ನೀ ಹೆತ್ತಿಲ್ಲವಾದರೂ
ತಾಯಿಗೂ ಮಿಗಿಲಾದೆ ಅವ್ವ
ನೀ ತುತ್ತಿಟ್ಟು ಸಲಹಿದೆ
ಹಸಿವಲ್ಲೂ ತಂಪಾಯ್ತು ಜೀವ
ನಾ ಹೊರಗಿನವ ಎನ್ನದೆ
ಸೆರಗಲ್ಲಿ ಜೋಪಾನ ಮಾಡಿ
ಕಾಣದಿರುವಾಗ
ಕಣ್ಣುಗಳು ತಂತಾನೇ ತೇವ
ರೆಕ್ಕೆಯಡಿ ಸೆಳೆದು
ಮಳೆ-ಬಿಸಿಲ ತಡೆದು
ಹೊತ್ತು ಹೊತ್ತಿಗೆ ಮಿಡಿದೆ
ಪ್ರೀತಿಯ ತಂತಿ
ಒಂದೇ ಉಸಿರಲ್ಲಿ
ಕಳೆದಂತೆ ದಿನ ಪೂರ್ತಿ
ನೂರು ಕೈಗಳು ನಿನಗೆ
ಎಲ್ಲಿ ವಿಶ್ರಾಂತಿ!
ಕಲ್ಲಿನಂತೆ ನಿಂತೆ
ಕಷ್ಟಗಳ ಎದುರಿಸಿ
ಹೂವಂತೆ ಎರಗಿದೆ
ವಾತ್ಸಲ್ಯ ಪಸರಿಸಿ
ಎದೆಯೊಳಗಿನ ಚಿಲುಮೆ
ಕಾವು ಮನೆ ತುಂಬ
ಸಂಸಾರದರಮನೆಗೆ
ಆಧಾರ ಸ್ತಂಭ
ದೇವರೆದುರಾದರೆ ಏನ ಬೇಡಲಿ ಹೇಳು
ಎಲ್ಲವನೂ ಕೊಡುವ ನೀನಿರಲು ಎಂದೆ
ಎಲ್ಲ ನಗಣ್ಯವೆಂಬತೆ ನೀ ನಗುತಲೇ
ಬೇಕಾದುದ ಕೊಟ್ಟು ಹೊರಟೆ ಮುಂದೆ
ಹೇಳಲಾಗದ ನೂರು ನವಿರಾದ ಭಾವ
ಹೇಳಿ ಬಿಟ್ಟರೆ ಎಲ್ಲ ಹೇಳಿ ಬಿಟ್ಟಂತೆ
ಅದಕಾಗೇ ಆ ಎಲ್ಲ ಭಾವನೆಗಳ ನನ್ನೊಳಗೆ
ಯಾರಿಗೂ ಸಿಗದಂತೆ ಮಡಿಸಿ ಬಚ್ಚಿಟ್ಟೆ
No comments:
Post a Comment