Friday 21 February 2020

ರೈತ ಸಂತೆಗಳೆಲ್ಲ ದಲ್ಲಾಳಿಗಳ ಬಾಲ

ಬಿರುಸಾಗಿ ನಡೆದು ತಣ್ಣಗಾಯಿತು ಸಂತೆ
ಕೊಂಡವರಲಿ, ಮಾರಿಕೊಂಡವರಲಿ
ಕೊಂಡು-ಮಾರಿದ ತೃಪ್ತಿ ಜೇಬಿಗಿಲ್ಲ 
ಮಧ್ಯವರ್ತಿಗಳಷ್ಟೇ ಲಾಭ ಎಣಿಸಿದರು 
ಮೂಟೆ ಹೊತ್ತವರಿಗೆ ಗಿಟ್ಟಿದ್ದು ಚಿಲ್ಲರೆ 

ಯಾರೋ ಹೆಸರಿಲ್ಲದ ಊರಿನವನು 
ಬೆಳೆದನಂತೆ ಯಾವುದೋ ವಿದೇಶಿ ಬೆಳೆ 
ಕಾರು ಕೊಂಡನಂತೆ ವರ್ಷ ದಾಟುವ ಮೊದಲೇ 
ಕಟ್ಟುತಿಹನಂತೆ ದೊಡ್ಡದೊಂದು ಬಂಗಲೆ 
ಹೀಗೆ ಜಾಹೀರಾಯಿತೊಂದು ಹಸಿ ಸುಳ್ಳು 

ದೇಸಿ ಬೆಳೆ ಬೆಲೆ ಹತ್ತಲಿಲ್ಲ ಇಳಿಯಲಿಲ್ಲ 
ಮಾಡಿದ ಸೊಸೈಟಿ ಸಾಲ ಇನ್ನೂ ತೀರಿಲ್ಲ 
ಮನ್ನಾ ಆಗುವುದಿಲ್ಲ ಪಡೆದ ಕೈ ಸಾಲ 
ಚಿನ್ನ ಬೆಳೆದರೂ ಮನೆಗೆ ಬರಗಾಲ 
ರೈತ ಸಂತೆಗಳೆಲ್ಲ ದಲ್ಲಾಳಿಗಳ ಬಾಲ 

ಹೇಳಿದವರ ಮಾತ ಕೇಳಿ ಕೊಂಡನು ಮೂರ್ಖ 
ಯಾವುದೋ ವಿದೇಶಿ ತಳಿಯ ನಾರನ್ನು 
ಬೆಳೆಗೂ ಮೊದಲೇ ಬೆಲೆಯ ಒಪ್ಪಂದ 
ಟೋಕನ್ನು ನೂರಾಒಂದು ಕೊಟ್ಟು ಹೋದವನು 
ಇನ್ನೂ ಬರಲಿಲ್ಲ ಕೊಯ್ಲಿಗೆ ಬಂದರೂ 

ಸೋತವನ ಎದುರು ಕಪ್ಪೆಗಳ ಪೊಗರು 
ಮುಗಿದರೂ ಮುಗಿಯದ ರೈತನ ಕಷ್ಟ 
ಅಸಲಾದರೂ ಬರಲಿ, ಕೂಲಿಗಾದರೂ ಗಿಟ್ಟಲಿ 
ಮಾರಿಕೊಂಡ ಅದೇ ಹಳೆ ದಲ್ಲಾಳಿಗೆ 
ಈಗ ಅವನೇ ದಿಕ್ಕು ಸೋತವನ ಪಾಲಿಗೆ 

ಲಾಭ ನಷ್ಟಗಳ ಲೆಕ್ಕವಿಡುವುದು ವ್ಯರ್ಥ 
ಹೊತ್ತು ಹೊತ್ತಿಗೆ ತುತ್ತು ಸಿಕ್ಕರೆ ಪುಣ್ಯ 
ಆದರೂ ಎಂದಾದರೂ ಹಿಡಿವುದು ಕೈಯ್ಯ 
ಕೆಸರಾದರೇನಂತೆ ಮಣ್ಣು ಮನೆ ದೇವರು 
ಮತ್ತೆ ಹೊರಟ ನೇಗಿಲ ಹೊತ್ತು ಯೋಧ... 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...