ನನ್ನ ಮರುಜನ್ಮ

ಬೆಚ್ಚಗಿರಿಸು ಕನಸುಗಳನ್ನ
ನಿನ್ನ ಅಂತಃಕರಣದಲ್ಲಿ ಮೂಡುವ
ಪ್ರಶ್ನೆಗಳಿಗೆ ಉತ್ತರ ಸಿಗಬಹುದು,
ಮಾತುಗಳ ದಾಟಿದ ಸ್ಪರ್ಶಗಳ
ವಹಿವಾಟಿನ ಏರಿಳಿತಗಳು
ನಿನ್ನ ಪುಟ್ಟ ಮೆದುಳಲ್ಲಿ ದಾಖಲಾಗಲಿ


ನಿನ್ನ ತೊಗಲು, ನಯನ, ನಾಸಿಕ
ಮುಡಿಯಿಂದ ಉಂಗುಟದ ತನಕ
ಹೆಸರಿಟ್ಟು ಕರೆವವರಿದ್ದಾರೆ ಜೋಕೆ!!
ಕಡೆಗೆ ಉಳಿವುದು ನಿನ್ನಲ್ಲಿ ನೀನು ಮಾತ್ರ
ಮತ್ತು ನಿನಗೆ ನೀನಾಗಿಸಿಕೊಳ್ಳುವ ಹೆಸರು
ಅದು ನಿನ್ನಿಷ್ಟದ ವ್ಯಾಪ್ತಿಯಲ್ಲಿ


ಜನ್ಮ ಕೊಟ್ಟ ಮಾತ್ರಕ್ಕೆ
ನಾನೇನು ಹಿರಿಮೆಯಲ್ಲಿ ಹಿಗ್ಗುತ್ತಿಲ್ಲ ಗೆಳೆಯ
ನಾ ಕೊಟ್ಟದ್ದು ವೀರ್ಯಾಣು ಮಾತ್ರ
ನೀ ದಕ್ಕಿದ್ದು ಆಕಾಶದಷ್ಟು
ನಿನ್ನಮ್ಮನದ್ದು ನಿನ್ನಷ್ಟೇ ವಿಸ್ತೃತ ಛಾಯೆ
ಹಿಗ್ಗೆಲ್ಲ ನಿಮ್ಮದೇ
ನಾ ಸಂಭ್ರಮಕೆ ಮೂಕ ಸಾಕ್ಷಿ!!


ನಿನ್ನ ದಿಗಂಬರನಾಗಿ ನೋಡಿದ
ಸಕಲ ಬಣ್ಣಗಳಿಗೂ ಮತ್ಸರ ಮೂಡಿ
ಒಂದೊಂದಾಗಿ ನಿನ್ನ ಮೈ ಆವರಿಸುವಾಗ
ಸಂಕೋಚವಾದರೂ ಒಪ್ಪಿಕೋ
ಇದು "ಲೋಕ" ನಿಯಮ,
ಬಣ್ಣದ ಮಾತುಗಳಿಗೆ ಮಾತ್ರ ಕೆಪ್ಪಾಗು
ಮೌನದ ತೊಟ್ಟಿಲೇ ನಿನಗೆ ಕ್ಷೇಮ!!


ಹಾಲ ಬಟ್ಟಲು, ಹೂವ ಮೆಟ್ಟಿಲು
ನಿನ್ನ ಬರುವಿಕೆಯ ಹೊಸ್ತಿಲಿಗೆ
ಶ್ರಾವಣದ ಹಸಿರಾಗಿವೆಯಷ್ಟೇ,
ಮುಂದೆ ಕಾಡು-ಗುಡ್ಡಗಳ ಜಾಡು
ಕಲ್ಲು-ಮುಳ್ಳಿನ ತಿರುವಿನ ಹಾದಿ,


ಅಂಜಬೇಕಿಲ್ಲ ನೀನೆಲ್ಲೂ
ನಿನ್ನ ಕಾವಲಿಗೆ ನಿಂತ ನಾನು
ನಿನ್ನ ಕಾಯುವ ಜೊತೆ ಜೊತೆಗೆ
ಪಾಠ ಕಲಿತು ಕಲಿಸುವಾತನಾಗಿರುವೆ!!


ನನ್ನ ಮರುಜನ್ಮ ನೀನು
ನಿನ್ನ ಹಡೆದಮ್ಮ ತಾನು ನನ್ನ ಜೀವ
ನಮ್ಮ ಸಲಹುವದನುರಾಗ ದೈವ!!


                                 - ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