Friday 23 December 2016

ಕವೀಶ್ವರ

ನಿನ್ನ ಗ್ರಹಿಕೆಗೆ ನಿಲುಕುವುದು
ಬರೆ ಗೇಣಷ್ಟು ದೂರ ಅಂದರು
ಅಷ್ಟಕ್ಕೇ ಅದೆಷ್ಟು ಉತ್ಸುಕ ಕಣ್ಣು!!
ಇನ್ನು ದಿಗಂತವ ಗ್ರಹಿಸುವಂತಾದರೆ?!!


ಹಿಡಿದ ಆಟಿಕೆಯನ್ನ ಬಿಟ್ಟುಗೊಡುವೆ
ಆಸೆಯ ಸಂತೆಯಲಿ ಹಾಸಿ ಮಲಗಿದ ಬುದ್ಧ
ನಿನ್ನ ಎರವಲಿನಲ್ಲಿ ಆತ್ಮ ಸಂತೃಪ್ತ
ಖುಷಿಯ ಮೊಗೆದು ಕೊಡುವಲ್ಲಿ ನಿಸ್ಸೀಮ!!


ತೊಟ್ಟಿಲಿಗೆ ಬೆಚ್ಚನೆಯ ಕನಸ ಕೊಟ್ಟವನೇ
ಜೋಗುಳದ ಸಹನೆಯನೂ ಮೀರಿದ ಹಠವಾದಿ
ಹೊಸಿಲ ದಾಟಿಸೋ ಕೌತುಕದ ಬಾಗಿಲ
ತೆರೆದಿಟ್ಟ ಮನೆಯಲ್ಲಿ ನಿನ್ನ ಅವಿರತ ಆಟ


ಹಸಿವಲ್ಲಿ ಹೆಬ್ಬುಲಿ, ನಿದ್ದೆಯಲಿ ತಂಗಾಳಿ
ಹಾಲಾಡಿಗೆ ಹೊಟ್ಟೆಪಾಡು ನೀನು
ಕತ್ತಲೆಯ ಕಿವಿಹಿಂಡುವಂತೆ ಬಿಟ್ಟ ಕಣ್ಣು
ಬೆಳಕನ್ನು ನಾಚಿಸುತ ಹಾಗೆ ಮುಚ್ಚುವುದೇ?!!


ಹೂ ಹಗುರ ತೂಕದಲಿ, ಭೂಕಂಪ ಅಳುವಿನಲಿ
ನಿದ್ದೆ ಕಸಿಯುತ ಎಚ್ಚರಿಕೆ ನೀಡ ಬಂದೆ
ಕೆಂಪು ತುಟಿಗಳ ನಡುವೆ ರಂಪ ಮಾಡದೆ ಉಳಿದ
ಮಾತು ಮತ್ತೇರಿದಂತಿವೆ ಏನು ಆಲಸ್ಯ!!


ಜೋಳಿಗೆಯ ಕೌದಿಯಲ್ಲಿ ಕುಸುರಿದ
ತಲೆಮಾರುಗಳ ಜೋಡಿಸಿಟ್ಟ ಕಸೂತಿ
ಸಿಂಬಿಯಾಕಾರದ ದಿಂಬಿಗೆ ತಲೆಯೊರಗಿ
ಬೀಳ್ಗೊಡುಗೆಯೆಡೆ ಸಜ್ಜಾಗಲಿ ಕಕ್ಕುಲಾತಿ!!


                                        - ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...