Sunday, 22 March 2020

ಮಾತಾಡಿ ಹೋಗೇ, ಓ ನನ್ನ ನಲ್ಲೆ

ಮಾತಾಡಿ ಹೋಗೇ, ಓ ನನ್ನ ನಲ್ಲೆ
ಮುದ್ದಾಗಿ ಸೋಕಿ ನಿನ್ನ ಕಣ್ಣಿನಲ್ಲೇ ಕೊಲ್ಲೆ
ನನ್ನನ್ನು ನೋಡಿ ನೀ ನಕ್ಕ ವೇಳೆ
ಓಲೆ ಗೀಚುತ್ತ ಹೋದೆ ಸಾಲಲಿಲ್ಲ ಹಾಳೆ
ಊರೆಲ್ಲ ಸುತ್ತಿ ಬಂದಾಯ್ತು ಬಾಲೆ
ನಿನ್ನನ್ನು ಹೋಲೋ ಅಂದ ಕಂಡೇ ಇಲ್ಲ ಕೇಳೆ
ಹೇಗಾದೆ ನೋಡು ನೀ ಬಂದ ಮೇಲೆ
ಏನೇನೋ ಹೇಳೋ ಆಸೆ ಮತ್ತೆ ಸಿಕ್ಕು ನಾಳೆ...

ಆತಂಕ ಪಟ್ಟು ಎದ್ದೆ ನಿದ್ದೆ ಮಾಡೋವಾಗ
ನಿಂಗಾಗಿ ಕನ್ಸಿನಲ್ಲೂ ಮೀಸಲಿಟ್ಟೆ ಜಾಗ
ಪ್ರೀತ್ಸೋರಿಗಂತ ತಾನೆ ಸಂಜೆ ಇಷ್ಟು ಉದ್ದ
ಗೋಳಾಡ್ಸೋ ಆಟ ಆಡೋದಕ್ಕೂ ಪ್ರೇಮಿ ಸಿದ್ಧ
ಹಿಡಿಯಷ್ಟು ಹೃದಯನ ಕೊಟ್ಟ ದೇವ್ರೂ ಜುಗ್ಗನೇ
ಒಲವ ಒಗಟು ಮಾಡಿ ಯಾಕೋ ನಮ್ ಕಾಲೆಳಿತಾನೆ
ಸೂಜಿ ದಾರ ನಾನು ನೀನು ದೂರಾದ್ರೇನ್ ಬಂತು
ಇಂಥ ಹುಚ್ಚು ಬೇಕಾ ಅಂದ್ರೆ ಮನ್ಸೂ ಹೂಂ ಅಂತು, ಹೂಂ ಅಂತು, ಹೂಂ ಅಂತು....

ಮಾತಾಡಿ ಹೋಗೇ, ಓ ನನ್ನ ನಲ್ಲೆ
ಮುದ್ದಾಗಿ ಸೋಕಿ ನಿನ್ನ ಕಣ್ಣಿನಲ್ಲೇ ಕೊಲ್ಲೆ
ನನ್ನನ್ನು ನೋಡಿ ನೀ ನಕ್ಕ ವೇಳೆ
ಓಲೆ ಗೀಚುತ್ತ ಹೋದೆ ಸಾಲಲಿಲ್ಲ ಹಾಳೆ... 

ಹಿಂದೊಮ್ಮೆ ಎಂದೋ ನಿನ್ನ ಜುಟ್ಟು ಎಳೆದ ಹಾಗೆ
ನೀ ಮತ್ತೆ ನೀಡಬೇಕು ಒಂದು ಚೂರು ಸಲುಗೆ
ಅಲ್ಲಲ್ಲಿ ಕೆಟ್ಟು ನಿಲ್ಲೋ ಗುಜ್ರಿ ಗಾಡಿ ಹಂಗೆ
ತೊದ್ಲುತ್ತೆ ನನ್ನ ಮಾತು ಯಾಕೋ ನಿನ್ನ ಮುಂದೆ
ಕಲಿತಾದ ಮೇಲೆ ಎಲ್ಲ ಕೋತಿ ವಿದ್ಯೆ ಅಂತಾರೆ
ಪ್ರೀತಿ ಪಾಠನ ಈಗ್ಲೇ ಶುರುವಚ್ಕೊಳ್ಳಾ ಹಂಗಾರೆ
ಹೆಚ್ಚು ಕಮ್ಮಿ ಆಗೋದೆಲ್ಲ ಪ್ರೀತೀಲ್ ಮಾಮೂಲೇ 
ವಾಸಿ ಅಂತೂ ಆಗೋದಿಲ್ಲ ಪ್ರೀತಿ ಖಾಯಿಲೆಖಾಯಿಲೆಖಾಯಿಲೆ ...

***ಹಾಡು***
https://soundcloud.com/bharath-m-venkataswamy/bvfe2wvehflj

Thursday, 19 March 2020

ಮರೆಯದೆ ಬರುವೆಯಾ ಕರೆದರೆ ಮನಸಿಗೆ?

ಮರೆಯದೆ ಬರುವೆಯಾ ಕರೆದರೆ ಮನಸಿಗೆ?
ತಲುಪಿಸಿ ಬಿಡೆಯಾ ಕೊನೆಯ ವಿಷಯ ಎದೆಗೆ ನೀ ಒಲವೇ...
ಮರೆಯದೆ ಬರುವೆಯಾ ಕರೆದರೆ ಮನಸಿಗೆ?

