Wednesday, 12 May 2021

ತಿರುಗಿ ನೋಡು ನೀ ಒಮ್ಮೆಗೆ

ತಿರುಗಿ ನೋಡು ನೀ ಒಮ್ಮೆಗೆ 

ನರಳಿ ಸೋತಿರೋ  ಈ ಜೀವವ 
ತಿರುಗಿ ನೋಡು ನೀ ಒಮ್ಮೆಗೆ 
ನರಳಿ ಸೋತಿರೋ  ಈ ಜೀವವ 
ಅಳಿದು ಉಳಿದ ಈ ಬಾಳಿಗೆ 
ನೀ ಬಳಿದು ಹೊರಟೆ ಹುಸಿ ಬಣ್ಣವ 
ಸಾರಿ ಸಾರಿ ನಾ ಕೂಗಿದರೂ 
ದೂರವಾಗುತಾ ಸಾಗಿರುವೆ 
ಯಾವ ದಾರಿಯ ಹುಡುಕುತಲಿ 
ಮನ ನಿನ್ನೇ ನೀನು ಮರೆತುರುವೆ... 

ತೀರಾ ಸರಳ ಅನಿಸಿದರೂ 
ಆಳ ಬಹಳ ಈ ಪ್ರೀತಿ 
ನೇರಾ ನೇರಾ ನಿಲ್ಲಿಸದೇ  
ಆಟ ಆಡಿಸುವ ರೀತಿ 
ಮುಂಗಡ ನಗುವ ನೀಡುತ್ತಲೇ 
ಈ ನೋವಿನ ಪಾಳಿ ನನದಾಗಿದೆ 
ಇನ್ನೂ ಹೇಳಲು ಮಾತಿರದೆ 
ಉಸಿರೇ ನಿಟ್ಟುಸಿರಿಟ್ಟಾಗಿದೆ... 

ತಿರುಗಿ ನೋಡು ನೀ ಒಮ್ಮೆಗೆ 
ನರಳಿ ಸೋತಿರೋ ಈ ಜೀವವ

ಬೊಗಸೆ ತುಂಬ ಹೂವಿರಿಸಿ 
ಮರೆಸಿ ಇಟ್ಟೆ ಮುಳ್ಳುಗಳ 
ನಲ್ಮೆಯ ನೆಪವ ಹೆಣೆಯುತಲಿ 
ಉಳಿಸಿ ಹೋದೆ ನೆನಪುಗಳ 
ಪೀತಿಯ ತೊರೆಯೋ ದುಃಸ್ಸಾಹಸ 
ಹೃದಯಕೆ ಘಾಸಿ ಗೊತ್ತಿಲ್ಲವೇ 
ನಿಂತ ತಾಣವೇ ಕಂಪಿಸಿದೆ 
ಇನ್ನೂ ಮನಸು ಕರಗಿಲ್ಲವೇ ?

ತಿರುಗಿ ನೋಡು ನೀ ಒಮ್ಮೆಗೆ 
ನರಳಿ ಸೋತಿರೋ  ಈ ಜೀವವ 
ಅಳಿದು ಉಳಿದ ಈ ಬಾಳಿಗೆ 
ನೀ ಬಳಿದು ಹೊರಟೆ ಹುಸಿ ಬಣ್ಣವ 
ಸಾರಿ ಸಾರಿ ನಾ ಕೂಗಿದರೂ 
ದೂರವಾಗುತಾ ಸಾಗಿರುವೆ 
ಯಾವ ದಾರಿಯ ಹುಡುಕುತಲಿ 
ಮನ ನಿನ್ನೇ ನೀನು ಮರೆತುರುವೆ... 

ಕಾದು ತಡವಾಯಿತು ಈಗ

ಕಾದು ತಡವಾಯಿತು ಈಗ

ಓದು ಕರೆಯೋಲೆಯ ಬೇಗ
ನೀ ಮಿಡಿದ ತಾಳಕೆ ನಾನು ಮಿಡಿವ ಆಸೆ
ರಾಗ ರೂಪಾಂತರವಾಗಿ
ನಾದ ನಾನಾಥರವಾಗಿ
ಈ ಮನವ ದಾಟಿ ಬಂತು ನಿನ್ನಾವರಿಸೇ 
ಮೆಲ್ಲ ಮೆಲ್ಲ ಹಾಗೆ, ಮೆಲ್ಲ ಮೆಲ್ಲ ಹಾಗೆ
ಬರಲೇ ಬಳಿಗೆ
ಕಳ್ಳ ನಗೆಯನ್ನು, ಕಳ್ಳ ನಗೆಯನ್ನು
ತರಲೇ ಜೊತೆಗೆ
ಮೆಲ್ಲ ಮೆಲ್ಲ ಹಾಗೆ, ಮೆಲ್ಲ ಮೆಲ್ಲ ಹಾಗೆ
ಬರಲೇ ಬಳಿಗೆ

ಕಾದು ತಡವಾಯಿತು ಈಗ
ಓದು ಕರೆಯೋಲೆಯ ಬೇಗ
ನೀ ಮಿಡಿದ ತಾಳಕೆ ನಾನು ಮಿಡಿವ ಆಸೆ


ಆಕಾಶ ಬುಟ್ಟಿಯಲ್ಲಿ‌ ಬೆಳಗೋ‌ ಆ ಮೇಣವು ನಾನು
ಇರುಳಲ್ಲೇ ಹೊಳೆಯೋ ಅನುರಾಗಿ
ಆಧಾರ ಏನೂ ಇಲ್ಲ ಈ ಪ್ರೀತಿ ಆಗೋ ವೇಳೆ
ಮುತ್ತನ್ನು ಕಳುಹಿಸು‌ ನನಗಾಗಿ
ಈ ಗಡಿಬಿಡಿಯಲ್ಲೂ ತಾನು
ಹನಿ ಹನಿ ಗೂಡಿದ ಸಿಹಿ ಜೇನು
ಈ ತಳಮಳವು ಒಳಗೊಳಗೇ ಪುಟಿಯುತಿದೆ..

ಸಿಂಗಾರ ಮಾಡಿಕೊಂಡು ಬಂದಂತೆ ಮೋಡ ಒಂದು
ಕರಗೀತೇ ನನ್ನ ಬನದಲ್ಲಿ?
ಮಂದಾರವನ್ನು ಸೋಕಿ ಬೀಡು ಬಿಟ್ಟಂತೆ‌ ಬಿಂದು 
ಹೊಳೆದಂತೆ ಗರಿಯ ಅಂಚಲ್ಲಿ
ಈ ರಸಿಕತೆಯೆಂದೂ ಹೀಗೇ
ರಸಭರಿತ ಕತೆಯ ಹಾಗೆ 
ಸಾವರಿಸುವುದು ದಣಿಯುತಲೇ ಒಲವ ಮಳೆ...

