Tuesday, 31 December 2019

ತೆರೆಯ ಸರಿಸಿ

ತೆರೆಯ ಸರಿಸಿ ಮರೆಯಾಗಿರುವ ಮುಖವ ತೋರು ಒಮ್ಮೆ
ಮುಗುಳು ನಗೆಯ ಬೀರಿ, ಮರುಳ ಮಾಡು ನನ್ನ
ಸನಿಹ ಬರುವ ಸಮಯ ತಿಳಿಸಿ ಬೇಕೆಂದೇ ತಡ ಮಾಡು
ಕಾದು ತಾಳುವೆ ಅಲ್ಲೇ, ಕಣ್ಣಲ್ಲೇ ನೂರು ಬಣ್ಣ 
ನಿದಿರೆ ಬಾರದ ರಾತ್ರಿಗಳ, ವರದಿ ಕೇಳದೆ ಹೋಗುವೆಯಾ
ಅದರೋ ಮಾತನು ಅರಿಯದೆಲೆ, ಅಳೆದು ತೂಗುವೆಯಾ
ಕರೆದು ಹೋಗುವೆ ಸನ್ನೆಯಲೇ, ಪ್ರೀತಿ ಮಾಡಲು ಕಲಿಸುವೆಯಾ 
ತಪ್ಪು ಮಾಡಲು ಮುದ್ದು ಮಾತಲೇ ನನ್ನ ತಿದ್ದುವೆಯಾ  

ಕವಿ ಪುಂಗವರು ಶರಣಾಗುವರು ಹಾಡಿ ಹೊಗಳಲು ನಿನ್ನ 
ಸಾಲಲಿ ಮೊದಲು ನಿಂತವ ನಾನೇ ಕರುಣೆ ತೋರದಿರು
ಪ್ರತಿಯೊಂದರಲೂ ಕೊಂಕನು ಹುಡುಕೋ ಚತುರೆ ಅಲ್ಲವೇ ನೀನು
ಬೇರೆ ಹೆಸರ ಹಿಡಿದು ಕರೆವೆ ಯುದ್ಧವೇ ನಡೆಸಿ ಬಿಡು
ಎಲ್ಲೇ ಹೋದರೂ ಬೆಂಬಿಡದೆ, ನೀನೂ ಹಾಜರಿ ಹಾಕಿರುವೆ 
ಎಲ್ಲ ಅರಿತರು ಸುಮ್ಮನೆ ನೀ, ನನ್ನ ಕಾಡಿಸುವೆ
ನಿನ್ನ ಮುನ್ನುಡಿ ಇಲ್ಲದಿರೋ, ನಾನು ಖಾಲಿ ಪುಸ್ತಕವೇ 
ನೀನು ಅಂಕವ ನೀಡದೆ ಹೋದರೆ ಸೊನ್ನೆ ಆಗಿರುವೆ 

**ಹಾಡು**

https://soundcloud.com/bharath-m-venkataswamy/0k3xr7jc5dmv

Friday, 27 December 2019

ನೂರು ದಾರಿ ಒಂದುಗೂಡಿ ಏಕೆ ಸಾಗಬಾರದು?

ನೂರು ದಾರಿ ಒಂದುಗೂಡಿ ಏಕೆ ಸಾಗಬಾರದು?
ಊರು ನಾಡು ದೇಶ ಏಕೆ ಒಂದುಗೂಡಬಾರದು?
ನನ್ನ ನಿನ್ನ ಭಾಷೆಯಲ್ಲಿ ಪ್ರೀತಿಗುಂಟು ಅರ್ಥವು 
ಯಾವ ಗಾಳಿ ಮಾತೂ ನಮ್ಮ ದೂರ ಮಾಡಲಾಗದು 
ನಾವೆಲ್ಲಾ ಒಂದಾಗಿ 
ಹೂದೋಟದಂತೆ ಬೀಸೋ ಗಾಳಿಯಲ್ಲಿ ತೂಗುವ 
ಹೋದಲ್ಲಿ ಬಂದಲ್ಲಿ
ನಗುವನ್ನೇ ಹಂಚಿ ಸ್ನೇಹದಿಂದ ಕೂಡಿ ಬಾಳುವ

ಒಂದೇ ನೀರಿನ ಮೀನುಗಳು ನಾವು
ಈಜಬೇಕು ಎದುರು ಪ್ರವಾಹ ಬಂದರೂ
ಒಂದೇ ಸೂರಡಿ ಕನಸ ಕಂಡೆವು
ತಿದ್ದಲೇ ಬೇಕು ಅಕ್ಷರ ಏನೇ ಆದರೂ
ನಾಳೆ ಹೊಸತು ಅಧ್ಯಾಯ, ಮುಗಿದ ನೆನ್ನೆ ಇತಿಹಾಸ
ಇಂದೇ ಇಂದೇ ಇಂದೇ ನಮ್ಮ ಪಾಲಿನ ಅವಕಾಶ
ರೆಕ್ಕೆ, ಬಿಚ್ಚಿ, ಹಾರೋವಾಗ ನಮ್ಮದೇ ಆಕಾಶ..... 

ಬಣ್ಣ ರಾಚುವ ಗೋಡೆಗಳ ಮೇಲೆ 
ಮೂಡೋ ರೇಖೆಯು ನಮ್ಮ ಭಾವ ಸೂಚಕ 
ಮೋಡ ಮಣ್ಣಿನ ನಂಟು ಬೆಸೆವಾಗ 
ಹರಿದು ಹಾಳೆಯ ದೋಣಿ ಮಾಡೋ ಕಾಯಕ 
ಕಲಿಕೆ ಇಲ್ಲಿ ಆಟವೇ, ಕಲ್ಲು-ಮುಳ್ಳು ಪಾಠವೇ 
ಮನೆಯೇ ನಮ್ಮ ಮೊದಲ ಶಾಲೆ, ಇಲ್ಲಿ ಎಲ್ಲ ಚಂದವೇ 
ಬೆರೆತು, ಕಲಿತು, ಸಿಕ್ಕ ಅರಿವೇ ಶಿಕ್ಷಣ ಅಲ್ಲವೇ... 


**ಹಾಡು**
https://soundcloud.com/bharath-m-venkataswamy/nsf9tmhmowsp

Monday, 23 December 2019

ದಿನಕೊಂದು ಕಥೆಯಂತೆ ಎಷ್ಟಾಗಿರಬಹುದು?

