Tuesday, 26 May 2020

ಅವಳೇ ಅಮ್ಮ, ನನ್ನಮ್ಮ...

ಅಕ್ಕರೆ ಮಳೆಗರೆದು ಮಾತನಾಡಿಸುವವಳು
ಅಪ್ಪನ ಪೆಟ್ಟಿನಿಂದ ಪಾರಾಗಿಸಿದವಳು
ನಗುವಲ್ಲೇ ನೋವ ದೂರಾಗಿಸಿದವಳು
ತನ್ನನ್ನೂ ಮೀರಿದಾಗ ಆನಂದಿಸುವವಳು
ಅವಳೇ ಅಮ್ಮ, ನನ್ನಮ್ಮ... 

ಊದುಗೊಳವೆಯನ್ನೂ ಮಾತಿಗೆಳೆವವಳು
ಕಾದು ದಾರಿಯನೇ ಸಾಕಾಗಿಸುವವಳು
ಹೊರಳು ಕಲ್ಲಿಗೆ ಎದೆ ಭಾರವ ಇಳಿಸಿದಳು 
ಸೆರಗಂಚಲೆಲ್ಲವ ಕಟ್ಟಿಟ್ಟುಕೊಳ್ಳುವಳು
ಅವಳೇ ಅಮ್ಮ, ನನ್ನಮ್ಮ... 

ಹಳೆಯ ಕಾಲದ ಸೀರೆ ಹೊಸತೆನ್ನುವಳು 
ಮಾಸಿದ ಬಣ್ಣವ ನೆನೆದು ನೀರಾಗುವಳು 
ಸುಕ್ಕುಗಳನೆಣಿಸದೆ ಸ್ವಂತವಾಗಿಸಿದವಳು 
ಮೌನದಲೇ ಆಗಾಗ ಹಾಡನೂ ಗುನುಗುವಳು 
ಅವಳೇ ಅಮ್ಮ, ನನ್ನಮ್ಮ... 

ಕೂಡಿಟ್ಟದ್ದೆಲ್ಲವ ಕೊಡುವುದೇ ಹಿತವೆನುವಳು 
ಆಸೆಯ ಶಿಖರಕ್ಕೆ ಸಿಡಿ ಮದ್ದು ಸಿಡಿಸುವಳು 
ಮಳೆಯ ಮುನ್ಸೂಚನೆ ನಿಖರವಾಗಿ ಗ್ರಹಿಸುವಳು 
ಮನೆಯ ಕಷ್ಟಗಳನ್ನು ಹೇಗೋ ನಿಗ್ರಹಿಸುವಳು 
ಅವಳೇ ಅಮ್ಮ, ನನ್ನಮ್ಮ... 

ತನಗೊಲಿದ ಸುಖದಲ್ಲಿ ತವರಿಗೆ ಪಾಲಿಡುವಳು 
ಅವರವರ ಎಣಿಕೆಯನು ಇಣುಕಿನಲ್ಲಿ ಹಿಡಿವಳು 
ಯಾರಿಗೂ ಕಾಣದಂತೆ ಒಳಗೊಳಗೇ ಕುಣಿವಳು 
ಎಲ್ಲರೆದುರು ದೃತಿಗೆಡದೆ ತೆರೆ ಮರೆಯಲಿ ಅಳುವಳು 
ಅವಳೇ ಅಮ್ಮ, ನನ್ನಮ್ಮ... 

Monday, 25 May 2020

ಗಝಲ್ (ಮೋಹದ ಮಳೆಯಲಿ ನೆನೆಯಲು ನಿನ್ನ ನೆನಪಾಗುವುದು)

ಮೋಹದ ಮಳೆಯಲಿ ನೆನೆಯಲು ನಿನ್ನ ನೆನಪಾಗುವುದು
ಮಾಸದ ಗಾಯದ ಗುರುತಲೂ ನಿನ್ನ ನೆನಪಾಗುವುದು

ಅಂಗೈಯ್ಯೇರಿದ ಕಪ್ಪು ಇರುವೆ ದಿಕ್ಕು ಹುಡುಕುತ
ತೋಳೆಡೆ ಪಯಣ ಬೆಳೆಸಲು ನಿನ್ನ ನೆನಪಾಗುವುದು

ಮಧುವನು ಹೀರುತ ಹಾರುವ ಚಿಟ್ಟೆ ಎದುರಾಗುತಲೇ
ಕೆನ್ನೆಯ ಹಾಗೆ ತಾಕಲು ನಿನ್ನ ನೆನಪಾಗುವುದು

ಏನೂ ಮಾತನಾಡದೆ ಬಿಂಬಿಸಿ ನಿಂತ ಕೊಳವು
ಉದುರಿದೆಲೆಗೆ ಚೆದುರಲು ನಿನ್ನ ನೆನಪಾಗುವುದು

ಬಹಳ ಹೊತ್ತು ಉರಿದು ಕಾದು ಆರಿದ ದೀಪ
ಕತ್ತಲ ನೀರವ ಆಲಿಸಲು ನಿನ್ನ ನೆನಪಾಗುವುದು

ಕಸಿ ಮಾಡಿ ಹೊಸ ಬಣ್ಣ ತಾಳಿದ ಹೂವಿನ ಬಳ್ಳಿ
ಅಸಲಿ ಬಣ್ಣವ ಅರಸಲು ನಿನ್ನ ನೆನಪಾಗುವುದು

ಹಾಡು ಹುಟ್ಟಿ ಹಳೆಯದಾದರೂ ಎಂದೋ ಒಮ್ಮೆ
ಥಟ್ಟನೆ ಗುನುಗಿಗೆ ದಕ್ಕಲು ನಿನ್ನ ನೆನಪಾಗುವುದು

ಪದಗಳು ಮೂಡದ ಹೊತ್ತಲಿ ಕವಿತೆಯ ಬರೆಯಲು ಕೂತು
ಖಾಲಿ ಉಳಿವುದೇ ಹಿತವೆನಿಸಲು ನಿನ್ನ ನೆನಪಾಗುವುದು..