ಮನದಲಿ ಆರದ ಗಾಯವ ಮಾಡಿ ಹೋಗು

ಮನದಲಿ ಆರದ ಗಾಯವ ಮಾಡಿ ಹೋಗು ಈಗಲೇ 

ಮುಲಾಜೇ ಇಲ್ಲದೆ 
ನೀನೆಂದರೆ ಮೂಡುವ ನೂರು ಭಾವದ ಅಲೆ 
ಅದಾಗೇ ಸಾಗಿದೆ 
ಹಾಯಾದ ಸವಾರಿಗೆ 
ಸಾತಿ ನೀನಾದೆ ವಿನೋದ ಕಾರಣ   
ಒಂದೊಂದೇ ವಿಚಾರ ಹೇಳುವೆ 
ಮಾತಾಡದೆ ನೀ ಹಿಂಬಾಲಿಸು 

ತಂಗಾಳಿ ನೀ  ಬರಬೇಡ  .. ಓ 
ತಂಗಾಳಿ ನೀ  ಬರಬೇಡ 
ನಾನೇ ಇರುವೆ ಜೊತೆಗೆ 

ಕಣ್ಣಲ್ಲಿ ನಿಂತೆ ನೀನು 
ಅದು ಏನೇನೋ ಸೂಚನೆ ಕೊಟ್ಟು ಹೋದೆ  
ಗುಟ್ಟಾಗಿ ಗೀಚಿಕೊಂಡೆ  
ಅದ ಹೇಗೆಂದು ಓದಲಿ ನಿನ್ನ ಮುಂದೆ 
ಮರೆ ಆದಾಕ್ಷಣ ಕಣ್ಣೀರಿಗೂ 
ಜಾರುವ ಹಂಬಲ ಹೆಚ್ಚಾಗಿದೆ 
ಅರೆಗನಸಲ್ಲಿಯೂ ನಿನೊಂದಿಗೇ 
ಇರಬೇಕು ಎಂಬ ಇಚ್ಛೆಯಿದೆ.. ಒಲವೇ... 

ಸಂಗಾತಿ ಆರಂಭಿಸು 
ಈ ಮಂಜನು ಕರಗಿಸೋ ಹಾಡೊಂದನು 
ಬಾಯಾರಿ ನಿಂತಂತಿದೆ 
ನೀ ಸೋಕುತ ಮೋಹಿಸು ಈ ಹೂವನು 
ಹೊಸ ಅಧ್ಯಾಯವು ಶುರುವಾಗಿದೆ  
ಸಾಗಿದೆ ಪ್ರೇಮದ ಕಾದಂಬರಿ 
ಕಿಸೆ ತುಂಬುತ್ತಿದೆ ಉಲ್ಲಾಸವು 
ಪ್ರೀತಿಯ ಅಂಕವು ಹೆಚ್ಚುವರಿ.. ಒಲವೇ.. 

ಹೃದಯವು ನಿನ್ನೇ ಕೋರುತಿದೆ

 ಹ್ಮ್ಮ್ ಹ್ಮ್ಮ್ 

ಹೃದಯವು ನಿನ್ನೇ ಕೋರುತಿದೆ  
ಹೃದಯವು ನಿನ್ನೇ ಕೋರುತಿದೆ 
ಸಮೀಪಿಸಿ ನಿಭಾಯಿಸು
ಕಾದು ಸೋತಿರುವೆ

ಇದೇನಾಗಿದೆ ಹೊಸ ತಲ್ಲಣ  
ಸವಿ ಸಂಕಟ ವಿನಾಕಾರಣ 
ಇದೇನಾಗಿದೆ ಹೊಸ ತಲ್ಲಣ  
ಸವಿ ಸಂಕಟ ವಿನಾಕಾರಣ 
ಭಾರವಾದ ಪ್ರೀತಿ ನನ್ನಲ್ಲಿದೆ 
ಚೂರಾದರೂ ಹಂಚುವ ಹಂಬಲ ನೀ  
ಒಮ್ಮೆ ಸಿಗಬಾರದೇ  

ಹೃದಯವು ನಿನ್ನೇ ಕೋರುತಿದೆ  
ಹೃದಯವು ನಿನ್ನೇ ಕೋರುತಿದೆ 
ಸಮೀಪಿಸಿ ನಿಭಾಯಿಸು
ಕಾದು ಸೋತಿರುವೆ

ಹ್ಮ್ಮ್ ಹ್ಮ್ಮ್ 

ಸುಖಾ ಸುಮ್ಮನೆ ನಗು ಮೂಡಿದೆ 
ಕದ ಹಾಕದೆ ಮನ ನಿಂತಿದೆ 
ಸುಖಾ ಸುಮ್ಮನೆ ನಗು ಮೂಡಿದೆ 
ಕದ ಹಾಕದೆ ಮನ ನಿಂತಿದೆ 
ನೀಳವಾದ ಕವಿತೆ ನಿನಗಾಗಿಯೇ 
ಹೇಗಾದರೂ ಓದು ಬಾ ನನ್ನನು ನೀ 
ಇನ್ನು ತಡ ಮಾಡದೆ.. 

ಹೃದಯವು ನಿನ್ನ ಬೇಡುತಿದೆ 
ಹೃದಯವು ನಿನ್ನ ಬೇಡುತಿದೆ 
ಸಮೀಪಿಸಿ‌ ನಿಭಾಯಿಸು
ಕಾದು ಸೋತಿರುವೆ

ಒಲವೇ, ನನ್ನೊಲವೆ

ಒಲವೇ, ಒಲವೇ  

ನನ್ನೊಲವೆ, ನನ್ನೊಲವೆ

ಏನೋ ಅನುಮಾನ ನನ್ನ ಮೇಲೆ
ನನಗೀಗ ಮೂಡಿದೆ
ಒಲವನ್ನು ಬಿಡಿಸಿ ಹೇಳು 
ಅತಿಯಾಗಿ  ಕಾಡದೆ 
ಮಿಗಿಲಾದೆ ಏಕೆ ಹೀಗೆ 
ಸುಳಿವನ್ನೂ ನೀಡದೆ 

ಒಲವೇ ನನ್ನೊಲವೆ
ನಿನ್ನಲ್ಲೇ‌ ಪ್ರಾಣ ಇಟ್ಟೆ ಆಗಲೇ  .. ಆಗಲೇ.. 
ಎದುರು ಬಂದಾಗ
ಮಂಜಂತೆ ‌ಸೋತು ಕರಗಿ ಹೋಗಲೇ.. ಹೋಗಲೇ.. 

