Sunday, 15 September 2019

ಆ ದಡದ ಅಲೆಯೊಂದು

ಆ ದಡದ ಅಲೆಯೊಂದು
ಈ ದಡಕೆ ಬಡಿದು
ಏನನ್ನೋ ಪ್ರಸ್ತಾಪಿಸಿದಂತಿದೆ
ಈ ದಡವು ಸುಮ್ಮನೆ
ತನ್ನೆಲ್ಲ ಗುರುತುಗಳ
ಉತ್ತರದ ರೂಪದಲಿ ಕೊಟ್ಟಾಗಿದೆ

ಆ ದಡದಲೊಬ್ಬಳು
ಈ ದಡದಲೊಬ್ಬ
ಹೀಗೆ ನಡೆಸಿರಲು ಸಂಭಾಷಣೆ
ಮೇಲೊಬ್ಬ ಚಂದಿರ
ನೂರು ಚೂರುಗಳಾಗಿ
ಕಡಲೊಡಲು ಚೆದುರಿರಲು ಆಕರ್ಶಣೆ

ಹಿಮ್ಮುಖದ ಅಲೆಗಳನು
ಮುಮ್ಮುಖದವುಗಳು
ಮುದ್ದಾಡಿ ಅಲ್ಲೇನೋ ರೋಮಾಂಚನ
ಸಣ್ಣ ಗುಳ್ಳೆಗಳಂತೂ
ಮೂಡಿ ಸಿಡಿಯುವ ವೇಳೆ
ತಿಳಿಗಾಳಿಗೊಲಿದಂತೆ ವಾತ್ಸ್ಯಾಯನ

ಸಾಲುಗಟ್ಟಿದ ಆಸೆ
ಉಸಿರುಗಟ್ಟಿಸಿ ಮುಂದೆ
ಯಾವ ಸಂಚಿಗೆ ಹೊಂಚು ಹಾಕುತಿಹುದು?
ಅತ್ತ ಅವಳೆದೆಯುಬ್ಬಿ
ಇತ್ತ ಇವ ತಬ್ಬಿಬ್ಬು
ನಡುವೆ ಕಡಲ ದೂರ ಎಂಥ ಘೋರ!

ಒಂದು ಮುಳ್ಳಿಗೆ ಸಿಲುಕಿ
ಒಂದು ಮಲ್ಲಿಗೆ ದಳವು
ಇನ್ನೂ ಹಂಚಿದ ಘಮಲು ಪ್ರೇಮವೇನು?
ವಿರಹಿಗಳು ಹೀಗೆಲ್ಲ
ಕಾವ್ಯ ಪ್ರವೃತ್ತರಾಗಿ
ಮಿಡಿದರೆ ಹೃದಯಕ್ಕೆ ತೃಪ್ತಿಯೇನು...?

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...