ಹಾಡು 
******

Saturday, 23 May 2020

ಗಝಲ್ (ನಮ್ಮ ನಡುವೆ ಗಡಿಯ ಬರೆದು ಬೇಲಿ ನೆಟ್ಟರು ಏತಕೆ?)

ನಮ್ಮ ನಡುವೆ ಗಡಿಯ ಬರೆದು ಬೇಲಿ ನೆಟ್ಟರು ಏತಕೆ?
ಬೇರು ಹಬ್ಬಿದಲ್ಲೆಲ್ಲ ನಮ್ಮ ಗುರುತ ಸುಟ್ಟರು ಏತಕೆ?

ವಿಷಯ ಅರಿತು ಹರಿತವಾದ ಆಯುಧಗಳ ಹಿಡಿಯುತ
ಆಗ ತಾನೆ ಚಿಗುರಿದೊಲವ ಚೆದುರಿ ಬಿಟ್ಟರು ಏತಕೆ?

ನೋವ ನುಂಗುತ ಮುಳ್ಳು ದಾರಿಯ ಸವೆಸಿ ಬಂದೆವು ಜೊತೆಯಲಿ
ದಣಿದ ಕಾಲಿಗೆ ಗೆಜ್ಜೆ ವ್ಯರ್ಥ, ಕುಣಿಯಲಾದರೂ ಏತಕೆ?

ಯಾರೇ ಕಂಡರೂ ನೆಂಟರೆಂದೆವು, ನಂಟು ಬೆಸೆದು ಒಲವಿಗೆ
ಹೆಜ್ಜೆ ಹೆಜ್ಜೆಗೂ ಚುಚ್ಚು ಮಾತಲಿ ಅಳಿಸಿ ಹೋದರು ಏತಕೆ?

ನಾನು ನೀನು ಬೇರೆ ಬೇರೆ ಅಮುಖ್ಯವಾಗಿಯೇ ಉಳಿದೆವು
ಬೆರೆಯಲೀ ಪರಿ ನಮ್ಮ ಕಡೆಗೇ ಗುರಿಯನಿಟ್ಟರು ಏತಕೆ?

ಗುಂಡಿ ತೋಡಿ ನೀರ ಇಂಗಿಸಿ ಮತ್ತೂ ಆಳಕೆ ಅಗೆದರು
ಸಂಪಿಗೆ ಸಸಿಯನ್ನು ಚಿವುಟಿ ನಮ್ಮ ಹೂತರು ಏತಕೆ?

ತಾರೆಗಳ ಎಣಿಸುತ್ತಲಿದ್ದೆವು ದೂರದಲಿ ಕನವರಿಸುತ
ದಾರಿ ಅರಿತವರಂತೆ ಅಲ್ಲಿಗೇ ಕಳಿಸಿ ಕೊಟ್ಟರು ಏತಕೆ?

ಹಾಡು
******
https://soundcloud.com/bharath-m-venkataswamy/3dxddll41nev

ಗಝಲ್ (ನೀನೆಷ್ಟೇ ದೂರವಾದರೂ, ನಾ ನಿನ್ನ ಹುಡುಕಿ ಬಿಡುವೆ)

ನೀನೆಷ್ಟೇ ದೂರವಾದರೂ, ನಾ ನಿನ್ನ ಹುಡುಕಿ ಬಿಡುವೆ
ನೀನೆಷ್ಟೇ ಕೋಪಗೊಂಡರೂ, ಇನ್ನಷ್ಟು ಕೆಣಕಿ ಬಿಡುವೆ
ಇಲ್ಲ ಸಲ್ಲದ ಮಾತನಾಡಿ, ಹೇಳಹೊರಟ ಮಾತು ಮರೆತರೆ
ನಿದ್ದೆ ತರಿಸದ ಕನಸಿನೊಡನೆ ಜಂಟಿ ದಾಳಿಗೆ ದುಮುಕಿ ಬಿಡುವೆ
ಪ್ರೇಮ ಗೋಜಲ ಬಿಡಿಸಿ ಕೂತಿರೆ ಇಡಿಯ ಜಗವ ಕುರುಡುಗೊಳಿಸಿ
ಸಣ್ಣ ಸಲುಗೆಯ ಹಿಡಿದು ಒಮ್ಮೆಗೆ ಹೃದಯವನ್ನು ಕೆದಕಿ ಬಿಡುವೆ
ತಬ್ಬಿಕೊಂಡು ಹಂಚಿಕೊಂಡ ಕತೆಗಳೆಷ್ಟೋ ಹಳಸಿ ಹೋಗಿವೆ
ದೂರ ಉಳಿದೇ ಸಣ್ಣ ಕವಿತೆಗೆ ಕಣ್ಣ ಹನಿಯ ತುಳುಕಿ ಬಿಡುವೆ
ಕಳೆದು ಹೋಗದೆ ಇರಲಿ ಎಂದು ನೀನು ಕಳಿಸಿದ ಪತ್ರಗಳನು
ಮತ್ತೆ ಮತ್ತೆ ಓದೋ ನೆಪದಲಿ ನೆನಪ ಸಂಚಿಗೆ ಅಮುಕಿ ಬಿಡುವೆ
ನಿನ್ನ ಮೀರುವ ಮೋಹದಮಲನು ಹಂಚಲೆಂದು ಕಾದ ಹೂಗಳ
ಗಂಧ ಉಸಿರನು ಸೇರೋ ಮೊದಲೇ ಗೌಪ್ಯವಾಗಿ ಹೊಸಕಿ ಬಿಡುವೆ
ಇರದ ಹೊತ್ತಲೂ ಇರುವ ಹಾಗೆ ಭಾಸವಾಗೋ ಇಂಗಿತಕ್ಕೆ
ನನ್ನ ಸಮ್ಮತಿ ಇರುವುದೆನ್ನುತ ಮೆಲ್ಲ ಕೈಯ್ಯನು ಕುಲುಕಿ ಬಿಡುವೆ

ಗಝಲ್ (ನಮ್ಮಂತೆ ಹೂವುಗಳೂ ನಮ್ಮ ಕುರಿತು ಕವಿತೆ ಬರೆಯುತ್ತಲಿರಬಹುದೇ?)

