Friday 13 March 2020

ದೇವರಿಲ್ಲದ ನಿಜವೂ-ಇರುವನೆಂಬ ಸುಳ್ಳೂ

ಕಾಣದ ಸತ್ಯವೇ ಏನಿದು ನಿನ್ನ ಈ ಮೂರ್ತ ರೂಪ
ನೀ ಬರುವ ಸೂಚನೆ ಹೀಗೇಕೆ ಕೊಡುವಂತೆ ಕೆಟ್ಟ ಶಾಪ
ತಾಪವೇರಿಸುವೀ ಕೋಪವ ಹೊತ್ತು ಬರುವ ನಿನಗೆ 
ಸುಳ್ಳ ಒಣ ಚಪ್ಪರಕೆ ಕಿಡಿ ಹೊತ್ತಿಸಿಸಂಭ್ರಮಿಸುವ ತವಕ 

ಶಾಂತ ತೋಟದ ಹೂವ ಕೂಟದಿ ಬಿರುಗಾಳಿಯೆಬ್ಬಿಸಿ 
ಬೇರು ಬೇರುಗಳ ಮುಖ ಪರಿಚಯ ಮಾಡಿಸಿಬಿಟ್ಟೆ 
ಬಿಕ್ಕಿ ಅತ್ತ ಪಕಳೆಗಳ ಚೆದುರಿಸಿ ಅತ್ತಿತ್ತ ತೂರಾಡಿ
ನಿರ್ವಾಣ ತೊಟ್ಟುಗಳ ಸಂತೈಸಲೀಗ ಮಳೆಗರೆಯುತಿರುವೆ  

ಎಲ್ಲವೂ ಸ್ತಬ್ಧವಾಗಿರುವಾಗ ಚಾಲನೆ ನೀಡುವ ಭರದಲ್ಲಿ 
ಕೆಡವಿ ಬಿಡುವ ನೀನು ಪೀಡನ ಸುಖಿಯೇ ಎಂಬ ಗುಮಾನಿ 
ಅಥವ ನಿನ್ನ ಇರುವಿಕೆಯ ಆಗಾಗ ಸಾಭೀತು ಪಡಿಸಲು 
ವಿಭಿನ್ನ ವೇಷ ತೊಟ್ಟು ಬರುವ ರೋಗಗ್ರಸ್ಥ ವ್ಯಸನಿಯೋ?

ಬೇಕೆನ್ನುವವರು ನಿನ್ನ ಹುಡುಕಿ ಬಂದೇ ತೀರುವರು 
ಅಲ್ಲಿಯ ತನಕ ಅಜ್ಞಾತ ಸ್ಥಳದಲ್ಲಿ ಹುದುಗಿಕೊಂಡಿರು 
ಕೆಲವೊಮ್ಮೆ ನೀನಿಲ್ಲದೆಯೇ ಬದುಕು ಹಸನಾಗಿರಬಹುದು 
ಬೇಡಿಕೆಯಿಡದ ಹೊರತು ಎಲ್ಲೂ ಸುಳಿಯಬೇಡ, ದಮ್ಮಯ್ಯ!

ಒಮ್ಮೊಮ್ಮೆ ಇದ್ದದ್ದು ಸುಳ್ಳೆಂದರಿತು, ಇರಲಾರದೆ ನಿನ್ನ ಅಪೇಕ್ಷಿಸಿದಾಗ 
ಪಾಪ ಪ್ರಜ್ಞೆ ಕಾಡುವಷ್ಟರ ಮಟ್ಟಿಗೆ ನಿನ್ನ ಛಾಪು ಮೂಡಿಸಬೇಡ 
ನಿನ್ನಲ್ಲಿರುವ ನಿಜದ ವಿಷವ ಹೀರಿ ಅಸುನೀಗುವ ಉಸಿರಿಗೆ 
ಸುಳ್ಳೆಂಬ ಸುಗಂಧವೇ ಒಂದಷ್ಟು ಆಹ್ಲಾದ ನೀಡಬಹುದು 

ದೇವರಿಲ್ಲದ ನಿಜವು, ನಂಬಿದವರಿಗೆ ಹುಸಿ 
ಇರುವನೆಂಬ ಸುಳ್ಳು, ಇಲ್ಲೆಂದವಗೆ ಮಸಿ!

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...