ನದಿಯೊಂದು ಕಡಲ ಸೇರಿ 
ಕುಣಿದಂತೆ ಆಸೆಗೆ 
ಅಲೆಯೊಂದು ಮೂಡಿ ಬಂದು 
ದಡವನ್ನು ಸೇರಿದೆ 
ಮುಗಿಲೆ ಬೆಳ್ಮುಗಿಲೇ 
ಮಳೆಯನ್ನು ಹೊತ್ತು ಎಲ್ಲಿ ಸಾಗುವೆ, ಸಾಗುವೆ... 


ಇನ್ನಷ್ಟು ಹಾಳೆ ಹರಿದು  
ಶೃಂಗಾರ ಕಾವ್ಯ ಬರೆದು  
ಮುಕ್ತಾಯವನ್ನು ನೀ ನೀಡು 
ಓದಬೇಕು ನಾನು 
ಕದಿಯಲು ಬರುವೆನು ಮೆಲ್ಲಗೆ 
ಪರಿಚಯವಿಡು ತಲೆ ದಿಂಬಿಗೆ 
ನಿದಿರೆಯ ಬೇಡಿ ತೂಕಡಿಸು
ಕನವರಿಕೆಗಳ ಪರಿಗಣಿಸು

ಓ.. ಇನ್ನೆಲ್ಲಿ ಎಚ್ಚರ ಆವರಿಸಿದಾಗ 
ಕಣ್ಣಲ್ಲೇ ಉತ್ತರ ಬಾ ನೀಡು ಬೇಗ.. 

ತಾಮಸ ನೆಲದಲ್ಲಿ

ತಾಮಸ ನೆಲದಲ್ಲಿ 
ದೀಪವ ಹಚ್ಚಿದವ 
ನೀರಸ ಬದುಕಲ್ಲಿ 
ಬೆಳಕನು ಚೆಲ್ಲಿದವ 
ಮೂಡುವ ನಗುವನ್ನು 
ಬಾಡದೇ ಕಾಯುವವ 
ಕಣ್ಣನು ತೆರೆಸುತಲೇ 
ಮನಸನು ಮುಟ್ಟಿದವ 

ಕರುಣೆಯ ಅಕ್ಷರದಿ  
ಹಣೆಯನು ಒತ್ತುತಲಿ 
ಹಸ್ತವ ಚಾಚುತಲಿ 
ಭಾಷೆಯ ನೀಡಿದವ 
ಆಧರಿಸುತಲೇ 
ಕಾಯೋ ಸೈನ್ಯ ನೀನು 
ನಿನ್ನನ್ನು ಹೋಲೋ ಬೇರೆ ಜೀವ ಇರದಯ್ಯಾ
ಜೈ ಜೈಕಾರ, ಜೈ ಜೈಕಾರ
ಕಾಯೋ ನಮ್ಮ ಓ ಸರದಾರ 
ಜೈ ಜೈಕಾರ, ಜೈ ಜೈಕಾರ
ಕಾಯೋ ನಮ್ಮ ಓ ಸರದಾರ 

ತಲೆ ಮಾರಿನ ಆಚರಣೆಗಳ ಲೋಪ ದೋಷವ ತಿದ್ದುತಲಿ 
ಈ ವೇಳೆಯ ನಾಳೆಗೆ ಮಾದರಿ ಮಾಡಲು ಹೊರಟಿರುವ 
ಸರಿ ದಾರಿ ತೋರುತ ತಾನೂ ಹೆಜ್ಜೆಗೆ ಹೆಜ್ಜೆಯ ಹಾಕುತಲಿ 
ಈಗಾಗಲೇ ಮುಟ್ಟಿದ ಗುರಿಯನು ನಮಗೂ ಮುಟ್ಟಿಸುವ 
ಉರಿ ಬೇಗೆಯ ನೀಗುವ ಸೋನೆ 
ನೀನಿದ್ದೆಡೆ ಹಬ್ಬವೇ ತಾನೆ?
ಆ ಸೂರ್ಯ ನೀನೇ, ಚಂದ್ರ ನೀನೇ, ಲೋಕ ನೀನೇ 
ಒಂಟಿ ಸಲಗ ನೀನೈಯ್ಯಾ 
ಜೈ ಜೈಕಾರ, ಜೈ ಜೈಕಾರ
ಕಾಯೋ ನಮ್ಮ ಓ ಸರದಾರ 
ಜೈ ಜೈಕಾರ, ಜೈ ಜೈಕಾರ
ಕಾಯೋ ನಮ್ಮ ಓ ಸರದಾರ 

ಮೋದಿಯ ಭಕ್ತರೇ ಕೊನೆಯಲಿ ನುಡಿಯುವೆ

ಮೋದಿಯ ಭಕ್ತರೇ ಕೊನೆಯಲಿ ನುಡಿಯುವೆ 

ಕೇಳಿಬಿಡಿ ತಲೆ ಬಾಗಿ 
ಇನ್ನೂ ಸಮರ್ಥನೆ ನೀಡುತ ಹೋದರೆ 
ಬೀಳುವುದು ಸರಿಯಾಗಿ 
ಈ ಕಮಲದ ಗುರುತನ್ನು ಅಪ್ಪಿದ ಭರದಲ್ಲೆ
ಕಾಲಡಿಯಲಿ ಹೊಸಕಿದರೆ ತಪ್ಪೇನಿದೆ?

ಆಶ್ವಾಸನೆ ಸುಳ್ಳಾಗಿದೆ  
ವೈರಾಣು ಲೋಕವನ್ನೇ ಆಳುತ್ತಿದೆ 
ವಿರೋಧ ಪಕ್ಷಕೀಗ ರಾಜಕೀಯ 
ಪ್ರಮಾದದಲ್ಲಿ ಜನರ ಜೀವ ಮಾಯಾ 
ಈ ಮುಗಿಯದ ಅಲೆಯಲ್ಲಿ ಸಿಲುಕದೆ ಪಾರಾಗಿ 
ಬದುಕುಳಿಯುವ ಸಾಹಸವೇ ಸಾಕಾಗಿದೆ?