ನಮ್ಮಂತೆ ಹೂವುಗಳೂ ನಮ್ಮ ಕುರಿತು ಕವಿತೆ ಬರೆಯುತ್ತಲಿರಬಹುದೇ?
ನಮ್ಮಂತೆ ನೋವುಗಳೂ ನಮ್ಮ ಕುರಿತು ಕವಿತೆ ಬರೆಯುತ್ತಲಿರಬಹುದೇ?
ಇಬ್ಬನಿಯ ಕಿವಿ ಹಿಡಿದು ತನ್ನಂಚಿನಲಿ ತೂಗಿಬಿಟ್ಟ ಮರದೆಲೆಯು
ಬೆಳಕಿನ ಕಿರಣವು ಮುನ್ನ ತನ್ನನ್ನೇ ತಾಕಲೆಂದು ಜಪಿಸುತ್ತಲಿರಬಹುದೇ?
ಮೊದಲ ಮುತ್ತಿನ ಸಿಹಿಯ ಏಕಾಂತದಲಿ ಹಂಚೆ ಮಗ್ನ ಪ್ರೇಮಿಗಳು
ಸುತ್ತ ಗೋಡೆ ಗಾಂಭೀರ್ಯದಲಿ ಒಳಗೊಳಗೇ ಕುಣಿಯುತ್ತಲಿರಬಹುದೇ?
ತನ್ನೊಡಲ ವಿಸ್ತಾರವೆಷ್ಟಿದ್ದರೇನಂತೆ ಭೋರ್ಗರೆವ ಸಾಗರದ ಹಸಿವ
ಮೋಡ ಮೊಲೆ ಜಿನುಗಿಸಿದ ಎದೆಹಾಲಿನಂಥ ಮಳೆ ನೀಗಿಸುತ್ತಿರಬಹುದೇ?
ಹೊರಳಿ ಓದೆತ್ತಿಡಲು ಪ್ರೇಮ ಗ್ರಂಥವು ತಾನು ನಂಬದೆ ಓದುಗನ
ಮೊದಲಿಂದ ಕೊನೆವರೆಗೆ ಒಂದೊಂದೇ ಪುಟವನ್ನು ಎಣಿಸುತ್ತಲಿರಬಹುದೇ?
ಮೋಸಕ್ಕೆ ಬಲಿಯಾಗಿ ಹೊರ ನಡೆದ ಕಂಬನಿಯ ತಡೆಯಲೆತ್ನಿಸದೆ
ಜಾರಲು ಜಾಡೊಂದ ಮಾಡಿದ ಕೆನ್ನೆ ಪರಿತಪಿಸುತ್ತಲಿರಬಹುದೇ?
ರಸ ಹೀರಿ ತಿಪ್ಪೆಗೆಸೆದ ವಾಟೆ ಚಿಗುರೊಡೆದು ಮರವಾಗಿ
ಬಿಟ್ಟ ಮಾವಿಗೆ ಬೇಲಿ ಕಟ್ಟಿದಾಗ ನೋವ ಭರಿಸುತ್ತಲಿರಬಹುದೇ?
ಬೇಡೆಂದರೂ ನಿದ್ದೆಗೊಡದ ರಾತ್ರಿ ಪಾಳಿ ಕನಸುಗಳ ತಿರುಳು
ಬೆರಳನ್ನು ಬಿಗಿಯಾಗಿ ಹಿಡಿದು ಮರುಳಾದಂತೆ ಬರೆಸುತ್ತಲಿರಬಹುದೇ?

