ಚೆಲ್ಲ-ಪಿಲ್ಲಿ

ಕಡಲ ಸಪ್ಪಳ, ಮರಳ ಹಂಬಲ
ಅಲೆಯ ಮೆಟ್ಟಿಲು ದೂರಕ್ಕೆ
ಮುಗಿಲೇ ಆಗಲಿ ಕರಗಲೇ ಬೇಕು
ಎರಗಲೇಬೇಕು ತೀರಕ್ಕೆ

ಎಲ್ಲವೂ ಸೊನ್ನೆ ಬಿದ್ದರೆ ನೀನು
ಗೆದ್ದರೆ ಸೊನ್ನೆಯೇ ಸನ್ಮಾನ
ನೆರಳಿನ ಹಾಗಿ ಕಾಯುವ ನಂಬಿಕೆ
ಎಲ್ಲಕೂ ಮೀರಿದ ಬಹುಮಾನ

ಸೂರ್ಯನ ಕಿರಣಕೆ ಮರುಗುವ ಹೂವು
ಕತ್ತಲಿನಲ್ಲಿ ಬೆವರುವುದು
ದೊರೆತ ಸಿರಿಯದು ಕಳೆದ ಮೇಲೆಯೇ
ಅದರ ಆಶಯ ತಿಳಿಯುವುದು

ಒಂದೇ ಅನಿಸುವ ಬಣ್ಣದ ಮಡಿಲಲಿ
ಸಾವಿರ ಸಾವಿರ ಬಣ್ಣಗಳು
ಮುಂದೆ ಸಾಗುವ ದಾರಿಯ ನೆನಪಿಗೆ
ಕಾಣದ ಹೆಜ್ಜೆ ಗುರುತುಗಳು 


ಕಾಮನ ಬಿಲ್ಲನು ಮೂಡಿಸಲು
ಕರಗಿದ ಮೋಡದ ತ್ಯಾಗವಿದೆ
ನಾಳೆಯ ಬದುಕನು ಚಿತ್ರಿಸಲು
ನೆನ್ನೆಯ ನೆನಪಿಗೆ ಜಾಗವಿದೆ

ಮರಳಿಗೆ ಹಂಚಿದ ಗುಟ್ಟನು ಕದ್ದು
ಆಲಿಸಿ ಅಳಿಸಿತು ಅಲೆಯೊಂದು
ಖಾಲಿ ಉಳಿದ ದಡದಲಿ ಕೂತು
ತುಸು ಹಗುರಾಯಿತು ಮನಸಿಂದು

ಮೌನವೂ ಭಾಷೆಯೇ ಕಣ್ಣೀರಿನಂತೆ
ಆಲಿಸುವ ಮನಸಿದ್ದರಷ್ಟೇ ಮಾತು-ಕತೆ
ಕತ್ತಲ ತೊರೆದು ಬೆಳಕಿನೆಡೆ ಸಾಗಿದರೆ
ನೆರಳಾದರೂ ನೀಡಬಹುದು ನಮಗೆ ಜೊತೆ!!


                                      - ರತ್ನಸುತ 
 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