ನೂರು ಮುತ್ತಿನ ಕತೆ

ನೂರು ಮುತ್ತ ಕೊಟ್ಟ ತುಟಿಗೆ
ಸಣ್ಣ ಜೋಮು ಹಿಡಿದಿದೆ
ಕೆನ್ನೆಗೆಂಪು ನಾಚಿ ಚೂರು
ಇನ್ನೂ ಕೆಂಪಗಾಗಿದೆ
ಒಂದೂ ಮಾತನಾಡದಂತೆ
ತುಟಿಯನೇಕೆ ಕಚ್ಚಿದೆ?
ಎಲ್ಲ ಕಂಡೂ, ಏನೂ ತಿಳಿಯದಂತೆ
ಕಣ್ಣು ಮುಚ್ಚಿದೆ!!


ಹರಿದ ಬೆವರು ಒಂಟಿಯಲ್ಲ
ತ್ವರಿತವಾಗಿ ತಬ್ಬುವೆ
ಉಸಿರ ಬಿಸಿಯ ಪಿಸು ಮಾತಿಗೆ
ಕಿವಿಯನೊಡ್ಡಿ ನಿಲ್ಲುವೆ
ಎಲ್ಲ ಸ್ವಪ್ನಗಳಿಗೂ ನಿನ್ನ
ಕಿರುಪರಿಚಯ ನೀಡುವೆ
ಮಾತು ತಪ್ಪಿದಂತೆ ನಟಿಸಿ
ಮತ್ತೆ ಮತ್ತೆ ಬೇಡುವೆ


ಎಲ್ಲ ಸಂಕಟಕ್ಕೂ ಸುಂಕ
ವಿಧಿಸುವಂತೆ ಸೂಚಿಸಿ
ಸಂಕುಚಿತ ಭಾವಗಳನು
ಒಂದೊಂದೇ ಅರಳಿಸಿ
ತೋಳ ಬಂಧನದಲಿ ಒಂದು
ಕೋಟೆಯನು ನಿರ್ಮಿಸಿ
ಸಾಟಿಯಿಲ್ಲದಂತೆ ಮಥಿಸು
ಮನದಾಮೃತ ಚಿಮ್ಮಿಸಿ


ಬಿಡುವಿನಲ್ಲಿ ಏಕೆ ಹಾಗೆ
ಕಾಲ ಬೆರಳ ಗೀರುವೆ?
ಹೊತ್ತು ಉರಿದ ಕಿಚ್ಚಿನಲ್ಲಿ
ಇಡಿಯಾಗಿ ಬೇಯುವೆ
ಹತ್ತಿರಕ್ಕೆ ಬರುವೆಯಾದರೊಂದು
ಮಾತ ಹೇಳುವೆ
ಇನ್ನೂ ಸನಿಹವಾಗದೊಡಗು
ಮೌನದಲ್ಲೇ ಸೋಲುವೆ


ಸಾಗರವ ದಾಟಿಸಿಹೆ
ಸಣ್ಣ ತೊರೆಗೆ ಅಂಜಿಕೆ?
ಹಸ್ತ ವ್ಯಸ್ತವಾಗದಿರಲು
ಪಯಣಕೇಕೆ ಅಂಜಿಕೆ?
ಒಲವಿನಲ್ಲಿ ಒಲವು ಮಾತ್ರ
ನಮ್ಮ ಪಾಲ ಹೂಡಿಕೆ
ವ್ಯರ್ಥವಾಗದಿರಲಿ ಸಮಯ
ಹರೆಯದೊಂದು ಬೇಡಿಕೆ!!


ಗುಡ್ಡ, ಗಾಳಿ, ಸ್ತಬ್ಧ ನೀಲಿ
ಮೋಡಗಳೆದುರಾಗಲಿ
ಗಡಿಯಾರದ ಮುಳ್ಳು ತಾ
ಕೊನೆ ಕ್ಷಣಗಳ ಎಣಿಸಲಿ
ಹಂತ ಹಂತವಾಗಿ ಸ್ವಂತವಾದ
ಉಸಿರು ನಿಲ್ಲಲಿ
ಮನದಿ ಹೊತ್ತಿಸಿಟ್ಟ ಹಣತೆ
ಚಿರವಾಗಿ ಬೆಳಗಲಿ!!


                       - ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