ಜೀವವೇ, ಜೀವಕೆ ಕಾವಲಾಗಿರು ಹೀಗೇ ಎಂದೆಂದಿಗೂ 
ಯಾರಿಗೂ ಕೇಳದ ಮೌನವ ಆಲಿಸು 
ಬೇಡಿದೆ ಕಂಬನಿ ನಿನ್ನನೇ ಈಗಲೂ ... ಜಾರುತ, ಜಾರುತ... 

ಉಳಿಸಲು ಬರುವೆಯಾ ಮುಳುಗಲು ಒಲವಲಿ?
ಉಸಿರನು ಕೊಡುತಾ ಪಡೆವ ಸುಖವ ಕೊಡಲೇ ನಾ ನಿನಗೆ 
ಉಳಿಸಲು ಬರುವೆಯಾ ಮುಳುಗಲು ಒಲವಲಿ?

ಎಂದಿಗೂ, ಮಾಸದ ಮಂದಹಾಸವೇ ನೀನೇ ಆಗಬೇಕಿದೆ 
ದಾರಿಯು ಸಾಗಲು ಬೇಕಿದೆ ಆಸರೆ 
ನಿನ್ನಯ ತೊಳಲಿ ಬಾಳುವೆ ಎಂದಿಗೂ ...ಸೋಲುತ, ಸೋಲುತ ... 

**ಹಾಡು**
https://soundcloud.com/bharath-m-venkataswamy/wqabfyjdfhub

Monday, 16 March 2020

ಯುವರತ್ನ

**ಪಲ್ಲವಿ**
ಏನು ಬಾಸು ನಿಮ್ಮ ಪವರು 
ಅಲ್ಟಿಮೇಟು ಡ್ಯಾನ್ಸರ್ರು 
ಕ್ಲಾಸು, ಮಾಸು ಏನೇ ಇರ್ಲಿ 
ಎಲ್ಲ ರೋಲೂ ಸೂಪರ್ರು 
ಮೂನು ವಾಕು, ಬ್ಯಾಕು ಫ್ಲಿಪ್ಪು 
ಸೋಮೆರ್ ಸಾಳ್ಟು  ಮಾಸ್ಟರ್ರು 
ಸ್ಟೈಲಿಗ್ಯಾರೂ ಸಾಟಿಯಿಲ್ಲ 
ಥೇಟು ನಮ್ಮ ಅಣ್ಣಾವ್ರು 
ನೇರ ಮಾತು ಎಲ್ಲ ಹೊತ್ತು, ಕಾಂಟ್ರವರ್ಸಿ ಬ್ರೇಕರ್ರು
ಸ್ಯಾಂಡಲ್ ವುಡ್ಡಿನಲ್ಲಿ ನೀವು ಗ್ಲೋರಿಯಸ್ ಚಾಪ್ಟರ್ರು.... 

**ಚರಣ ೧**
ಫೀಮೇಲು ಫಾಲ್ಲೋವರ್ಸಿಗೆಲ್ಲ ನೀವೇ ಡಾರ್ಲಿಂಗು 
ಅಪ್ ಟು ಡೇಟ್ ಅಪ್ಪು ನೀವು ಎಲ್ಲೇ ಹೋದ್ರೂ ಶೈನಿಂಗು 
ಕೋಟಿ ಕೋಟಿ ಅಭಿಮಾನಿ ಬಳಗ ಬೆಳೆಸಿಕೊಂಡಿರುವ 
ಪುನೀತ ಅಂದ್ರೆ ಬೈ ಹಾರ್ಟು ಪ್ಯೂರು ಅಂತ ಮೀನಿಂಗು 
ಗಾಸಿಪ್ ಇಲ್ಲ ಸಾರೀ, ಒಳ್ಳೆದಷ್ಟೇ ಸುದ್ದಿ 
ಎಷ್ಟೇ ಆದ್ರೂ ನಿಮ್ದು , ತಂದೆ ಅಂಥ ಬುದ್ಧಿ 
ಏನೇ ಮಾಡ್ಲಿ ನೂರಕ್ನೂರು ಡೆಡಿಕೇಟೆಡ್ ಆಸಾಮಿ 
ಸೈಲೆಂಟಾಗಿ ದಾರಿ ಬಿಡಿ ಬಂತು ಮತ್ತೆ ಸುನಾಮಿ... 

**ಚರಣ ೨**
ದೊಡ್ಡೋರ ಮುಂದೆ ನೀವು ತೋರೋ ಗೌರವ ಸನ್ಮಾನ 
ಅಷ್ಟು ಪ್ರೀತಿ ಕೊಡ್ತೀರಲ್ಲ ಮನ್ಸೇನ್ ಆಕಾಶನಾ?
ಕಲಿ ಬೇಕು ಈ ಜನರೇಶನ್ ನಿಮ್ಮಿಂದ ನೀತಿ ಪಾಠ 
ಅದ್ಕಾಗೇ ಇಷ್ಟು ಎತ್ರ ಬೆಳ್ಸಿರೋದು ನಿಮ್ಮನ 
ಕವಲು ದಾರಿ ಹಿಡಿದೂ, ಗೆಲುವು ಪಡೆದ ಧೀರ 
ಮಾಯಾ ಬಜಾರಿನಂಥ, ಕನಸಿಗೆ ಕೊಟ್ಟ ಸೂರ 
ಸೋಲಿಲ್ಲದ ಸರದಾರ ಮುತ್ತುರಾಜ ಹೆತ್ತ ಯುವರತ್ನ 
ಬನ್ನಿ ಬನ್ನಿ ಇವರ ಕೀರ್ತಿ ಎಲ್ಲ ಕಡೆಗೂ ಹಂಚೋಣ.... 

