Friday, 27 September 2019

ಬೇಡುವವರು ಮತ್ತು ಕೊಲ್ಲುವವರು

ಎರಡು ವರ್ಗದ ಜನರಿದ್ದಾರೆ
ಬೇಡುವವರು ಮತ್ತು ಕೊಲ್ಲುವವರು
ಜೇಬಲ್ಲಿ ಒಂದಷ್ಟು ನಾಣ್ಯಗಳ ತುಂಬಿಕೋ
ಬೇಡುವವರ ನೆರವಿಗೆ
ಕೊಲ್ಲುವವರ ಕರುಣೆಗೆ

ಬೇಡುವವರಿಗೆ ಬೆನ್ನು ಬಾಗಿ ನೀಡು
ಕೊಲ್ಲುವವರಿಗೆ ದೂರದಿಂದಲೇ ಬೀಸು
ಒಂದೋ ಹಸಿವ ನೀಗಿಸು
ಇಲ್ಲ ನೆತ್ತರು ಹರಿಸು

ಮುಂದೊಂದು ದಿನ
ಮತ್ತಾರಿಂದಲೋ ಎಸೆಯಲ್ಪಟ್ಟ ಬಿಲ್ಲೆ
ನಿನ್ನ ತಾಕಿ ರಕ್ತ ಚಿಮ್ಮಬಹುದು
ಆಗ ನೀನೂ ಕಟುಕನೆಂಬುದನರಿತು
ಶಾಂತಿ ಮಾರ್ಗ ಹುಡುಕು

ರಕ್ತ-ಸಿಕ್ತ ಬಿಲ್ಲೆಗಳು
ನಿನ್ನ ಭಿಕ್ಷಾ ಪಾತ್ರೆಯಲ್ಲಿ ಸದ್ದು ಮಾಡಬಹುದು
ಕೊಟ್ಟವರು ಅಷ್ಟಾಗಿ ಬಾಗಿಲ್ಲವಾದರೂ
ಕೊಟ್ಟರೆಂದಷ್ಟೇ ತೃಪ್ತಿ ಪಡು

ನಿನ್ನ ಹೊಟ್ಟೆ ತುಂಬಿದಾಗ
ಅನ್ಯರಿಗೆ ಕೈ ಚಾಚು
ಅಗೋ ಅಲ್ಲಿ ರಕ್ತದ ಮಡುವಿನಲ್ಲಿ
ಚೆಲ್ಲಾಡಿದ ಚಿಲ್ಲರೆಯನ್ನು ಮಣ್ಣಿನಿಂದ ಮುಚ್ಚು
ಗಾಯಗೊಂಡವರ ಎದೆಗೊರಗಿಸಿಕೋ...

Wednesday, 25 September 2019

ಬಿಡುಗಡೆಯನ್ನು ಬಯಸಿ

ಬಿಡುಗಡೆಯನ್ನು ಬಯಸಿ
ಸೆರೆಯಾದವರೆಷ್ಟೋ ಜಗದಲ್ಲಿ
ಹುಸಿ ನಗೆಯನ್ನು ಸರಿಸಿ
ಕಣ್ಣೀರಿಡುತಿಹರು ಮರೆಯಲ್ಲಿ
ಉಪಾಯ ಗೊತ್ತಿಲ್ಲದೆ..
ಮುಖವಾಡ ಬೇಕಾಗಿದೆ.. (1)

ಎದುರು-ಬದುರಾಗಿ ಸಿಕ್ಕರೂ
ಗುರುತು ಹಿಡಿವಷ್ಟು ಇಲ್ಲ ಬಿಡುವು
ಅದಲು-ಬದಲಾಗಿ ಯೋಚನೆ
ಅಸಲಿ ಅಸ್ತಿತ್ವವೆಲ್ಲೋ ಕಳುವು
ಮುರಿದ ಕನ್ನಡಿಯ ಮನಸನು
ಕಳೆದುಕೊಂಡವರೇ ಎಲ್ಲ ಕಡೆಯೂ
ಮಾತು ತೊರೆದಷ್ಟೇ ಸುಲಭಕೆ
ನೂರು ಚೂರಾಯಿತಿಲ್ಲಿ ಒಲವು 

ಸಂಜೆ ವೇಳೆಗೆ ಉಸಿರು ಬಂದಂತೆ
ಇರುಳು ಮುಗಿಯುತ್ತ ಬೆಳಕು ಕಂಡಂತೆ
ಯಾವ ಹೊಸತೇನು ಕಾಣದಾಗ
ಜಾಡಿಸು ಎಲ್ಲವ, ಧರಿಸು ಮುಖವಾಡವ.. (2)