ಜನ ಸಾಮಾನ್ಯರೇ ಮನೆಯಲೇ ಉಳಿಯಿರಿ 
ಅಂಬಲಿಯ ಕುಡುಕೊಂಡು 
ಓಟನು ಕೇಳಲು ಬಂದೇ ಬರುವರು 
ಬಾರಿಸಿರಿ ಹಿಡುಕೊಂಡು 
ಕೆಸರೆರಚುವ ನಾಯಕರೇ ನಾಚಿಕೆ ನಿಮಗಿಲ್ಲ 
ನರರಾಕ್ಷಸರ ಗುಣವು ನಿಮ್ಮಲ್ಲಿದೆ?

ಮಕರಂದದಿ ಮಿಂದೆದ್ದ ದುಂಬಿಯದು

ಮಕರಂದದಿ ಮಿಂದೆದ್ದ ದುಂಬಿಯದು

ಥೇಟು ನನ್ನದೇ ಪಾಡು
ಮಿತಿ ಮೀರಿದ ಅಮಲಿನಲಿ ಗುನುಗುತಿದೆ
ಮನಮೋಹಕ ಹಾಡು
ಅನುರಾಗದ ಈ ಅಭಿಲಾಷೆಯು ನೀನೇ
ಎಂಬುದು ನನ್ನ ವಾದ
ಅನುಕೂಲಕೆ ಪ್ರೀತಿಯ ಮಾಡುವುದಲ್ಲ
ಆಲಿಸು ಹೃದಯದ ನಾದ

ತರಬೇತಿ ಬೇಕಿದೆ ತೊದಲಾಡೋ ಮನಸಿಗೆ 
ಅನುಭೂತಿ ಹೊಸತಾಗಿರಲು ಈ ಬಾಳಿಗೆ 
ಹಾರಾಟ ಸಂತಸ, ಮುಟ್ಟೋಣ ಆಗಸ 
ಒಲವೆಂದೂ ಹಬ್ಬಕೆ ಸುಟ್ಟ ಸಿಹಿಯ ಹೋಳಿಗೆ 

ನಗುತಲೇ‌ ಇನ್ನೂ ಉಳಿದಿರುವೆ

ನಗುತಲೇ‌ ಇನ್ನೂ ಉಳಿದಿರುವೆ (೨)

ಈ ನಗುವಿಗೆ ನೀ‌ ಕೊಡಲು ಕಾರಣವ
ಅರಳಲೇ ಹಾಗೇ ನಿನ್ನ ಕಣ್ಣಲ್ಲಿ?
ಆ ಕನಸಲ್ಲಿ  ತುಂಬುತಲಿ ಕೌತುಕವ
ಇದ‌ ಸರಿಯಾಗಿ ಹೇಳಲು ಬರುತಿಲ್ಲ
ತುಟಿ ಮರೆಯಲ್ಲೇ ಅಡಗಿವೆ ಮಾತೆಲ್ಲ
ಉಯ್ಯಾಲೆಯಂತೆ ಆಚೆ ಈಚೆ 
ತೂಗುವೆನು, ತೂಗುವೆನು
ಮೋಡ ಕೂಡ ನನ್ನ ರೂಪ ತಾಳುತಿದೆ 
ಹೂವೆಲ್ಲ ಮೆಲ್ಲ ಮನಸ ನೀಡಿ
ಹೇಳುವೆನು, ಹೇಳುವೆನು
ನನ್ನ ಮೌನ ನಿಮ್ಮ ಹಾಗೆ ಸೋತು ನಿಂತಿದೆ

ಸಿಕ್ಕು ಸಿಕ್ಕಾಗುತಿದೆ ಎಲ್ಲ ಒಗಟಾಗುತಿದೆ
ಒಮ್ಮೆ ಎದುರಾಗಲು ನೀ ನನ್ನ ಎದೆ ಉಕ್ಕುತಿದೆ
ಚಿಕ್ಕ ಪುಟ್ಟಾಸೆಗಳು ಬೆಟ್ಟ ಬಯಲಾಗುತಿವೆ
ಇನ್ನೂ ಹತ್ತಿರವಾಗಿ ಸತ್ತರೂ ಹಾಯ್ ಅನಿಸುತಿದೆ

ಏನೂ ತಲೆಗತ್ತದೆಲೆ ಈ ಭೂಮಿ ಸುತ್ತದೆಲೆ
ಕಾಲ‌ ನಿಂತ ಕಡೆಯೇ ನಿಂತು ತೂಕಡಿಸುತಿದೆ
ಸದ್ದು ಮಾಡದೆ ಗಾಯ,‌ ಕದ್ದು ಆಗಿಸು ಮಾಯ
ನೋವು ನಿನ್ನನು ಕಂಡು ದಂಗಾಗಿ‌ ಓಡುತಿದೆ

ನೀನಾಗಿಯೇ ಸಿಗು

ನೀನಾಗಿಯೇ ಸಿಗು 

ಹುಡುಕಾಡೋದು ಸಾಕಾಗಿದೆ 
ಈ ಬಾಳಿಗೆ ಹೊಸ 
ಬೆಸುಗೆ ಒಂದು ಬೇಕಾಗಿದೆ 
ಕಣ್ಣಂಚಲೇ ಇನ್ನೂ ಉಳಿದಂತಿದೆ 
ನೀ ಬೀರಿ ಹೋದಂತ ನೋಟ 
ಮಿಂಚನ್ನು ಸರಿದೂಗಿಸೋ ನಗುವಗೆ 
ಸಿಲುಕೋದೇ ಸೊಗಸಾದ ಆಟ 
ಮನದಂಗಳ ಬೆಳದಿಂಗಳ 
ಬರಮಾಡಿಕೋ ನೀನು ಬೇಗ

ಹಿತವ ನೀಡುವ ನೆನಪಲ್ಲಿ 
ಇರಿದು ಮೂಡೋದೇ ಪ್ರೇಮದ ಗುರುತು 
ಅಥವ ಬೇರೆ ಬಣ್ಣವ ನೀಡು 
ಬೆರೆಸಿ ಚಿತ್ತಾರ ಗೀಚುವೆ ಕುಳಿತು  
ನಿಲುಗಡೆ ಇರದೇ 
ಅಲೆಯುವ ಮನ ಹೇಗಾಗಿದೆ ನೋಡು 
ಬಿಡುಗಡೆಗೊಳಿಸು 
ಗಡಿಬಿಡಿಯಲಿ ನೀ ಹಾಡಿದ ಹಾಡು 
ಪರಿತಪಿಸಿ ಸೊರಗಿರುವೆ 
ನೇರವಾಗಿ ಬಾ ಭೇಟಿಗೆ 
ನಿನ್ನ ಪರಿಚಯ ಬೇಕು ಉಸಿರಿಗೆ...