Saturday, 14 March 2020

ದಿಯಾ

ಅವಳ ಬಲಗಿವಿಯ ಕೆಳಗೊಂದು ಮಚ್ಚೆ
ಬೀಳುವ ಮೊದಲೇ ಎಲ್ಲ ಖುಷಿಯ ಕದ್ದು ಆಲಿಸಿ
ಪುಳಕಿತಗೊಂಡು ನಂತರ ಮನಸಿಗೆ ತಲುಪಿಸಿತ್ತು

ಅವಳ ಬಲಗಿವಿಯ ಕೆಳಗೊಂದು ಮಚ್ಚೆ
ಆರ್ತನಾದಕೆ ತಾ ಮೊದಲು ವಿಚಲಿತಗೊಂಡು
ಆನಂತರ ಕಣ್ಣ ಹನಿಯ ಉರುಳಿಸುತ್ತಿತ್ತು

ಮೊಡವೆ ಕಲೆಯನ್ನೂ ಅಂದಗಾಣಿಸಲು ಬಲ್ಲವಳು
ಖುಷಿಗೂ, ದುಃಖಕ್ಕೂ ಹಾಗೆ ಅರಳಿ ಮೊಗ್ಗಾಗುವ
ಮೂಗಿನಂಚಿನ ಕೆಂಪು ಗಲ್ಲಕ್ಕೂ ಹಬ್ಬಿಸಿದ್ದಳು

ಸದಾ ಹೊಸತನ ಬಯಸುವ ಬೈತಲೆ
ಸೀಳಿನ ನಡುವೆ ಅಲ್ಲಲ್ಲಿ ಬಿಳಿಗೂದಲು
ಅದನ್ನು ಮರೆಮಾಚದೆ ಉಳಿಸಿದ್ದಳಲ್ಲ
ಅದೂ ನನ್ನ ಕಣ್ಮನ ಸೆಳೆದು ಬಿಟ್ಟಿತ್ತು

ಭಾರವನ್ನೇ ಹೊತ್ತ ಬಿರುಸಾದ ಹೆಜ್ಜೆ
ಕೈ ತರಚಿದ ಗೋಡೆಗೂ ಆದ ಗಾಯದ ಗುರುತು?
ಅದ ಗಮನಿಸದೆ ಅವಳನ್ನೇ ಹಿಂಬಾಲಿಸಿ ಹೊರಟೆ

ಅವಳು ಅಲೆಗಳೊಂದಿದೆ ಮಾತಾಡುತ್ತಾಳೆ
ಬೆನ್ನ ಹಿಂದೆ ಅವಿತು ಕೇಳುವಾಸೆ
ಅವಳು ಕಣ್ಣರಳಿಸಿ ಮೌನ ತಾಳುತ್ತಾಳೆ
ಮುಂಗುರುಳಿಗೆ ಬೆರಳ ಚಾಚುವಾಸೆ

ಹಚ್ಚದೆ ಬೆಳಕಾಗಿ ಉಳಿದು ಬಿಟ್ಟಳು
ಬೆಚ್ಚದೆ ಭಯವನ್ನು ತುಂಬಿ ಹೊರಟಳು
ಪದವಿಲ್ಲದೆ ಪರದಾಡಿ ರಾತ್ರಿ ಕಳೆದ ಮೇಲೆ
ಮರುದಿನ ಮೊಗಸಾಲೆಯಲ್ಲಿ ಶರಣಾದಂತೆ ನಿಂತಳು 
ಅವಳ ನೆರಳೀಗ ನನ್ನ ನೆರಳಿಗೆ ಆಪ್ತ..

Friday, 13 March 2020

ದೇವರಿಲ್ಲದ ನಿಜವೂ-ಇರುವನೆಂಬ ಸುಳ್ಳೂ

ಕಾಣದ ಸತ್ಯವೇ ಏನಿದು ನಿನ್ನ ಈ ಮೂರ್ತ ರೂಪ
ನೀ ಬರುವ ಸೂಚನೆ ಹೀಗೇಕೆ ಕೊಡುವಂತೆ ಕೆಟ್ಟ ಶಾಪ
ತಾಪವೇರಿಸುವೀ ಕೋಪವ ಹೊತ್ತು ಬರುವ ನಿನಗೆ 
ಸುಳ್ಳ ಒಣ ಚಪ್ಪರಕೆ ಕಿಡಿ ಹೊತ್ತಿಸಿಸಂಭ್ರಮಿಸುವ ತವಕ 

ಶಾಂತ ತೋಟದ ಹೂವ ಕೂಟದಿ ಬಿರುಗಾಳಿಯೆಬ್ಬಿಸಿ 
ಬೇರು ಬೇರುಗಳ ಮುಖ ಪರಿಚಯ ಮಾಡಿಸಿಬಿಟ್ಟೆ 
ಬಿಕ್ಕಿ ಅತ್ತ ಪಕಳೆಗಳ ಚೆದುರಿಸಿ ಅತ್ತಿತ್ತ ತೂರಾಡಿ
ನಿರ್ವಾಣ ತೊಟ್ಟುಗಳ ಸಂತೈಸಲೀಗ ಮಳೆಗರೆಯುತಿರುವೆ  