ಪುಟವ ತೆರೆದಂತೆ ಹೊಸ ದಿನ
ಪುಟಿದ ಚಿಗುರಂತೆ ಸಂಭ್ರಮದಲ್ಲಿ
ಮನಸಿನಿಂದ ಹೊರ ನಡೆಯುವ
ಮುನಿದ ಅಲೆಗೊಂದು ತೀರವಿರಲಿ
ಹೃದಯ ತಂಬೂರಿ ನಾದಕೆ
ಸತ್ತ ಸ್ವರವೊಂದು ಹುಟ್ಟಿ ಬರಲಿ
ಮೌನ ವ್ಯಾಕರಣವೆಲ್ಲವೂ
ಎದೆಯ ಹಾಡಾಗಿ ಹೊಮ್ಮಿ ಬಿಡಲಿ

ಏಳು ಬೀಳೆಲ್ಲ ಸಹಜವೇ ತಾನೇ
ಎಡವಿ ಬೀಳೋದೂ ಕಲಿತ ಪಾಠನೇ
ನೀನು ನೀನಾಗಿ ಬಾಳುವಾಗ
ಪ್ರಶ್ನಿಸು ಎಲ್ಲವ, ಕಳಚು ಮುಖವಾದವ... (3)

Friday, 20 September 2019

ಹಾಡಾಗು, ಹಾಲ್ಗಡಲಾಗು

ಹಾಡಾಗು, ಹಾಲ್ಗಡಲಾಗು
ಮಳೆಯಾಗು, ಮಳೆಬಿಲ್ಲಾಗು
ಕಣ್ಣಾಗು, ಕಣ್ಮಣಿಯಾಗು
ನೆರಳಾಗು, ನೀ ಜೊತೆಯಾಗು
ಆಗುವುದಾದರೆ ದೇವರೇ ಆಗು ನನ್ನ ಪಾಲಿಗೆ
ಕಾತರದಲ್ಲೇ ತುಂಬಿಸು ನನ್ನ ಪ್ರೀತಿ ಜೋಳಿಗೆ     (1)

ಸಂಶಯವೊಂದು ಹೆಗಲೇರಿದರೆ
ಇರಿದೇ ಕೊಲ್ಲುವೆ ಕಣ್ಣಲ್ಲಿ
ಕಂಚಿನ ಕಂಠದಿ ಬೈಯ್ಯುವ ನಿನಗೆ
ನನ್ನ ಖುಷಿಯಲಿ ಪಾಲಿರಲಿ
ಕೊಡುವುದನ್ನೆಲ್ಲ ಇಂದೇ ಕೊಟ್ಟರೆ
ಖಾಲಿ ಆಗುವ ಭಯದಲ್ಲಿ
ಉಳಿಸಿಕೊಳ್ಳುವೆ ಚೂರು ಭಾವನೆ
ನಾಳೆ ಸಿಗುವ ನೆಪದಲ್ಲಿ

ಎಲ್ಲ ಚಿಂತೆಗೂ ಅಂಟಿಕೊಂಡು ಕೂರಬೇಡ
ತಂಟೆ ಇಲ್ಲದ ಪ್ರೀತಿ ಎಲ್ಲಿದೆ
ಎಲ್ಲ ಹುಡುಗರು ಒಂದೇ ಅಂತ ಹೇಳಬೇಡ
ಏನೂ ತೋಚದ ಜೀವ ಇಲ್ಲಿದೆ                (2)

ಹಗಲುಗನಸಲಿ ನನಗೂ ನಿನಗೂ
ನಿತ್ಯವೂ ನಡೆವುದು ಕಲ್ಯಾಣ
ಹೀಗೇ ಆದರೆ ಆಸೆಗಳೆಲ್ಲಕೂ
ಹೇಗೆ ಹಾಕಲಿ ಕಡಿವಾಣ 
ಹುರಿದುಂಬಿಸುವ ಬೆಳದಿಂಗಳಲಿ 
ಹೂ-ದುಂಬಿಗಳೇ ಆಗೋಣ
ಮೆಲ್ಲುಸಿರಿಂದ ಮೂಡೋ ಇಂಪಿಗೆ
ಸೇರಿಸು ನಿನ್ನ ಸಾಲನ್ನ 

ಲೆಕ್ಕ ಮೀರುವ ನನ್ನ ಹುಚ್ಚಾಟಗಳನು
ನಿನ್ನ ಲೆಕ್ಕಕೆ ಚುಕ್ತಾ ಮಾಡಿಕೋ
ಇಷ್ಟು ಹೇಳಲು ನನ್ನ ಮಾತನ್ನು ತಡೆದು
ಒಂದೋ ಎರಡೋ ಮುತ್ತ ನೀಡಿಕೋ..    (3)

Sunday, 15 September 2019

ಇನ್ನೂ ಒಂದಿಷ್ಟು ಹೊತ್ತು

ಇನ್ನೂ ಒಂದಿಷ್ಟು ಹೊತ್ತು 
ನೀ ನನ್ನ ಜೊತೆಗಿರಬೇಕು
ಎಲ್ಲ ಬಾಕಿ ಉಳಿದ ಮಾತು
ಹೇಳಿ ಬಿಡಬೇಕು
ಬಿಡುಗಡೆ ಮುನ್ನ ಕೊಡಬೇಕೊಂದು ಮುತ್ತು
ಸೆರೆಯಾದಾಗ ನೀನೇ ನನ್ನ ಸ್ವತ್ತು
ಈ ಹೊತ್ತು ಎಲ್ಲ ಹೊಸತು
ಹೀಗೇ ಇರಲಿ ಯಾವತ್ತೂ...

