ನಾಲ್ಕು ದಿನಗಳಲ್ಲಿ

ನಾಲ್ಕು ದಿನಗಳಲ್ಲಿ
 
ಈ ನಾಲ್ಕು ದಿನಗಳಲ್ಲಿ
ಎಷ್ಟು ಸಾಧ್ಯವೋ ಅಷ್ಟು
ನಾನಲ್ಲದ ನನ್ನ ತೃಪ್ತಿಗೊಳಿಸಬೇಕು
 
ಮೂರು ದಶಕಗಳ ದಾಟಿ
ಮೈಗೂಡಿಸಿಕೊಂಡ ಸೋಮಾರಿತನಕ್ಕೆ
ಬೆಚ್ಚನೆಯ ದೀಪದಡಿಯಲ್ಲಿ ಗೋರಿ ಕಟ್ಟಿ
ಮಲ್ಲಿಗೆಯ ಬಳ್ಳಿಯನು ನೆಟ್ಟು
ಹೂ ಕಟ್ಟುವ ಕೆಲಸಕ್ಕೆ ಸಿದ್ಧನಾಗಬೇಕು
 
ಆಕಾಶದ ನೀಲಿಯಲ್ಲಿ ತೇಲುವವ
ಭೂಮಿಯ ಸ್ಪರ್ಶಕ್ಕೆ ಮರುಳಾಗಿ
ಬಿಗಿಯಾಗಿ ಬೇರೂರಬೇಕು;
ಜಂಗಮನ ಜೋಳಿಗೆಯ ಸ್ಥಾವರಕೆ ಸಿಲುಕಿಸಿ
ಜೋಕಾಲಿ ಜೀಕಾಡಿ ಹಗುರಾಗಬೇಕು
 
ಪ್ರಕೃತಿಯ ಮಡಿಲಲ್ಲಿ ಮಗುವಾಗಿ
ನಿಂತ ಗಡಿಯಾರದ ತಿರುವಿನಲ್ಲಿ
ಅಳು-ನಗುವಿನ ಅಂತರವ ವಿಭೇದಿಸುತ್ತ
ಜೀವಂತಿಕೆಯ ಭಂಡಾರವ ಎದೆಗಪ್ಪಿ
ಬದುಕನ್ನು ಹಿಂದಕ್ಕೆ ಉರುಳಿಸಿ
ಅನುದಿನವೂ ಹೊರಳಿ, ಹೊರಳಿ ನೋಡಬೇಕು
 
ಕಥೆಗಳ ಹುಟ್ಟಿಗೆ ದಿನಗಳೆದು
ಹೆಣೆಯುವಲ್ಲಿ ರಾತ್ರಿಗಳೊಡನೆ ಮುಳುಗಿ
ಎಚ್ಚರಗೊಳ್ಳುವಷ್ಟರಲ್ಲಿ ಮರೆತಲ್ಲಿಗೆ
ನೆನಪು ಮಾಡಿಕೊಳ್ಳುವಷ್ಟು ಪುರುಸೊತ್ತಿಲ್ಲದೆ
ಹೊಸ ಕಥೆಗಳ ಕಟ್ಟುವಲ್ಲಿ ತಲ್ಲೀನನಾಗಬೇಕು
 
ಹಠದ ಚಟವ ತೊರೆದು
ಸೋಲುವ ಸುಖಕ್ಕೆ ಹತ್ತಿರವಾಗಿ
ಉತ್ತರ ಸಿಗದ ಪ್ರಶ್ನೆಗಳೆದುರು
ಪ್ರಶ್ನಾತ್ಮಕ ಮುಖವ ಹಿಡಿದು
ನಗೆಗೀಡಾಗುವಲ್ಲಿಗೆ ಮನದುಂಬಿ ನಕ್ಕು
ಉಕ್ಕಿ ಬರುವ ಖುಷಿಯಲ್ಲಿ ಕೆನ್ನೆ ತೋಯ್ದು
ಮೆಲ್ಲ ಮುಸುಕು ಕಳಚಿಕೊಳ್ಳಬೇಕು!!
                                         
                                        - ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