ಮುಗಿದಂತಾಗುವ ಸಂಚಿಕೆಗೆ 
ನೀಡು ಹೊಸತನದ ತಿರುವನ್ನು 
ಹಗುರ ಆಗುವ ಬಯಕೆಯಲಿ 
ಇಳಿಸು ನನ್ನಲ್ಲಿ ಎದೆ ಭಾರವನು 
ಕದಿಯಲು ಬರುವೆ 
ಅಡಗಿಸಿ ಇಡು ಗುಟ್ಟಾಗಿ ಚೆಲುವನ್ನು 
ಅಳಿಸುತಲಿರುವೆ 
ಅಳುವನು ತರಿಸೋ ಶೋಕ ಸಾಲನ್ನು 
ಭರವಸೆಯ ಬಳ್ಳಿಯಲಿ 
ಹೂವಿನಂತೆ ನೀ ಅರಳಲು 
ಮುಗಿಲ ತೊರೆಯುವೆ ನಿನ್ನ ತಲುಪಲು... 

ಶುಭಮಂಗಳ ಬೆಳದಿಂಗಳ ಸುರಿ

 ಪಲ್ಲವಿ

ಶುಭಮಂಗಳ ಬೆಳದಿಂಗಳ ಸುರಿ 
ಬೆಳಗಲಿ ಮನದಂಗಳ 
ಕರಿ ಉಬ್ಬಿನ ಅಲೆಯೆಬ್ಬಿಸಿ 
ಬಲೆಯಾಗಿಸಿದೆ ಆ ಕಂಗಳ 
ಮುಂಗುರುಳಿನ ಮುಂಗೋಪವ 
ಕಿವಿ ಮರೆಗೆ ಸರಿಸುವೆ ವಾಹ್ ರೇ ವಾಹ್ 
ತುಟಿ ಹಿಗ್ಗಿಸಿ, ನಗೆ ಉಕ್ಕಿಸಿ 
ಹಂಚುತ್ತಲಿರುವೆ ಸಿಹಿ ಪೊಂಗಲ 

ಚರಣ
ಎಪ್ಪತ್ತರ ಆ ಆರತಿ 
ಅವರ ಥರ ನಿನ್ನ ಕೀರುತಿ 
ಹಳೆ ಕಾಲದ ಹೆಸರಾದರೂ 
ಹೊಸತೊಂದು ಸೆಳೆವ ಜಾದು 
ಹತ್ತತ್ತಿರ ನಾ ವಾಲುವೆ 
ಪ್ರಣಯ ರಾಜ ಪ್ರಭಾಕರ 
ಶ್ರೀನಾಥರ ಅವತಾರವ 
ಪಡೆದು ಬರಲೇ ಇಂದು 

ಮಿನುಗೋ ತಾರೆ 
ರಮಿಸೋ ನೀರೆ
ನಿನ್ನ ಜೋಡಿ ನಾನು
ಕರಗಿ ಹೋದ 
ಹೃದಯ ನಿನದೇ 
ದೋಚಿ ಹೋಗು ನೀನು.. 

ಎದುರಾಗುವೆ ನಾ ನಿನಗೆ

ಎದುರಾಗುವೆ ನಾ ನಿನಗೆ 

ಹೆದರದಿರು ಕನಸಿನಲೂ 
ಉಸಿರಾಗುವೆನು ಜೊತೆಗೆ 
ಪ್ರೀತಿಸುತ ಬದುಕಿಸಲು 
ಹೇಗಾದರೂ ನಗಿಸಿ 
ನಾ ನಗುವೆನು 
ಹೂ ಮೂಡಿಸೋ ನೆಪದಲ್ಲಿ 
ಬಳಿ ಬರುವೆನು 
ಈ ಬದುಕ ನಿನಗಾಗಿ ಬರೆದಿಡುವೆನು 

ಮಳೆ ಬರುವ ಮುನ್ನ 
ಕವಿದಂತೆ ಮೋಡ 
ಹನಿ ಹನಿ ಅಕ್ಷರದ ಕವಿತೆ ಹೊಸೆಯುತಿದೆ 
ಮನ ತಣಿಸುವಾಗ 
ಈ ನಿನ್ನ ಹಾಡು 
ಇನಿ ದನಿಗೆ ಶರಣಾಗಿ ಹೃದಯ ಸೋಲುತಿದೆ
ಮಿತಿ ಮೀರಿ ಬಂದಾಗ ಪ್ರೇಮ 
ನನ್ನಂತೆ ಮರುಳಾಗುತಾರೆ 
ನಿನ್ನ ಹೊರತು ಈಗ ನನಗೆ 
ಪರಿಹಾರ ಯಾರು ಕೊಡುತಾರೆ? 

ಗರಿಗೆದರಿದಂತೆ 
ಬಲಹೀನ ಬಯಕೆ 
ನಿನ್ನೆಸರ ಪಿಸುಗುಡುತ ಜಪ ಮಾಡಿದಂತೆ 
ಅಲೆ ಹೊತ್ತು ಹರಕೆ 
ದಡ ತಲುಪಿದಾಗ 
ನೀ ಬರೆದ ಮರಳ ಬರಹವ ದೋಚಿದಂತೆ 
ಅನುರಾಗ ಎರೆದಂತೆ ರಾಗ 
ನಾ ನಿನ್ನ ವಶವಾಗುವಾಗ 
ನೆರವಾಗು ನೀ ಆಗಿ ಬೇಗ 
ಬಹುಪಾಲು ಜೀವನದ ಭಾಗ 

ಸ್ವೀಕರಿಸು ಮನದ ಕರೆಯನು

ಸ್ವೀಕರಿಸು ಮನದ ಕರೆಯನು 

ನೀ ಪರಿಗಣಿಸು ಒಲವ ಈ ಪರಿಯನು
.... 
ಅಂದವಾದ ಗೊಂಬೆಯೊಂತೆ ಮಂದಹಾಸ ಬೀರುವಾಗ 
ಮತ್ತೆ ಮತ್ತೆ ನಾ ಸೋಲುವೆ 
ನೀ ಚಿಟ್ಟೆಯಂತೆ ಹಾರುವಾಗ ಹೂವಲ್ಲಿ ಜೇನಾಗಿ  
ಹೀರಲೆಂದು ನಾ ಕಾಯುವೆ 
ಓ ಸೋನಾ 
ಮತ್ತು ಏರಿದಂತಾಗಿದೆ 
ಓ ಸೋನಾ 
ಕಾಲ ನಿಂತಂತಾಗಿದೆ 
ಎಲ್ಲೆಲ್ಲೂ ನಿನ್ನನೇ, ಕಾಣೋದೇ ಅಚ್ಚರಿ 
ಬೇರೇನೂ ಬೇಡ ಇನ್ನು ಪ್ರೀತಿಯೊಂದೇ ಮಾತನಾಡಲಿ 
ಓ ಸೋನಾ
ನಿಂತಲ್ಲೇ ನೀರಾಗುವೆ 
ಓ ಸೋನಾ
ನಿನ್ನಲ್ಲಿ ಒಂದಾಗುವೆ 
ಓ ಸೋನಾ
ಬೇಕೆಂದೇ ಒದ್ದಾಡುವೆ... 
ಓ ಸೋನಾssss