ಎಷ್ಟು ಕಾಲ ಕೂಡಿದಂತೆ ಕಳೆಯಬೇಕು
ಇಷ್ಟೇ ಬದುಕು ಎಲ್ಲ ಕ್ಷಣವೂ ಬದುಕಬೇಕು
ಒಂದು ಹೆಜ್ಜೆ ನೀನು ಇಟ್ಟು
ಹೋಗ ಬೇಡ ನನ್ನ ಬಿಟ್ಟು
ಸಾಗುವುದಾದರೆ ಜೊತೆಗೇ ಸಾಗೋಣ
ಸಾಯುವುದಾದರೂ ಜೊತೆಗೇ ಸಾಯೋಣ
ನನ್ನ ಪ್ರಾಣ ನೀನೇ ತಾನೆ
ಕಣ್ಣು ನೀನು ರೆಪ್ಪ ನಾನೇ..

ChuTukas

ಕದಡದೆ ಎಲ್ಲಿಯ ಕಲೆ?
ಬಣ್ಣ ಕದಡಿದೆಡೆ ಚಿತ್ರ
ಕಲ್ಲು ಕದಡಿದೆಡೆ ಶಿಲೆ
ಗಾಳಿ ಕದಡಿದರೆ ನಾದ
ಶಾಯಿ ಕದಡಿದರೆ ಕಾವ್ಯ!!

****

ಎಲೆ ಮರೆಯ ಕಾಯೆಂದು ನೀವೇಕೆ ಮರುಗುವಿರಿ?
ಮಾಗುವ ಕಾಲಕ್ಕೆ ನೀವಷ್ಟೇ ಮರಕೆ
ಕಿತ್ತು ತಿಂದವರೆಲ್ಲಿ ಕಷ್ಟಕ್ಕೆ ಬಂದಾರು?
ಮುಪ್ಪಾದ ಎಲೆಯೊಡನೆ ಎರಗಿ ಬುಡಕೆ..

ಜನ್ಮ ನೀಡಿದಮ್ಮ

ಜನ್ಮ ನೀಡಿದಮ್ಮ ನಿನದೂ
ಜನ್ಮ ದಿನವು ಈ ದಿನ
ನಾನು ನಿನಗೆ, ನೀನು ನನಗೆ
ಶುಭ ಕೋರಲೀ ಸುದಿನ
ಮೂರು ದಶಕ ದಾಟಿ ಬೆಳೆದೆ
ನಿನ್ನ ಮೀರಿ ಅಳತೆಲಿ
ಆಗಸವ ಮುಟ್ಟೋ ಕರುಣೆ
ಅದ ಹೇಗೆ ತಲುಪಲಿ
ನಾನೂ ನೀನೂ ಒಂದೇ 
ಹಂಚಿಕೊಂಡು ಕರುಳ ಪ್ರೀತಿಯ
ಇಷ್ಟು ದೂರ ಬಂದೆ ಹಿಡಿದು
ಬೆಳಗಿ ಕೊಟ್ಟ ಪ್ರಣತಿಯ
ನಿನ್ನ ಮಡಿಲು ಹೊಂಗೆ ನೆರಳು
ಮಿಡಿವ ತಂತಿ ನೋವಿಗೆ
ನೀನು ಇರಲು ನಗುತ ಹೀಗೆ
ಸ್ವರ್ಗ ನಮ್ಮ ಪಾಲಿಗೆ!

ಕಂಡು ಕೇಳರಿಯದಂಥ ಒಂದು ವಿಷಯ

ಕಂಡು ಕೇಳರಿಯದಂಥ ಒಂದು ವಿಷಯ ಹೇಳಲೇ
ನೊಂದು ಬೆಂದುಹೋದಂಥ ನನ್ನ ಕಥೆಯ ಕೇಳೆಲೇ
ರೆಕ್ಕೆ ಬಂದಂತೆ ಕಾಗದ ಹಾರಿ ಹೋಗಿದೆ
ಪದ್ಯ ಗೀಚಿದ್ದು ತೋಚದೆ ಹೋಯಿತೇ
ಹುಚ್ಚು ಕವಿದಂತೆ ಮನಸಿಗೆ ಎಲ್ಲೆ ಮೀರಿದೆ
ಹಚ್ಚಿಕೊಂಡಿದ್ದೇ ಕಾರಣ ಆಯಿತೇ

ಆರಂಭವೇ ಕೊನೆಯಾದರೆ ಹೇಗೆ ಹೇಳು
ನೀನಿಲ್ಲದೆ ನರಳುತ್ತಿದೆ ನನ್ನ ಬಾಳು...