ದಿನಕೊಂದು ಕಥೆಯಂತೆ ಎಷ್ಟಾಗಿರಬಹುದು?
ಲೆಕ್ಕವೇ ಇಲ್ಲ ಮಂಪರಿನ ಸಹಚಾರಿ 
ಒಂದು ಕಾಡು, ಒಬ್ಬ ರಾಜ, ಒಂಟಿ ಮುದುಕಿ 
ಹೀಗೆ, ಒಂದೊಂದೇ ಕೂಡಿ ನೂರಾರು ಪಾತ್ರ 

ಥಟ್ಟನೆ ಆ ರಾತ್ರಿ ಯಾವುದೋ ಕಥೆಗೆ 
ನೀ ಪಟ್ಟು ಹಿಡಿದಿದ್ದೆ, ನೆನಪಾಗಲಿಲ್ಲ 
ನೆಪಕೊಂದು ಉಪಕಥೆ ಕೊಡಲಿಲ್ಲ ಹಿತವ 
ನಿನ್ನ ವ್ಯಥೆಗೆ ಎದೆ ಬಿರಿದದ್ದು ಸುಳ್ಳಲ್ಲ 

ಹೇಳುತ್ತಾ ಹೋದಂತೆ ಮಾಳಿಗೆಗೆ ನೆಟ್ಟ 
ಕಣ್ಣುಗಳು ಬೆರಗಾಗಿ ಊಹಿಸಿದವೇನೇನೋ 
ಕಲ್ಪನೆಯ ಸೂರಿನಡಿ ಸೃಷ್ಟಿಸಿದ ಚಿತ್ತಾರ 
ಕಾಡದೆ ಬಿಡಲಿಲ್ಲ ನಿನ್ನೊಡನೆ ನನ್ನನ್ನೂ 

ರೆಪ್ಪೆ ಮುಚ್ಚಿದೆಯೆಂದು ನಿಲ್ಲುವಂತಿಲ್ಲ 
ಮುಂದುವರಿಸದೆ ನಿದ್ದೆ ಮೂಡುವಂತಿಲ್ಲ 
ಕಂಪಿಸುವೆ ಅರೆಕ್ಷಣ ತಂಪಿನಲೂ ಬೆವರುತ 
ಬಿಟ್ಟಲ್ಲಿಂದಲೇ ಮತ್ತೆ ಶುರು ಮಾಡುವೆ 

ಏಕಮುಖವಾಗಿತ್ತು ಭಾವಗಳ ವಿಲೇವಾರಿ
ಈಗ ನನ್ನ ಪದಕೆ ನಿನ್ನ ದ್ವಿರುಕ್ತಿ 
ಎಚ್ಚರವಹಿಸುವ ಇರುಳಲಿ ಇಬ್ಬರಲೂ 
ಒಂದೇ ಕನಸನು ಕಾಣುವ ಶಕ್ತಿ....  

ಗಡಿಗೆಯ ಸದ್ದಲ್ಲಿ ತುಂಬಿರದ ದುಃಖವಿದೆ

ಗಡಿಗೆಯ ಸದ್ದಲ್ಲಿ ತುಂಬಿರದ ದುಃಖವಿದೆ
ತುಂಬಿಯೇ ಇದ್ದರದು ಅಳುತಿರಲಿಲ್ಲ
ಒಂದೊಂದೇ ಹನಿ ಕೂಡಿ ತುಂಬೋದು ಸಹಜನೆ
ಕೂಡಿ ಬಾಳೋಕಲ್ಲಿ ಮನಸಿರಲಿಲ್ಲ
ತಂಬೂರಿ ಮೀಟುವ ಬೆರಳಿಗೆ ಮುನಿಸಂತೆ
ತಂತಿಗೂ ಬೆರಳಿಗೂ ಸರಿ ಹೊಂದಲ್ಲ
ಸ್ವರವೊಂದು ಒಲಿದಾಗ ಹಾಡೊಂದು ಚಿಗುರೀತು
ಪದಕಿನ್ನೂ ಪರದಾಟ ಮುಗಿದಂಗಿಲ್ಲ.. ಜಂಗಮನು ಇನ್ನೂ ಎಚ್ಚರವಾಗಿಲ್ಲ..
ಇರುವಂತೆ ಇರುವೆವು ಬಂದಂತೆ ನಡೆದೇವು
ಇರಿಸು-ಮುರಿಸು ಮರೆತು ಬೆರೆತೋರಲ್ಲ
ಇರುಳ ದಾಟಿ ನಾಳೆ ಬರುವಂತೆ ಹೊಸತನ್ನ
ಬೆರಗಾಗಿ ಕಾಣೋಕೂ ಪುರುಸೊತ್ತಿಲ್ಲ
ಮುಳ್ಳಿರೋ ಗಡಿಯಾರ ಗೋಡೆಗೆ ತಗಲಾಕಿ
ಸಮಯಕ್ಕೆ ಸರಿಯಾಗಿ ನಡೆದೋರಲ್ಲ
ಕಲ್ಲ ಕೆತ್ತಿ ಎಲ್ಲ ಅದರ ತಲೆಗೆ ಹೊರೆಸಿ
ನಮ್ದೇನೂ ನಡಿಯೊಲ್ಲ ಅಂತೀವಲ್ಲ.. ಇದ್ರೆ ಆ ದೇವ್ರಾದ್ರೂ ನಗುತಾನಲ್ಲ...
ಬತ್ತದ ಗದ್ದೆಲಿ ಗುದ್ದಾಡಿ ಗೆದ್ದೋನು
ಬಿತ್ತಿ ಬೆಳೆದಾಗಷ್ಟೇ ಸತ್ಯ ಮಾತು
ನಾವೇನೇ ಅಂದ್ಕೊಂಡ್ರೂ ಆಗೋದೇ ಆಗೋದು
ಸೋಲು ಗೆಲುವು ಎರಡೂ ಬಾಳ ಸೇತು
ನನ್ನಂತೆ ನೀನಿಲ್ಲ , ನಿನ್ನಂತೆ ಅವನಿಲ್ಲ
ಅವನಿಗೆ ನಾನ್ಯಾರೋ ಗೊತ್ತೇ ಇಲ್ಲ
ಹುಟ್ಟು ಸಾವಿನ ಪಾಠ ಹೇಳೋ ಹಣ್ಣೆಲೆಯನ್ನ
ಒಪ್ಪುವ ಗುಣ ಮನುಜ ಕಲಿತೇ ಇಲ್ಲ.. ಅರಿತೋನಿಗರಿವೇನೇ ಖುಷಿಯ ಮೂಲ...