ಎಲ್ಲವೂ ಸ್ತಬ್ಧವಾಗಿರುವಾಗ ಚಾಲನೆ ನೀಡುವ ಭರದಲ್ಲಿ 
ಕೆಡವಿ ಬಿಡುವ ನೀನು ಪೀಡನ ಸುಖಿಯೇ ಎಂಬ ಗುಮಾನಿ 
ಅಥವ ನಿನ್ನ ಇರುವಿಕೆಯ ಆಗಾಗ ಸಾಭೀತು ಪಡಿಸಲು 
ವಿಭಿನ್ನ ವೇಷ ತೊಟ್ಟು ಬರುವ ರೋಗಗ್ರಸ್ಥ ವ್ಯಸನಿಯೋ?

ಬೇಕೆನ್ನುವವರು ನಿನ್ನ ಹುಡುಕಿ ಬಂದೇ ತೀರುವರು 
ಅಲ್ಲಿಯ ತನಕ ಅಜ್ಞಾತ ಸ್ಥಳದಲ್ಲಿ ಹುದುಗಿಕೊಂಡಿರು 
ಕೆಲವೊಮ್ಮೆ ನೀನಿಲ್ಲದೆಯೇ ಬದುಕು ಹಸನಾಗಿರಬಹುದು 
ಬೇಡಿಕೆಯಿಡದ ಹೊರತು ಎಲ್ಲೂ ಸುಳಿಯಬೇಡ, ದಮ್ಮಯ್ಯ!

ಒಮ್ಮೊಮ್ಮೆ ಇದ್ದದ್ದು ಸುಳ್ಳೆಂದರಿತು, ಇರಲಾರದೆ ನಿನ್ನ ಅಪೇಕ್ಷಿಸಿದಾಗ 
ಪಾಪ ಪ್ರಜ್ಞೆ ಕಾಡುವಷ್ಟರ ಮಟ್ಟಿಗೆ ನಿನ್ನ ಛಾಪು ಮೂಡಿಸಬೇಡ 
ನಿನ್ನಲ್ಲಿರುವ ನಿಜದ ವಿಷವ ಹೀರಿ ಅಸುನೀಗುವ ಉಸಿರಿಗೆ 
ಸುಳ್ಳೆಂಬ ಸುಗಂಧವೇ ಒಂದಷ್ಟು ಆಹ್ಲಾದ ನೀಡಬಹುದು 

ದೇವರಿಲ್ಲದ ನಿಜವು, ನಂಬಿದವರಿಗೆ ಹುಸಿ 
ಇರುವನೆಂಬ ಸುಳ್ಳು, ಇಲ್ಲೆಂದವಗೆ ಮಸಿ!

Thursday, 12 March 2020

ಬಳಿ ಬಂದು ಸನ್ನೆ ಮಾಡು

ಬಳಿ ಬಂದು ಸನ್ನೆ ಮಾಡು, ಮನಗಂಡು ಮಾತನಾಡು 
ಒಳಗೊಂದು ಸಣ್ಣ ಕೂಗು, ಕಿವಿಗೊಟ್ಟು ಕೇಳಿ ನೋಡು 
ಕಾಲವು ನಿಂತರೆ, ಶೂನ್ಯವೇ ಎಲ್ಲವೂ
ಮರು ಮಾತಿಗೆ ಮಿತಿಯಿಟ್ಟರೆ 
ವಿನಾಕಾರಣ ಅಂತರ ಉಳಿದು ಬಿಟ್ಟೀತು ಆssssss

ನೀಗದ ಹಸಿವಿನ ಒಲವು, ಇದು ಕಾಡೋದು ಹೀಗೇ  
ಮುಗಿಯದ ಹಾದಿಯ ಹಿಡಿದು, ಅದು ನಿಲ್ಲೋದು ಹೇಗೆ?
ಬಂದು ಸನ್ನೆ ಮಾಡು, ಮನಗಂಡು ಮಾತನಾಡು   
ಒಳಗೊಂದು ಸಣ್ಣ ಕೂಗು, ಕಿವಿಗೊಟ್ಟು ಕೇಳಿ ನೋಡು.... 


ಬಿಟ್ಟು ಬಂದ ಹೆಜ್ಜೆ ಗುರುತಲ್ಲಿ, ಕೂಡಿ ಇಟ್ಟ ಆಸೆ ಚಿತ್ತಾರ 
ಒಂದಾಗಿಸಿ ವಿಳಾಸ, ಮುಂದಾಗಿಸು ಪ್ರಯಾಣ   
ಸಂಗಾತಿ ಮೌನದಲ್ಲೇ ಎಲ್ಲ ಹೇಳಿ ಮುಗಿಸಲು
ಈ ಕಣ್ಣಲ್ಲಿ ಮುತ್ತೊಂದು ತಂಪಾಗಿ ನಿಂತಂತೆ ಆssssss

ನೀಗದ ಹಸಿವಿನ ಒಲವು, ಇದು ಕಾಡೋದು ಹೀಗೇ  
ಮುಗಿಯದ ಹಾದಿಯ ಹಿಡಿದು, ಅದು ನಿಲ್ಲೋದು ಹೇಗೆ?
ಬಂದು ಸನ್ನೆ ಮಾಡು, ಮನಗಂಡು ಮಾತನಾಡು   
ಒಳಗೊಂದು ಸಣ್ಣ ಕೂಗು, ಕಿವಿಗೊಟ್ಟು ಕೇಳಿ ನೋಡು.... 