ಹಚ್ಚಿ ಇಟ್ಟ ದೀಪದಲ್ಲಿ ಬೆಳೆಕೇ ಇಲ್ಲ
ಮುಚ್ಚು ಮರೆಯ ಆಟದಲ್ಲಿ ಹಿತವೇ ಇಲ್ಲ
ಮತ್ತೆ ಮತ್ತೆ ಪತ್ತೆ ಹಚ್ಚಿ ಬಂದಂತಿದೆ
ಮುಳ್ಳಿನಂತೆ ಕಾಡೋ ನೋವು ಸಾಯೋದಿಲ್ಲ
ಕೆನ್ನೆ ಕೊಟ್ಟೆ ಈಗ
ಮುತ್ತು ನೀಡೋ ಬದಲು
ಪೆಟ್ಟು ಕೊಟ್ಟು ಹೋಗು ಮಾತನಾಡದೆ..

ಕಣ್ಣೀರಿಗೆ ಕೈಚಾಚುತ ಧೈರ್ಯ ಹೇಳು
ನಿನ್ನಾಸರೆ ಬೇಕಂತಿದೆ ನನ್ನ ಬಾಳು..

ಬೆಂಕಿಗೆ ದೂಡಬಹುದಿತ್ತು, ಸುಮ್ಮನಿದ್ದಿರಿ

ಬೆಂಕಿಗೆ ದೂಡಬಹುದಿತ್ತು, ಸುಮ್ಮನಿದ್ದಿರಿ
ಮುಳ್ಳು ಚುಚ್ಚಬಹುದಿತ್ತು, ಸುಮ್ಮನಾದಿರಿ
ಬಿದ್ದಾಗ ಕೈ ಹಿಡಿದಿಲ್ಲವಾದರೂ, ಬೀಳಿಸದಿದ್ದಿರಿ
ನಿಮ್ಮವನಲ್ಲನೆನ್ನಬಹುದಿತ್ತು, ಜೊತೆಗೊಂಡಿರಿ

ಧೂಳಿನಂತಾದರೂ ಇರಿಸಿಕೊಂಡಿರಿ ಒದರದೆ
ಹೂವಿನಷ್ಟೇ ಹಗುರಾಗಿ ಎರಗಿ ಎದೆಗೆ
ಬೇಲಿ ಕಟ್ಟಿ, ದೂರವಿಡದೆ ತುತ್ತು ಹಂಚುವಲ್ಲಿ
ನಿಮ್ಮ ಹಾದಿಯತ್ತ ನನ್ನ ನೆರಳ ನಡಿಗೆ

ಇಷ್ಟ ಪಟ್ಟಿರಿ ತುಂಟ-ತರಲೆಗಳ
ಕಷ್ಟ ಕಲ್ಲುರುಳಿಸುವಲಿ ಬೆವರಾದಿರಿ
ಒಂಟಿಯೆನಿಸುವಲ್ಲಿ ಆಗಂತುಕರಾಗಿ
ದಾರಿಯುದ್ದಕೂ ಎದುರುಗೊಂಡು ಮಿಡಿದಿರಿ

ನಾನಿಲ್ಲದ ಹೊತ್ತಲ್ಲಿ ಹುಡುಕಾಡಿದಿರಲ್ಲದೆ
ಇದ್ದಾಗ ಪ್ರಮುಖನೆನದೆ ಸಾಮಾನ್ಯನ ಮಾಡಿದಿರಿ
ಪಲ್ಲಕ್ಕಿಯ ಮೇಲಿಟ್ಟು ಮೆರೆಸುವ ಭ್ರಮೆಯಾಚೆ
ಪಂಜರಗಳ ಮುರಿಯುವ ಸಾಧ್ಯತೆಗಳ ತೆರೆದಿರಿ

ವಕ್ರತೆಯೂ ಕಲೆಯೆಂದು
ವಿಕೃತಿಯೂ ಕೃತಿಯೆಂದು
ಅವಸಾನವೂ ಪ್ರಕೃತಿಯ ರೂಪವೆಂದು
ಬೆರಗು ಬೇರೆಲ್ಲೂ ಇಲ್ಲ
ಬೆಳಗುವುದೇ ಅದರ ಮೂಲ
ಹಚ್ಚಿದಿರಿ ದೀಪವೊಂದ ಮನದಿ ಅಪ್ಪಿಕೊಂಡು

ತಾವರೆಗೊಳದ ಬೇರಿನ ಪರಿಚಯ ನಮ್ಮದು
ಆಗಾಗ ಮಿಂಚಿದೆವು ಪತ್ರೆ ಮೇಲೆ ಹೊರಳಿ
ನನ್ನ ಹೆಸರಿನೊಡನೆ ಕೂಡಿದ ನೆನಪು ಮೂಡುವಾಗ
ತುಟಿ ಅರಳಿಸುವ ಸಣ್ಣ ತುಣುಕು ಇಣುಕಿ ಬರಲಿ..

