Wednesday, 25 September 2019

ಬಿಡುಗಡೆಯನ್ನು ಬಯಸಿ

ಬಿಡುಗಡೆಯನ್ನು ಬಯಸಿ
ಸೆರೆಯಾದವರೆಷ್ಟೋ ಜಗದಲ್ಲಿ
ಹುಸಿ ನಗೆಯನ್ನು ಸರಿಸಿ
ಕಣ್ಣೀರಿಡುತಿಹರು ಮರೆಯಲ್ಲಿ
ಉಪಾಯ ಗೊತ್ತಿಲ್ಲದೆ..
ಮುಖವಾಡ ಬೇಕಾಗಿದೆ.. (1)

ಎದುರು-ಬದುರಾಗಿ ಸಿಕ್ಕರೂ
ಗುರುತು ಹಿಡಿವಷ್ಟು ಇಲ್ಲ ಬಿಡುವು
ಅದಲು-ಬದಲಾಗಿ ಯೋಚನೆ
ಅಸಲಿ ಅಸ್ತಿತ್ವವೆಲ್ಲೋ ಕಳುವು
ಮುರಿದ ಕನ್ನಡಿಯ ಮನಸನು
ಕಳೆದುಕೊಂಡವರೇ ಎಲ್ಲ ಕಡೆಯೂ
ಮಾತು ತೊರೆದಷ್ಟೇ ಸುಲಭಕೆ
ನೂರು ಚೂರಾಯಿತಿಲ್ಲಿ ಒಲವು 

ಸಂಜೆ ವೇಳೆಗೆ ಉಸಿರು ಬಂದಂತೆ
ಇರುಳು ಮುಗಿಯುತ್ತ ಬೆಳಕು ಕಂಡಂತೆ
ಯಾವ ಹೊಸತೇನು ಕಾಣದಾಗ
ಜಾಡಿಸು ಎಲ್ಲವ, ಧರಿಸು ಮುಖವಾಡವ.. (2)

ಪುಟವ ತೆರೆದಂತೆ ಹೊಸ ದಿನ
ಪುಟಿದ ಚಿಗುರಂತೆ ಸಂಭ್ರಮದಲ್ಲಿ
ಮನಸಿನಿಂದ ಹೊರ ನಡೆಯುವ
ಮುನಿದ ಅಲೆಗೊಂದು ತೀರವಿರಲಿ
ಹೃದಯ ತಂಬೂರಿ ನಾದಕೆ
ಸತ್ತ ಸ್ವರವೊಂದು ಹುಟ್ಟಿ ಬರಲಿ
ಮೌನ ವ್ಯಾಕರಣವೆಲ್ಲವೂ
ಎದೆಯ ಹಾಡಾಗಿ ಹೊಮ್ಮಿ ಬಿಡಲಿ

ಏಳು ಬೀಳೆಲ್ಲ ಸಹಜವೇ ತಾನೇ
ಎಡವಿ ಬೀಳೋದೂ ಕಲಿತ ಪಾಠನೇ
ನೀನು ನೀನಾಗಿ ಬಾಳುವಾಗ
ಪ್ರಶ್ನಿಸು ಎಲ್ಲವ, ಕಳಚು ಮುಖವಾದವ... (3)

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...