ಬೆಚ್ಚಿದೆಯೇಕೆ ಬಾಲ ಗೋಪಿ?

ಬೆಚ್ಚಿದೆಯೇಕೆ ಬಾಲ ಗೋಪಿ?
ಕನಸಲ್ಲಿ ಕಚ್ಚಿದನಾ ಗುಮ್ಮ ಪಾಪಿ?
ಕೈ ಚಾಚಿ ಅಪ್ಪುಗೆಗೆ
ಕೊರಳುಬ್ಬಿ ಚೀರೋ ಬಗೆ
ನಿಚ್ಚಲಗೋಳಿಸಿತೈಯ್ಯ ಇರುಳ
ಹೇಳು ಏನು ಮಾಡಿದ ದುರುಳ?


ಹೆಪ್ಪುಗಟ್ಟಿದ ಮುಗಿಲ ಮರೆಯ
ತಿಂಗಳಿಗೆ ಧಾವಿಸುವ ತವಕ
ಜಿಟಿಜಿಟಿಮಳೆ ಬಿಡದೆ ಪಠಿಸುತಿದೆ
ನಿದ್ದೆ ಬಾರದ ರಾತ್ರಿಗಳು ನರಕ
ನಿನ್ನ ತುಟಿಯಂಚಿಗೆ ಅಂಟಿದ ಮುಗುಳು ನಗೆ
ಯಾವ ಸಂಚಿಗೆ ಸಿಕ್ಕಿ ಮರೆಯಾಯಿತು?
ಕಣ್ಣು ತುಂಬಿಕೊಳಲು ಉಸಿರುಗಟ್ಟಿದ ಎದೆಯ
ಹಾಲು ಜಿನುಗಲು ಚೂರು ತಡಬಡಿಸಿತು


ದೀಪದ ಬೆಳಕಿನೆಡೆ ನೋಟ ನೆಡುವೆ
ಅರಳಿಸಿ ಕಣ್ಣುಗಳ ಬಿಕ್ಕಳಿಸುವೆ
ಮುಷ್ಠಿಯಲಿ ಭಯವನ್ನು ಹಿಡಿದಿಟ್ಟೆಯೇಕೆ?
ಪಕ್ಕದಲೇ ಇಹಳಲ್ಲ ನಿನ್ನ ಹಡೆದಾಕೆ
ಹೊದ್ದ ನೆದ್ದೆಯ ತಬ್ಬಿ ಮಲಗು ಕಂದ
ಪದವೊಂದ ಹಾಡುವೆನು ಪ್ರೀತಿಯಿಂದ!!


ನಿನ್ನ ಅಳುವಿನ ಶಾಪ ಗುಮ್ಮನೆಡೆಗೆ
ಜಾರಿಕೊಂಡನು ಮತ್ತೆ ಇರುಳಿನೆಡೆಗೆ
ಹೊಟ್ಟೆ ತುಂಬಿದ ಮೇಲೆ ತೇಗಬೇಕು
ನೆತ್ತಿ ಬೊಟ್ಟು ಗಲ್ಲಕಂಟಬೇಕು
ಜೋಗುಳದ ಜೋಲಿಯನು ಜೀಕುವಾಗ
ನಸುನಗೆಯ ಕಿಸೆಯಿಂದ ಕದ್ದ ತಿರುಳು
ಚೆಲುವಿಗೆ ಮುನ್ನುಡಿಯ ಬೆರೆಯಬೇಕು
ಹೊಂಗನಸಿನ ಚಿಗುರು ಅರಳಬೇಕು!!


                                - ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