Tuesday, 5 May 2020

ಗಝಲ್ ಟ್ರೈಯಲ್ (ಒಂದೂ ಪ್ರಶ್ನೆ ಕೇಳದೆ ಅರ್ಥ ಮಾಡಿಕೋ ನನ್ನ)

ಒಂದೂ ಪ್ರಶ್ನೆ ಕೇಳದೆ ಅರ್ಥ ಮಾಡಿಕೋ ನನ್ನ
ಖಾಲಿಯಾಗುವೆ ಮೆಲ್ಲ ಬಂದು ತುಂಬಿಕೋ ನನ್ನ

ಆದ ಗಾಯಕೆ ಒಂದು ಹೆಸರಿಡುವ ಆಸೆಯಿದೆ
ಗೀರಿ ಹೋಗುವ ನೆಪದಿ ತೆರೆದು ಓದಿಕೋ ನನ್ನ

ಹಿತ್ತಲ ಗಿಡವಾದರೂ, ಅದಕೂ ಆಸರೆ ಬೇಕು
ಜೊತೆಗಿರಲು ಸಾಲದು, ಸುರುಳಿ ಹಬ್ಬಿಕೋ ನನ್ನ

ದನದ ಕೊಟ್ಟಿಗೆ ಗೋಡೆಗಂಟಿದ ಬೆರಣಿಯದು
ಉಳಿಸಿ ಬಿಟ್ಟ ನಕ್ಷೆಯಂತೆ ಉಳಿಸಿಕೋ ನನ್ನ

ಶುದ್ಧ ಹಾಲಿನ ಗುಣದ ನಿನ್ನ ಮನದಲಿ ಕೊಂಚ
ಕಾಫಿ ಪಾಕದ ರೀತಿ ಸೋಸಿ ಬೆರೆಸಿಕೋ ನನ್ನ

ಕೋಮಲ ಮೈದಡವಿ ಕ್ರಮೇಣ ಮೃದುಗೊಳ್ಳುವೆ
ಒರಟುತನ ಮರೆಯಾಗುವನಕ ಸಹಿಸಿಕೋ ನನ್ನ

ಬಾಳ ನೌಕೆ ಸಾಗುವುದು ನಾವೆಣಿಸಿದಂತಲ್ಲ
ನಿಂತ ನೆಲ ಕುಸಿಬಹುದು ಗಟ್ಟಿ ಹಿಡಿದುಕೋ ನನ್ನ..

No comments:

Post a Comment

ಬರುವೆ ನಿನಗಾಗಿ

ಬರುವೆ ನಿನಗಾಗಿ  ಇರುವೆ ಜೊತೆಯಾಗಿ  ಪ್ರತಿ ಗಳಿಗೆ ಬೇಕಿದೆ ನಿನ್ನಾಸರೇ  ನೀನದೇ ಈ ಹಾಡು  ಹಿಡಿದು ಹೊಸ ಜಾಡು  ನಾ ಹಾಡುವೆನು ಕೂಡಿ ಬಾ ನೀ ಆದರೆ  ಬೆರೆತ ಮನದಲ್ಲಿ  ಪುಟಿ...