Wednesday 12 May 2021

ಮಾವಿರದ ಊರಲ್ಲಿ

ಊರಿನ ಒಂಟಿ ಮಾವಿನ ಮರದೆಡೆ

ನೂರಾಯೆಂಟು ಕಣ್ಣುಗಳು
ಬಂಜೆ ಮರದ ನೆತ್ತಿಯ ಮೇಲೆ
ಹೂವಿನ ತಳಿರು ತಾಳಿರಲು

ರುಚಿಯೇ ಕಾಣದ ನಾಲಗೆಯಲ್ಲಿ
ಎಂಜಲ ಚಪ್ಪರಿಕೆಯ ಸ್ವಾದ
ಮಾತಿಗೆ ಮಾತು‌ ಬೆಳೆದು ನಿತ್ಯವೂ
ಒಬ್ಬರಿಗೊಬ್ಬರ ಪ್ರತಿರೋಧ

ಹೂ ಮಾಗಿ, ಕಾಯಾಗಿ ತೂಗಿತ್ತು
ಮಳೆಯೇಟ, ಕಲ್ಲೇಟ ಗೆದ್ದಿತ್ತು
ಹುಳಿಯೇ ಸಾಕೆನ್ನುವ ಮಹನಿಯರು
ಹುಲಿಯ ಮೇಲೆ ಸವಾರಿ ಹೊರಟರು

ಮುತ್ತಿಗೆ ಹಾಕಲು ಹೋದಂತೆ ನೊಣ
ಬಿದ್ದವು‌ ಅಲ್ಲಿ ಹತ್ತಾರು ಹೆಣ
ಸಾರಿಸಿದರೂ ಊರೂರಿಗೆ ಡಂಗೂರ
"ವಾರಸುದಾರರು ಯಾರಿಹರು?"

"ತನ್ನ ಮುತ್ತಾತನ ತಾತನಿಗೆ
ಜೋಡಿ ಹುಡುಕುವ ವೇಳೆ
ಸಾಗರದಾಚೆಯ ರಾಜನು ತಾನು
ಗೆದ್ದ ಒಂದು ಯುದ್ಧದ ಬದಲಿಗೆ
ಉಡುಗೊರೆಯಾಗಿ‌ ಮಾವು ಪಡೆದು
ಕುದುರೆಯೇರಿ ರಾಜ್ಯಕೆ ಮರಳಲು
ಸಂಚಿಯಿಂದ ಉದುರಿ ಬಿದ್ದು
ಮುತ್ತಾತನ ತಾತನ ಅಪ್ಪನಿಗೆ
ಸಿಕ್ಕಿದ ಪಾಲು ಅದು" ಎಂದು

"ಸಿಕ್ಕ ಮಾವನು ಒಬ್ಬನೇ ತಿಂದು
ವಾಟೆಯ ಯಾರಿಗೂ‌ ಕಾಣದೆ ತನ್ನ
ಮನೆಯ ಹಿತ್ತಲ ಆಚೆಗೆ‌ ಎಸೆಯಲು
ಹೆಂಡತಿ ಕಣ್ಣಿಗೆ ಬಿದ್ದು
ಉಸಿರು ಬಿಟ್ಟ ಮುತ್ತಾತನ ತಾತನ ಅಪ್ಪ"
ಹೀಗಾಗಿರಲು, ತನಗೇ ಸೇರಿದ ಮರವೆಂದು
ಬಿಟ್ಟ ಮಾವು ತನದೆಂದು
ಕತೆಯ ಕಟ್ಟಿದವರ ಸಾಲಲ್ಲಿ
ಮೆಚ್ಚುಗೆ ಮಡೆಯಿತು ಒಂದು ಕತೆ

ಯಾರೂ ನಂಬದೇ ಹೋದರೂ
ನಿಜವಿರಲೂ ಬಹುದೆಂದರು
ಸೋತ ಊರಿನವರೆಲ್ಲ
ಕತೆಗಾರನೇ ವಾರಸು ಎಂದರು

ಕಾವಲು ಕಾದ ರಾತ್ರಿ ಹಗಲು
ಬಾಗಿದ ಕಾಯಿ‌ ಘಂ ಎನಲು
ಪಟ್ಟ ಖುಷಿಗೆ ಸಾಯುತ ಹೋದ
ವಂಶಕೆ‌ ಕೆನೆ ಅವನ ನೆರಳು

ನಂತರ ಮರ ಹತ್ತಲು ಯತ್ನಿಸಿದ
ತರುಣರು ಬಿದ್ದು ಮುರಿಯಿತು ಬೆನ್ನು
ಅಮಾವಾಸ್ಯೆಯ ರಾತ್ರಿಯಲಿ
ಮೋಹಿಣಿಯರ ಬೆನ್ನಗೂ ಸಾವಿರ ಕಣ್ಣು

ಕಾಯಿ ಹಣ್ಣಾಗುತ್ತಲೇ ಕದ್ದು
ಹೊತ್ತು ಹೋಯಿತು ಕೋಗಿಲೆ
ಹಾಡಲು ಬಾರದ ಊರಿನ ಒಳಗೆ
ಹಾಡು ನಿಂತದ್ದು‌ ಆಗಲೇ

ಆಸೆ‌ ತೋರಿ‌ಸಿ ನೀಗಿಸದಿರಲು
ಊರಿನ ಶಾಪಗೆ ಗುರಿಯಾಯ್ತು
ಮತ್ತಿನ್ನಿಂದೂ ಹೂ ಬಿಡದ ಮರ
ಮುಪ್ಪಾಗಿ ನೆಲಕಪ್ಪಳಿಸಿತು...

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...