ಗೊಂಬೆ ಬಿದ್ದು ತುಂಡಾಯ್ತು

ಗೊಂಬೆ ಬಿದ್ದು ತುಂಡಾಯ್ತು
ಇವನಿಗೆ ಖುಷಿಯೋ ಖುಷಿ
ಒಂದು ಆಟಿಕೆ ಎರಡಾಯ್ತು
ಒಮ್ಮೆ ತಲೆ, ಒಮ್ಮೆ ಬುಡ
ಆಟಕ್ಕನುಗುಣವಾಗಿ ಅವುಗಳ ಸರತಿ,
ಮನೆಯ ಮೂಲೆ ಮೂಲೆಯ ಅಲೆದು
ಮೆತ್ತಿದರೆ ಮತ್ತೆ ಒಂದಾಗುವುದು
ಇವನ ಕೈಯ್ಯಲಿ ತುಂಡಾಗುವುದು
ಒಂದಕ್ಕೆ ಕಾಲಿಲ್ಲ, ಒಂದಕ್ಕೆ ಕಣ್ಣಿಲ್ಲ
ಹರಿದ ರೆಕ್ಕೆ, ಮುರಿದ ಮೂಗು
ಕೆಲವಕ್ಕೆ ಹೆಸರಿಲ್ಲ, ಕೆಲವು ಕಸವೇನಲ್ಲ
ಅಟ್ಟದಲಿ ಸಿಕ್ಕವು, ಅಂಗಡಿಲಿ ಕೊಂಡವು
ಎಲ್ಲವೂ ಒಂದೇ ಬುಟ್ಟಿಯಲ್ಲಿ
ಪ್ರತಿಯೊಂದಕ್ಕೂ ಪ್ರಾಣವಿದೆ
ಪ್ರತಿಯೊಂದಕ್ಕೂ ಪಾತ್ರವಿದೆ
ಕಾಣದವುಗಳೇ ಹೆಚ್ಚೆಂದು ಗೋಳಾಡಿ
ಇದ್ದವುಗಳೆಡೆ ತಾತ್ಸಾರ ಸಮರ,
ಕಳುವಾದ ಆಟಿಕೆ ಕೊನೆಗೂ ಸಿಕ್ಕರೆ
ದಿನವೆಲ್ಲ ಅದರೊಟ್ಟಿಗೇ ಸೇರಿ ಕಳೆದು
ಮಲಗಲು ಮಗ್ಗಲಲ್ಲೇ ಇರಿಸಿ
ಕನಸಲ್ಲೂ ಜಾಗ ಕೊಟ್ಟವನಂತೆ
ಬಿಗಿದಪ್ಪಿಕೊಂಡಾಗ, ಮಿಕ್ಕವು ಬಿಕ್ಕಿದಂತೆ
ಮಂಗನ ಬಾಲವ ಮಾನವ ಗೊಂಬೆಗಿಟ್ಟು
ಡೈನಾಸೋರ್, ಗೊರಿಲ್ಲಾವನ್ನು ಕಾದಾಡಿಸಿ
ಕೋಳಿಯ ಮೊಟ್ಟೆ ಕರಡಿಯದ್ದೆಂದು
ಸಿಂಹ, ಹುಲಿಗೆ ಹುಲ್ಲು ಮೇಯಿಸಿ
ಜಿರಾಫೆಯ ನೀಳ ಕತ್ತಿಗೆ ಗಿಲಕಿ ಕಟ್ಟಿ
ಕುದುರೆಯ ನೀರಿಗಿಳಿಸಿ, ಆಮೆಯ ಓಡಿಸಿ
ಟೆಡ್ಡಿಗೆ ಬಾಯಾರಿತೆಂದು ನೀರುಣಿಸಿ
ಹಸಿವೆಂದು ಅದಕ್ಕೂ ಉಣಿಸಿ
ಎಲ್ಲ ಮುಗಿವ ವೇಳೆಗೆ ದೀರ್ಘ ಉಸಿರು
ನಿರ್ಜೀವ ವಸ್ತುಗಳ ಪ್ರೀತಿಸಲು
ತನ್ನಂತೆಯೇ ಅವೂ ಎಂದು ಭಾವಿಸಲು
ಅದೆಂಥ ವಿಶಾಲ ಮನಸು?
ನಡು ನಡುವೆ
ಕೈಜಾರಿ ಚೂರಾದ ಆಟಿಕೆ
ಕೂಡಿಸಿ ಕೂಡುವುದು ವ್ಯರ್ಥ
ಕೆಡವುವುದೂ ಒಂದು ಕಲೆ....

Wednesday, 13 May 2020

ಗಝಲ್ (ಎರಗಿ ಬಂದಳು ಸಾಕಿ ಬೆಳದಿಂಗಳ ಹಾಗೆ)

ಎರಗಿ ಬಂದಳು ಸಾಕಿ ಬೆಳದಿಂಗಳ ಹಾಗೆ, ಹೇಗೆ ವಿವರಿಸಿ ಹೇಳಲಿ?
ಒರಗಿ ಎದೆಗೆದೆ ತಾಕಿ ಹೂವಾಯಿತೆಲ್ಲ, ಹೇಗೆ ವಿವರಿಸಿ ಹೇಳಲಿ?

ಭಾವ ವಿನಿಮಯವಾಗುವಂತೆ, ಮನಸು ಸರಾಗ ಕರಗಿದಾಗ 
ಆ ಕ್ಷಣದಿ ನಾನು ನಾನಾಗಿರಲಿಲ್ಲ, ಹೇಗೆ ವಿವರಿಸಿ ಹೇಳಲಿ?

ಕಣ್ಣಲ್ಲೇ ಎಲ್ಲ ಮಾತು ಮುಂತಾದವು, ಕುಂಟು ನೆಪ ಸನಿಹಕೆಂದು 
ಕಂಪಿಸಿ ಗೀಚಲು ಪದ ಮೂಡಲಿಲ್ಲ, ಹೇಗೆ ವಿವರಿಸಿ ಹೇಳಲಿ?

ಒತ್ತಿ ಬಿಟ್ಟಳು ತನ್ನ ಉಸಿರ ಮುದ್ರೆ, ತುಟಿಗೆ ತುಟಿ ಸಾಕ್ಷಿಯಿತ್ತು 
ನಂತರಕೆ ಏನೂ ನೆನಪಾಗುತ್ತಿಲ್ಲ, ಹೇಗೆ ವಿವರಿಸಿ ಹೇಳಲಿ?

ಗಂಧದೊಡಲ ತೀಡಿ, ಬೇವರ ಹನಿ ಹೊರಹೊಮ್ಮಿ, ಸಂಕುಚಿತ ತ್ರಾಣದಲ್ಲಿ 
ನಶೆಯಿಂದ ನಾನಿನ್ನೂ ಬಿಡುಗಡೆಗೊಂಡಿಲ್ಲ, ಹೇಗೆ ವಿವರಿಸಿ ಹೇಳಲಿ?

ಯಾರೂ ನೋಡಿಲ್ಲವೆಂಬ ನಿಟ್ಟುಸಿರು, ಚಂದಿರ ಬರುವ ತನಕ 
ವರದಿ ಮಾಡದೆ ಬಿಟ್ಟು ಹೊರಡುವವನಲ್ಲ, ಹೇಗೆ ವಿವರಿಸಿ ಹೇಳಲಿ?

ಇರದೆಯೂ ಇದ್ದಂತೆ ಆಕೆ, ಈಚೆಗೆ ಇದ್ದೂ ಇರದವನಂತೆ ನಾನು 
ಅನುಪಸ್ಥಿತಿಯ ಸ್ಥಿತಿಯ ಬಿಡಿಸಲಾಗುವುದಿಲ್ಲ, ಹೇಗೆ ವಿವರಿಸಿ ಹೇಳಲಿ?