ಮನ ತಣಿಸುವ ನದಿ ಹರಿವಿಗೆ
ಕಡಲಲೆಗಳು ತಳಮಳಿಸಿವೆ 
ಎದೆಯಲಿ ಮಿಂದು ಆಡಿ ಬಂದ ಉಸಿರಿಗೆ ಸಂದ ಹಾಡಿದು
ಅಂಬರದಿ ನಾಚಿ ಮಿಂಚೋ ಚುಕ್ಕಿಯೇ
ಅಂಗಳದಿ ಬಂದು ಆಡಿ ಸೋತಿವೆ
ಹೂ ಬಿರಿದ ಹಾಗೆ ಸಂಭ್ರಮಿಸುತಿರೆ
ತಂಗಾಳಿಯೊಂದು ಬೀಸಿ ಬಂತು, ನಿನ್ನಂತೆಯೇsss

ನೀಗದ ಹಸಿವಿನ ಒಲವು, ಇದು ಕಾಡೋದು ಹೀಗೇ  
ಮುಗಿಯದ ಹಾದಿಯ ಹಿಡಿದು, ಅದು ನಿಲ್ಲೋದು ಹೇಗೆ?
ಬಂದು ಸನ್ನೆ ಮಾಡು, ಮನಗಂಡು ಮಾತನಾಡು   
ಒಳಗೊಂದು ಸಣ್ಣ ಕೂಗು, ಕಿವಿಗೊಟ್ಟು ಕೇಳಿ ನೋಡು.... 

ಹೇ ರಾಗಿಣಿ

ಹೇ ರಾಗಿಣಿ ಎಲ್ಲಿಗೆ ಸಾಗಿದೆ 
ನಿನ್ನ ಈ ಮೌನದ ಯಾನವು?
ಕೈಗನ್ನಡಿಯಾಗಲೇ ಈಗಲೇ 
ಮೂಡಲು ಮಾಯದ ರೂಪವು?

ಮಾತಾಡಿಸು ಬೇರನು ಊರುತ
ದಾರಿಯ ಕಾದಿದೆ ಗಾಳಿಯೂ 
ಹಾರಾಡಿದೆ ರೆಕ್ಕೆಯು ಸೋತರೂ 
ನಿನ್ನನೇ ಬೇಡುತ ಹಕ್ಕಿಯು 

ಏನಿದೆ ನಿನ್ನಲಿ ಹೇಳಲು ಆಗದೇ?
ನಿನ್ನನು ಕಾಡುವ ಆ ದನಿ ಎಲ್ಲಿದೆsss ಹೇ... 
ಸುಮ್ಮನೆ ಕೂತರೆ ಕಣ್ಣಿಗೂ ಬಾಯಿದೆ, ಕಂಬನಿ ಜಾರದೇ? 

ಹೇ ರಾಗಿಣಿ ಬಾ... ಹೇ ರಾಗಿಣಿ ಬಾ... 
ಬಾ ಸೇರಿಕೋ ನನ್ನಲಿ, ಶರಣಾಗುತ 
ಹೇ ರಾಗಿಣಿ ಬಾ ..... 

ಏಕಾಂಗಿಯೇ ಎಂದಿಗೆ ಸೇರುವೆ
ನಿನ್ನ ಆ ದೂರದ ಗೂಡನು?
ತಾನಾಗಿಯೇ ಮೂಡದು ಬಣ್ಣವು 
ಮುನ್ನ ನೀ ತೆರೆಯದೆ ಕಣ್ಣನು 

ಕೈ ಚಾಚಲು ಕಾರಣ ಕೇಳುವೆ 
ಏಕೆ ಏನಾಗಿದೆ ಸೋದರ?
ಊರಾಚೆಗೆ ಊಹೆಗೂ ಮೀರಿದ 
ಊರಿದೆ ಎಂಬುದೇ ಕಾತರ

ನಿಲ್ಲದೆ ಹಾಡುತ ಬಾಳನು ಕಂಡವ
ನಾಳೆಯ ಯೋಚನೆ ಏತಕೆ ಅನ್ನುವsss ಹೇ... 
ಉತ್ತರ ಸಿಕ್ಕರೆ ಪ್ರಶ್ನೆಯೂ ಸಲ್ಲದು, ಲೋಕವೇ ಚಿಕ್ಕದು!

ಏಕಾಂಗಿಯೇ ಬಾ,  ಏಕಾಂಗಿಯೇಬಾ 
ನೀ ತೋರುವ ದಾರಿಯ, ಗುರುತಾಗಿಸು
ಏಕಾಂಗಿಯೇ ಬಾ....  

