Sunday 8 March 2020

ನಿತ್ಯ ಯುಗಾದಿ

ಮುಗಿಯಿತೆಂಬುದು ಏನೂ ಇಲ್ಲ ಜಗದೊಳಗೆ 
ಮತ್ತೆ ಮೂಡುವ ಚಿಗುರು ಮೊದಲಾಗಿಸಲು 
ಮೂರ್ತವೂ, ಅಮೂರ್ತವೂ ಅದಲು ಬದಲಾಗಿ 
ಗುಣಾತೀತ ಕಾಲಕ್ಕೆ ಅನುಸಂಧಾನಕ್ಕೆ ನಿಲ್ಲುತ್ತವೆ  

ನೀರು ಹೆಪ್ಪುಗಟ್ಟುವುದೆಷ್ಟು ಸರಿ? ಎಂದು ಪ್ರಶ್ನಿಸುವ 
ನೀರಾಗಿ ಹರಿವುದೇ ಶ್ರೇಷ್ಠವೆಂದು ಭ್ರಮಿಸುವ 
ಸಂಕುಚಿತ ಸಂಕೋಲೆಗಳನ್ನು ಮೀರಿದ ಪ್ರಕೃತಿ 
ತನಗೆ ಬೇಕಾದ ಹಾಗೆ ಬದಲಾಗುವುದರೊಟ್ಟಿಗೆ 
ಜೈವಿಕ ಸಮತೋಲನದ ತಕ್ಕಡಿ ತೂಗುವುದೇ ಬೆರಗು 

ಆದಿ ಅಂತ್ಯಗಳ ನಡುವೆ ಬದುಕ ಕಟ್ಟಿಕೊಳ್ಳುವುದು 
ಹುಟ್ಟಿಗೆ ಹೆಸರಿಟ್ಟು, ಸಾವಿಗೆ ಮರೆವಿಟ್ಟು 
ತಲೆಮಾರುಗಳಿಗೆ ಗುರುತಾಗಿ ಉಳಿಯಲಪೇಕ್ಷೆಗೆ
ಶ್ರಮಿಸಿ ಹೇಳಹೆಸರಿಲ್ಲದಂತೆ ಅಳಿವ ನಾವೂ 
ಫಲಾಪೇಕ್ಷೆ ಇಲ್ಲದೆ ಉರುಳುವ ಕಾಲವೂ 
ಒಂದಷ್ಟು ಒಳ್ಳೆ ಕಾರಣಗಳಿಗಾಗಿ ಜೊತೆಯಾಗಿ ಸಾಗುವೆವು 

ಯುಗ ಬಯಸುವುದು ಆದಿಯನ್ನೋ, ಅಂತ್ಯವನ್ನೋ?
ಸಂಭ್ರಮಿಸಬೇಕಾದ್ದು ಯಾವುದನ್ನ?
ಪ್ರಶ್ನೆಗಳೆಲ್ಲಕ್ಕೂ ಉತ್ತರ ಹುಡುಕುವುದು ವ್ಯರ್ಥ 
ಕೆಲವು ಪ್ರಶ್ನೆಗಳಾಗಿ ಉಳಿವುದೇ ಗೌರವಾರ್ಥ 
ಹೂವು ಅರಳುವ ಕಾಲವನ್ನು ಮೆರೆಸಿ 
ಚೆದುರಿದ ಕಾಲವ ಶಪಿಸುವ ಮನಸ್ಸಿಗೆ ನಿಲುಕದ ಸತ್ಯ 

ಆದಿಗೆ ಗಾದಿಯಾಗಿ ಆನಂತರ ಮುಳ್ಳ ಹಾಸುವ ಬದುಕು 
ಸದಾ ಎಚ್ಚರವಾಗಿರಲು ಪಾಠ ಮಾಡುವ ಶಾಲೆ 
ಹೊಸತ ಕಾಣುವವರಿಗೆ ನಿತ್ಯ ಯುಗಾದಿ 
ಅಲ್ಲದವರಿಗೆ ಎಲ್ಲವೂ ತಗಾದೆ.... 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...