Monday, 11 May 2020

ಗಝಲ್ (ನಿನ್ನ ಕಣ್ಣೊಳಗೆ ಎಡವಿ ಬಿದ್ದು ಉಸಿರು ಕಟ್ಟುತಿದೆ ನೋಡು)

ನಿನ್ನ ಕಣ್ಣೊಳಗೆ ಎಡವಿ ಬಿದ್ದು ಉಸಿರು ಕಟ್ಟುತಿದೆ ನೋಡು
ಹೃದಯ ಭಾಗದಲಿ ಗಾಯವೊಂದು ಹೆಪ್ಪುಗಟ್ಟುತಿದೆ ನೋಡು

ನಿನ್ನ ತುಟಿ ಪರಮಾದ್ಭುತ ಮಧುವ ಹೀರಿದ ಬೆನ್ನಲ್ಲೇ
ನನ್ನ ತುಟಿಯ ಬೆರೆತುಕೊಳ್ಳಲು ಹೇಗೆ ತೊದಲುತಿದೆ ನೋಡು

ಮ್ಮೂರುಗಳ ಮಧ್ಯೆ ಕಟ್ಟಿದ ಸೇತುವೆ ಶಿಥಿಲಗೊಳ್ಳುತ್ತಿದೆ
ಎರಡೂ ಅಂಚಲಿ ಗುರುತಿಗೊಂದು ಬೇಲಿ ಹಬ್ಬುತಿದೆ ನೋಡು

ಬರೆದ ಪತ್ರಗಳನ್ನು ದೋಣಿ ಮಾಡಿ ತೇಲಿ ಬಿಟ್ಟಿರುವೆ
ನಿನ್ನ ಮನೆಯಂಗಳವ ದಾಟಿ ಮುಂದೆ ಸಾಗುತಿವೆ ನೋಡು

ಮಾತು ಹುಟ್ಟುವ ಜಾಗದಲ್ಲಿ ಮೌನಕ್ಕೆ ಸಮಾಧಿ ಕಟ್ಟಿದ್ದೆವು
ಉತ್ಖನನ ಮಾಡಿದಲ್ಲಿ ಅತೃಪ್ತ ಆತ್ಮವೊಂದು ಅರಚುತಿದೆ ನೋಡು

ಬೇರು ಸಹಿತ ಕಿತ್ತೆಸೆದರೂ ಕನಸೊಂದು ಬಣ್ಣದ ಅಂಗಿ ತೊಟ್ಟಿದೆ
ಈತನಕ ಬಳಸಿಕೊಂಡಿದ್ದಕ್ಕೆ ಪ್ರತಿಯಾಗಿ ರಸೀದಿ ಕೇಳುತಿದೆ ನೋಡು

ನೋಟದ ನಡುವೆ ಗುಲಾಬಿ ತೋಟದ ವಿಶಾಲ ಬಯಲು
ಅಷ್ಟೂ ಗಿಡಗಳು ಹೂವಿಲ್ಲದೆ ಬಣಗುಡುತ ಹೇಗೆ ಕಾಣುತಿವೆ ನೋಡು!

ತಾಯಂದಿರ ದಿನಕ್ಕೊಂದು ಗಝಲ್

ಜನ್ಮ ನೀಡುವುದು ಅಷ್ಟು ಸುಲಭದ ಮಾತಲ್ಲ
ಅಮ್ಮ ಅನಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ

ನಾಲ್ಕು ಮಂದಿಗಾಗುವಷ್ಟು ಗಂಜಿ ಬೇಯಿಸಿ
ಹತ್ತು ಬಾಯಿಗೆ ಸರಿದೂಗಿಸುವುದು ಅಷ್ಟು ಸುಲಭದ ಮಾತಲ್ಲ

ನಿಂದನೆಗಳ ನುಂಗಿ ಅಳುಕದ ನಿಲುವು ತಾಳಿ
ಬಾಳ ಬಂಡಿಯ ನಡೆಸುವುದು ಅಷ್ಟು ಸುಲಭದ ಮಾತಲ್ಲ

ಅರಸಿ ಬಂದವರ ಕರುಳ ಬಳ್ಳಿಯಂತೆ ಕಾಪಾಡಿ
ಪ್ರೀತಿ ಹಂಚಿ ಹರಸುವುದು ಅಷ್ಟು ಸುಲಭದ ಮಾತಲ್ಲ

ನೋವಲ್ಲಿ ಮಿಂದೆದ್ದು ಮುಳ್ಳನ್ನೇ ತಾ ಹೊದ್ದು
ಎಂದಿನಂತೆ ಮಂದಹಾಸ ಬೀರುವುದು ಅಷ್ಟು ಸುಲಭದ ಮಾತಲ್ಲ

"ನೀವಿಷ್ಟೇ!" "ನಾವಿಷ್ಟು!" ಎಂಬ ಅಸಮಾನತೆಯ ಮಾಪನವ
ಬದುಕಿ ಸುಳ್ಳಾಗಿಸಿ ಬಿಡುವುದು ಅಷ್ಟು ಸುಲಭದ ಮಾತಲ್ಲ

ತಿದ್ದುತ್ತಲೇ ಸವೆದು, ಸವೆಯುತ್ತಲೇ ರೂಪಾಂತರಗೊಂಡು
ಹೊಸ ಬಂಧಗಳ ಬೆಸೆಯುವುದು ಅಷ್ಟು ಸುಲಭದ ಮಾತಲ್ಲ

ಎಲ್ಲ ಅರಿತೂ ಏನೂ ಅರಿಯದ ಮುಗ್ಧಳಂತೆ
ಕೊಟ್ಟ ಬಿರುದುಗಳನ್ನು ತಳ್ಳಿ ಹಾಕುವುದು ಅಷ್ಟು ಸುಲಭದ ಮಾತಲ್ಲ

ಗುಡಿ ಗೋಡೆ-ದ್ವಾರಗಳ ಹಂಗಿಲ್ಲದ ದೇವರು
ಕೈಗೆಟುಕುವ ದೂರಕೆ ದಕ್ಕುವುದು ಅಷ್ಟು ಸುಲಭದ ಮಾತಲ್ಲ 

ನನ್ನದೆಲ್ಲೆ ನಿನ್ನದೇ, ತಂಗಿ ನನ್ನದೆಲ್ಲ ನಿನ್ನದೇ

ನನ್ನದೆಲ್ಲೆ ನಿನ್ನದೇ, ತಂಗಿ ನನ್ನದೆಲ್ಲ ನಿನ್ನದೇ
ನಾನು ನೀನೆಂಬುದಿಲ್ಲ ಇಲ್ಲಿ, ಎಲ್ಲವೂ ನಮ್ಮದೇ

