ಬಾ ಹೋಗುವ

ಇರುಳ ಸೇರಿ ನಡೆವ ಖುಷಿಗೆ
ಹಗಲು ಕಂಡು ನಾಚಿ ಬಿಡಲಿ
ಎದೆಯ ಸಣ್ಣ ಮಾತಿನೊಳಗೂ
ಉದಯಗೊಂಡ ಪ್ರೀತಿಯಿರಲಿ
ಬರಲಿ ಮತ್ತೆ ಅದೇ ಮಳೆಯು
ತರಲಿ ಒಂದು ಸಣ್ಣ ಜ್ವರವ
ಎಂದೂ ಸೋಲದಂಥ ವಾದ-
-ದೊಡನೆ ನಾವು ಸೋಲುತಿರುವ


ಹೆಜ್ಜೆಗೊಂದು ಎಲೆಯ ಹೆಕ್ಕಿ
ಎಣಿಸಿಯಿಟ್ಟರೆಷ್ಟು ಸೊಗಸು
ಇಟ್ಟ ಲೆಕ್ಕವೆಲ್ಲವನ್ನೂ
ಬಿಟ್ಟುಗೊಡಲು ಪ್ರೀತಿ ಬೇಕು
ತುದಿಯೇ ಕಾಣದಂಥ ಪಯಣ
ನಂಬಿಕೆಯೊಂದೇ ಜೊತೆಗೆ
ಮಾತಿನೊಡನೆ ಮಧುರ ಮೌನ
ರಮ್ಯವಾಗಲೆಮ್ಮ ಕಥೆಗೆ


ಕೆಟ್ಟು ಸತ್ತ ಗಡಿಯಾರದ
ಮುಳ್ಳಿಗಿಲ್ಲ ದಣಿದ ಭಾವ
ಬರಿದು ಆಕಾಶವಾದರಿಲ್ಲ
ನೀಲಿಗೆ ಅಭಾವ
ಕಣ್ಣು ಎಷ್ಟೇ ಹಿಂಗಿದರೂ
ಖುಷಿಗೆ ಜಿನುಗುವಂತೆ ಪ್ರೀತಿ
ಮಣ್ಣು ಸವಕಲಾದರೂ
ಬೇರ ತನ್ನೊಳಿರಿಸಿದಂತೆ


ಕವಲಿನಲ್ಲಿ ಬೇರಾಗುವ
ಒಂದು ತಿರುವು ಸಿಗಲಿ
ಒಂಟಿಯೆಂದು ಚಂದಿರನೂ
ನಮ್ಮ ನೋಡಿ ನಗಲಿ
ಸದ್ದಾದರೆ ತಿರುಗಬೇಡ
ಬೆನ್ನ ಹಿಂದೆ ನಾನಿಲ್ಲ
ಎದುರುಗೊಂಡರೆ ತಬ್ಬು
ಅನುಮತಿಗಳು ಬೇಕಿಲ್ಲ


ಎಂಟಾಣೆ ಕನಸಿನಲ್ಲಿ
ಕಳೆದಂತೆ ಕೈ ಹಿಡಿದು
ನನ್ನ ದಾಟಿ ನೀ
ನಿನ್ನ ದಾಟಿ ನಾ ನಡೆದು
ಹಗಲಾಗುವಲ್ಲಿಗೆ ಬೆಳಕಾಗುವ
ಹದಿನಾಲ್ಕು ವಿದ್ಯೆಗಳಿಗೂ ಸಮನಾಗುವ
ಬಾ ಹೋಗುವ,
ಬಾ ಹೋಗುವ!!


                             - ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