"ಬೆನ್ನಿಗೆ ಮುಖ ಭಾವದ ಕೊರತೆ"

"ಬೆನ್ನಿಗೆ ಮುಖ ಭಾವದ ಕೊರತೆ"
ನೋವಿನ ಗುಟ್ಟು ಅಡಗಿಸಿಟ್ಟು
ತಲೆ ತಗ್ಗಿಸಿ ನಡೆವಾಗ ಎದೆ ಉಬ್ಬಿರಲಾರದು.
ಗೂನಿದ ಭುಜದಡಿ ವಿಸ್ತಾರ ಬೆನ್ನು
ಮಾತನಾಡುತ್ತಲೇ ಮಾತನಾಡಿಸುತ್ತೆ
ಮುಖವಾಡಗಳಿಗದು ಅರ್ಥವಾಗುವುದಿಲ್ಲ
ಬಿನ್ನು ಕೊಟ್ಟು ನಡೆದೆ ಎಂದು ಜರಿವರು

ಹರಕಲು ತೊಟ್ಟರೂ ಬೇಡೆನ್ನದು
ಕನ್ನಡಿಯೆಡೆಗೆ ಬೆನ್ನು ಮಾಡುವಾಗ
ತಲೆ ಹೊರಳಿಸಿ ನೋಡುತ್ತೇನೆ
ಬಿದ್ದ ಮಡತೆ ಹರಕಲನ್ನು ಮರೆಸಿ
ಆಗಿನ್ನೂ ಮೂರು ಸಂವ್ತ್ಸರದ ಹಿಂದೆ
ದೀಪಾವಳಿಗೆ ಕೊಂಡ ಅಂಗಿಯಂತಿರದೆ
ನೆನಪಿನ ಚಿತ್ತಾರ ಹೊತ್ತು ಹೊಸತಾಗೇ ಇತ್ತು

ಹಾಸಿಗೆಗೆ ಆಸೆಗಳ, ಕನಸುಗಳನುಣಿಸಿ
ಬೆಚ್ಚಿ, ಬೆವರಿ, ಕಂಪಿಸಿದ ತೊಗಲಿಗೆ
ಎಂದೂ ಕೈಯ್ಯಾರೆ ಕಲ್ಲು ಕೊಟ್ಟು ತಿಕ್ಕಲಾಗಲಿಲ್ಲ.
ಒರಗಿದ ಗೋಡೆಗೆ ಗುರುತಿಟ್ಟು
ನೆರಳಿನ ಮೇಲೂ ಕಣ್ಣಿಟ್ಟು
ಬಾಯಾರಿದಾಗಲೂ ಬಾಯಿ ತೆರೆಯದಿತ್ತು ಬೆನ್ನು

ಬಳೆ ಸದ್ದು ಉದ್ದಗಲಕ್ಕೂ ಸವರಿ
ಹಸ್ತಕ್ಕೆ ತಾಕಿ ಒರಟುತನ
ಎದೆಗಂಟಿದ ಮೆದು ಮಾಂಸ ಜ್ವಾಲೆ
ಬೆವರ ಹನಿಯನು ಹಡೆದು
ಇಂಗಿದ ಇಂಗಿತಕೆ ಪರಚು ಗಾಯ
ಮಂಗ ಬುದ್ಧಿಯ ಕೈಗೆ ಮಾಣಿಕ್ಯ ಸಿಕ್ಕಂತೆ

ನೊಂದ ಬೆನ್ನಿಗೂ, ಬೆನ್ನ ನೋವಿಗೂ ಅಂತರವಿದೆ
ಗುಣ ಪಡಿಸುವ ವಿಧಾನಗಳೂ ಬಿನ್ನ
ನನ್ನ ಬೆನ್ನಿಗೆ ಕಣ್ಣು, ಕಿವಿ, ಬಾಯಿಲ್ಲ
ಆದರೂ ಆಲಿಸುವುದು, ಗ್ರಹಿಸುವುದು, ಉಲಿವುದು.
ನಾನು ನನ್ನ ಬೆನ್ನ ಆಪ್ತ ಗೆಳೆಯ
ನಾ ಅವನ, ಮತ್ತವ ನನ್ನ ಹೊತ್ತಿರುವ..