ಹುಸಿ ಕತೆಗಳ ಕಟ್ಟಿ ಹೇಳುತಲಿದ್ದೆ ನಿನಪಿಗೆ ಬಂದಿತಾ?
ಕತೆಗಳೆಷ್ಟು ಚಂದ, ದಿನವೂ ಹೊಸ ರೂಪ ಪಡೆಯುತ

ಜಗಳವಾಡುತ ಮುನಿದು ಮುಂದೆ ಹಾಗೇ ರಾಜಿಗೆ ಸೋತೆವು
ಎಲ್ಲ ಕೋಪವ ಬದಿಗೆ ಇಟ್ಟು ಮತ್ತೆ ಆಡುತ ಕುಳಿತೆವು

ಅಂತರ ಬೆಳೆವುದೆಷ್ಟು ಸುಲಭ, ಇದ್ದೂ ಕೂಡ ಜೊತೆಯಲೇ
ಇಂದು ದೂರವಿರುವೆವಾದರೆ, ದಿನವೂ ನೆನಪಿನ ಋಣದಲೇ

ಏನೇ ಮಾತನು ಹಂಚಿಕೊಂಡರೂ ಉಳಿದ ಮಾತೇ ಭಾರವು
ಒಮ್ಮೆ ಎಲ್ಲವ ಇಳಿಸು ಅಣ್ಣನ ಹೆಗಲು ನಿನ್ನ ಸ್ವಂತವು

ಒಂದು ಮೌನದ ಕಡಲ ತೀರದಿ ನಾನು ನೀನು ಇಬ್ಬರೇ
ಮತ್ತೆ ಮಕ್ಕಳಾಗಿ ಮರಳಿನ ಗೂಡು ಕಟ್ಟುವ ಆದರೆ

ಹುಟ್ಟು ಹಬ್ಬಕೆ ಮಾತ್ರವಲ್ಲ, ನಿತ್ಯ ಖುಷಿ ನಿನ್ನ ಅರಸಲಿ
ಬಯಸಿದೆಲ್ಲವ ನೀಡುವಷ್ಟು ನನ್ನ ಬೊಗಸೆಗೆ ದಕ್ಕಲಿ

ನಿನ್ನ ಕ್ಷೇಮವ ಬಯಸಿ ಬೇಯುವ ಜೀವವೆರಡು ಇಲ್ಲಿದೆ
ನೀ ಏನೂ ಹೆಳದೆ, ನನಗೆ ಎಲ್ಲವೂ ತಿಳಿದಿದೆ!

ಗಝಲ್ (ಅವರಂತಾಗಬೇಕೆಂದು ಕೆಲ ಫೋಟೋಗಳನ್ನು ನೇತು ಹಾಕಿದ್ದೇನೆ)

ಅವರಂತಾಗಬೇಕೆಂದು ಕೆಲ ಫೋಟೋಗಳನ್ನು ನೇತು ಹಾಕಿದ್ದೇನೆ
ಇವರಂತಾಗಬಾರದೆಂದು ಕೆಲ ಫೋಟೋಗಳನ್ನು ನೇತು ಹಾಕಿದ್ದೇನೆ

ತಂಗಾಳಿ ಶೀತಲತೆ ಹೆಚ್ಚಿಸಿ ಎಲ್ಲ ನಡುಗಿ ಸಾಯುವಾಗ
ಹೊಲ ಕಾಯುವ ಬೆರ್ಚಪ್ಪನಿಗೆ ನನ್ನ ಮದುವೆ ಕೋಟು ಹಾಕಿದ್ದೇನೆ

ಇರುವೆಗಳು ನನ್ನ ಮನೆಯ ಉಪ್ಪು ತಿಂದು ಸಕ್ಕರೆ ಕದಿಯುತ್ತಿವೆ
ಹೊಸಕಿ ಹಾಕುವ ಬದಲು ವಿಷದ ಗೀಟು ಹಾಕಿದ್ದೇನೆ

ಮರದ ಟೊಂಗೆಗೆ ಕಾಲು ಕಟ್ಟಿ, ತಲೆ ಕೆಳಗೆ ಮಾಡಿ
ಎಟುಕದಾಸೆಗಳ ಉಸಿರಿಗೆ ಮೆಣಸಿನ ಘಾಟು ಹಾಕಿದ್ದೇನೆ

ಹಠವನ್ನೇ ರೂಢಿ ಮಾಡಿಕೊಂಡು ಕೊಬ್ಬಿದ ಕನ್ನಡಿಗೆ
ಅಚ್ಚು ಉಳಿಯುವ ಹಾಗೆ ನಾಲ್ಕು ಏಟು ಹಾಕಿದ್ದೇನೆ

ಬಾಗಿಲಲ್ಲಿ ಹೆಸರು, ಬಿರುದು, ಶಾಲು-ಸನ್ಮಾನಗಳ
ಸಂಕೇತಗಳನ್ನೆಲ್ಲ ವಿನಮ್ರವಾಗಿ ಕಿತ್ತು ಹಾಕಿದ್ದೇನೆ

ನೆನಪಾಗಿ ಕಾಡುವ ಕ್ಷಣಗಳ, ಗಡಿಯಾರದ ಮುಳ್ಳಿಂದ ಚುಚ್ಚಿ
ಕೊಂದು ಸಂಚಿಗಳಲ್ಲಿ ತುಂಬಿ ಗಂಟು ಹಾಕಿದ್ದೇನೆ

Tuesday, 5 May 2020

ಗಝಲ್ ಟ್ರೈಯಲ್ (ನೆನಪಿನಂಗಳ ಸುತ್ತಿ ಬರುವೆ ಇರುಳೇ ತಾಳು)

