ಸ್ವಾಭಿಮಾನವ ಅಡವಿಟ್ಟಾಗ

ಬೆಳಕು ಬೇಡನಿಸುವಷ್ಟು ಕಾರಣಗಳಿವೆ 
ಆದರೆ ಕತ್ತಲೆ ಬೇಡವೆಂಬ ಕಾರಣಕ್ಕೆ 
ಬಳಕನ್ನು ಸ್ವೀಕರಿಸಿರುವೆ ಅಷ್ಟೇ;
ಬೆಳಕು ಬೇಕೆಂಬುದು ಸಾರ್ವಕಾಲಿಕ ಸತ್ಯ 

ಹಸಿವ ಗೆಲ್ಲುವ ಛಲವಿದ್ದರೆ ಸಾಲದು 
ಹೊಟ್ಟೆಗೆ ತಕ್ಕಷ್ಟು ಗಳಿಸುವ ಕ್ಷಮತೆ ಬೇಕು 
ಬಂಡಾಯ ಚಳುವಳಿಗಳು ಒಳಗಿನ ತಿಂಡಿಪೋತನ 
ಮತ್ತಷ್ಟು ಬಲಿಷ್ಠಗೊಳಿಸುವುದಂತೂ ನಿಜ 

ಹುಟ್ಟಿದ್ದೇನೆಂಬ ಕಾರಣಕ್ಕೆ ಬದುಕಿ 
ಬದುಕಿದ್ದೇನೆಂಬ ಕಾರಣಕ್ಕೆ ಗುರುತಾಗುವ ಗುರುತು 
ಬಹುಕಾಲ ಉಳಿವಿನ ಅರ್ಹತೆ ಗಳಿಸಿಕೊಳ್ಳದು;
ಅಂತಃಕರಣದಲ್ಲಿ ಬದುಕಿದರೆ
ಗುರುತಾಗುವ ಗೋಜಲಿಗೆ ಸಿಕ್ಕಿ ನರಳುವ ತಗಾದೆ ತಪ್ಪುವುದು 

ಬಿದ್ದ ಹೆಸರುಗಳು ನಾವು ಗಳಿಸಿದವಷ್ಟೇ 
ಯಾರೂ ಕೆಲಸ ಬಿಟ್ಟು ಹೆಸರಿಡುವಂತವರಲ್ಲ;
ಒಂದು, ಹೆಸರಿಡಲಾಗದಂತೆ ಜೀವಿಸೋದು 
ಎರಡು, ಹೆಸರುಗಳ ಹಂಗು ತೊರೆದು ಜೀವಿಸೋದು 
ಮೂರು, ಹೆಸರಿಡುವವರಿಂದ ದೂರ ಉಳಿದು ಜೀವಿಸೋದು;
ಮೂರರಲ್ಲಿ ಯಾವೊಂದು ಸುಳ್ಳಾದರೂ 
ವಾಸ್ತವವ ಒಪ್ಪುವ ಸರಳ ಅಸಹಾಯಕತೆ ನಮ್ಮದಾಗಬೇಕಷ್ಟೇ!!

ಸಮಸ್ಯೆಗಳಿಗೆ ಕಣ್ಣೀರು ಜೊತೆಯಾಗಬಹುದು 
ಆದರೆ ಅದೇ ಪರಿಹಾರದ ದಿಕ್ಸೂಚಿಯಾಗಬಯಸಿದರೆ
ಮೂರ್ಖತನಕ್ಕೆ ನೀರೆರೆದು ಪೋಷಿಸಿದಂತೆ,
ಬೇರೂರಿದಷ್ಟೂ ಉರುಳುವ ಸಾಧ್ಯತೆ ಬಹಳ 

ಸ್ವಾಭಿಮಾನವ ಮಾರಿ ಬಂದ ಲಾಭವ ಹೂಡಿ 
ನಾಳೆಗಳ ಲೆಕ್ಕ ಹಾಕುವ ಹೇಯ ಕೃತ್ಯಕ್ಕೆ 
ಸಾವೂ ಹೇಸಿಗೆಯಿಂದ ದೂರುಳಿದು 
ನನ್ನ ಶತಾಯುವನ್ನಾಗಿಸುವ ಆತಂಕವಿದೆ;
ಯಾವುದಕ್ಕೂ ಸಾಯುವ ನೂರು ಮಾರ್ಗಗಳನ್ನ 
ಕಂಡುಕೊಳ್ಳುವುದು ಅನಿವಾರ್ಯವೆನಿಸಿದಾಕ್ಷಣ ಸಜ್ಜಾಗುವುದು ಒಳಿತು;
ಯಾವ ಕ್ಷಣಕ್ಕಾದರೂ ಕೆಲಸಕ್ಕೆ ಬರಬಹುದು!!

                                                                     - ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