ನನ್ನ ನೆರಳು

ಮುಗಿಲ ನೆರಳೊಂದು ಹೆಗಲೇರಿತು
ಎದೆಯ ಅಂಗಳದಿ ಹೂ ಅರಳಿತು
ತೊದಲು ಮಾತುಗಳು ಮೂಡಲಾತುರಕೆ
ತುಟಿಯ ಅಂಚಿನಲಿ ಮನೆ ಮಾಡಿತು


ಮಡಿಲ ಕೌದಿಯ ಚಿತ್ತಾರಕೆ
ಉಸಿರು ಮೂಡಲು ತಡವಾಯಿತು
ಮೊದಲ ಸ್ಪರ್ಶವ ಪಡೆವ ಸಂಭ್ರಮಕೆ
ಅಂಗೈಯ್ಯ ಗೆರೆ ಮಿಡುಕಾಡಿತು


ಹಾಲು ಬಟ್ಟಲಿನ ಹಸಿವಲ್ಲಿಯೂ
ತೂಗು ತೊಟ್ಟಿಲಿನ ಕನಸಲ್ಲಿಯೂ
ಎದುರು ನೋಟದ ಭಾವ ಸಾಗರದಿ
ಅಳುವು ಈಜಲು ಸಜ್ಜಾಯಿತು


ಹೊನ್ನ ರಶ್ಮಿಯು ತಣ್ಣಗಾಯಿತು
ಜೊನ್ನ ಧಾರೆಯೂ ಮೌನ ತಾಳಿತು
ಭೂಮಿಯನ್ನೇ ತಾ ಹೊತ್ತ ಗರ್ಭದಿ
ಸಣ್ಣ ಕಂಪನ ಮೂಡಿತು


ಒಂದು ಕ್ಷಣದ ಬೇನೆಗೆ
ಜನ್ಮ ವ್ಯಾಪಿಸೋ ಸುಖವನು
ಹೊದಿಸುವ ಪ್ರಮಾಣ ಸಾಕ್ಷಿಗೆ
ಮೆಲ್ಲ ಕಂಬನಿ ಉರುಳಿತು!!


                         - ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