Wednesday, 11 December 2019

***ಶಾಯರಿ***

ಹಾಡು 
*******
ಏನನೋ ನಾ ಹೇಳುತಾ ಸಾಗುವೆ
ನೀ ಹಿಂದೆಯೇ ಹಿಂಬಾಲಿಸಿ ಬಾ
ಮನವರಿಕೆಯಾಗಲು ಮೊದಲಿಗೆ
ಮರುಕಳಿಸೆ ಜೊತೆಯಾಗಿ ಬಾ
ಮರೆತು ಮುಗ್ಗರಿಸಿದಂತೆ ಸಾಲು
ಎಡವದೆ ಬೆನ್ನ ತಡವು ಬಾ
ನಿನ್ನ ಕುರಿತೇ ಕೊನೆ ಮುಟ್ಟುವೆ ಮೆಲ್ಲೆಗೆ 
ಕೇಳುತಲೇ ಉಲಿ ನೀ......  ವ್ಹಾ.. ವ್ಹಾ..

ಶಾಯರಿ.. ಶಾಯರಿ.. ನಿನ್ನ ಈ ವೈಖರಿ!

ನಮ್ಮ ನಡುವ ಈ ಜುಗಲ್ಬಂದಿಗೆ
ರೀತಿ ನಮ್ಮದೇ ಬೇರೆ ಇಲ್ಲ ಬಾ
ನೀನು ಸೋತು, ನಾನೂ ಸೋತು ಮುಂದೆ 
ಇಬ್ಬರೂ ಗೆದ್ದೆವೆನ್ನೋಣ ಬಾ
ಏನೋ ಹೊಸತೊಂದನು ಹುಡುಕಲು 
ಮೌನಕ್ಕೆ ತಂಬೂರಿ ಮೀಟು ಬಾ
ನಿನ್ನ ಹೆಸರ ಒಗಟು ಮಾಡಿ ಹಾಡುವೆ
ಬಿಡಿಸಿ ಉಪಕರಿಸು ...... ವ್ಹಾ.. ವ್ಹಾ..



ಶಾಯರಿ.. ಶಾಯರಿ.. ನಿನ್ನ ಈ ವೈಖರಿ!

ನೀಳವೆನಿಸಿದರೆ ಮತ್ತೆ ಆಲಿಸು
ನೀರಸವಾದರೆ ದಾಳಿಗೆರಗಿ ಬಾ
ನುರಿತವಾದುವು ನಿನ್ನ ನೋಡುತ
ನಡುಗಿ ಹೋದವು ಕಂಡು ಬೆಚ್ಚು ಬಾ
ಗುಂಡಿಗೆ ತಾಳವು ಹೆಚ್ಚುತ ಹೆಚ್ಚುತ
ನಿನ್ನ ಎದೆಗೆ ತಾಳೆ ಹಾಕಲೆಂದು ಬಾ
ಇಬ್ಬರೆದೆಯ ಒಳಗೆ ಮಿಡಿದ ಶಾಯರಿ
ನೆಚ್ಚಿ ಕನಿಕರಿಸು ....  ವ್ಹಾ.. ವ್ಹಾ..



ಶಾಯರಿ.. ಶಾಯರಿ.. ನಿನ್ನ ಈ ವೈಖರಿ!

ತುಸು ಪೋಲಿಯಾಗುವೆ ತಡೆಯದೆ 
ಹಿಡಿದು ಮರುಳಾಗಿಸುತ ಬೀಗು ಬಾ
ಹುಸಿ ಕೋಪದ ಎಳೆಯನು ಬಿಡಿಸುತ
ಮುಂಗೋಪಿಯ ಮುಗುಳ್ನಗೆಯ ತಿದ್ದು ಬಾ
ಎಲ್ಲ ಮೆಚ್ಚಿಗೆಯಾದರೂ ನನ್ನಲಿ
ಏನೂ ಮೆಚ್ಚದಂತೆ ನಟಿಸು ಬಾ
ನಿನಗೆಂದೇ ಗೀಚಿ ಹರಿದ ಕಾಗದ 
ಒಗ್ಗೂಡಿಸಿ ಉದ್ಗರಿಸು....  ವ್ಹಾ.. ವ್ಹಾ..