ಕಣ್ಣು ಕಣ್ಣಿನಲ್ಲೇ ಮೋಡಿ ಮಾಡುತ್ತಾ ಹೋದಾಗ 
ಪತ್ತೆ ಇಲ್ಲದಂತಾದೆನೆ 
ಈ ದಾರಿಯಲ್ಲಿ ನಿನ್ನದೊಂದು ಹೆಜ್ಜೆಯನ್ನು ಬಿಟ್ಟು ಹೋಗು 
ಗುಟ್ಟಾಗಿ ನೀ ಸುಮ್ಮನೆ 
ಓ ಸೋನಾ 
ಹೊತ್ತು ಮೀರಿ ಬಂದಾಗ 
ಓ ಸೋನಾ 
ಕೋಪ ಉಕ್ಕಿಕೊಂಡಾಗ 
ಸಮೀಪವಾದರೂ ಈ ದೂರವೇತಕೆ 
ಅದಾಗೇ ಮೂಡಿ ಬಂದ ಪ್ರೇಮವು ಸರಾಗವಾಗಿದೆ 
ಓ ಸೋನಾ
ಕಾರಂಜಿ ನೀ ಬಾಳಿಗೆ 
ಓ ಸೋನಾ
ರೋಮಾಂಚನ ಕಣ್ಣಿಗೆ 
ಓ ಸೋನಾ
ಈ ಜೀವ ನಿನ್ನೊಂದಿಗೇ 
ಓ ಸೋನಾssss

ಸ್ವೀಕರಿಸು ಮನದ ಕರೆಯನು 
ನೀ ಪರಿಗಣಿಸು ಒಲವ ಈ ಪರಿಯನು

ಕಲ್ಲಿಗೆ ಕರಗುವ ಮನಸನು ಕೊಡುವ

 ಕಲ್ಲಿಗೆ ಕರಗುವ ಮನಸನು ಕೊಡುವ 

ನಲುಮೆ ನಿನ್ನೊಳಗೆ, ಇದೋ ಕರಗುವೆ ಒಳಗೇ 
ಕಾಮನ ಬಿಲ್ಲ ಹೊತ್ತ ಕಣ್ಣುಗಳೇ ನಿನ್ನವು 
ಸೆಳೆದಿವೆ ಬಳಿಗೆ, ಇದೋ ಸೋಲುವೆ ನಿನಗೆ 
ನೀಳಗವನ ಬರೆಯುವ ಗಳಿಗೆ 
ನೇರ ಗಮನ ನಿನ್ನದೇ ಕಡೆಗೆ 
ವಾಲಿದೆ ಸಖಿಯೇ, ಜೊತೆ ನೀಡೆ ನಾ ಸುಖಿಯೆ 

ಆಸೆಗಳ ಮಾಲಿಕೆಯ 
ಹೊಸೆಯುತ ಕೂತಿರುವೆ 
ಗಂಧವನು ದೋಚುತಲಿ 
ಎಲ್ಲಿಗೆ ಹೊರಟಿರುವೆ 
ಇದೇ ಹೊಸತು ಹರುಷ 
ಮುದ ಕೊಡುವ ನಿಮಿಷ 
ಬಾಳ ಆವರಿಸಿ ಹೋಗೋ ವೇಳೆ 
ಯಾತಕಾಗಿ ನಿನಗೀ ಅವಸರ 

ಆಸೆಗಳ ಮಾಲಿಕೆಯ 
ಹೊಸೆಯುತ ಕೂತಿರುವೆ 

ಕನ್ನಡಿಯ ಬಿಂಬದಲ್ಲೂ ನಗುವೆ 
ಈ ಕಾಲಿನ ಗೆಜ್ಜೆಯಲ್ಲೂ ಸುಳಿವೆ 
ಚಂದವಾದ ಬಂಧುವೇ 
ಸಂಜೆ ತಂಪು ಗಾಳಿಯಂತೆ ಬರುವೆ 
ಆ ಮೆಚ್ಚುಗೆಯ ಸಾಲಿನಲ್ಲಿ ಬೆರೆವೆ 
ಒಲವಿನ ಗುರುವೇ 
ತಕ ಧಿಮಿ ಎನುತ ಕುಣಿಯುವೆ ಲಯಕೆ 
ಎದುರಲಿ ನೀನಿರಲು 
ಬದುಕಿನ ಗತಿಯ ಬದಲಿಸೋ ಬಯಕೆ 
ಉಸಿರಲಿ ನೀನಿರಲು 

ಆಸೆಗಳ ಮಾಲಿಕೆಯ 
ಹೊಸೆಯುತ ಕೂತಿರುವೆ 
ಗಂಧವನು ದೋಚುತಲಿ 
ಎಲ್ಲಿಗೆ ಹೊರಟಿರುವೆ 

ಕಲ್ಲಿಗೆ ಕರಗುವ ಮನಸನು ಕೊಡುವ 
ನಲುಮೆ ನಿನ್ನೊಳಗೆ, ಇದೋ ಕರಗುವೆ ಒಳಗೇ 
ಕಾಮನ ಬಿಲ್ಲ ಹೊತ್ತ ಕಣ್ಣುಗಳೇ ನಿನ್ನವು 
ಸೆಳೆದಿವೆ ಬಳಿಗೆ, ಇದೋ ಸೋಲುವೆ ನಿನಗೆ 
ನೀಳಗವನ ಬರೆಯುವ ಗಳಿಗೆ 
ನೇರ ಗಮನ ನಿನ್ನದೇ ಕಡೆಗೆ 
ವಾಲಿದೆ ಸಖಿಯೇ, ಜೊತೆ ನೀಡೆ ನಾ ಸುಖಿಯೆ 

ಹೊಂಗೆ ಮರ ನೀಡುವಂಥ ನೆರಳೇ 
ನೀ ತಾಪವನ್ನು ನೀಗುವಂಥ ಮುಗಿಲೆ 
ಜೀವವಿನ್ನೂ ನಿನ್ನಲೇ
ಪ್ರೇಮದಲ್ಲಿ ಆಳವಾದ ಕಡಲೇ 
ನೀ ಸೋಲಲೆಂದೇ ಮೂಡಿಬಂದ ಇರುಳೆ?
ದೀಪವಾಗಿ ಬಿಡಲೇ?
ಕನಸಿನ ಮನೆಯ ಅಂಗಳದಲ್ಲಿ ಚಂದಿರನಾಗುವೆಯಾ?
ಕಲಿಯುವ ತನಕ ಬೆರಳನು ಹಿಡಿದು ಪ್ರೀತಿಯ ಕಲಿಸುವೆಯಾ?

