ಮೊದಲ ಮಳೆ ಈಗಷ್ಟೇ ಶುರುವಾಗಿದೆ
ತಯಾರಿಗೂ ಮೊದಲೇ ಹಸಿಯಾಗಿಸಿ
ಮೊದಲ ಹೂ ಚಿಗುರೊಡೆವ ಮುಂಸೂಚನೆ
ಬಳ್ಳಿ ಹೂಂಗುಟ್ಟಿತು ತಲೆಬಾಗಿಸಿ
ತಯಾರಿಗೂ ಮೊದಲೇ ಹಸಿಯಾಗಿಸಿ
ಮೊದಲ ಹೂ ಚಿಗುರೊಡೆವ ಮುಂಸೂಚನೆ
ಬಳ್ಳಿ ಹೂಂಗುಟ್ಟಿತು ತಲೆಬಾಗಿಸಿ
ಬತ್ತಿದ್ದ ತೊರೆಯಲ್ಲಿ ಹಾಡು ಹರಿದಂತೆ
ನೋಡು-ನೋಡುತ್ತಲೇ ಎಲ್ಲೆಡೆ ಹಸಿರು
ಹನಿಯ ಹಾದಿಲಿ ಬೆಳಕು ಎದುರಾಗಿ
ಬಾನೀಗ ರಂಗೇರಿದ ಬಿಲ್ಲ ತವರು
ನೋಡು-ನೋಡುತ್ತಲೇ ಎಲ್ಲೆಡೆ ಹಸಿರು
ಹನಿಯ ಹಾದಿಲಿ ಬೆಳಕು ಎದುರಾಗಿ
ಬಾನೀಗ ರಂಗೇರಿದ ಬಿಲ್ಲ ತವರು
ಜಾರು ನೆಲ, ಸೋರುವ ಉಪ್ಪರಿಗೆ ಹಂಗು
ಹೂತ ಬೇರಿಗೆ ಈಗ ನೂರು ಕಣ್ಣು
ಬೇಲಿಯನು ದಿಕ್ಕರಿಸಿ ಕೊಚ್ಚಿ ಹೋಯಿತು
ತಾನು ಯಾರಿಗೂ ಸ್ಥಿರವಲ್ಲವೆಂದ ಮಣ್ಣು
ಹೂತ ಬೇರಿಗೆ ಈಗ ನೂರು ಕಣ್ಣು
ಬೇಲಿಯನು ದಿಕ್ಕರಿಸಿ ಕೊಚ್ಚಿ ಹೋಯಿತು
ತಾನು ಯಾರಿಗೂ ಸ್ಥಿರವಲ್ಲವೆಂದ ಮಣ್ಣು
ನಿಂತ ಮಳೆ, ನಿಂತ ಹೊಳೆ, ನಾನೂ ನಿಂತಲ್ಲೇ
ಇನ್ನೆಲ್ಲೋ ಇನ್ನೇನೋ ಹೊಸ ಚೇತನ
ಮರದೆಲೆಯು ಕಾಯ್ದಿಟ್ಟ ಹನಿ ಜಾರಿ ತಾಕಲು
ಮನದರಸಿ ಉಲಿದಷ್ಟೇ ರೋಮಾಂಚನ
ಇನ್ನೆಲ್ಲೋ ಇನ್ನೇನೋ ಹೊಸ ಚೇತನ
ಮರದೆಲೆಯು ಕಾಯ್ದಿಟ್ಟ ಹನಿ ಜಾರಿ ತಾಕಲು
ಮನದರಸಿ ಉಲಿದಷ್ಟೇ ರೋಮಾಂಚನ
ಮತ್ತೆ ಮಳೆ ಮುತ್ತ ಸೆಳೆ ಮತ್ತು ಹೊಳೆ
ಜೀವಂತವಾಗಿಸಲು ನಿರ್ಜೀವವ
ಚಿತ್ತವಿದು ಉನ್ಮತ್ತಗೊಳ್ಳದಿರಲಾರದು
ಭಾವುಕತೆ ಮೀರಿದೆ ನಿರ್ಭಾವವ...
ಜೀವಂತವಾಗಿಸಲು ನಿರ್ಜೀವವ
ಚಿತ್ತವಿದು ಉನ್ಮತ್ತಗೊಳ್ಳದಿರಲಾರದು
ಭಾವುಕತೆ ಮೀರಿದೆ ನಿರ್ಭಾವವ...
No comments:
Post a Comment