ಆದಷ್ಟೂ ಬೇಗ ಹಾಡೊಂದು ಬರಲಿ

ಆದಷ್ಟೂ ಬೇಗ ಹಾಡೊಂದು ಬರಲಿ
ಕಟ್ಟಿದ ಮಹಲುಗಳ ಕೆಡವಿಕೊಂಡು
ಹಿಂದೆಯೇ ಮೌನವೂ ಆವರಿಸಿ ಬಿಡಲಿ
ನನ್ನದೆಂಬುದು ಏನೂ ಇಲ್ಲವೆಂದು

ಎಷ್ಟಕ್ಕೆ ಕೊಂಡೆ ನನ್ನನ್ನು?

ಎಷ್ಟಕ್ಕೆ ಕೊಂಡೆ ನನ್ನನ್ನು?
ಇಷ್ಟಕ್ಕೆ ಕೊಲ್ಲು ನೀನಿನ್ನೂ
ನಿನ್ನಷ್ಟು ಮುದ್ದು ಯಾರಿಲ್ಲ
ಮುತ್ತಲ್ಲೇ ಮಾತು ಕೊಡಲೇನು?

ಇನ್ನಾರು ಜನ್ಮ ಸಾಲಲ್ಲ
ನೀನಿರದೆ ಶಬ್ಧ ಹೊರಡೊಲ್ಲ
ನಿತ್ರಾಣದಲ್ಲೂ ಈ ಪ್ರಾಣ
ನಿನ್ನೆಸರ ಧ್ಯಾನ ಬಿಟ್ಟಿಲ್ಲ

ಗುಟ್ಟಾದೆ ಎದೆಯ ಗೂಡಲ್ಲಿ
ಗುರಿಯಿಟ್ಟೆ ಮೌನ ಶರದಲ್ಲಿ
ಜೋಪಾನ ಮಾಡಿ ಎತ್ತಿಟ್ಟು
ಬಿಚ್ಚಿಟ್ಟೆ ನೆನಪ ಮರೆತಲ್ಲಿ

ಬರಿಗೈಯ್ಯ ಹಿಡಿದು ನಡೆವಾಗ
ನೆರಳೂ ನಕ್ಕಿತ್ತು ಆಗಾಗ
ಮೈಲಿಗಲ್ಲನ್ನು ನೆಡಲಿಲ್ಲ
ಬೇಲಿ ಕಟ್ಟೋದು ಯಾಕೀಗ?

ಸಣ್ಣ ಮಳೆಯೊಂದು ತಡವಾಗಿ
ನಮ್ಮ ಮಿಲನಕ್ಕೆ ಸರಿಯಾಗಿ
ಇಳಿದು ಬಂದೀತು ಬಾ ಬೇಗ
ಒಪ್ಪಿ ಬಿಗಿದಪ್ಪು ತಲೆಬಾಗಿ...

ಒಂಟಿ ಮನೆಯಲ್ಲಿ ದೀಪವಿದ್ದೂ

ಒಂಟಿ ಮನೆಯಲ್ಲಿ ದೀಪವಿದ್ದೂ
ಹಚ್ಚುವ ಮನಸಿರದೆ ಕತ್ತಲೆಲ್ಲೆಲ್ಲೂ
ನೀನು ಹಚ್ಚಿಟ್ಟ ಕಿಚ್ಚೊಂದೇ ಒಳಗೆ
ಹಾಡು ಕಲಿಸಿತ್ತು ಗೋಳಿನಲ್ಲೂ

ಗೊಂಬೆ ಜೋಡಿಸಿ ಉರುಳಿಸಿ ಬಿಟ್ಟೆ
ಲಜ್ಜೆಗೆಟ್ಟವು ನಗುತಾವೆ ನೋಡಿ
ಗಾಜಿನೊಳಗಿಟ್ಟೆ ಜೋಪಾನವಾಗಿ
ಮೂಖ ಹೃದಯಕ್ಕೆ ಮುಳ್ಳೊಂದೇ ಜೋಡಿ

ಮಸಿಯ ಗೋಡೆದು ಮತ್ತೇನೋ ಗೋಳು
ಹುಸಿಯನಾಡೋದೇ ಬದುಕಾಗಿ ಅದಕೆ
ಸುಟ್ಟು ಹೋದಂಥ ಹಾಳೆಯ ಬಯಸಿ
ಗಾಯಗೊಂಡಂತಿತ್ತು ಗೀಚುಹೊತ್ತಿಗೆ