ನೆನಪಿನಂಗಳ ಸುತ್ತಿ ಬರುವೆ ಇರುಳೇ ತಾಳು
ತುಂಬು ಬೆಳದಿಂಗಳಲಿ ಮಿಂದ ಮರುಳೇ ತಾಳು

ಇನ್ನೂ ಬರೆಯದೆ ಬಾಕಿ ಉಳಿದ ಪುಟಗಳೆಷ್ಟೋ 
ಆಗಲೇ ದಣಿವೆಂದು ಕುಣಿವ ಬೆರಳೇ ತಾಳು

ಭಾರವಾಗಿದೆ ಭುವಿಯ ಒಡಲು ದುಃಖವ ಹೊತ್ತು
ಕರಗಲೀಗ ಸಮಯವಲ್ಲ ಮುಗಿಲೇ ತಾಳು

ಸುಪ್ತವಾಗಿಹ ಸತ್ಯ ಸುಳ್ಳಿನುಡುಗೆಯ ಬಿಚ್ಚಿ
ನಿನ್ನನನುಸರಿಸುವಂತಿದೆ ಬೆತ್ತಲೇ ತಾಳು

ಎಲ್ಲ ಗೀಚಿ ಕೊನೆಗೆ ಹೆಸರಷ್ಟೇ ಉಳಿದಿದೆ
ಒಮ್ಮೆಗೆಲ್ಲವ ನುಂಗಲಾಯ್ತು ಕಡಲೇ ತಾಳು

ಈಗಷ್ಟೇ ಮರು ಪಯಣ ಬೆಳೆಸೋ ಮನಸಾಗಿದೆ
ಮುನ್ನ ನಿನ್ನ ದಾಟಿ ಬಿಡುವೆ ಹೊಸಲೇ ತಾಳು

ಗಝಲ್ ಟ್ರೈಯಲ್ (ಒಂದೂ ಪ್ರಶ್ನೆ ಕೇಳದೆ ಅರ್ಥ ಮಾಡಿಕೋ ನನ್ನ)

ಒಂದೂ ಪ್ರಶ್ನೆ ಕೇಳದೆ ಅರ್ಥ ಮಾಡಿಕೋ ನನ್ನ
ಖಾಲಿಯಾಗುವೆ ಮೆಲ್ಲ ಬಂದು ತುಂಬಿಕೋ ನನ್ನ

ಆದ ಗಾಯಕೆ ಒಂದು ಹೆಸರಿಡುವ ಆಸೆಯಿದೆ
ಗೀರಿ ಹೋಗುವ ನೆಪದಿ ತೆರೆದು ಓದಿಕೋ ನನ್ನ

ಹಿತ್ತಲ ಗಿಡವಾದರೂ, ಅದಕೂ ಆಸರೆ ಬೇಕು
ಜೊತೆಗಿರಲು ಸಾಲದು, ಸುರುಳಿ ಹಬ್ಬಿಕೋ ನನ್ನ

ದನದ ಕೊಟ್ಟಿಗೆ ಗೋಡೆಗಂಟಿದ ಬೆರಣಿಯದು
ಉಳಿಸಿ ಬಿಟ್ಟ ನಕ್ಷೆಯಂತೆ ಉಳಿಸಿಕೋ ನನ್ನ

ಶುದ್ಧ ಹಾಲಿನ ಗುಣದ ನಿನ್ನ ಮನದಲಿ ಕೊಂಚ
ಕಾಫಿ ಪಾಕದ ರೀತಿ ಸೋಸಿ ಬೆರೆಸಿಕೋ ನನ್ನ

ಕೋಮಲ ಮೈದಡವಿ ಕ್ರಮೇಣ ಮೃದುಗೊಳ್ಳುವೆ
ಒರಟುತನ ಮರೆಯಾಗುವನಕ ಸಹಿಸಿಕೋ ನನ್ನ

ಬಾಳ ನೌಕೆ ಸಾಗುವುದು ನಾವೆಣಿಸಿದಂತಲ್ಲ
ನಿಂತ ನೆಲ ಕುಸಿಬಹುದು ಗಟ್ಟಿ ಹಿಡಿದುಕೋ ನನ್ನ..

ಗಝಲ್ ಟ್ರೈಯಲ್ (ಆಗಬಹುದು ಒಮ್ಮೊಮ್ಮೆ ಕಲ್ಲಿನ ಮೇಲೂ ಪ್ರೀತಿ)

ಆಗಬಹುದು ಒಮ್ಮೊಮ್ಮೆ ಕಲ್ಲಿನ ಮೇಲೂ ಪ್ರೀತಿ
ಕಲ್ಲು ಹೃದಯಗಳ ನಡುವೆ ಪುಟಿದ ಚಿಗುರು ಪ್ರೀತಿ!

ನಿಲ್ಲದೆ ಒಂದರ ಹಿಂದೊಂದಂತೆ ಮೂಡುವುದು ಅಲೆಯು
ಇನ್ನೆಷ್ಟು ನಿರೂಪಿಸಬೇಕೋ ಕಾಣೆ, ಅವು ಕಿನಾರೆಯೆಡೆ ಪ್ರೀತಿ!

ಹೂವಿಲ್ಲದೆ ಬರಿದಾಗಿದೆ ಬಳ್ಳಿ, ಕಿತ್ತವರು ನಿರ್ಭಾವುಕರೇ ಸರಿ
ಕದ್ದ ಹೂಗಳ ಘಮಲು ಸತ್ತ ಹೆಣಗಳಿಗೂ ಪ್ರೀತಿ

ಬಿಟ್ಟು ಹೊರಟಿಹ ದಾರಿ ಎಲ್ಲೂ ಕೆಟ್ಟು ನಿಲ್ಲದು ಏಕೆ?
ನೆಟ್ಟ ಮೈಲಿಗಲ್ಲುಗಳಿಗೆ ಸಿಕ್ಕ ಏಕಾಂತವೇ ಪ್ರೀತಿ

ದೀಪ ಪ್ರಕಾಶಿಸಲು ಎಷ್ಟಾದರಷ್ಟು ಕತ್ತಲು ಪ್ರಹರಿಸಬೇಕು
ಬೆಳಕು ಕತ್ತಲ ಜಿದ್ದಾಜಿದ್ದಿಗೆ ಹುಟ್ಟುವುದೆಲ್ಲವೂ ಪ್ರೀತಿ..