**ಹಾಡು**

https://soundcloud.com/bharath-m-venkataswamy/izgfwgl4b9cx

Thursday, 19 December 2019

ಮನೆಗೆ ಬರಲೊಪ್ಪುವೆನು

ಮನೆಗೆ ಬರಲೊಪ್ಪುವೆನು
ಮಾತು, ಮನಸುಗಳ ಹದಗೊಳಿಸಿ
ಮೊಗಸಾಲೆಯಲ್ಲಿ ಕಸವಿದ್ದರೂ ಸರಿಯೇ
ಮೊಗದಲ್ಲಿ ನಗುವಿರಿಸಿ
ಒಲೆ ಹಚ್ಚದೆ, ಅಕ್ಕಿ ಬೇಯದೆ
ಉದರವ ಬೆಚ್ಚಗಿರಿಸುವಂತಾದರೆ
ಪ್ರತಿ ಹೆಜ್ಜೆಗೂ ಪ್ರೀತಿಯುಣಿಸುವಂತಿದ್ದರೆ

ಮನೆಗೆ ಬರಲೊಪ್ಪುವೆನು
ಹರಕಲು ಬಟ್ಟೆ ತೊಟ್ಟವನ ಜರಿಯದೆ
ಪಾದಕಂಟಿದ ಕೆಸರ ಲೆಕ್ಕಿಸದೆ
ಒರಟು ಹಸ್ತವ ಹಿಡಿದು
ಊರಾಚೆಯಿಂದ ಹೊಸ್ತಿಲ ತನಕ
ಮುನ್ನಡೆಸುವ ಔದಾರ್ಯತೆ ನಿಮಗಿದ್ದರೆ
ನನ್ನಂತೆ ನಾನು ಅನಿಸಲು ನಿಮಗಾದರೆ

ಮನೆಗೆ ಬರಲೊಪ್ಪುವೆನು
ಚಪ್ಪರ, ಚಾಮರಗಳ ಹಂಗಿಲ್ಲದೆ
ನಿಬ್ಬೆರಗಾಗಿಸಲ್ಪಡುವ ಪ್ರಯಾಸವಿಲ್ಲದೆ
ಹಬ್ಬದಬ್ಬರದ ಮಬ್ಬಿರದೆ
ಒಬ್ಬರನ್ನೊಬ್ಬರ ದೂಷಿಸದೆ
ಆಸ್ಥೆಯ ಆಸ್ತಿಯನ್ನೊಳಗೊಂಡ
ವಿಸ್ತಾರವಾದ ಹೃದಯ ನಿಮ್ಮದಾದರೆ

ಮನೆಗೆ ಬರಲೊಪ್ಪುವೆನು
ಪಸೆಯಲ್ಲಿ ನೆನ್ನೆಗಳ ಕೆದಕದೆ
ಕಿಸೆಯಲ್ಲಿ ನಾಳೆಗಳ ಹುಡುಕದೆ
ಕಣ್ಣೊಳಗೆ ಇಂಗದ ಇಂಗಿತಕೆ
ನೆಲೆ, ಬೇರು, ಗೊಬ್ಬರದಾಚೆಗೆ
ನಂಬುಗೆಯ ನೀರೆರೆವ ಗುಣವಿದ್ದರೆ
ಬೆಳೆದ ನಿಮ್ಮೊಳಗೆನ್ನ ಗುರುತಿದ್ದರೆ

ಮನೆಗೆ ಬರಲೊಪ್ಪುವೆನು
ಇರುವಷ್ಟು ಕಾಲ ಅದು ನನ್ನದೆಂಬ
ಬಿಟ್ಟು ಹೊರಡಲು ನಂಟು ಮುರಿಯಿತೆಂಬ
ಮೂಲದ ಅರಿವನ್ನು ನನ್ನೊಳಗೆ ಬಿತ್ತಿದರೆ
ಬೆನ್ನು ಬಾಗಿಲ ಕಂಡು
ಕಂಡ ದಾರಿಯ ಕೊಂದು
ಕೊಂದ ನೆರಳಿನ ಛಾಯೆ ಮತ್ತೆ ಉಸಿರಾದರೆ
ಪತ್ತೆ ಪತ್ರಗಳೆಲ್ಲ ದಿಕ್ಕೆಡುವಂತಿದ್ದರೆ
ವಿಶ್ವವೇ ನನ್ನ ಮನೆಯಾಗುವಂತಾದರೆ...

ಬಾ ಕೋಗಿಲೆ ಮಾತಾಡುವ

ಬಾ ಕೋಗಿಲೆ ಮಾತಾಡುವ
ತಾಯೊಬ್ಬಳು ಅಳುತ್ತಿರುವಾಗ ಹಾಡುವುದಾ?
ಬಾ ಮಾತಾಡುವ
ಅವಳ ನೋವ ಪರಿಹರಿಸುವ ಬಗ್ಗೆ
ದುಃಖ ಸಾಗರಕೆ ಎರಗಿ
ಅಂತರಾಳದ ಗುದ್ದಾಟವ ಅರಿತು
ಹೊತ್ತು ಮೀರುತ ಮಾತಾಡುವ



ಏನೆಂದು ಕೇಳಿದರೆ ಸುಳ್ಳಾಡುವಳು
ಮಾತಲ್ಲಿ ತಡೆದಿಟ್ಟ ಸಂಕಟ
ಕಣ್ಣಲ್ಲಿ ಉಮ್ಮಳಿಸಿದಾಗ ನಿತ್ರಾಣಳಾಗಿ
ಕುಸಿದು ಬಿದ್ದಾಗ ಮೇಲೆತ್ತುವ ಬಗ್ಗೆ
ಬಿಗಿದಿಟ್ಟ ಉಸಿರನ್ನು ತಿಳಿಗೊಳಿಸೋ ಬಗ್ಗೆ
ಮಾತಾಡುವ ಬಾ

