Thursday, 19 December 2019

ಮನೆಗೆ ಬರಲೊಪ್ಪುವೆನು

ಮನೆಗೆ ಬರಲೊಪ್ಪುವೆನು
ಮಾತು, ಮನಸುಗಳ ಹದಗೊಳಿಸಿ
ಮೊಗಸಾಲೆಯಲ್ಲಿ ಕಸವಿದ್ದರೂ ಸರಿಯೇ
ಮೊಗದಲ್ಲಿ ನಗುವಿರಿಸಿ
ಒಲೆ ಹಚ್ಚದೆ, ಅಕ್ಕಿ ಬೇಯದೆ
ಉದರವ ಬೆಚ್ಚಗಿರಿಸುವಂತಾದರೆ
ಪ್ರತಿ ಹೆಜ್ಜೆಗೂ ಪ್ರೀತಿಯುಣಿಸುವಂತಿದ್ದರೆ

ಮನೆಗೆ ಬರಲೊಪ್ಪುವೆನು
ಹರಕಲು ಬಟ್ಟೆ ತೊಟ್ಟವನ ಜರಿಯದೆ
ಪಾದಕಂಟಿದ ಕೆಸರ ಲೆಕ್ಕಿಸದೆ
ಒರಟು ಹಸ್ತವ ಹಿಡಿದು
ಊರಾಚೆಯಿಂದ ಹೊಸ್ತಿಲ ತನಕ
ಮುನ್ನಡೆಸುವ ಔದಾರ್ಯತೆ ನಿಮಗಿದ್ದರೆ
ನನ್ನಂತೆ ನಾನು ಅನಿಸಲು ನಿಮಗಾದರೆ

ಮನೆಗೆ ಬರಲೊಪ್ಪುವೆನು
ಚಪ್ಪರ, ಚಾಮರಗಳ ಹಂಗಿಲ್ಲದೆ
ನಿಬ್ಬೆರಗಾಗಿಸಲ್ಪಡುವ ಪ್ರಯಾಸವಿಲ್ಲದೆ
ಹಬ್ಬದಬ್ಬರದ ಮಬ್ಬಿರದೆ
ಒಬ್ಬರನ್ನೊಬ್ಬರ ದೂಷಿಸದೆ
ಆಸ್ಥೆಯ ಆಸ್ತಿಯನ್ನೊಳಗೊಂಡ
ವಿಸ್ತಾರವಾದ ಹೃದಯ ನಿಮ್ಮದಾದರೆ

ಮನೆಗೆ ಬರಲೊಪ್ಪುವೆನು
ಪಸೆಯಲ್ಲಿ ನೆನ್ನೆಗಳ ಕೆದಕದೆ
ಕಿಸೆಯಲ್ಲಿ ನಾಳೆಗಳ ಹುಡುಕದೆ
ಕಣ್ಣೊಳಗೆ ಇಂಗದ ಇಂಗಿತಕೆ
ನೆಲೆ, ಬೇರು, ಗೊಬ್ಬರದಾಚೆಗೆ
ನಂಬುಗೆಯ ನೀರೆರೆವ ಗುಣವಿದ್ದರೆ
ಬೆಳೆದ ನಿಮ್ಮೊಳಗೆನ್ನ ಗುರುತಿದ್ದರೆ

ಮನೆಗೆ ಬರಲೊಪ್ಪುವೆನು
ಇರುವಷ್ಟು ಕಾಲ ಅದು ನನ್ನದೆಂಬ
ಬಿಟ್ಟು ಹೊರಡಲು ನಂಟು ಮುರಿಯಿತೆಂಬ
ಮೂಲದ ಅರಿವನ್ನು ನನ್ನೊಳಗೆ ಬಿತ್ತಿದರೆ
ಬೆನ್ನು ಬಾಗಿಲ ಕಂಡು
ಕಂಡ ದಾರಿಯ ಕೊಂದು
ಕೊಂದ ನೆರಳಿನ ಛಾಯೆ ಮತ್ತೆ ಉಸಿರಾದರೆ
ಪತ್ತೆ ಪತ್ರಗಳೆಲ್ಲ ದಿಕ್ಕೆಡುವಂತಿದ್ದರೆ
ವಿಶ್ವವೇ ನನ್ನ ಮನೆಯಾಗುವಂತಾದರೆ...

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...