Friday, 21 February 2020

ಹಕ್ಕಿಯ ಹಾಡು

ದಿನ ನಿತ್ಯ ಕೋಣೆಯ ಕಿಟಕಿ ಬದಿಗೆ 
ತನ್ನಷ್ಟಕ್ಕೆ ಹಾಡಿಕೊಳ್ಳುತ್ತಿದ್ದ ಹಕ್ಕಿಯ ಹಾಡ
ಸದ್ದಿಲ್ಲದೆ ಕದ್ದು ಆಲಿಸಿ ಗುನುಗುತ್ತಿದ್ದೆ

ಒಂದು ದಿನ ಆಕೆ ಹಾಡಿಗಾಗಿ ದಂಬಾಲು ಬಿದ್ದಳು 
ಬೇರೆ ಏಕೆಂದು ಹಕ್ಕಿಯ ಹಾಡ ಹಾಡಿದೆ
ತನಗಾಗೇ ಬರೆದ ಹಾಡೆಂಬಂತೆ ಸಂಭ್ರಮಿಸಿದಳು 

ಇದೇ ಸುಸಂದರ್ಭಕೆ ಪ್ರೇಮ ನಿವೇದನೆಯಾಗಿ 
ಎಲ್ಲವೂ ಅಚ್ಚರಿಯೇ ಎಂಬಂತೆ ಜರುಗು ಹೋದದ್ದನ್ನು 
ಮರದ ಟೊಂಗೆಯ ಮೇಲೆ ಕೂತ ಬೇರೊಂದು ಹಕ್ಕಿ ಗಮನಿಸುತ್ತಿತ್ತು 

ಮರು ದಿನ ಹಕ್ಕಿ ಹಾಡುವುದನ್ನು ನಿಲ್ಲಿಸಿಬಿಟ್ಟಿತ್ತು 
ಮನೆಯ ತುಂಬ ಬಿಗಿಮೌನ ಆವರಿಸಿಕೊಂಡಂತೆ 
ಗಂಟಲ ಬಿಗಿ ಹಿಡಿದು ಮತ್ತೆ ಅದೇ ಹಾಡ ಹಾಡಿಕೊಂಡೆ 

ಕೆಲ ಹೂತ್ತಿನ ತರುವಾಯ ಏಕ ಕಾಲಕ್ಕೆ 
ಹಕ್ಕಿಯ ಹಿಂಡು ಅದೇ ಹಾಡನ್ನ ಹಾಡತೊಡಗಿದವು
ಅದ ಕೇಳಿದ ನಾನೂ, ಕಿಟಕಿಯ ಹಕ್ಕಿಯೂ ದನಿಗೂಡಿಸಿದೆವು 

ಹಾಡು ಹಾಡುವವರ ಸ್ವತ್ತೆಂದು ಅರಿತ ಹಕ್ಕಿ 
ತನ್ನ ಹಾಡ ನನ್ನಲ್ಲಿ ಮತ್ತು ಅಸಂಖ್ಯರಲ್ಲಿ ಬಿಟ್ಟು 
ಮತ್ತೆಲ್ಲೋ ಹಾರಿ ಹೊರಟಿತು 

ಈಗೀಗ ನನ್ನವಳು ಆ ಹಾಡು ತನ್ನದೆನ್ನುತ್ತಾಳೆ 
ಕೇಳಿದಲ್ಲೆಲ್ಲ ತಮ್ಮದಾಗಿಸಿಕೊಂಡು ಹಾಡುವವರರೊಟ್ಟಿಗೆ 
ನಾನೂ ತಲೆದೂಗುತ್ತೇನೆ ನನ್ನದಾಗಿಸಿಕೊಂಡು...  

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...