Sunday, 15 September 2019

ಒಂಟಿ ಮನೆಯಲ್ಲಿ ದೀಪವಿದ್ದೂ

ಒಂಟಿ ಮನೆಯಲ್ಲಿ ದೀಪವಿದ್ದೂ
ಹಚ್ಚುವ ಮನಸಿರದೆ ಕತ್ತಲೆಲ್ಲೆಲ್ಲೂ
ನೀನು ಹಚ್ಚಿಟ್ಟ ಕಿಚ್ಚೊಂದೇ ಒಳಗೆ
ಹಾಡು ಕಲಿಸಿತ್ತು ಗೋಳಿನಲ್ಲೂ

ಗೊಂಬೆ ಜೋಡಿಸಿ ಉರುಳಿಸಿ ಬಿಟ್ಟೆ
ಲಜ್ಜೆಗೆಟ್ಟವು ನಗುತಾವೆ ನೋಡಿ
ಗಾಜಿನೊಳಗಿಟ್ಟೆ ಜೋಪಾನವಾಗಿ
ಮೂಖ ಹೃದಯಕ್ಕೆ ಮುಳ್ಳೊಂದೇ ಜೋಡಿ

ಮಸಿಯ ಗೋಡೆದು ಮತ್ತೇನೋ ಗೋಳು
ಹುಸಿಯನಾಡೋದೇ ಬದುಕಾಗಿ ಅದಕೆ
ಸುಟ್ಟು ಹೋದಂಥ ಹಾಳೆಯ ಬಯಸಿ
ಗಾಯಗೊಂಡಂತಿತ್ತು ಗೀಚುಹೊತ್ತಿಗೆ

ಮಡಿಕೆಯ ತಳ ಸೋರಿ ಒಲೆಗಿಲ್ಲ ಬಾಳು
ಪೊರಕೆಗೆ ಪೊರೆ ಕಟ್ಟಿ ಹೊಡೆದಷ್ಟೂ ಧೂಳು
ವಾರ ಸಂತೆಯಲಿಟ್ಟು ಮಾರಿಕೊಂಡಂತೆ
ಕನಸುಗಳು ಕಣ್ಣನ್ನೇ ಕರಗಿಸಿವೆ ನೋಡು

ಆದಿಗಂಟಿದ ಗಂಧ ಈಗಿಲ್ಲವೇಕೆ?
ಆಗಾಗ ಬರುತಿದ್ದೆ ಹೀಗಾದೆಯೇಕೆ?
ಕನ್ನಡಿಯ ಎದುರಿಟ್ಟು ಹೋದದ್ದು ನೀನು
ನನ್ನೊಡನೆ ಅಷ್ಟೇ ನಾ ಮಾತಾಡಬೇಕೆ?

ಕೊನೆಗೊಂದು ಮಾತೆಂದು ಕಣ ತುಂಬಿ ಬಂದೆ
ಒಂದಷ್ಟು ಸುಳ್ಳನ್ನು ಬೇಕೆಂದೇ ಕೊಂದೆ
ಇದ್ದಷ್ಟೂ ಕೊಟ್ಟರೆ ಇನ್ನಷ್ಟು ಕೊಡಬಹುದು
ಇಂದಿಗಿಷ್ಟೇ ಪ್ರಾಣವ ಕೊಡಲು ತಂದೆ...

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...