ಒಲೆಯ ಕಿಡಿ ಹಾರಿ ಹಣೆ ಸುಟ್ಟಾಗ
ಹಿಟ್ಟು ತೊಳಸುತ ಕೈ ಬೊಬ್ಬೆ ಹೊಡೆದಾಗ
ಬಚ್ಚಲ ಸಾರಿಸಿ ಪಾದ ಬಿರಿದಾಗ
ಹಬ್ಬದ ಸೀರೆ ಬಣ್ಣ ಬಿಟ್ಟಾಗಲೂ
ಇಷ್ಟು ನೊಂದಿರಲಿಲ್ಲ ಈಕೆ

ಇದ್ದ ಮನೆಯ ಕಷ್ಟ ದಿಬ್ಬಗಳ ಹೊತ್ತು
ಬಿದ್ದ ಕಂದನ ತರಚು ಗಾಯವ ಮರೆತು
ನೆರೆಹೊರೆಯವರ ಕೊಂಕು
ಕೈ ಹಿಡಿದವನ ಚಟಕೂ
ಚಿಟಿಕೆಯಲಿ ಪರಿಹಾರ ಹುಡುಕಿದ ಈಕೆ
ಅಳುವುದೆಂದರೆ ಹೇಗೆ?

ಮೂಖಿಯಾದಳು ದೂರಲು ಯಾರೊಬ್ಬರನ್ನೂ
ಬಾಕಿ ಏನೇ ಇರಲಿ ಅವಳಂತೆ ತಾನು
ಸಹಜವಾಗಿ ನಗುವ ನಟನಾ ಪ್ರವೀಣೆ
ಒಗ್ಗರಣೆ ಡಬ್ಬಿಯೇ ಉತ್ತಮ ಉಪಮೆ
ಯಾರನ್ನೂ ಬಾಧಿಸದ ಈಕೆ
ಮರುಗುತಿಹಳೆಂದರೆ ಹೇಗೆ?

ಹಸಿದಾಗ ಘರ್ಜಿಸಿದ ಕೋಣೆಯಲಿ
ಮುನಿದು ಯುದ್ಧವಗೈದ ಅಂಗಳದಲಿ
ಪಟ್ಟವೇರಿ ಮೆರೆದ ಕೋಟೆಯಲಿ
ಪಟ್ಟು ಹಿಡಿದು ಗೆದ್ದ ರಂಗದಲ್ಲಿ
ದಿಟ್ಟವಾಗಿ ಬೆಳೆದ ಮಣ್ಣಿನಲಿ
ಥಟ್ಟನೆ ಮನಸಾಗೋ ಸ್ವರ್ಗದಲಿ
ಸೂಜಿಯಂಚಿನಷ್ಟು ಘಾಸಿಯಾದರೆ
ಶಿಖರಕ್ಕೆ ಏಕಿಷ್ಟು ಶೋಕವೆಂಬ
ಒಗಟನ್ನು ಬಿಡಿಸೋಕೆ ಉಪಕರಿಸು ಬಾ

ಮೌನ ಬಿಡು ಕೋಗಿಲೆ
ಮಾತನಾಡು ಈಗಲೆ
ಶಕ್ತಿ ಮಾತೆ ಮಡಿಲಿಗೆ
ಧಾವಿಸ ಬೇಕು ಕೂಡಲೆ.....

Friday, 13 December 2019

ಕ್ರಿಸ್ಮಸ್ ಟೋಸ್ಟ್

ಒಂದೆಡೆ ಸೇರಿ ಎಲ್ಲರೂ ಚೀರ್ಸ್ ಹೇಳುತ್ತಾರೆ 
ಒಂದೇ ಗುಟುಕಿಗೆ  ಬಿಯರ್ ಮೇಲೆ ಬಿಯರ್ 
ಗಟಗಟನೆ ಹೊಟ್ಟೆಗಿಳಿಸಿಕೊಂಡು 
ಆನಂತರ ರಮ್, ವಿಸ್ಕಿ, ಜಿನ್ ಇತ್ಯಾದಿ 
ಏರಿದ ನಶೆಯೇರಿ ನಶೆ ಕುಳಿತಾಗ 
ಅಲ್ಲೊಂದು ಚರ್ಚೆ ಆರಂಭಿಸುತ್ತಾರೆ 

ನಾನಾ ಗಡಿಗಳ ದಾಟಿ ಬಂದವರು 
ಮಂದ ಬೆಳಕಿನ ಕೆಳಗೆ ಪಾರ್ಟಿ ಮಾಡುತ್ತಿದ್ದರು 
ಅವರ ಚರ್ಮದ ಬಣ್ಣವ ಕತ್ತಲು ಸಮನಾಗಿಸಿತ್ತು 
ಮತ್ತೇರಿದ್ದರಿಂದ ಫೌಲ್ ಲ್ಯಾಂಗ್ವೇಜ್ ಸಾಮಾನ್ಯವಾಗಿತ್ತು 
ಬಾರ್ ಟೆಂಡರ್ ಎಲ್ಲ ಬೈಗುಳಗಳ ನಗುತ್ತಲೇ ಸ್ವೀಕರಿಸಿ 
ಮತ್ತೆ ಮತ್ತೆ ಆರ್ಡರ್ಗಾಗಿ ಟೇಬಲ್ಲತ್ತ ಸುಳಿದಾಡುತ್ತಿದ್ದ 

ಅದು ಕ್ಯೂಬನ್ ರೆಸ್ಟೋ-ಬಾರ್ 
ಅಲ್ಲಿ ಛೆ ಗುವಾರ ನಗುತ್ತಲೇ ಗೋಡೆಗೆ ಜೋತುಕೊಂಡಿದ್ದ 
ಅಲ್ಲಿದ್ದವರೆಲ್ಲ ಕ್ರಾಂತಿಯ ಕುರಿತು ಮಾತಾಡಿದರು 
ಕ್ಯೂಬನ್ ಸಿಗಾರನ್ನು ವಿಶ್ಲೇಷಿಸುತ್ತಿದ್ದರು 
ಯಾರನ್ನೂ ಬೇಡದೆ ಕಾಲೆಳೆಯುತ್ತಿದ್ದರು 
ಕೊಲೊನಿಯಲ್ ಹಿಸ್ಟೊರಿಯನ್ನೂ ಕೆದಕುತ್ತಾ 