Sunday, 8 March 2020

ನಿತ್ಯ ಯುಗಾದಿ

ಮುಗಿಯಿತೆಂಬುದು ಏನೂ ಇಲ್ಲ ಜಗದೊಳಗೆ 
ಮತ್ತೆ ಮೂಡುವ ಚಿಗುರು ಮೊದಲಾಗಿಸಲು 
ಮೂರ್ತವೂ, ಅಮೂರ್ತವೂ ಅದಲು ಬದಲಾಗಿ 
ಗುಣಾತೀತ ಕಾಲಕ್ಕೆ ಅನುಸಂಧಾನಕ್ಕೆ ನಿಲ್ಲುತ್ತವೆ  

ನೀರು ಹೆಪ್ಪುಗಟ್ಟುವುದೆಷ್ಟು ಸರಿ? ಎಂದು ಪ್ರಶ್ನಿಸುವ 
ನೀರಾಗಿ ಹರಿವುದೇ ಶ್ರೇಷ್ಠವೆಂದು ಭ್ರಮಿಸುವ 
ಸಂಕುಚಿತ ಸಂಕೋಲೆಗಳನ್ನು ಮೀರಿದ ಪ್ರಕೃತಿ 
ತನಗೆ ಬೇಕಾದ ಹಾಗೆ ಬದಲಾಗುವುದರೊಟ್ಟಿಗೆ 
ಜೈವಿಕ ಸಮತೋಲನದ ತಕ್ಕಡಿ ತೂಗುವುದೇ ಬೆರಗು 

ಆದಿ ಅಂತ್ಯಗಳ ನಡುವೆ ಬದುಕ ಕಟ್ಟಿಕೊಳ್ಳುವುದು 
ಹುಟ್ಟಿಗೆ ಹೆಸರಿಟ್ಟು, ಸಾವಿಗೆ ಮರೆವಿಟ್ಟು 
ತಲೆಮಾರುಗಳಿಗೆ ಗುರುತಾಗಿ ಉಳಿಯಲಪೇಕ್ಷೆಗೆ
ಶ್ರಮಿಸಿ ಹೇಳಹೆಸರಿಲ್ಲದಂತೆ ಅಳಿವ ನಾವೂ 
ಫಲಾಪೇಕ್ಷೆ ಇಲ್ಲದೆ ಉರುಳುವ ಕಾಲವೂ 
ಒಂದಷ್ಟು ಒಳ್ಳೆ ಕಾರಣಗಳಿಗಾಗಿ ಜೊತೆಯಾಗಿ ಸಾಗುವೆವು 

ಯುಗ ಬಯಸುವುದು ಆದಿಯನ್ನೋ, ಅಂತ್ಯವನ್ನೋ?
ಸಂಭ್ರಮಿಸಬೇಕಾದ್ದು ಯಾವುದನ್ನ?
ಪ್ರಶ್ನೆಗಳೆಲ್ಲಕ್ಕೂ ಉತ್ತರ ಹುಡುಕುವುದು ವ್ಯರ್ಥ 
ಕೆಲವು ಪ್ರಶ್ನೆಗಳಾಗಿ ಉಳಿವುದೇ ಗೌರವಾರ್ಥ 
ಹೂವು ಅರಳುವ ಕಾಲವನ್ನು ಮೆರೆಸಿ 
ಚೆದುರಿದ ಕಾಲವ ಶಪಿಸುವ ಮನಸ್ಸಿಗೆ ನಿಲುಕದ ಸತ್ಯ 

ಆದಿಗೆ ಗಾದಿಯಾಗಿ ಆನಂತರ ಮುಳ್ಳ ಹಾಸುವ ಬದುಕು 
ಸದಾ ಎಚ್ಚರವಾಗಿರಲು ಪಾಠ ಮಾಡುವ ಶಾಲೆ 
ಹೊಸತ ಕಾಣುವವರಿಗೆ ನಿತ್ಯ ಯುಗಾದಿ 
ಅಲ್ಲದವರಿಗೆ ಎಲ್ಲವೂ ತಗಾದೆ.... 

Saturday, 7 March 2020

ಸ್ವರ ಸ್ವರ ನಿರಂತರ

ಸ್ವರ ಸ್ವರ ನಿರಂತರ 
ಜೊತೆ ಇರು ಇದೇ ಥರ 
ತೆರೆ ಎದೆ ಕದ 
ಕೊಡು ಹೊಸ ಸ್ವರ 

ಎದುರಲಿ ಇರುವಾಗಲೇ
ಹುಡುಕುವೆ ನೀ ಯಾರನು?
ಕನಸಿಗೂ ಗುರುತಾಗಲೇ
ಬಿಡಸಲೇ ಪ್ರತಿಯೊಂದನೂ?
ಅನುಮತಿ ಇರದಂತೆಯೇ
ಉಸಿರಲಿ ಉಸಿರಾಗುವೆ
ಕರುಣಿಸು ಹಠವೊಂದನು 
ಬದುಕುವೆ ಮರುಕಳಿಸುತ ಮನಸಲೇ

ಮಾತಾಡು ಮುಗಿಲೇ
ಕೈ ಜಾರೋಕೂ ಮೊದಲೇ
ನೀ ಯಾಕಾಗಿ ಬರುವೆ
ಹುಸಿ ಮಳೆಯ ತಂದಂತೆ?
ಬಯಸಿ ಬಂದು ಬಳಿಗೆ
ಮಾಡು ನನ್ನ ಸುಲಿಗೆ
ಬಿಡದೆ ಕಾಡು ಒಲವೆ...

ಸ್ವರ ಸ್ವರ ನಿರಂತರ 
ಜೊತೆ ಇರು ಇದೇ ಥರ 
ತೆರೆ ಎದೆ ಕದ 
ಕೊಡು ಹೊಸ ಸ್ವರ 

ಸ್ವರ ಸ್ವರ  ಸ್ವರ ಸ್ವರ ಸ್ವರ ಸ್ವರ....  

