ದಾರಿ ಎದುರುನೋಟಕೆ ಸಿಕ್ಕಳು
ಚೂರಿ ಕಣ್ಣ ಸುಂದರಿ
ಹಾರಿ ನುಲಿಯುವ ಕುರುಳ ಮರೆಯಲಿ
ಅಡಗಿ ಕೂತ ಅಚ್ಚರಿ
ನಗುವಿನ ಸೊಬಗಿಗೆ ನಾಚುವ ಸರದಿ
ನನ್ನ ಪಾಲಿಗೆ ದೊರೆತಂತೆ
ಬೆರಳಿನ ಉಗುರಿನ ಬಣ್ಣದ ಸಾಲು
ನನ್ನೇ ಕೂಗಿ ಕರೆದಂತೆ
ನಿನ್ನ ಹಿಂದೆ ಬರಲೇನು, ನೆರಳ ಹುದ್ದೆ ಪಡೆದಂತೆ...
ಬಲಹೀನನ ತೋಳಿನ ತುಂಬ
ಉಸಿರು ಕಟ್ಟಿದ ಬಯಕೆಗಳು
ಮನ ಮೋಹಿಸಿ ಮರು ಮಾತಿರದೆ
ಸೇರಿದೆ ಹೇಗೆ ಕವಿತೆಯಲೂ
ಸಂಜೆ ಜಾರೋ ವೇಳೆ, ಎದುರು-ಬದುರು ಕೂತು
ಯಾವ ಸದ್ದೂ ಇರದೆ, ಹಂಚಿಕೊಂಡ ಮಾತು
ಇನ್ನೂ ಗುನುಗುವಾಗ ಮತ್ತೆ ಕನಸು ಬಿದ್ದಂತೆ
ನಿನ್ನ ಹಿಂದೆ ಬರಲೇನು, ಎಲ್ಲೂ ಬಿಡದ ಮಗುವಂತೆ...
ಅನುರಾಗದ ಮೆರವಣಿಗೆಯಲಿ
ಇರಿಸಿ ಸಾಲು ದೀಪಗಳು
ಕಿಡಿ ಹೊತ್ತಿಸಿ ಸಂಭ್ರಮಿಸುವೆನು
ಕುಡಿ ನೋಟದಲಿ ನೀನಿರಲು
ಗುರುತು ಪರಿಚಯವಿರದೆ, ಹುಟ್ಟೋ ಪ್ರೀತಿ ಚಂದ
ಏನೂ ಕಾರಣವಿರದೆ, ಗಿಟ್ಟಲ್ಲ ಅನುಬಂಧ
ಎಲ್ಲ ಹೇಳಿ ಇನ್ನೂ ಏನೋ ಬಾಕಿ ಉಳಿದಂತೆ
ನಿನ್ನ ಹಿಂದೆ ಬರಲೇನು, ಹೆಜ್ಜೆ ಬಿಟ್ಟ ಗುರುತಂತೆ...
*ಹಾಡು *
https://soundcloud.com/bharath-m-venkataswamy/aervcypz0mt1
No comments:
Post a Comment