ಕ್ರಿಸ್ಮಸ್ ಟೋಸ್ಟ್ ಗಾಜಿನ ಸದ್ದು 
ಎಲ್ಲ ದಿಕ್ಕಿನಲ್ಲೂ ಕೇಳಿ ಬರುತ್ತಿತ್ತು 
ಎಲ್ಲರ ತಲೆ ಮೇಲೂ ಸಾಂಟಾ ಟೋಪಿ 
ಮುಖದಲ್ಲಿ ಸಂಭ್ರಮ, ಎಲ್ಲಿಲ್ಲದ ಉತ್ಸಾಹ 
ನಗುವು ಎಥೇಚ್ಛವಾಗಿ ತುಂಬಿತ್ತು 
ಯಾರು ಯಾರನ್ನೂ ಬಲ್ಲವರಾಗಿಲ್ಲವಾದರೂ 
ಅಲ್ಲಿ ಎಲ್ಲರಿಗೆಲ್ಲರೂ ಪರಿಚಿತರಾಗಿದ್ದರು 

ವರ್ಷಾರಂಭಕ್ಕೂ ಮುನ್ನ ಹೀಗೊಂದು ರಾತ್ರಿ 
ಕೇಳಿದರೆ ಟ್ರಯಲ್ಸ್ ಎಂದು ಟ್ರೋಲ್ ಮಾಡುತ್ತಾ 
ಮತ್ತೊಂದು ಬಾಟಮ್ಸ್ ಅಪ್ 
ಚಳಿಗಾಲದ ಸಂಜೆಗಳು ನಿಜಕ್ಕೂ ಸುದೀರ್ಘ 
ಎಚ್ಚರದಿಂದಿದ್ದಷ್ಟು ಮೋಜು ಜಾಸ್ತಿ 
ಎಚ್ಚರದಿಂದಿರಬೇಕಷ್ಟೆ...

ಮರ ಕಡಿವಾಗ ದೂರವಿರಿ

ಮರ ಕಡಿವಾಗ ದೂರವಿರಿ
ಕಾರು, ಬೈಕು ಇತ್ಯಾದಿಗಳ ದೂರವಿಡಿ
ಮಲಗಿರುವವರ ಕೂಗಿ ಎಚ್ಚರಿಸಿ
ಕಡಿವವ ತನ್ನ ಕರ್ತವ್ಯ ನಿಭಾಯಿಸುತ್ತಾನೆ
ಅಸಂಬದ್ಧ ಪ್ರಶ್ನೆ ಕೇಳಿ ಕೆಣಕದಿರಿ
ಸಾಕು ನಾಯಿಗಳು, ಬೀದಿ ನಾಯಿಗಳು
ಅತ್ತ ಸುಳಿಯದಂತೆ ನೋಡಿಕೊಳ್ಳಿ
ಕರೆಂಟು ತೆಗೆಯಬಹುದು
ಎಲ್ಲಕ್ಕೂ ಮುಂಚೆಯೇ ಪ್ರಿಪೇರಾಗಿ
ಕಡಿವಾಗ ಚಕ್ಕೆಗಳು ಚಿಮ್ಮಿ
ಕಣ್ಣು ಘಾಸಿಗೊಳ್ಳಬಹುದು, ಎಚ್ಚರ ವಹಿಸಿ
ಆ ಮರದ ಜೊತೆಗೆ
ನಿಮ್ಮ ನಿಮ್ಮ ಕೆತ್ತನೆಯ ಪ್ರೇಮ ಗುರುತುಗಳು
ಇಂದಿಗೆ ಸಮಾಧಿಯಾಗುತ್ತವೆ
ಒಂದು ಫೋಟೋ ತೆಗೆದಿಟ್ಟುಕೊಳ್ಳಿ
ಉಯ್ಯಾಲೆಯ ಹಗ್ಗದ ಗುರುತು
ಗಾಯದ ಗಂಟಿನಂತೆ ಉಳಿದಿತ್ತು
ಸಾಧ್ಯವಾದರೆ ಒಮ್ಮೆ ಮರವೇರಿ ಕಂಡು ಬನ್ನಿ
ಎಷ್ಟೋ ಸಲ ಪಿಕ್ಕೆಗೆ ಗುರಿಯಾಗಿದ್ದಿರಿ
ಆಗ ಹಿಡಿ ಶಾಪ ಕೊಟ್ಟಿದ್ದಿರಿ
ಶರತ್ಕಾಲದಲ್ಲಿ ಎಲೆಗಳುದುರಿ
ಸಾರಿಸಿದ ಮನೆಯಂಗಳವ ಛೇಡಿಸಿತ್ತು
ಹೋದರೆ ಹೋಗಲಿ ಕ್ಷಮಿಸಿ ಬಿಡಿ
ನೆನೆಪಿಗೆ ಒಂದು ರಂಗೋಲಿ ಬಿಡಿಸಿ
ಗೂಡು ಕಟ್ಟಿದ್ದ ಹಕ್ಕಿಗಳು
ಬಾಡಿಗೆ ವಸತಿಗೆ ನಿಮ್ಮ ಛಾವಣಿಗೆರಗಬಹುದು
ಸಜ್ಜ ಸಾಲಿಗೆ ಮುಳ್ಳ ನೆಡಿ
ಸಿನ್ಟೆಕ್ಸಿನ ಮುಚ್ಚಳ ಬಿಗಿಗೊಳಿಸಿ
ಒಣ ಹಾಕಿದ ಸಂಡಿಗೆಗೆ ಕಾವಲಿರಿ
ಅಥವಾ ತಗಡಿನ ಡಬ್ಬಿ ಬಾರಿಸುತ ಕೂರಿ
ಮರ ಕಡಿದು ಹೋದವರು
ಬೇರೊಂದು ಮರದ ಕೆಳಗೆ ವಿರಮಿಸಿರುತ್ತಾರೆ
ಒಂದು ಚೊಂಬು ನೀರು ಕೊಟ್ಟು ಕೇಳಿ
ಸ್ವಾಮಿ ಕರೆಂಟು ಇವತ್ತೇ ಬರುತ್ತಾ?
ನೆಕ್ಸ್ಟು ಯಾವ್ ಮರ ಕಡಿತೀರಿ? ವಗೈರೆ .. ವಗೈರೆ ..
ಯಾವುದೋ ದೇಶದ ಕಾಡ್ಗಿಚ್ಚು
ನಮ್ಮ ದೇಶದತ್ತ ಹಬ್ಬುವ ಟಿ.ವಿ ಸುದ್ದಿಗೆ
ವಿಚಲಿತರಾಗುತ್ತಾ ಊಟ ಮುಗಿಸಿ
ಮದ್ದು-ಮಾತ್ರೆ ನುಂಗಿ
ಎಚ್ಚರವಿರದೆ ನಿದ್ದೆಗೆ ಜಾರಿ
ಬೆಳಿಗ್ಗೆ ತಿಂಡಿ ಕಾಫಿ ಮುಗಿಸಿ
ಇಸ್ತ್ರಿ ಮಾಡಿದ ಬಟ್ಟೆ ತೊಟ್ಟು
ಗಾಡಿ ಏರಿ, ಹೆಲ್ಮೆಟ್ ಏರಿಸುವ ಮುನ್ನ
ಮಾಸ್ಕ್ ಧರಿಸಿ ಆಫೀಸ್ಗೆ ಹೊರಡಿ
ಬೆಂಗ್ಳೂರ್ ತುಂಬ ಹೊಗೆಯೋ ಹೊಗೆ....