ಆಸೆಗಳ  ಮಾಲಿಕೆಯ   
ಹೊಸೆಯುತ ಕೂತಿರುವೆ 
ಗಂಧವನು ದೋಚುತಲಿ 
ಎಲ್ಲಿಗೆ ಹೊರಟಿರುವೆ 
ಇದೇ ಹೊಸತು ಹರುಷ 
ಮುದ ಕೊಡುವ ನಿಮಿಷ
ಬಾಳ ಆವರಿಸಿ ಹೋಗೋ ವೇಳೆ 
ಯಾತಕಾಗಿ ನಿನಗೀ ಅವಸರ 

ಸಾವಿರ ಕಣ್ಣಿನ ನವಿಲುಗಳ

 ಸಾವಿರ ಕಣ್ಣಿನ ನವಿಲುಗಳ

ಸಾಲಲಿ‌ ನಿಲ್ಲಿಸಿ‌ ನಾನು
ಒಂದೇ ಕಣ್ಣನು ಮುಚ್ಚುತಲಿ
ನಿನ್ನನು ಮೋಹಿಸಲೇನು?
ಸುಡೋ‌ ಸೂರ್ಯನೆದುರಲ್ಲಿ
ನಗೋ‌ ಹುಣ್ಣಿಮೆ
ಕೊಡೆಯನ್ನು ನಾ ತೆರೆದಾಗಿದೆ
ಬಂದು ಸೇರಿಕೋ

ಸಂಜೆಯ ವೇಳೆಗೆ ಎಲ್ಲ ತಣ್ಣಗೆ ಆಯಿತು
ಗಾಳಿಗೆ ಪತ್ರವು ಹಾರಿ ಹೋದರೆ ಹೋಯಿತು
ತಂಪು ಪಾನಕ‌ ಹೀರುವಾಗ ನೀ
ಹಾಗೆ ನೋಡಲೇಕೆ?
ಮಳೆ ಬೀಳುವ ವೇಳೆ, ನೆಲ ನಾಚುತ
ಬಿರುಕೆಲ್ಲವ ಹೊಲಿದಂತಿದೆ
ನಿಜ ಅಂದುಕೋ

ಹಾಡನು ಹೇಳುವೆ ಕೇಳು ಕಂಚಿನ ಕಂಠದಿ
ತಾಳವ ಹಾಕುತ ಹೋಗು ಗೆಚ್ಚೆಯ ಪಾದದಿ
ಈಚೆ ಬಂದರೆ ಬೆಂದು ಹೋಗುವೆ
ಮಲ್ಲೆಯಂತೆ ನೀನು
ಗರಿ ಚಪ್ಪರ ಹಾಕಿ ತಯಾರಾಗಿದೆ
ಇದೇ ಮಂಟಪ, ನಮಗೆನ್ನುವೆ
ಜೊತೆ ಮಾಡಿಕೋ...

ಮಾವಿರದ ಊರಲ್ಲಿ

ಊರಿನ ಒಂಟಿ ಮಾವಿನ ಮರದೆಡೆ

ನೂರಾಯೆಂಟು ಕಣ್ಣುಗಳು
ಬಂಜೆ ಮರದ ನೆತ್ತಿಯ ಮೇಲೆ
ಹೂವಿನ ತಳಿರು ತಾಳಿರಲು

ರುಚಿಯೇ ಕಾಣದ ನಾಲಗೆಯಲ್ಲಿ
ಎಂಜಲ ಚಪ್ಪರಿಕೆಯ ಸ್ವಾದ
ಮಾತಿಗೆ ಮಾತು‌ ಬೆಳೆದು ನಿತ್ಯವೂ
ಒಬ್ಬರಿಗೊಬ್ಬರ ಪ್ರತಿರೋಧ

ಹೂ ಮಾಗಿ, ಕಾಯಾಗಿ ತೂಗಿತ್ತು
ಮಳೆಯೇಟ, ಕಲ್ಲೇಟ ಗೆದ್ದಿತ್ತು
ಹುಳಿಯೇ ಸಾಕೆನ್ನುವ ಮಹನಿಯರು
ಹುಲಿಯ ಮೇಲೆ ಸವಾರಿ ಹೊರಟರು

ಮುತ್ತಿಗೆ ಹಾಕಲು ಹೋದಂತೆ ನೊಣ
ಬಿದ್ದವು‌ ಅಲ್ಲಿ ಹತ್ತಾರು ಹೆಣ
ಸಾರಿಸಿದರೂ ಊರೂರಿಗೆ ಡಂಗೂರ
"ವಾರಸುದಾರರು ಯಾರಿಹರು?"

"ತನ್ನ ಮುತ್ತಾತನ ತಾತನಿಗೆ
ಜೋಡಿ ಹುಡುಕುವ ವೇಳೆ
ಸಾಗರದಾಚೆಯ ರಾಜನು ತಾನು
ಗೆದ್ದ ಒಂದು ಯುದ್ಧದ ಬದಲಿಗೆ
ಉಡುಗೊರೆಯಾಗಿ‌ ಮಾವು ಪಡೆದು
ಕುದುರೆಯೇರಿ ರಾಜ್ಯಕೆ ಮರಳಲು
ಸಂಚಿಯಿಂದ ಉದುರಿ ಬಿದ್ದು
ಮುತ್ತಾತನ ತಾತನ ಅಪ್ಪನಿಗೆ
ಸಿಕ್ಕಿದ ಪಾಲು ಅದು" ಎಂದು

