೆ
ಅಪ್ಪನಂತೆ ಶಕ್ತಿ ಬರಲು‌ ಹೆಚ್ಚು ತಿನ್ನುವೆ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...