Wednesday, 11 December 2019

***ಶಾಯರಿ***

ಹಾಡು 
*******
ಏನನೋ ನಾ ಹೇಳುತಾ ಸಾಗುವೆ
ನೀ ಹಿಂದೆಯೇ ಹಿಂಬಾಲಿಸಿ ಬಾ
ಮನವರಿಕೆಯಾಗಲು ಮೊದಲಿಗೆ
ಮರುಕಳಿಸೆ ಜೊತೆಯಾಗಿ ಬಾ
ಮರೆತು ಮುಗ್ಗರಿಸಿದಂತೆ ಸಾಲು
ಎಡವದೆ ಬೆನ್ನ ತಡವು ಬಾ
ನಿನ್ನ ಕುರಿತೇ ಕೊನೆ ಮುಟ್ಟುವೆ ಮೆಲ್ಲೆಗೆ 
ಕೇಳುತಲೇ ಉಲಿ ನೀ......  ವ್ಹಾ.. ವ್ಹಾ..

ಶಾಯರಿ.. ಶಾಯರಿ.. ನಿನ್ನ ಈ ವೈಖರಿ!

ನಮ್ಮ ನಡುವ ಈ ಜುಗಲ್ಬಂದಿಗೆ
ರೀತಿ ನಮ್ಮದೇ ಬೇರೆ ಇಲ್ಲ ಬಾ
ನೀನು ಸೋತು, ನಾನೂ ಸೋತು ಮುಂದೆ 
ಇಬ್ಬರೂ ಗೆದ್ದೆವೆನ್ನೋಣ ಬಾ
ಏನೋ ಹೊಸತೊಂದನು ಹುಡುಕಲು 
ಮೌನಕ್ಕೆ ತಂಬೂರಿ ಮೀಟು ಬಾ
ನಿನ್ನ ಹೆಸರ ಒಗಟು ಮಾಡಿ ಹಾಡುವೆ
ಬಿಡಿಸಿ ಉಪಕರಿಸು ...... ವ್ಹಾ.. ವ್ಹಾ..



ಶಾಯರಿ.. ಶಾಯರಿ.. ನಿನ್ನ ಈ ವೈಖರಿ!

ನೀಳವೆನಿಸಿದರೆ ಮತ್ತೆ ಆಲಿಸು
ನೀರಸವಾದರೆ ದಾಳಿಗೆರಗಿ ಬಾ
ನುರಿತವಾದುವು ನಿನ್ನ ನೋಡುತ
ನಡುಗಿ ಹೋದವು ಕಂಡು ಬೆಚ್ಚು ಬಾ
ಗುಂಡಿಗೆ ತಾಳವು ಹೆಚ್ಚುತ ಹೆಚ್ಚುತ
ನಿನ್ನ ಎದೆಗೆ ತಾಳೆ ಹಾಕಲೆಂದು ಬಾ
ಇಬ್ಬರೆದೆಯ ಒಳಗೆ ಮಿಡಿದ ಶಾಯರಿ
ನೆಚ್ಚಿ ಕನಿಕರಿಸು ....  ವ್ಹಾ.. ವ್ಹಾ..



ಶಾಯರಿ.. ಶಾಯರಿ.. ನಿನ್ನ ಈ ವೈಖರಿ!

ತುಸು ಪೋಲಿಯಾಗುವೆ ತಡೆಯದೆ 
ಹಿಡಿದು ಮರುಳಾಗಿಸುತ ಬೀಗು ಬಾ
ಹುಸಿ ಕೋಪದ ಎಳೆಯನು ಬಿಡಿಸುತ
ಮುಂಗೋಪಿಯ ಮುಗುಳ್ನಗೆಯ ತಿದ್ದು ಬಾ
ಎಲ್ಲ ಮೆಚ್ಚಿಗೆಯಾದರೂ ನನ್ನಲಿ
ಏನೂ ಮೆಚ್ಚದಂತೆ ನಟಿಸು ಬಾ
ನಿನಗೆಂದೇ ಗೀಚಿ ಹರಿದ ಕಾಗದ 
ಒಗ್ಗೂಡಿಸಿ ಉದ್ಗರಿಸು....  ವ್ಹಾ.. ವ್ಹಾ..



ಶಾಯರಿ.. ಶಾಯರಿ.. ನಿನ್ನ ಈ ವೈಖರಿ!

ಕವಿತೆ
******
ಶಾಯರಿ ನಾ ಹೇಳುತ್ತಾ ಸಾಗುವೆ
ನೀ ಹಿಂದೆಯೇ ಹಿಂಬಾಲಿಸಿ ಸಾಗಿ ಬಾ
ಮನವರಿಕೆಯಾಗಲೆಂದು ಮೊದಲಿಗೆ
ಮತ್ತೆ ಮರುಕಳಿಸಲು ಆಗ ಜೊತೆಯಾಗಿ ಬಾ
ಮರೆತು ಮುಗ್ಗರಿಸಿದಂತೆ ಸಾಲುಗಳು
ಎಡವದಂತೆ ತನ್ನ ಬೆನ್ನ ತಡವು ಬಾ
ನಿನ್ನ ಕುರಿತೇ ಕೊನೆಗೊಳಿಸುವೆ ಹೇಳದೆ
ಕೇಳಿ ಕೇಳದಂತೆ ಉಲಿ ವ್ಹಾ.. ವ್ಹಾ..

