ಪಲ್ಲವಿ
******
ನೀ ಸನಿಹಕೆ ಬಂದು, ಆಡುವ ಮಾತೊಂದು
ನೀ ಸನಿಹಕೆ ಬಂದು, ಆಡುವ ಮಾತೊಂದು
ನನ್ನ ಕನಸ ಕದ್ದು ಕೊಂಡೊಯ್ಯುವುದು
ನೀ ಗಮನಿಸಲೆಂದು, ನಾ ನಗುವೆನು ಎಂದು
ನನ್ನ ಮನಸು ನಾಚಿ ನೀರಾಗುವುದು
ಹೃದಯದ ಬೀಗ ತೆರೆಯುವ ಮುನ್ನ
ಕಂಗಳು ತುಂಬಿ ಬರುವುದೇ ಚೆನ್ನ
ಕದ್ದಲ್ಲಿಯೇ ಕಳುವಾಗಲು ಸಜ್ಜಾಗುವೆ ಬೇಕಂತಲೇ..
ನೀ ಸನಿಹಕೆ ಬಂದು.......
ಚರಣ ೧
*******ಸರಿಯುವ ಸಮಯವನು,ನಿಲ್ಲಿಸಿ ಕೇಳುವೆನು
"ಅವಸರ ಹೀಗೇಕೆ ನಿನಗೆ, ಗೆಳೆಯನು ಇರುವಾಗ?"
ರುಚಿಸದ ಸಂಜೆಗಳು, ರಚಿಸುವ ವ್ಯೂಹದಲಿ
ಸಿಲುಕುವ ಬಡಪಾಯಿ ನಾನು, ನಿನ್ನನು ತೊರೆದಾಗ
ಬದುಕುವುದ ನೀ ಕಲಿಸು, ಬಡಿದಾಡಿದೆ ಈ ವಯಸು, ನಿನಗಾಗಿ ಮುಡುಪಾಗಿರಲು
ಕಣ್ಣಲಿ ನಿನ್ನ ತುಂಬುವ ನಾನು
ಜಾರಲು ಬಿಟ್ಟು ಬಾಳುವೆನೇನು?
ಕೈಯ್ಯಲಿದೆ ಕಾಲುಂಗುರ ಸದ್ದಿಲ್ಲದೆ ಒದ್ದಾಡುತ
ನೀ ಸನಿಹಕೆ ಬಂದು.......
ಚರಣ ೨
*******
ಮರಳಿನ ಮನಸಿನಲಿ ಸ್ವರಗಳ ಮೂಡಿಸುವೆ
ಉರುಳುವ ಸುಖವೊಂದೇ ನನಗೆ, ಪ್ರೇಮದ ವರದಾನ
ಕೊರಳಿನ ಕೂಪದಲಿ ತೊದಲುವ ಪದಗಳನು
ಆಲಿಸಿ ಬರೆದಿಟ್ಟೆ ಕೊನೆಗೆ, ಅಚ್ಚಳಿಯದ ಕವನ
ಕೊನೆವರೆಗೂ ಜೊತೆಗಿರುವ, ಭರವಸೆಯ ನೀಡಿಹುದು, ನೀ ಹಿಡಿದ ಈ ಕಿರು ಬೆರಳು
ನಿನ್ನನೇ ಪೂರ ನಂಬಿದೆನಲ್ಲ?!!
ಎಚ್ಚೆತ್ತರೆ ನಾ ಸೋಲುವೆ, ಉನ್ಮತ್ತಳೇ ನಾನಾಗುವೆ
ನೀ ಸನಿಹಕೆ ಬಂದು.......
- ಭರತ್ ಎಂ ವೆಂಕಟಸ್ವಾಮಿ (ರತ್ನಸುತ)
No comments:
Post a Comment