ಗಝಲ್ ಟ್ರೈಯಲ್ (ಎಲ್ಲೆ ಮೀರುವ ಪುಳಕ ನೀ ಎದುರು ಬಂದರೆ)

ಎಲ್ಲೆ ಮೀರುವ ಪುಳಕ ನೀ ಎದುರು ಬಂದರೆ
ಮಲ್ಲೆ ಮಾಲೆಯೊಡನೆ ಕಾಯುವೆ ನೀ ಮರಳಿ ಬಂದರೆ

ಕತ್ತಲು ಮೂಡುವವರೆಗೆ ಕಾಯಲಾರೆ ಮಗ್ನನಾಗಲು
ಇದ್ದಲ್ಲಿಯೇ ನಿರತನಾಗುವೆ ಕಾಡುವ ಕನಸೊಂದು ಬಂದರೆ

ಮರಳ ಗೂಡನ್ನು ಕಟ್ಟುವೆನು ಕೈಯ್ಯಾರೆ ಕೆಡವುತ್ತಲೇ
ಅರಮನೆಯೊಂದ ಕಟ್ಟಲೂ ಬಹುದು ಕರೆಯೊಂದು ಬಂದರೆ

ದುಗುಡಕ್ಕೂ ದುಪ್ಪಟ್ಟು ಖುಷಿ ಮಾರುವ ಸಂತೆಯಲಿ
ಹರಿಬಿಡುವೆ ತಡೆಯದಂತೆ ಕಣ್ತುಂಬಿ ಬಂದರೆ 

ಮರಣವದು ಎಲ್ಲೋ ಅಡಗಿಹುದು ಹೇಡಿಯಂತೆ
ಬದುಕಿ ಬಿಡುವೆ ಈ ಮಧ್ಯೆ ಬದುಕು ಎದುರು ಬಂದರೆ..

ಗಡಿಗೆಯಲಿ ಕಡೆದ ಬೆಣ್ಣೆ ಮುದ್ದೆಯೊಂದು

ಗಡಿಗೆಯಲಿ ಕಡೆದ ಬೆಣ್ಣೆ ಮುದ್ದೆಯೊಂದು
ಹುಣ್ಣಿಮೆ ಚಂದಿರನ ಚೆಲುವಿನಲ್ಲಿ ಮಿಂದು
ಅಂಗೈಯ್ಯ ಸೇರಿದಂತೆ ಮುದ್ದಾಗಿ ನಗುವಾಗ
ಕರಗೋ ಮನಸು ಕಣ್ಣ ತುಂಬಿ ಬಂದು ಹರಿವಾಗ
ಹಾಡುವೆನು ಎದೆಗಪ್ಪಿ, ಮುದ್ದಾದ ಕಂದನ (೨)
ಹೂವಂತೆ ನಗುವಾಗ, ಮನೆಯೇ ಬೃಂದಾವನ 

ಗಡಿಗೆಯಲಿ ಕಡಿದ ಬೆಣ್ಣೆ ಮುದ್ದೆಯೊಂದು
ಹುಣ್ಣಿಮೆ ಚಂದಿರನ ಚೆಲುವಿನಲ್ಲಿ ಮಿಂದು...

ಕಗ್ಗತ್ತಲ ಬಾಳಿಗೆ ಕಿರಣವೊಂದು ಸುಳಿದಾಗ 
ಸುತ್ತಲೂ ಬೆಳಕ ಹಬ್ಬ ಮಬ್ಬು ಕಳೆಯಲು
ಒಂದಂಗುಲ ಅಂತರ ದೂರವೆಂದು ಅಳುವಾಗ
ಬೇರಾವ ನೆಪವು ಬೇಕು ನಾವು ಬೆರೆಯಲು
ಮನೆಯೇ ಮೊದಲ ಶಾಲೆ, ಅಮ್ಮ ನಿನ್ನ ಮೊದಲ ಗುರು (೨)
ಪದವಿ ಗಳಿಸಿಕೊಂಡ, ಮನೆಯವರೇ ಧನ್ಯರು

ಗಡಿಗೆಯಲಿ ಕಡಿದ ಬೆಣ್ಣೆ ಮುದ್ದೆಯೊಂದು
ಹುಣ್ಣಿಮೆ ಚಂದಿರನ ಚೆಲುವಿನಲ್ಲಿ ಮಿಂದು...


ಕಲ್ಲನ್ನು ಮಾತಿಗೆಳೆದು ತರುವ ನಿನ್ನ ಚಾತುರ್ಯ
ಒದಗಲೇ ಬೇಕು ಎಲ್ಲ ನಿನ್ನ ಸ್ನೇಹಕೆ 
ನಿದ್ದೆಯಲಿ ಮೀರಬಲ್ಲರಾರು ನಿನ್ನ ಗಾಂಭೀರ್ಯ
ಗೋಳಾಡಿ ಇಟ್ಟೆ ಮುರಿಯೇ ಸಣ್ಣ ಆಟಿಕೆ
ಹಸಿವನು ಮರೆಸಲಾರೆ ಅರೆ ಕ್ಷಣವೂ ತಾಳದೆ 
ಕೊನೆಯ ತುತ್ತಿಡುವಂತೆ ತೂಕಡಿಸಿ ವಾಲಿದೆ .. 

ಗಡಿಗೆಯಲಿ ಕಡಿದ ಬೆಣ್ಣೆ ಮುದ್ದೆಯೊಂದು
ಹುಣ್ಣಿಮೆ ಚಂದಿರನ ಚೆಲುವಿನಲ್ಲಿ ಮಿಂದು...

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...