ನಮ್ಮ ನಡುವ ಈ ಜುಗಲ್ಬಂದಿಗೆ
ನಮ್ಮದೇ ರಿವಾಜು ಬೇರೆ ಇಲ್ಲ ಬಾ
ನೀನು ಸೋತು, ನಾನೂ ಸೋತು ಹಾಗೇಯೇ
ಇಬ್ಬರೂ ಗೆದ್ದೆವೆನ್ನೋಣ ಬಾ
ಏನೋ ಹೊಸತೊಂದನು ಆಲೋಚಿಸೆ
ಮೌನಕ್ಕೆ ತಂಬೂರಿ ಮೀಟು ಬಾ
ನಿನ್ನ ಹೆಸರ ಒಗಟು ಮಾಡಿ ಹಾಡುವೆ
ಬಿಡಿಸಿದಂತೆ ನಾಚಿ ಹೇಳು ವ್ಹಾ.. ವ್ಹಾ..

ನೀಳವೆನಿಸಬಹುದು ಮತ್ತೆ ಆಲಿಸು
ನೀರಸವಾದರೆ ದಾಳಿಗೆರಗಿ ಬಾ
ನುರಿತವಾದುವೆಲ್ಲ ನಿನ್ನ ನೋಡುತ
ನಡುಗಿ ಹೋದವದನು ಕಂಡು ಬೆಚ್ಚು ಬಾ
ಗುಂಡಿಗೆ ತಾಳವು ಹೆಚ್ಚುತ ಹೆಚ್ಚುತ
ನಿನ್ನ ಎದೆಗೆ ತಾಳೆ ಹಾಕಿ ನೋಡು ಬಾ
ಇಬ್ಬರೆದೆಯ ಒಳಗೆ ಮಿಡಿದ ಶಾಯರಿ
ನೆಚ್ಚಿ ಕೊಂಡಾಡಿ ಕೂಗು ವ್ಹಾ.. ವ್ಹಾ..

ಪಿಸು ಮಾತಿನ ಪೋಲಿತನವ ಹಿಡಿಯುತ
ಮಳ್ಳನ ಮರುಳಾಗಿಸುತ್ತ ಬೀಗು ಬಾ
ಹುಸಿ ಕೋಪದ ಎಳೆಯನ್ನು ಬಿಡಿಸುತ
ಮುಂಗೋಪಿಯ ಮುಗುಳ್ನಗೆಯ ತಿದ್ದು ಬಾ
ಎಲ್ಲ ಮೆಚ್ಚಿಗೆಯಾದರೂ ನನ್ನಲಿ
ಏನೂ ಮೆಚ್ಚದ ಹಾಗೆ ನಟಿಸು ಬಾ
ನಿನಗೆಂದೇ ಗೀಚಿ ಹರಿದ ಹಳೆಗಳ
ಒಗ್ಗೂಡಿಸಿ ಉದ್ಗರಿಸು ವ್ಹಾ.. ವ್ಹಾ..

Tuesday, 10 December 2019

ಏಕಾಂತವೇ ಅರಸಿ ಬಾ ನನ್ನನು

ಏಕಾಂತವೇ ಅರಸಿ ಬಾ ನನ್ನನು
ಹೇಗಾದರೂ ವರಿಸು ಈ ಬಾಳನು
ಈ ಗಾಜಿಗೆ ಅಂಟಿ ಕೂತ ಹನಿ
ಇನ್ನೊಂದು ಹನಿಯನ್ನ ಕೂಡುತ್ತಿದೆ
ನನ್ನ ಮುಗಿಲು ಎಲ್ಲೋ ಮರೆಯಾಗಿದೆ    -- (೧)


ನೆರಳನ್ನು ಕಂಡು ಜಂಭ ಪಡುವಾಗ 
ನೆನಪೈತೆ ನೀನು ಬಿಕ್ಕಳಿಸುತ್ತಿದ್ದೆ
ಮರೆಯೋದು ಹೇಗೆ ಜಾತ್ರೆಯ ನಡುವೆ 
ಅವಮಾನ ಮಾಡಿ ಮೂಲೆಗಿರಿಸಿದ್ದೆ 

ದಾರಿ ತಿರುವಲ್ಲೆಲ್ಲ ಬೆಳಕ ಕಂಡೆ
ನೀನಷ್ಟೇ ಕಂದೀಲು ಹಿಡಿದು ಕಾದೆ
ಮುಂದೇನೋ ಗೊತ್ತಿಲ್ಲ ನೀನೇ ದಿಕ್ಕು
ಏಕಾಂಗಿ ಆಗೋದೆ ಇನ್ನೇನ್ ಬೇಕು?    -- (೨)


ಕುಡುಗೋಲ ಪಾಠ ಮನಸಿಟ್ಟು ಕಲ್ತು
ಕೆಂಪಾದೋ ಎಲ್ಲ ಬಿಳಿ ಹಾಳೆ ಒಡಲು
ಕಡಲನ್ನೋ ಕಥೆಯ ಕಣ್ಣೀರು ಬರೆದು
ನಗುವೆಂಬೋ ದಡದಲ್ಲಿ ಅವಿತಿತ್ತು ನೋವು

ಕಾಡನ್ನ ಕಡಿದಾಗ ಊರೊಂದಾಯ್ತು
ಊರಿಗೂರೇ ಉರಿದು ಸುಡುಗಾಡಾಯ್ತು
ಜೋಳಿಗೆ ತುಂಬ್ದಷ್ಟು ಇನ್ನೂ ಬೇಕು 
ಖಾಲಿ ಕೈಲಿದ್ಬಿಡ್ಲಾ  ಸಮ್ನೆ ನಕ್ಕು?  -- (೩)

ಏಕಾಂತವೇ ಹುಡುಕಿ ಬಾ ನನ್ನನು
ಹೇಗಾದರೂ ವರಿಸು ಈ ಬಾಳನು  ......... 