"ಸಿಕ್ಕ ಮಾವನು ಒಬ್ಬನೇ ತಿಂದು
ವಾಟೆಯ ಯಾರಿಗೂ‌ ಕಾಣದೆ ತನ್ನ
ಮನೆಯ ಹಿತ್ತಲ ಆಚೆಗೆ‌ ಎಸೆಯಲು
ಹೆಂಡತಿ ಕಣ್ಣಿಗೆ ಬಿದ್ದು
ಉಸಿರು ಬಿಟ್ಟ ಮುತ್ತಾತನ ತಾತನ ಅಪ್ಪ"
ಹೀಗಾಗಿರಲು, ತನಗೇ ಸೇರಿದ ಮರವೆಂದು
ಬಿಟ್ಟ ಮಾವು ತನದೆಂದು
ಕತೆಯ ಕಟ್ಟಿದವರ ಸಾಲಲ್ಲಿ
ಮೆಚ್ಚುಗೆ ಮಡೆಯಿತು ಒಂದು ಕತೆ

ಯಾರೂ ನಂಬದೇ ಹೋದರೂ
ನಿಜವಿರಲೂ ಬಹುದೆಂದರು
ಸೋತ ಊರಿನವರೆಲ್ಲ
ಕತೆಗಾರನೇ ವಾರಸು ಎಂದರು

ಕಾವಲು ಕಾದ ರಾತ್ರಿ ಹಗಲು
ಬಾಗಿದ ಕಾಯಿ‌ ಘಂ ಎನಲು
ಪಟ್ಟ ಖುಷಿಗೆ ಸಾಯುತ ಹೋದ
ವಂಶಕೆ‌ ಕೆನೆ ಅವನ ನೆರಳು

ನಂತರ ಮರ ಹತ್ತಲು ಯತ್ನಿಸಿದ
ತರುಣರು ಬಿದ್ದು ಮುರಿಯಿತು ಬೆನ್ನು
ಅಮಾವಾಸ್ಯೆಯ ರಾತ್ರಿಯಲಿ
ಮೋಹಿಣಿಯರ ಬೆನ್ನಗೂ ಸಾವಿರ ಕಣ್ಣು

ಕಾಯಿ ಹಣ್ಣಾಗುತ್ತಲೇ ಕದ್ದು
ಹೊತ್ತು ಹೋಯಿತು ಕೋಗಿಲೆ
ಹಾಡಲು ಬಾರದ ಊರಿನ ಒಳಗೆ
ಹಾಡು ನಿಂತದ್ದು‌ ಆಗಲೇ

ಆಸೆ‌ ತೋರಿ‌ಸಿ ನೀಗಿಸದಿರಲು
ಊರಿನ ಶಾಪಗೆ ಗುರಿಯಾಯ್ತು
ಮತ್ತಿನ್ನಿಂದೂ ಹೂ ಬಿಡದ ಮರ
ಮುಪ್ಪಾಗಿ ನೆಲಕಪ್ಪಳಿಸಿತು...

ಏಕಾಂಗಿಯೇ ಏನಿದೆ ನಿನ್ನಲಿ?

 ಏಕಾಂಗಿಯೇ ಏನಿದೆ ನಿನ್ನಲಿ?

ಯಾರೊಂದಿಗೆ ಸೋಲುವೆ ಮಾತಲಿ?
ನಿನ್ನಲ್ಲೇ ನೀ ಇಲ್ಲವಾದಂತಿಹೆ  
ಏನಾಗುವೆ ನಾಳೆ ಈ ಬಾಳಲಿ?
ನೀ ಸರಿದು ಸರಿದು ಹರಿದು ಬರಲು ಸಾಧನೆ ಅದುವೇ 
ಈ ಕ್ಷಣವ ಹಿಡಿದು ನಡೆಯೋ ಮುಂದೆ ನಿಶ್ಚಯ ಗೆಲುವೇ 

ನೀ ಹಾಡುವ ಹಾಡಿದು ಯಾವುದು?
ಯಾರಿಂದ ನೀ ಪಡೆದಿರೋ ಸಾಲಿದು?
ಆಕಾಶಕೆ ಚಾಚುತ ಕಣ್ಣನು 
ಬಾ ಎಂದರೆ ಸೋನೆಯು ಬಾರದು 
ನೀ ಗಳಿಸಿ ಉಳಿಸಿ ಕಳೆಯದಿರಲು ನಿನ್ನದೇ ಸಕಲ 
ಈ ನಿಜವ ಅರಿತ ಮನುಜನೆಂದೂ ಆಗನು ಮರುಳ 

ನೀ ಏರುವ ಎತ್ತರ ಎಂದಿಗೂ 
ಆ ನಾಳೆಯ ದಾರಿಯ ದೀಪವು 
ಹೋರಾಟವೇ ಇಲ್ಲದೆ ಹೋದರೆ 
ನೀ ಗೆದ್ದರೂ ಇಲ್ಲ ಸಂತೋಷವು 
ಈ ಬದುಕು ಎನುವ ಸಮರದಲ್ಲಿ ಪಡೆಯುವೆ ಪದಕ 
ನೀ ಹಠವ ಬಿಡದೆ ಪುಟಿದು ನಿಲ್ಲು ಗೆಲ್ಲುವ ತನಕ  

ಈಜಾಡಲು ಏತಕೆ‌ ಸುಳಿಯಲಿ
ಆ ಸೆಳೆತದ ಮಾಪನ ಅರೆಯದೆ?
ಬೇಡೆಂದರೂ ದಕ್ಕುವ ಪ್ರೇಮವು
ನೀ ತೋರುವ ಬಿಂಬವೇ ಆಗಿದೆ
ಬಾ ಮುಗಿದ ಕತೆಗೆ ಬದಲಿ ಕೊನೆಯ ಗೀಚುವ ಜೊತೆಗೆ
ಬಾ ಕದವ ತೆರೆವ ಬೆಳಕು ಬರಲಿ ನಮ್ಮಯ ಒಳಗೆ

ಹೇ ಮೂಢನೆ ಎಚ್ಚರ ತಪ್ಪುತ  
ನೀ ಇಟ್ಟಿರೋ ಹೆಜ್ಜೆಯೇ ತಪ್ಪಿದೆ 
ನೀ ಬಿಟ್ಟಿರೂ ಬಿಡದಿದೆ ನಿನ್ನನು 
ಈ ನೆರಳಿಗೂ ಆಸರೆ ಬೇಕಿದೆ 
ಹೂ ಬಿಡುವ ಸಮಯಕಾಗಿ ಕಾಯಬೇಕಿದೆ ಗೆಳೆಯ 
ನೀ ಕೇಳಿ ನೋಡು ಒಮ್ಮೆ ಇದನೇ ಮಿಡಿದಿದೆ ಹೃದಯ 

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...