(Rap)
ನೀನು ನನು ಇದ್ದ ಮೇಲೆ ಮತ್ತೆ ಲೋಕ ಬೇಡ
ಅನ್ನುವಾಗ ಏಕೆ ನೀನು ಮೌನವಾಗಿ ಹೋದೆ?
ಸುತ್ತಿ ಸುತ್ತಿ ಬಂದ ಮುಳ್ಳು ಕೂಡ ನಿಲ್ಲುತಿಲ್ಲ
ಆದರೂನು ನಿನ್ನ ಕಾದು ಸೋತು ನಾನು ನಿಂತೆ
ಎಲ್ಲಿ ಹೋಯಿತೀಗ ಮುಂಚೆ ಇದ್ದ ಮಿಂಚು ಅಲ್ಲಿ
ಕಣ್ಣಿನಲ್ಲಿ ಕಾಣಿತಿಲ್ಲ ಮಂಕು ಬಳಿದ ಹಾಗೆ
ದಾರಿ ಕಾಣದಂತೆ ಮಂಜು ತಾನು ಸಂಚು ಹೂಡಿ 
ದೂರ ಮಾಡುವಾಟದಲ್ಲಿ ಬಾಗಿಯಾಯಿತಾದರೇಕೆ?

ಭಾರವಾದ ನನ್ನ ಗುಂಡಿಗೆಯ ಸದ್ದು
ಸಾಕು ಮಾಡು ಇನ್ನು ಓಟವನ್ನು ಎಂದು
ಖಾಲಿ ಆಗುವಂತೆ ನಿನ್ನ ನೆನಪು, ಮುಗಿಯದ ಯಾತನೆ
ಮೂಡೋ ಕತ್ತಲಲ್ಲಿ ಕಾಣೋದೆಲ್ಲ ಒಂದೇ
ಆದರೂನು ಅಲ್ಲಿ ಕೂಡ ನಿನ್ನೇ ಕಂಡೆ
ಚೆದುರಿ ಹೋದ ಕಾಡಿಗೆಯ ಕಣ್ಣ ಮುಂದೆ, ಮನಸು ಮರುಗುತಿದೆ

ಬಯಸಿ ಬಂದು ಬಳಿಗೆ
ಮಾಡು ನನ್ನ ಸುಲಿಗೆ
ಬಿಡದೆ ಕಾಡು ಒಲವೆ...

(ಹೆಂ)
ಎದುರಲಿ ಇರುವಾಗಲೇ
ಹುಡುಕುವೆ ನೀ ಯಾರನು?
ಕನಸಿಗೂ ಗುರುತಾಗಲೇ
ಬಿಡಸಲೇ ಪ್ರತಿಯೊಂದನೂ?
ಅನುಮತಿ ಇರದಂತೆಯೇ
ಉಸಿರಲಿ ಉಸಿರಾಗವೆ
ಕರುಣಿಸು ಹಠವೊಂದನು 
ಬದುಕುವೆ ಮರುಕಳಿಸುತ ಮನಸಲೇ

ಮಾತಾಡು ಮುಗಿಲೇ
ಕೈ ಜಾರೋಕೂ ಮೊದಲೇ
ನೀ ಯಾಕಾಗಿ ಬರುವೆ
ಹುಸಿ ಮಳೆಯ ತಂದಂತೆ?
ಬಯಸಿ ಬಂದು ಬಳಿಗೆ
ಮಾಡು ನನ್ನ ಸುಲಿಗೆ
ಬಿಡದೆ ಕಾಡು ಒಲವೆ...

ಸ್ವರ ಸ್ವರ ನಿರಂತರ 
ಜೊತೆ ಇರು ಇದೇ ಥರ 
ತೆರೆ ಎದೆ ಕದ 
ಕೊಡು ಹೊಸ ಸ್ವರ 


****ಹಾಡು****
https://soundcloud.com/bharath-m-venkataswamy/blukws5lx4cp

Sunday, 1 March 2020

ಕಾರಣ ನೀಡದೆ ಏತಕೆ ಕಾಡಿದೆ

ಕಾರಣ ನೀಡದೆ ಏತಕೆ ಕಾಡಿದೆ 
ಅಪ್ಪಣೆ ಕೇಳದೆ ಜೀವವ ಸೇರಿದೆ 
ಅಂದುಕೊಂಡಿರಲಿಲ್ಲ ಆಗಬಹುದು ಹೀಗೆ 
ಅಂದಹಾಗೆ ನೀನೇ ಇಷ್ಟವಾದೆ ಹೇಗೆ?
ಒಂದೊಂದೇ ಬಯಕೆ ಬಿಚ್ಚಿ ಹೇಳುವಾಗ ಮಾತು ಬಾರದೇ... (ಟನ್ ಟಾನ್ ತಡಂತಡಂ - ಗಿಟಾರ್)