ಶಾಯರಿ.. ಶಾಯರಿ.. ನಿನ್ನ ಈ ವೈಖರಿ!

ಕವಿತೆ
******
ಶಾಯರಿ ನಾ ಹೇಳುತ್ತಾ ಸಾಗುವೆ
ನೀ ಹಿಂದೆಯೇ ಹಿಂಬಾಲಿಸಿ ಸಾಗಿ ಬಾ
ಮನವರಿಕೆಯಾಗಲೆಂದು ಮೊದಲಿಗೆ
ಮತ್ತೆ ಮರುಕಳಿಸಲು ಆಗ ಜೊತೆಯಾಗಿ ಬಾ
ಮರೆತು ಮುಗ್ಗರಿಸಿದಂತೆ ಸಾಲುಗಳು
ಎಡವದಂತೆ ತನ್ನ ಬೆನ್ನ ತಡವು ಬಾ
ನಿನ್ನ ಕುರಿತೇ ಕೊನೆಗೊಳಿಸುವೆ ಹೇಳದೆ
ಕೇಳಿ ಕೇಳದಂತೆ ಉಲಿ ವ್ಹಾ.. ವ್ಹಾ..

ನಮ್ಮ ನಡುವ ಈ ಜುಗಲ್ಬಂದಿಗೆ
ನಮ್ಮದೇ ರಿವಾಜು ಬೇರೆ ಇಲ್ಲ ಬಾ
ನೀನು ಸೋತು, ನಾನೂ ಸೋತು ಹಾಗೇಯೇ
ಇಬ್ಬರೂ ಗೆದ್ದೆವೆನ್ನೋಣ ಬಾ
ಏನೋ ಹೊಸತೊಂದನು ಆಲೋಚಿಸೆ
ಮೌನಕ್ಕೆ ತಂಬೂರಿ ಮೀಟು ಬಾ
ನಿನ್ನ ಹೆಸರ ಒಗಟು ಮಾಡಿ ಹಾಡುವೆ
ಬಿಡಿಸಿದಂತೆ ನಾಚಿ ಹೇಳು ವ್ಹಾ.. ವ್ಹಾ..

ನೀಳವೆನಿಸಬಹುದು ಮತ್ತೆ ಆಲಿಸು
ನೀರಸವಾದರೆ ದಾಳಿಗೆರಗಿ ಬಾ
ನುರಿತವಾದುವೆಲ್ಲ ನಿನ್ನ ನೋಡುತ
ನಡುಗಿ ಹೋದವದನು ಕಂಡು ಬೆಚ್ಚು ಬಾ
ಗುಂಡಿಗೆ ತಾಳವು ಹೆಚ್ಚುತ ಹೆಚ್ಚುತ
ನಿನ್ನ ಎದೆಗೆ ತಾಳೆ ಹಾಕಿ ನೋಡು ಬಾ
ಇಬ್ಬರೆದೆಯ ಒಳಗೆ ಮಿಡಿದ ಶಾಯರಿ
ನೆಚ್ಚಿ ಕೊಂಡಾಡಿ ಕೂಗು ವ್ಹಾ.. ವ್ಹಾ..

ಪಿಸು ಮಾತಿನ ಪೋಲಿತನವ ಹಿಡಿಯುತ
ಮಳ್ಳನ ಮರುಳಾಗಿಸುತ್ತ ಬೀಗು ಬಾ
ಹುಸಿ ಕೋಪದ ಎಳೆಯನ್ನು ಬಿಡಿಸುತ
ಮುಂಗೋಪಿಯ ಮುಗುಳ್ನಗೆಯ ತಿದ್ದು ಬಾ
ಎಲ್ಲ ಮೆಚ್ಚಿಗೆಯಾದರೂ ನನ್ನಲಿ
ಏನೂ ಮೆಚ್ಚದ ಹಾಗೆ ನಟಿಸು ಬಾ
ನಿನಗೆಂದೇ ಗೀಚಿ ಹರಿದ ಹಳೆಗಳ
ಒಗ್ಗೂಡಿಸಿ ಉದ್ಗರಿಸು ವ್ಹಾ.. ವ್ಹಾ..

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...