Wednesday 14 December 2016

ಶರಣಾಗತ

ಕಣ್ಣೀರ ಸರಸಕ್ಕೆ ಅಂಗೈಯ್ಯ ಬೇಡಿಕೆ
ಬಾ ಒಡ್ಡು ಬೊಗಸೆಯನು ಜಾರೋ ಮುನ್ನ
ತೂಕಡಿಸಿ ಹೆಗಲಿಗೆ ಒರಗುವೆ ಬೇಕಂತ
ಮುದ್ದಾದ ಕನಸಂತೆ ಸಲಹು ನನ್ನ

ಪದದೊಟ್ಟಿಗೆ ಎರಡು ನೆನಪನ್ನು ಹದವಾಗಿ
ಬೆರೆಸಿ ಬಿಡು ಉಸಿರಲ್ಲಿ ಹಾಡಾಗಿಸಿ
ಎದೆಯಲ್ಲಿ ಮೂಡಿಸು ಹೆಜ್ಜೆ ಗುರುತೊಂದನು
ನಾ ಬರುವೆ ನಿನ್ನನ್ನು ಹಿಂಬಾಲಿಸಿ

ಎಲ್ಲಕ್ಕೂ ನಿನ್ನಲ್ಲಿ ಉತ್ತರವ ಹುಡುಕುವೆ
ಕೆದಕಿ ಹೋಗು ಇದ್ದ ಪ್ರಶ್ನೆಗಳನು
ಬೆಲ್ಲಕ್ಕೂ ಸಿಹಿಯಾದ ಸಂಗತಿಯ ಸರಕಿದೆ
ಮನಸಿಟ್ಟು ಆಲಿಸು ಮಿಡಿತಗಳನು

ಶರವೊಂದು ಶರಣಾದ ಕಥೆಯಲ್ಲಿ ನಿನ್ನದು
ಕಣ್ಣಲ್ಲೇ ಗುರಿಯಿಟ್ಟ ಮೇರು ಪಾತ್ರ
ನನ್ನಲ್ಲಿ ಹುಟ್ಟಿದ ಗುಟ್ಟೊಂದು ಕಳುವಾಗಿ
ನಿನ್ನಲ್ಲಿ ನೆಲೆಸಿದ್ದು ನೆಪಕೆ ಮಾತ್ರ

ಅಂದಕ್ಕೆ ಸಲ್ಲುವ ನ್ಯಾಯಕ್ಕೆ ನೀನೇನೆ
ಪರವಾನಗಿ ಉಳ್ಳ ನ್ಯಾಯಾಲಯ
ನನ್ನೊಲವ ದೀಪ್ತಿಗೆ ಆಪ್ತವಾಗುವ ನಿನ್ನ
ಮನದ ಅಂಗಳವೇ ದೇವಾಲಯ!!

                                  - ರತ್ನಸುತ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...