ಮಡಿಕೆಯ ತಳ ಸೋರಿ ಒಲೆಗಿಲ್ಲ ಬಾಳು
ಪೊರಕೆಗೆ ಪೊರೆ ಕಟ್ಟಿ ಹೊಡೆದಷ್ಟೂ ಧೂಳು
ವಾರ ಸಂತೆಯಲಿಟ್ಟು ಮಾರಿಕೊಂಡಂತೆ
ಕನಸುಗಳು ಕಣ್ಣನ್ನೇ ಕರಗಿಸಿವೆ ನೋಡು

ಆದಿಗಂಟಿದ ಗಂಧ ಈಗಿಲ್ಲವೇಕೆ?
ಆಗಾಗ ಬರುತಿದ್ದೆ ಹೀಗಾದೆಯೇಕೆ?
ಕನ್ನಡಿಯ ಎದುರಿಟ್ಟು ಹೋದದ್ದು ನೀನು
ನನ್ನೊಡನೆ ಅಷ್ಟೇ ನಾ ಮಾತಾಡಬೇಕೆ?

ಕೊನೆಗೊಂದು ಮಾತೆಂದು ಕಣ ತುಂಬಿ ಬಂದೆ
ಒಂದಷ್ಟು ಸುಳ್ಳನ್ನು ಬೇಕೆಂದೇ ಕೊಂದೆ
ಇದ್ದಷ್ಟೂ ಕೊಟ್ಟರೆ ಇನ್ನಷ್ಟು ಕೊಡಬಹುದು
ಇಂದಿಗಿಷ್ಟೇ ಪ್ರಾಣವ ಕೊಡಲು ತಂದೆ...

ಆ ದಡದ ಅಲೆಯೊಂದು

ಆ ದಡದ ಅಲೆಯೊಂದು
ಈ ದಡಕೆ ಬಡಿದು
ಏನನ್ನೋ ಪ್ರಸ್ತಾಪಿಸಿದಂತಿದೆ
ಈ ದಡವು ಸುಮ್ಮನೆ
ತನ್ನೆಲ್ಲ ಗುರುತುಗಳ
ಉತ್ತರದ ರೂಪದಲಿ ಕೊಟ್ಟಾಗಿದೆ

ಆ ದಡದಲೊಬ್ಬಳು
ಈ ದಡದಲೊಬ್ಬ
ಹೀಗೆ ನಡೆಸಿರಲು ಸಂಭಾಷಣೆ
ಮೇಲೊಬ್ಬ ಚಂದಿರ
ನೂರು ಚೂರುಗಳಾಗಿ
ಕಡಲೊಡಲು ಚೆದುರಿರಲು ಆಕರ್ಶಣೆ

ಹಿಮ್ಮುಖದ ಅಲೆಗಳನು
ಮುಮ್ಮುಖದವುಗಳು
ಮುದ್ದಾಡಿ ಅಲ್ಲೇನೋ ರೋಮಾಂಚನ
ಸಣ್ಣ ಗುಳ್ಳೆಗಳಂತೂ
ಮೂಡಿ ಸಿಡಿಯುವ ವೇಳೆ
ತಿಳಿಗಾಳಿಗೊಲಿದಂತೆ ವಾತ್ಸ್ಯಾಯನ

ಸಾಲುಗಟ್ಟಿದ ಆಸೆ
ಉಸಿರುಗಟ್ಟಿಸಿ ಮುಂದೆ
ಯಾವ ಸಂಚಿಗೆ ಹೊಂಚು ಹಾಕುತಿಹುದು?
ಅತ್ತ ಅವಳೆದೆಯುಬ್ಬಿ
ಇತ್ತ ಇವ ತಬ್ಬಿಬ್ಬು
ನಡುವೆ ಕಡಲ ದೂರ ಎಂಥ ಘೋರ!

ಒಂದು ಮುಳ್ಳಿಗೆ ಸಿಲುಕಿ
ಒಂದು ಮಲ್ಲಿಗೆ ದಳವು
ಇನ್ನೂ ಹಂಚಿದ ಘಮಲು ಪ್ರೇಮವೇನು?
ವಿರಹಿಗಳು ಹೀಗೆಲ್ಲ
ಕಾವ್ಯ ಪ್ರವೃತ್ತರಾಗಿ
ಮಿಡಿದರೆ ಹೃದಯಕ್ಕೆ ತೃಪ್ತಿಯೇನು...?