ನೀನೊಂದು ಕಾವ್ಯವೆಂದು ಓದೋಕೆ ಹೋದರೆ 
ಹಾಡೊಂದು ತೇಲಿ ಬಂತು ಬಾ ಕೇಳು ಹಾಡುವೆ 
ನಿನ್ನಲ್ಲೇ ಲೀನವಾದ ಈ ನನ್ನ ಧ್ಯಾನಕೆ 
ನೂರಾರು ಪಾತ್ರದಲ್ಲಿ ನೀನಷ್ಟೇ ಕಾಣುವೆ 
ಊರಲ್ಲದೂರಲಿ ನೀ ಸಿಕ್ಕ ನಂತರ 
ಬೇರೇನು ಯೋಚನೆ ಬೇರೂರಿ ನಿಂತೆನು 
ಇನ್ನೊಮ್ಮೆ ಕೇಳಿ ಹೋಗು ನಿನ್ನ ಹಾಡು ನಿನ್ನೇ ಬೇಡಿದೆ.. (ಟನ್ ಟಾನ್ ತಡಂತಡಂ - ಗಿಟಾರ್)

ಚೂರಾದ ನಿನ್ನ ಬಳೆಯೇ ಮಳೆ ಬಿಲ್ಲು ಎನ್ನುವೆ 
ಬಾಯಾರಿ ಬಂದೆ ಈಗ ಮಾತಾಡು ಸೋನೆಯೇ 
ಕಲ್ಲನ್ನು ಕಣ್ಣಿನಲ್ಲೇ ನೀ ಕೆತ್ತಿ ಹೋಗುವೆ 
ನಿನ್ನಿಷ್ಟದಂತೆ ಮಾಡು ನಾ ಕಣ್ಣು ಮುಚ್ಚುವೆ 
ಆರಂಭಕ್ಕಿಂತಲೂ ಈ ವೇಳೆ ಸುಂದರ 
ನಾ ಸೋತ ಹಾಗೆಯೇ ನೀ ಸೋತ ನಂತರ 
ನೀನಾಡೋ ಸುಳ್ಳೂ ಕೂಡ ಹಾಯಿ ಹಾಯಾಗಿ ತಾಗಿದೆ...  (ಟನ್ ಟಾನ್ ತಡಂತಡಂ - ಗಿಟಾರ್)

****ಹಾಡು****
https://soundcloud.com/bharath-m-venkataswamy/9v4ow21qjnw2

ಚಂದನವನದ ಚೆಲುವೆ

ಚಂದನವನದ ಚೆಲುವೆ 
ಇಗೋ ನಿನಗೆ ಮನಸ ಕೊಡುವೆ 
ಬೆಳದಿಂಗಳ ಸಂತೆಯಲಿ 
ಅಲೆದು ಉಡುಗೊರೆಯೊಂದ ತರುವೆ 
ನಿನಗೆಂದೇ ಅರಳಿರುವ 
ಹೂಗಳನೊಮ್ಮೆ ಪರಿಗಣಿಸು
ನಿನಗಾಗೋ ಕನಸುಗಳ 
ಕಾತರದಿಂದ ಪರಿಚಯಿಸು 
ಕಣ್ಣಿನಲೇ ಕುಶಲೋಪರಿಯ ತಿಳಿಸು 
ಬಾ ನನ್ನೊಳಗೆ ರಂಗೋಲಿಯನು ಬಿಡಿಸು 

ನಕ್ಕರೆ ನೀನು ಉಕ್ಕಿತು ಜೇನು 
ಸವಿಯುತ ಸವೆಯುವೆ ಸಮಯವೇ ನಿಲ್ಲು 
ದಕ್ಕಿದ ಹಾಗೆ ಬಣ್ಣದ ಮೀನು 
ಕದಡಿತು ಮನದೊಳಗೊಳದಲಿ ಕೇಳು 
ಅಂತರವೆಲ್ಲ ಆನಂತರವಿರಲಿ 
ಹತ್ತಿರ ಬಂದರೆ ನೀಡುವೆ ಮುತ್ತು 
ಸಾಗರದಾಳ ಅಡಗಿದರೇನು 
ಹುಡುಕಿ ಬರುವುದು ಸುಲಭದ ತುತ್ತು 
ಮೌನವನು ಅನುವಾದಿಸಲು ಕಲಿಸು 
ಬಾ ನನ್ನೊಳಗೆ ರಂಗೋಲಿಯನು ಬಿಡಿಸು.... 

ತಾರೆಗಳೆಲ್ಲ ಸಂಜೆಯ ಮೇಲೆ 
ನೀನಿರೆ ಅದು ಸುಳ್ಳೆನ್ನುವೆ ನಾನು 
ಎಂದಿಗೂ ಹೀಗೆ ಕೂರಲು ಸಿದ್ಧ 
ನೋಡುತ ಮುದ್ದಾಗಿರೋ ಮೊಗವನ್ನು 
ನಾಳೆಗೆ ಸಿಗುವ ಚಿಂತೆಯೇ ಬೇಡ 
ಇಂದಿಗೆ ನಾಳೆಯ ಒಂದಾಗಿಸುವೆ 
ಬಾಳಿಗೆ ನಿನ್ನ ಗೀಳನು ತುಂಬಿ 
ತಾಕದ ಎತ್ತರವ ತಲುಪಿರುವೆ 
ಸದ್ದಿರದೆ ಎದೆ ಬಾಗಿಲಿಗೆ ಕ್ರಮಿಸು 
ಬಾ ನನ್ನೊಳಗೆ ರಂಗೋಲಿಯನು ಬಿಡಿಸು.... 

****ಹಾಡು****
https://soundcloud.com/bharath-m-venkataswamy/4q1fgcgspth5

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...