Thursday, 5 December 2019

ಹೂ ದಳಗಳ, ಈ ತಳಮಳ

ಹೂ ದಳಗಳ, ಈ ತಳಮಳ
ಸಂಚರಿಸಿದೆ ನನ್ನ ಈ ಉಸಿರಿಗೆ
ಕಾರಣವನು ನೀಡುವ ಭಯ
ಈ ಅನುಭವ ಹೊಸತು ಈ ತನುವಿಗೆ
ಕಾತರದಲಿ ನೀ ಬೆರೆತರೆ ನಾ ಬೆವರುವೆ ಸೋಲುತ...

ಹಾತೊರೆಯುವೆ ನೀ ತೊರೆದರೆ 
ಬಾನುಲಿಯಲೂ ಭೋರ್ಗರೆತವೇ 
ಜೀಕಾಡುವ ಮನವ ನೀ ದೂಡಲು ಇನ್ನೂ ತಾ ಸನಿಹಕೆ ಬರುವುದು 
ತೂಕಡಿಕೆಯ ಆರಂಭಕೆ 
ಕಣ್ಣಾಲಿಯ ಆವರಿಸುವೆ 
ಆರೋಹಣ ಮಿಡಿತ ನೀ ಕಾರಣ ಖಚಿತ ನೀರಾಗಲೇ ಕರಗುತ
ಒಂದು ನೂರು ಬಾರಿ ತೆಕ್ಕೆ ಸೇರಿಕೋ... 

ಈ ಕೊರೆಯುವ ತಂಗಾಳಿಗೆ 
ಬಾ ಕುಲುಮೆಯ ಊದು ಆ ಕೊಳಲಲಿ 
ಹಂಬಲಿಸುವೆ ಚಿನ್ನದ ಗರಿ 
ಹಾರಲು ಹೊಸ ಆಸೆ ನಿನ್ನೊಲವಲಿ 
ಮಾರ್ದನಿಸಲಿ ನಿನ್ನ ಕರೆ ತೋರ್ಬೆರಳಿಗೆ ಸಿಕ್ಕುವೆ.. 

ನೀ ತೀಡದ ಕಣ್ ಕಪ್ಪಿಗೆ 
ಓಲೈಸುವ ಕಣ್ಣೀರಿದೆ 
ಗಾಂಧರ್ವದ ಸಲುಗೆ ಬೇಕಂತಲೇ ಕೊಡದೆ ಒದ್ದಾಡುವ ಸುಖವಿದೆ 
ಕಾಡ್ಗಿಚ್ಚಿನ ಜ್ವಾಲೆಯಲೂ 
ರೋಮಾಂಚಕ ಕಾರಂಜಿ ನೀ 
ಓ ಮೇಘವೇ ನನ್ನ ಸಂದೇಶವ ಕೊಂಡು ಕದ್ದೋಡುವೆ ಎಲ್ಲಿಗೆ.. 
ನನ್ನ ಸಂತೆಯಲ್ಲಿ ನಿನ್ನೆ ಮಾರಿಕೋ... 

*ಹಾಡು*
https://soundcloud.com/bharath-m-venkataswamy/2a-1

Tuesday, 3 December 2019

ದಾರಿ ಎದುರುನೋಟಕೆ ಸಿಕ್ಕಳು

ದಾರಿ ಎದುರುನೋಟಕೆ ಸಿಕ್ಕಳು
ಚೂರಿ ಕಣ್ಣ ಸುಂದರಿ
ಹಾರಿ ನುಲಿಯುವ ಕುರುಳ ಮರೆಯಲಿ 
ಅಡಗಿ ಕೂತ ಅಚ್ಚರಿ 
ನಗುವಿನ ಸೊಬಗಿಗೆ ನಾಚುವ ಸರದಿ 
ನನ್ನ ಪಾಲಿಗೆ ದೊರೆತಂತೆ 
ಬೆರಳಿನ ಉಗುರಿನ ಬಣ್ಣದ ಸಾಲು 
ನನ್ನೇ ಕೂಗಿ ಕರೆದಂತೆ 
ನಿನ್ನ ಹಿಂದೆ ಬರಲೇನು, ನೆರಳ ಹುದ್ದೆ ಪಡೆದಂತೆ...

ಬಲಹೀನನ ತೋಳಿನ ತುಂಬ
ಉಸಿರು ಕಟ್ಟಿದ ಬಯಕೆಗಳು 
ಮನ ಮೋಹಿಸಿ ಮರು ಮಾತಿರದೆ 
ಸೇರಿದೆ ಹೇಗೆ ಕವಿತೆಯಲೂ 
ಸಂಜೆ ಜಾರೋ ವೇಳೆ, ಎದುರು-ಬದುರು ಕೂತು 
ಯಾವ ಸದ್ದೂ ಇರದೆ, ಹಂಚಿಕೊಂಡ ಮಾತು 
ಇನ್ನೂ ಗುನುಗುವಾಗ ಮತ್ತೆ ಕನಸು ಬಿದ್ದಂತೆ 
ನಿನ್ನ ಹಿಂದೆ ಬರಲೇನು, ಎಲ್ಲೂ ಬಿಡದ ಮಗುವಂತೆ...

ಅನುರಾಗದ ಮೆರವಣಿಗೆಯಲಿ 
ಇರಿಸಿ ಸಾಲು ದೀಪಗಳು 
ಕಿಡಿ ಹೊತ್ತಿಸಿ ಸಂಭ್ರಮಿಸುವೆನು 
ಕುಡಿ ನೋಟದಲಿ ನೀನಿರಲು 
ಗುರುತು ಪರಿಚಯವಿರದೆ, ಹುಟ್ಟೋ ಪ್ರೀತಿ ಚಂದ 
ಏನೂ ಕಾರಣವಿರದೆ, ಗಿಟ್ಟಲ್ಲ ಅನುಬಂಧ 
ಎಲ್ಲ ಹೇಳಿ ಇನ್ನೂ ಏನೋ ಬಾಕಿ ಉಳಿದಂತೆ 
ನಿನ್ನ ಹಿಂದೆ ಬರಲೇನು, ಹೆಜ್ಜೆ ಬಿಟ್ಟ ಗುರುತಂತೆ...

*ಹಾಡು *


https://soundcloud.com/bharath-m-venkataswamy/aervcypz0mt1

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...