ಗಾಜಿನ ಮೇಲೆ ಜಾರಿವೆ ಹನಿಗಳು

ಗಾಜಿನ ಮೇಲೆ ಜಾರಿವೆ ಹನಿಗಳು
ಬಿಟ್ಟೂ ಬಿಡದೆ ಗುರುತುಗಳ
ಬಿಡಿಸಿಕೊಂಡ ನೆನಪಿನ ಚಿತ್ರವು
ನಡೆಸಿದೆ ಮಳೆಯೊಡನೊಣ ಜಗಳ

ಬೆರಳು ಕೊಡದು ಅಂಚೆ ವಿಳಾಸ
ಕರಗುವ ರೇಖೆಗೆ ಅಪ್ಪಣೆಯ
ಕುರುಡು ಆಸೆಗೆ ಇಲ್ಲದ ಕಣ್ಣು
ಎದುರು ನೋಡಿದೆ ಕತ್ತಲೆಯ

ನೀಲಿ ನೆನಪಿನ ಖಾಲಿ ಆಗಸ
ಒದ್ದೆ ಕೆನ್ನೆಯ ಭೂ ಚೆಹರೆ
ಸಾಕು ಮಾಡದೆ ತೊಟ್ಟಿಕ್ಕುತಿಹೆ
ಸಂಚಿ ತುಳುಕಿಸಿ ತಂಬೆಲರೆ

ತಡವಾದೀತು ಬುತ್ತಿ ಕಟ್ಟುವ
ಚಂದಿರ ಹಸಿವನು ಸಹಿಸೊಲ್ಲ
ಹಿತ್ತಲ ಹಟ್ಟಿಯ ಇಣುಕಿ ಆಗಿದೆ
ನಮ್ಮ ಕೋಣೆಗೂ ಬರಬಲ್ಲ

ನಿನ್ನ ನೆರಿಗೆಯ ಲೆಕ್ಕ ತಪ್ಪಿದೆ
ಅಚ್ಚರಿ ಪಡುತ ಎಣಿಸಿಬಿಡು
ಬಿಂದಿ ಅಂಟಿದ ಕನ್ನಡಿ ಸಾಕ್ಷಿಗೆ
ಒಪ್ಪುವ ಸುಳ್ಳನು ಬರೆದು ಕೊಡು

ಕಿಟಕಿ ಗಾಜಿನ ಮೋಜಿನ ಮಂಜು
ಒಡಲಾಯಿತು ನಮ್ಮನಿಸಿಕೆಗೆ
ಮಳೆಗೂ ಈಗಲೇ ಮನಸಾದಂತೆ
ಬೇಡಿದೆ ಹೊಸತು ಬರವಣಿಗೆ...

- ರತ್ನಸುತ

ಮೊದಲ ಮಳೆ ಈಗಷ್ಟೇ ಶುರುವಾಗಿದೆ

ಮೊದಲ ಮಳೆ ಈಗಷ್ಟೇ ಶುರುವಾಗಿದೆ
ತಯಾರಿಗೂ ಮೊದಲೇ ಹಸಿಯಾಗಿಸಿ
ಮೊದಲ ಹೂ ಚಿಗುರೊಡೆವ ಮುಂಸೂಚನೆ
ಬಳ್ಳಿ ಹೂಂಗುಟ್ಟಿತು ತಲೆಬಾಗಿಸಿ

ಬತ್ತಿದ್ದ ತೊರೆಯಲ್ಲಿ ಹಾಡು ಹರಿದಂತೆ
ನೋಡು-ನೋಡುತ್ತಲೇ ಎಲ್ಲೆಡೆ ಹಸಿರು
ಹನಿಯ ಹಾದಿಲಿ ಬೆಳಕು ಎದುರಾಗಿ
ಬಾನೀಗ ರಂಗೇರಿದ ಬಿಲ್ಲ ತವರು

ಜಾರು ನೆಲ, ಸೋರುವ ಉಪ್ಪರಿಗೆ ಹಂಗು
ಹೂತ ಬೇರಿಗೆ ಈಗ ನೂರು ಕಣ್ಣು
ಬೇಲಿಯನು ದಿಕ್ಕರಿಸಿ ಕೊಚ್ಚಿ ಹೋಯಿತು
ತಾನು ಯಾರಿಗೂ ಸ್ಥಿರವಲ್ಲವೆಂದ ಮಣ್ಣು

ನಿಂತ ಮಳೆ, ನಿಂತ ಹೊಳೆ, ನಾನೂ ನಿಂತಲ್ಲೇ
ಇನ್ನೆಲ್ಲೋ ಇನ್ನೇನೋ ಹೊಸ ಚೇತನ
ಮರದೆಲೆಯು ಕಾಯ್ದಿಟ್ಟ ಹನಿ ಜಾರಿ ತಾಕಲು
ಮನದರಸಿ ಉಲಿದಷ್ಟೇ ರೋಮಾಂಚನ

ಮತ್ತೆ ಮಳೆ ಮುತ್ತ ಸೆಳೆ ಮತ್ತು ಹೊಳೆ
ಜೀವಂತವಾಗಿಸಲು ನಿರ್ಜೀವವ
ಚಿತ್ತವಿದು ಉನ್ಮತ್ತಗೊಳ್ಳದಿರಲಾರದು
ಭಾವುಕತೆ ಮೀರಿದೆ ನಿರ್ಭಾವವ...

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...